ಕೃಷಿ ತಪಸ್ಸಿನ ಕೆದಿಲಾಯರ ಕಸಿ ಜಾಣ್ಮೆಗೆ ಅರ್ಧಶತಮಾನ

May 20, 2019
9:00 AM

ಪುತ್ತೂರು (ದಕ) ತಾಲೂಕಿನ ಆಲಂಕಾರು ಕುದ್ಕುಳಿಯ ಕಸಿ ತಜ್ಞ ನಾರಾಯಣ ಕೆದಿಲಾಯರು ‘ಬದನೆ ಕೆದಿಲಾಯ’ ಎಂದೇ ಪರಿಚಿತರು.
1960ರಲ್ಲಿ ತಮ್ಮ ಕೃಷಿ ಕ್ಷೇತ್ರದಲ್ಲಿ ಮೊತ್ತಮೊದಲ ಬಾರಿಗೆ ಬದನೆ ಕೃಷಿ ಮಾಡಿದ್ದರು. ಉಡುಪಿಯಿಂದ ‘ಮಟ್ಟುಗುಳ್ಳ’ ಸಸಿಗಳನ್ನು ತಂದು
ಬೆಳೆದರು. ಆರೈಕೆ ಮಾಡಿದರು. ಬರೋಬ್ಬರಿ ಫಸಲು ಬಂದಿತ್ತು. ವಾಹನ ಸೌಕರ್ಯಗಳು ಅಲಭ್ಯವಾಗಿದ್ದ ಕಾಲಘಟ್ಟವದು. ಮಂಗಳೂರು
ಮಾರುಕಟ್ಟೆಗೆ ಗೂಡ್ಸಿನಲ್ಲಿ ಬದನೆಯನ್ನು ಕಳುಹಿಸಿದ್ದರು. ಆ ಫಸಲಿನಲ್ಲಿ ಅವರಿಗೆ ಹನ್ನೆರಡು ಸಾವಿರ ರೂಪಾಯಿ ಸಿಕ್ಕಿತು. ಈ ಸುದ್ದಿ ಎಲ್ಲರ
ನಾಲಗೆಯಲ್ಲಿ ಕುಣಿದಾಡಿತು. ಅಂದಿನಿಂದ ನಾರಾಯಣ ಕೆದಿಲಾಯರು ‘ಬದನೆ ಕೆದಿಲಾಯ’ರಾದರು. 2016 ಅಕ್ಟೋಬರ್ 20ರಂದು ಅವರು
ದೈವಾಧೀನರಾದರು. ಆಗವರಿಗೆ ತೊಂಭತ್ತಮೂರು ವರುಷ.

