ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ 13 ದಿನಗಳಿಂದ ನೆಮ್ಮದಿಯಾಗಿತ್ತು. ಇದೀಗ ಭಾನುವಾರ ಉಸಿರಾಟದ ಸಮಸ್ಯೆಯಿಂದ ಮೃತಪಟ್ಟ ಬಂಟ್ವಾಳದ ಮಹಿಳೆಗೆ ಕೊರೊನಾ ಪಾಸಿಟಿವ್ ಬಂದಿದೆ. ಇದರ ಬೆನ್ನಲ್ಲೇ ಉಪ್ಪಿನಂಗಡಿಯಲ್ಲೂ ಕೊರೊನಾ ವೈರಸ್ ಪಾಸಿಟಿವ್ ಪ್ರಕರಣ ದಾಖಲಾಗಿದೆ.
ಎ.17ರಂದು ಉಪ್ಪಿನಂಗಡಿ ಮೂಲದ ವ್ಯಕ್ತಿಯಲ್ಲಿ ಪಾಸಿಟಿವ್ ಪತ್ತೆಯಾಗಿತ್ತು.ಬಳಿಕ ವೆನ್ಲಾಕ್ ಆಸ್ಪತ್ರೆಯಲ್ಲಿ ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಅದೇ ವ್ಯಕ್ತಿಯ ಪತ್ನಿಯಲ್ಲಿ ಏಪ್ರಿಲ್ 19ರಂದು ಕೊರೊನಾ ಪಾಸಿಟಿವ್ ಪತ್ತೆಯಾಗಿದೆ.
ಬಂಟ್ವಾಳ ನಗರ ಸೀಲ್ ಡೌನ್:
ಕೊರೊನಾ ವೈರಸ್ ಗೆ ಬಂಟ್ವಾಳದ ಮಹಿಳೆ ಮೃತಪಟ್ಟ ಬೆನ್ನಲ್ಲೇ ಬಂಟ್ವಾಳ ನಗರವನ್ನು ಸೀಲ್ ಡೌನ್ ಮಾಡಲಾಗಿದೆ. ಬಂಟ್ವಾಳ ಕಸಬಾ, ಜಕ್ರಿಬೆಟ್ಟು, ಬಡ್ಡಕಟ್ಟೆ ಸಹಿತ ಪಟ್ಟಣಕ್ಕೆ ಪ್ರವೇಶಿಸುವ ಮತ್ತು ಹೊರ ಹೋಗುವ ಎಲ್ಲಾ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಸಾವನ್ನಪ್ಪಿರುವ ಮಹಿಳೆಯ ಮನೆ ಬಂಟ್ವಾಳ ಪೇಟೆಯಲ್ಲಿದೆ. ಈ ಹಿನ್ನೆಲೆಯಲ್ಲಿ ಅದರ ಸುತ್ತಮುತ್ತ ಸುಮಾರು 300ಕ್ಕೂ ಅಧಿಕ ಮನೆಗಳು, ಅಂಗಡಿ ಮುಂಗಟ್ಟುಗಳಿವೆ. ಈ ಎಲ್ಲಾ ಪ್ರದೇಶಗಳಿಗೂ ಪೊಲೀಸರು ತೆರಳಿ ಮನೆಯಿಂದ ಯಾರೂ ಹೊರ ಬರದಂತೆ ಸೂಚಿಸುತ್ತಿದ್ದಾರೆ. ಒಟ್ಟು 3 ಭಾಗವಾಗಿ ಸೀಲ್ ಮಾಡಲಾಗಿದೆ. ಮೃತ ಮಹಿಳೆಯ ಮನೆಯಿಂದ 100 ಮೀ. ಅಂತರದಲ್ಲಿ ಕಠಿಣ ಲಾಕ್ಡೌನ್, ಸುತ್ತ 500 ಮೀ. ಅಂತರದಲ್ಲಿ ತೀವ್ರ ನಿಗಾ ಹಾಗೂ 3. 3 ಕಿ.ಮೀ. ಅಂತರದಲ್ಲಿ ಕಂಪ್ಲೀಟ್ ಸೀಲ್ಡೌನ್.
ಕೊರೊನಾ ಸೊಂಕಿಗೆ ಬಲಿಯಾದ ಮಹಿಳೆಯ ಕುಟುಂಬದ ಮೇಲೆ ತೀವ್ರ ನಿಗಾ ಇರಿಸಲಾಗಿದ್ದು, ಅನಾರೋಗ್ಯ ಹಿನ್ನೆಲೆಯಲ್ಲಿ ಮೃತರ ಅತ್ತೆಯನ್ನು ಐಸಿಯುಗೆ ದಾಖಲಿಸಲಾಗಿದೆ. ಅವರೊಂದಿಗೆ ಮಹಿಳೆಯ ಪತಿ ಹಾಗೂ ವಿದೇಶದಿಂದ ಬಂದಿದ್ದ ಮಗನನ್ನು ಕೂಡ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಮೃತ ಮಹಿಳೆಯ ಪುತ್ರನಿಗೆ ವಿದೇಶ ಪ್ರವಾಸದ ಹಿಸ್ಟರಿ ಇದೆ ಎನ್ನಲಾಗಿದೆ. ಆದರೆ ಅವರಿಗೆ ಕೊರೊನಾ ವೈರಸ್ ಕಂಡುಬಂದಿರಲಿಲ್ಲ. ಇದೀಗ ಮಹಿಳೆಯೊಂದಿಗೆ ಸಂಪರ್ಕದಲ್ಲಿದ್ದ 20 ಮಂದಿಯನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. 10 ಮಂದಿಗಾಗಿ ಹುಡುಕಾಟ ನಡೆದಿದೆ.