ಸವಣೂರು : ಗ್ರಾಮೀಣ ಕ್ರೀಡೆ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸುವ ನಿಟ್ಟಿನಲ್ಲಿ ಆಚರಣೆಗಳು, ಕ್ರೀಡೆಗಳನ್ನು ನಡೆಸುವುದು ಉತ್ತಮ ಕಾರ್ಯ, ಯುವ ಸಂಸ್ಥೆಗಳ ಮೂಲಕ ಸಾಮಾಜಿಕ, ಧಾರ್ಮಿಕ, ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಿದಾಗ ಸೌಹಾರ್ದಯುತ ಹಾಗೂ ಸಂಘಟನಾತ್ಮಕವಾಗಿ ಬೆಳೆಯಲು ಸಾಧ್ಯ. ಯುವ ಸಂಸ್ಥೆಗಳ ಬೆಳವಣಿಗೆಗೆ ಸದಾ ಪ್ರೋತ್ಸಾಹ ನೀಡುವ ಕೆಲಸ ಮಾಡಲಾಗುವುದು ಎಂದು ಜಿ.ಪಂ.ಸದಸ್ಯೆ ಪ್ರಮೀಳಾ ಜನಾರ್ಧನ್ ಹೇಳಿದರು.
ಅವರು ಕರ್ನಾಟಕ ಸರಕಾರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು, ಸವಣೂರು ಗ್ರಾಮ ಪಂಚಾಯತ್ ಇದರ ಸಹಕಾರದೊಂದಿಗೆ ಅಭ್ಯುದಯ ಯುವಕ ಮಂಡಲ ಚೆನ್ನಾವರ, ಗ್ರಾಮ ವಿಕಾಸ ಸಮಿತಿ ಪಾಲ್ತಾಡಿ ಇದರ ಅಶ್ರಯದಲ್ಲಿ ಚೆನ್ನಾವರ ಶಾಲಾ ಕ್ರೀಡಾಂಗಣದಲ್ಲಿ ನಡೆದ 4ನೇ ವರ್ಷದ ದೀಪಾವಳಿ ಗ್ರಾಮೀಣ ಕ್ರೀಡೋತ್ಸವದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ತಾ.ಪಂ.ಉಪಾಧ್ಯಕ್ಷೆ ಲಲಿತಾ ಈಶ್ವರ ಮಾತನಾಡಿ, ಕ್ರೀಡೆಯಿಂದ ಸಮಾಜದ ಎಲ್ಲರನ್ನೂ ಒಗ್ಗೂಡಿಸಲು ಸಾಧ್ಯ. ವಿಶೇಷವಾಗಿ ದೀಪಾವಳಿಯ ಅಂಗವಾಗಿ ನಮ್ಮ ಸಂಸ್ಕೃತಿಯ ಹಿನ್ನೆಲೆಯ ಕ್ರೀಡಾಕೂಟ ಆಯೋಜನೆಯಿಂದ ಹಿಂದಿನ ಆಚರಣೆಗಳು ಮುಂದಿನ ಪೀಳಿಗೆಗೆ ತಲುಪಿಸುವ ಪ್ರಯತ್ನವಾಗುತ್ತಿದೆ ಎಂದರು. ಜಿಲ್ಲಾ ಯುವಜನ ಒಕ್ಕೂಟದ ನಿರ್ದೇಶಕ ರಾಕೇಶ್ ರೈ ಕೆಡೆಂಜಿ ಮಾತನಾಡಿ, ಕ್ರೀಡೆಗಳ ಮೂಲಕ ಸಮಾಜದ ಎಲ್ಲರನ್ನು ಒಂದುಗೂಡಿಸುವ ಯುವಕ ಮಂಡಲದ ಕಾರ್ಯ ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಸವಣೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ ಮಾತನಾಡಿ, ಯುವಕ ಮಂಡಲಗಳು ಗಮನಾರ್ಹ ಚಟುವಟಿಕೆಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿದೆ. ಇಂತಹ ಸಂಸ್ಥೆಗಳಿಂದ ಸಮಾಜದಲ್ಲಿ ರಚನಾತ್ಮಕ ಬದಲಾವಣೆ ಸಾಧಿಸಲು ಸಾಧ್ಯ. ಸಮಾಜಕ್ಕೆ ಇನ್ನಷ್ಟು ಪೂರಕ ಕಾರ್ಯಗಳು ಇಂತಹ ಸಂಸ್ಥೆಗಳಿಂದ ನಡೆಯುವಂತಾಗಲಿ ಎಂದರು.