Advertisement
Advertisement
Advertisement
Advertisement

ನಾರಾಯಣ ಕೆದಿಲಾಯರು ಬಾಲ್ಯದಲ್ಲಿ ವಿಟ್ಲ ಅರಮನೆಯಲ್ಲಿ ಪೂಜಾ ಕೈಂಕರ್ಯ ಮಾಡುತ್ತಿದ್ದರು. ಆಗಲೇ ಅವರಿಗೆ ಕೃಷಿಯತ್ತ  ಒಲವು. ದೂರದ ಕೇರಳದಿಂದ ಅರಮನೆಯ ಆವರಣದ ಹೂ, ಹಣ್ಣಿನ ಗಿಡಗಳಿಗೆ ಕಸಿ ಕಟ್ಟಲು ತಜ್ಞರು ಆಗಮಿಸಿದ್ದರು. ಗುಲಾಬಿ, ಮಾವು ಮೊದಲಾದ ಸಸಿಗಳಿಗೆ ಅವರು ಕಸಿ ಕಟ್ಟುವುದನ್ನು, ಅದರ ಸೂಕ್ಷ್ಮಗಳನ್ನು ನೋಡಿದರು, ಮನನಿಸಿದರು. ಬಳಿಕ ಸ್ವತಃ ನೋಡಿದ ಜ್ಞಾನವನ್ನು ಕಾರ್ಯಕ್ಕಿಳಿಸಿದರು. ತಾನು ಕಸಿಕಟ್ಟಿದ ಗಿಡಗಳಲ್ಲಿ ಬಹುತೇಕ ಬದುಕಿತು, ಚಿಗುರಿತು. ಕೆದಿಲಾಯರಿಗೆ ಧೈರ್ಯ ಬಂತು. ಕಸಿ ಜಾಣ್ಮೆಯು ಅಜ್ಞಾತವಾಗಿ ಅವರ ಮತಿಗಿಳಿಯಿತು.ಮುಂದೆ ಬದುಕಿಗೆ ದಾರಿಯಾಯಿತು. ಹೆಸರಿನೊಂದಿಗೆ ಕಸಿ ತಜ್ಞ ಎನ್ನುವ ಬಿರುದು ಹೊಸೆಯಿತು. ಸ್ವಂತವಾಗಿ ಭೂಮಿ ಹೊಂದಿದ ಮೇಲೆ ಕಸಿಯ ಪ್ರಯೋಗಗಳು ನಿರಂತವಾಗಿ ಮುಂದುವರಿಯಿತು.
ಆಗಷ್ಟೇ ಕಸಿಯಂತಹ ಹೊಸ ವಿಚಾರಗಳು ಕೃಷಿ ಮೇಳ, ಕೃಷಿ ಕಾರ್ಯಕ್ರಮಗಳಲ್ಲಿ ಪೋಣಿಕೆಯಾಗುತ್ತಿಷ್ಟೇ. ಒಂದಷ್ಟು ಮಂದಿಗೆ ಕಸಿಯ ಗುಂಗು ಆವರಿಸಿತ್ತು. ಕೆದಿಲಾಯರಿಗೆ ಕಸಿಯ ತರಬೇತಿ ನೀಡಲು ಎಲ್ಲೆಡೆಯಿಂದ ಆಹ್ವಾನ ಬರುತ್ತಿದ್ದುವು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಕಸಿಯ ಸೂಕ್ಷ್ಮಗಳ ಪಾಠ
ಮಾಡಿದರು. ಕೃಷಿ ಮೇಳ, ಕಾಲೇಜುಗಳಲ್ಲಿ ಉಪನ್ಯಾಸ ಮಾಡಿದರು. ಕಸಿ ಕಟ್ಟುವ ಪ್ರಾಕ್ಟಿಕಲ್ ಕಾರ್ಯಗಾರಗಳಲ್ಲಿ ಭಾಗವಹಿಸಿದರು. ಶ್ರೀ
ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯವರು ಕೆದಿಲಾಯರ ಕಸಿ ಕಲೆಯನ್ನು ಪ್ರೋತ್ಸಾಹಿಸಿದರು. ಮುಂದೆ ಕಸಿ ಕೆದಿಲಾಯರಿಗೆ ಪುರುಸೊತ್ತಿಲ್ಲದಷ್ಟು ಕೆಲಸ! ಕಸಿಯ ಒಲವು ನಾಲ್ದೆಸೆ ಹಬ್ಬಿತು.  ಇವರ ಜತೆಗಿದ್ದು ಕಸಿಯನ್ನು ಕಲಿತ ಅವರ ಶಿಷ್ಯ ಮಣಿಪಾಲ- ಅತ್ರಾಡಿಯ ಗುರುರಾಜ ಬಾಳ್ತಿಲ್ಲಾಯರು ಕೆದಿಲಾಯರ ಸಸಿ
ಪ್ರೀತಿಯನ್ನು ನೆನಪಿಸುತ್ತಾರೆ – “ಕೆದಿಲಾಯರಿಗೆ ಹೊಸತರ ಅನ್ವೇಷಣೆಯೆಂದರೆ ಖುಷಿಯ ವಿಚಾರವಾಗಿತ್ತು. ಒಂದೊಂದು ಗಿಡಗಳಿಗೆ ಒಂದೊಂದು ತರಹದ ಕಸಿ ವಿನ್ಯಾಸವನ್ನು ಅಳವಡಿಸಿಕೊಳ್ಳುತ್ತಿದ್ದರು. ಯಶಸ್ಸಾದರೆ ನಾಲ್ಕು ಮಂದಿಗೆ ಹೇಳುತ್ತಿದ್ದರೆ. ಸೋತರೆ, ‘ಅದು ಯಾಕೆ ಸೋತಿತು’ ಎಂದು ಪುನಃ ಸಂಶೋಧನೆ ಮಾಡುತ್ತಿದ್ದರು. ಯಾವ ತಳಿಯ ಕಸಿ ಕಟ್ಟಬೇಕೋ ಆ ತಳಿಯ ಮರಕ್ಕೆ ತಾವೇ ಸ್ವತಃ ಏರಿ ತಳಿಯ ಕುಡಿಗಳನ್ನು ಸಂಗ್ರಹಿಸುತ್ತಿದ್ದರು. ತನ್ನ ಎಂಭತ್ತಮೂರು
ವರುಷದ ತನಕವೂ ಮರ ಏರಿದುದನ್ನು ಕಂಡಿದ್ದೇನೆ.” “ದೇಹ ಮಾಗುತ್ತಿದ್ದಂತೆ ತೋಟಕ್ಕೆ ಓಡಾಟ ಕಡಿಮೆಯಾಯಿತು. ಅಂಗಳ, ಮನೆ ಅಷ್ಟೇ ಓಡಾಡಿಕೊಂಡಿದ್ದರೂ ಅವರ ಚಿತ್ತವೆಲ್ಲಾ ತೋಟ, ಕಸಿಯತ್ತಲೇ ಇತ್ತು. ಅವರು ಮರಣಿಸುವ ತಿಂಗಳ ಹಿಂದೊಮ್ಮೆ ಭೇಟಿಯಾಗಿದ್ದೆ. ಆಗ ಅವರು – ಕಸಿ ಕಟ್ಟಿದ ಗಿಡದ ಹಣ್ಣುಗಳು ಯಾಕೆ ರುಚಿ ಕೊಡುವುದಿಲ್ಲ? ಹಣ್ಣಾದಾಗ ಕೆಲವು ಬಿರಿಯುತ್ತದೆ, ಕೆಲವು ಕೊಳೆಯುತ್ತದೆ ಯಾಕೆ? ಇಂತಹ ಗಿಡಗಳಿಗೆ ಪೊಟೇಶ್
ಮತ್ತು ಸೂಕ್ಷ್ಮಪೋಶಕಾಂಶಗಳನ್ನು ಉಣಿಸಿ. ಮುಂದಿನ ವರುಷದಿಂದ ಈ ಸಮಸ್ಯೆಗಳೆಲ್ಲವೂ ಪರಿಹಾರವಾಗುತ್ತದೆ – ಎಂದಿದ್ದರು.”