ತಾ.ಪಂ.ಸದಸ್ಯೆ ರಾಜೇಶ್ವರಿ ಕನ್ಯಾಮಂಗಲ, ರಾಜ್ಯ ಯುವ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು, ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಸುಬ್ರಹ್ಮಣ್ಯ ಕರುಂಬಾರು, ಕಾಣಿಯೂರು ವಿಶಜ್ಞ ಯುವಕ ಮಂಡಲದ ಗೌರವಾಧ್ಯಕ್ಷ ಜನಾರ್ದನ ಆಚಾರ್ಯ, ನರಿಮೊಗರು ಯುವಕ ಮಂಡಲದ ಅಧ್ಯಕ್ಷ ಸುಧಾಕರ ಕುಲಾಲ್, ಪಾಲ್ತಾಡಿ ಗ್ರಾಮ ವಿಕಾಸ ಸಮಿತಿಯ ಕಾರ್ಯದರ್ಶಿ ಉದಯ ಬಿ.ಆರ್, ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಸುಬ್ಬಣ್ಣ ದಾಸ್, ಅಧ್ಯಕ್ಷ ಪುಟ್ಟಣ್ಣ ನಾಯ್ಕ, ಕಾರ್ಯದರ್ಶಿ ಧೀರಜ್ ರೈ, ಉಪಾಧ್ಯಕ್ಷ ಪ್ರಮೋದ್ ಕೆ, ಜತೆ ಕಾರ್ಯದರ್ಶಿ ಜಗದೀಶ್ ಚೆನ್ನಾವರ, ಕೋಶಾಧಿಕಾರಿ ಪ್ರಜ್ವಲ್ ರೈ, ಚೆನ್ನಾವರ ಶಾಲಾಭಿವೃದ್ದಿ ಸಮಿತಿ ಉಪಾಧ್ಯಕ್ಷೆ ಶೀಲಾವತಿ ಧರ್ಮಪಾಲ, ಶಾಲಾ ಮುಖ್ಯಗುರು ಶಾಂತಾ ಕುಮಾರಿ ಎನ್, ಉದ್ಯಮಿಗಳಾದ ಶಾಫಿ ಚೆನ್ನಾವರ, ಅಬ್ದುಲ್ ಅಝೀಝ್ ಉಪಸ್ಥಿತರಿದ್ದರು.
ಬೆಳಿಗ್ಗೆ ಕ್ರೀಡಾಕೂಟಕ್ಕೆ ಚೆನ್ನಾವರ ಉಳ್ಳಾಕುಲು ಸೇವಾ ಸಮಿತಿಯ ಅಧ್ಯಕ್ಷ ಪದ್ಮನಾಭ ಶೆಟ್ಟಿ ಚಾಲನೆ ನೀಡಿದರು. ಯುವಕ ಮಂಡಲದ ಸಲಹೆಗಾರ ಅಭಿಷೇಕ್ ರೈ ಉಪಸ್ಥಿತರಿದ್ದರು.
ಯುವಕ ಮಂಡಲದ ಮಾಜಿ ಅಧ್ಯಕ್ಷ ರವಿ ಕೆ, ಸದಸ್ಯರಾದ ಅಭಿಷೇಕ್ ರೈ, ನಂದ ಕುಮಾರ್, ಕೃಷ್ಣಪ್ಪ ಚೆನ್ನಾವರ, ನಿತೇಶ್ ಮಡಿವಾಳ, ಧರ್ಮಪಾಲ, ಚರಣ್ ರೈ, ಹರೀಶ್ ಸಿ.ಎಚ್, ಶೆರೀಫ್ ಕುಂಡಡ್ಕ, ಪ್ರಮೋದ್ ರೈ, ಗೋಪಾಲಕೃಷ್ಣ .ಕೆ ಅತಿಥಿಗಳನ್ನು ಗೌರವಿಸಿದರು.
ಸಮವಸ್ತ್ರ ಬಿಡುಗಡೆ: ಇದೇ ಸಂದರ್ಭದಲ್ಲಿ ಯುವಕ ಮಂಡಲದ ಗೌರವ ಸಲಹೆಗಾರ, ಅಬುದಾಭಿ ಇಂಡಿಯನ್ ಸ್ಕೂಲ್ ಇದರ ದೈಹಿಕ ಶಿಕ್ಷಣ ನಿರ್ದೇಶಕ ದಿನೇಶ್ ಎನ್ ಸುವರ್ಣ ಚೆನ್ನಾವರ ಇವರು ಕೊಡುಗೆಯಾಗಿ ಯುವಕ ಮಂಡಲದ ಸದಸ್ಯರಿಗೆ ನೀಡಿದ ಸಮವಸ್ತ್ರವನ್ನು ಜಿ.ಪಂ.ಸದಸ್ಯೆ ಪ್ರಮೀಳಾ ಜನಾರ್ದನ ಅವರು ಬಿಡುಗಡೆಗೊಳಿಸಿದರು.
ವಿವಿಧ ಸ್ಪರ್ಧೆಗಳು: ಪುರುಷರ ವಿಭಾಗದಲ್ಲಿ ವಾಲಿಬಾಲ್, ಲಕ್ಕಿ ಗೇಮ್, ಗುಡ್ಡಗಾಡು ಓಟ, 100 ಮೀ, 200 ಮೀ ಓಟದ ಸ್ಪರ್ಧೆ, ಲಗೋರಿ, ಮಹಿಳೆಯರ ವಿಭಾಗದಲ್ಲಿ ತ್ರೋಬಾಲ್ ಪಂದ್ಯಾಟ, ಲಕ್ಕಿ ಗೇಮ್, 200 ಮೀ, ಲಿಂಬೆ ಚಮಚ ಓಟ, ಹಗ್ಗ ಜಗ್ಗಾಟ ಮತ್ತು ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆಗಳು ನಡೆದವು.
ಪಾಲ್ತಾಡಿ ಗ್ರಾಮವಿಕಾಸ ಸಮಿತಿ ಅಧ್ಯಕ್ಷ ಪ್ರವೀಣ್ ಚೆನ್ನಾವರ ಸ್ವಾಗತಿಸಿ, ಯುವಕ ಮಂಡಲದ ಗೌರವಾಧ್ಯಕ್ಷ ದೀಕ್ಷಿತ್ ಜೈನ್ ವಂದಿಸಿದರು. ಇಕ್ಬಾಲ್ ಚೆನ್ನಾವರ ಕಾರ್ಯಕ್ರಮ ನಿರೂಪಿಸಿದರು.