Advertisement


ಆರಂಭದ ದಿವಸಗಳಲ್ಲಿ ಕಸಿಯ ವಿಚಾರ ಹಬ್ಬುತ್ತಿದ್ದಂತೆ ಜನರ ಒಲವು ಹೆಚ್ಚಾಗತೊಡಗಿತು. ತಮ್ಮಲ್ಲಿ ಕಸಿ ಮಾವಿನ ಮರ ಫಲ ಬಿಡಲು ಶುರುವಾಗುವಲ್ಲಿಯ ತನಕ ಜನರಿಗೆ ಕಸಿಯ ವಿಚಾರ ಹೇಳಿದರೆ ಫಕ್ಕನೆ ಒಪ್ಪಲು ಜನರಿಗೆ ಮಾನಸಿಕ ತಡೆ. ನರ್ಸರಿಗೆ ಇತರ ಗಿಡಗಳಿಗೆ ಬರುವ ಗಿರಾಕಿಗಳಿಗೆ ಮಾವಿನ ಹಣ್ಣನ್ನು ನೀಡಿ, “ಇದು ಕಸಿ ಗಿಡದ ಹಣ್ಣು. ಎಷ್ಟೊಂದು ರುಚಿಯಲ್ವಾ. ನಾಟಿ ತಳಿಗಿಂತ ಕಸಿಯದರಲ್ಲಿ ಫಸಲು ಬಹುಬೇಗ ಬರುತ್ತದೆ. ಒಂದೆರಡು ಗಿಡ ತೆಕ್ಕೊಳ್ಳಿ” ಎಂದು ರುಚಿ ತೋರಿಸಿ ಗಿಡ ಮಾರಿದ ಕ್ಷಣಗಳನ್ನು ರೋಚಕವಾಗಿ ಹೇಳುತ್ತಿದ್ದರು. ಕಸಿ ಕಟ್ಟುವ ಜಾಣ್ಮೆ ತಿಳಿಸುವಿರಾ? ಒಮ್ಮೆ ಪ್ರಶ್ನಿಸಿದ್ದೆ. “ಒಮ್ಮೆ ಕಸಿ ಕಟ್ಟಲು
ನೀವು ಕಲಿತಿರಾ, ಮತ್ತೆಲ್ಲಾ ಗಿಡಗಳಿಗೂ ಮಾಡಬಹುದು. ಒಂದಷ್ಟು ಶ್ರಮ, ಜಾಣ್ಮೆ ಬೇಕಷ್ಟೇ. ಅವೆಲ್ಲಾ ಅನುಭವದಲ್ಲಿ ಬರುವಂಥದ್ದು.
ಹಲಸಿಗೆ ಕಸಿ ಕಷ್ಟ. ಅದು ಬಹಳ ಸೂಕ್ಷ್ಮತೆಯನ್ನು ಬೇಡುತ್ತದೆ. ಈ ಭಾಗದಲ್ಲಿ ಮೊದಲು ಹಲಸಿನ ಗಿಡಗಳಿಗೆ ಕಸಿ ಕಟ್ಟಿ ಯಶಸ್ಸಾಗಿದ್ದೇನೆ,” ಎಂದು ಉತ್ತರಿಸಿದ್ದರು. ಚಿಕ್ಕು, ರಬ್ಬರ್, ಗುಲಾಬಿ, ಮಾವು, ಹಲಸು.. ಹೀಗೆ ಎಲ್ಲದಕ್ಕೂ ಕಸಿಯ ಟಚ್.

 

Advertisement


“ನೆಟ್ಟ ಕಸಿ ಗಿಡ ಸತ್ತುಹೋದರೆ ಅಷ್ಟಕ್ಕೇ ಬಿಡಬಾರದು. ಇನ್ನೊಂದು ಗಿಡ ನೆಟ್ಟು ಪೋಷಿಸಬೇಕು” – ಕೆದಿಲಾಯರ ಕಿವಿಮಾತು. ಮಕ್ಕಳೆಲ್ಲಾ ತಂದೆಯವರ ಜತೆಗಿದ್ದು, ಕಲಿತು, ಈಗ ಕಸಿಯ ಎಲ್ಲಾ ಮಗ್ಗುಲುಗಳಲ್ಲಿ ಅಧಿಕೃತವಾಗಿ ಮಾತನಾಡಬಲ್ಲ ತಜ್ಞತೆ ರೂಢಿಸಿಕೊಂಡಿದ್ದಾರೆ. ತಮ್ಮ ನರ್ಸರಿಯಲ್ಲಿ ಸ್ವತಃ ಕಸಿ ಕಟ್ಟುವ
ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರನ್ನು ಭೇಟಿ ಮಾಡಿದ ನೆನಪನ್ನು ಕೃಷಿಕ ವಸಂತ ಕಜೆ ಜ್ಞಾಪಿಸಿಕೊಂಡರು, “ಕೆದಿಲಾಯರದು ಅಡೆತಡೆಯಿಲ್ಲದ, ಅನುಭವಜನ್ಯ ಮಾತುಗಾರಿಕೆ. ಅವರಾಡುವುದರ ಬಗ್ಗೆ ಅವರಿಗೆ ಸಂಶಯವೇ ಇರಲಿಲ್ಲ. ಲಾಭನಷ್ಟಗಳನ್ನು ಅಂಕೆ-ಸಂಖ್ಯೆಗಳ ಸಹಿತ ವಿವರಿಸುತ್ತಿದ್ದರು.
ನಂಬಿಕೊಂಡ ಮೌಲ್ಯಗಳ ಜತೆ ರಾಜಿ ಮೋಡಿಕೊಂಡು ದುಡ್ಡು ಸಂಪಾದನೆ ಮಾಡಿದಂತಿಲ್ಲ.” ಅತಿ ಕಡಿಮೆ ಮೂಲ ಬಂಡವಾಳ ಹೂಡಿ ಕೃಷಿಯಲ್ಲಿ ಹಣ ಸಂಪಾದನೆ ಮಾಡಬಹುದು ಎನ್ನುವುದು ಅವರ ನಂಬಿಕೆಯಾಗಿತ್ತು. ಸಾಲ ಮಾಡಿ ಕೃಷಿ ಮಾಡುವುದಕ್ಕೆ ಬದ್ಧ ವಿರೋಧವಾಗಿದ್ದರು. ಸಾಲ ಮಾಡಿದವ
ಏಳಿಗೆಯಾಗಲಾರ. ಅವನ ಲಕ್ಷ್ಯವೆಲ್ಲಾ ಸಾಲವನ್ನು ಮರುಪಾವತಿ ಮಾಡುವುದರಲ್ಲೇ ಕೇಂದ್ರೀಕರಿಸಿರುತ್ತದೆ. ಒಂದು ಸಾಲ ಮುಗಿದಾಗ
ಇನ್ನೊಂದು ಸಾಲ. ಹೀಗೆ ಸಾಲದ ಕೂಪದೊಳಗೆ ಸುತ್ತುತ್ತಾ ಆಯುಷ್ಯ ಮುಗಿಸುತ್ತಾನೆ. ಹೀಗಾದರೆ ಏನು ಸಾಧಿಸಿದ ಹಾಗಾಯ್ತು?
ಕೆಲವು ವರುಷಗಳ ಹಿಂದೊಮ್ಮೆ ಕಸಿ ತರಬೇತಿ ಕಾರ್ಯಾಗಾರದಲ್ಲಿ ಆಡಿದ ಮಾತು ಮಾರ್ಮಿಕವಾಗಿತ್ತು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ನಾ.ಕಾರಂತ ಪೆರಾಜೆ

ಪತ್ರಕರ್ತ , ಕಲಾವಿದ , ಅಂಕಣಕಾರ

ಇದನ್ನೂ ಓದಿ

ಇಂದು ರಾಷ್ಟ್ರೀಯ ರೈತ ದಿನ | ರಾಷ್ಟ್ರ ನಿರ್ಮಾಣದಲ್ಲಿ ರೈತರ ಪಾತ್ರವೇ ದೊಡ್ಡದು |
December 23, 2024
12:14 PM
by: The Rural Mirror ಸುದ್ದಿಜಾಲ
ನೀರಿಗಾಗಿ ಏಕಾಂಗಿಯಾಗಿ ಸುರಂಗ ತೋಡಿದ ಕೃಷಿಕ | ಹಸಿರಾದ ಕೃಷಿ |
November 25, 2024
8:44 PM
by: The Rural Mirror ಸುದ್ದಿಜಾಲ
ಕೃಷಿ ಕಾರ್ಮಿಕರ ಸಮಸ್ಯೆ ನಿವಾರಣೆಗೆ ತಂತ್ರಜ್ಞಾನದ ಬಳಕೆಯೇ ಪರಿಹಾರ |
November 13, 2024
8:47 PM
by: ವಿಶೇಷ ಪ್ರತಿನಿಧಿ
ಪಿಎಂಶ್ರೀ ಯೋಜನೆ | ಗುಣಮಟ್ಟದ ಶಿಕ್ಷಣ ವ್ಯವಸ್ಥೆ ಸರ್ಕಾರಿ ಶಾಲೆಯಲ್ಲಿ |
November 8, 2024
10:12 AM
by: ವಿಶೇಷ ಪ್ರತಿನಿಧಿ

You cannot copy content of this page - Copyright -The Rural Mirror