ಸುಳ್ಯ: ಕರ್ನಾಟಕದ ಹಿರಿಯ ವಿದ್ವಾಂಸ ಡಾ. ಬಿ. ಪ್ರಭಾಕರ ಶಿಶಿಲರ ಮಹಾಕಾದಂಬರಿ, ಹದಿನಾಲ್ಕು ಭಾಷೆಗಳಿಗೆ ಅನುವಾದಗೊಳ್ಳುತ್ತಿರುವ ಪುಂಸ್ತ್ರೀ ಬಗ್ಗೆ ರಾಜ್ಯ ಮಟ್ಟದ ವಿಚಾರ ಸಂಕಿರಣವೊಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಸಮ್ಯಗ್ದರ್ಶನ ಸಭಾ ಭವನದಲ್ಲಿ ಜುಲೈ 25 ರಂದು ಬೆಳಿಗ್ಗೆ 10 ರಿಂದ ಸಾಯಂಕಾಲ 4 ರವರೆಗೆ ನಡೆಯಲಿದೆ.
ಶ್ರೀ ಧ. ಮ. ಕಾಲೇಜಿನ ಕನ್ನಡ ವಿಭಾಗ ಮತ್ತು ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕ ಜಂಟಿಯಾಗಿ ನಡೆಸುವ ಈ ವಿಚಾರ ಸಂಕಿರಣವನ್ನು ಹಿರಿಯ ಸಾಹಿತಿ ಪ. ರಾಮಕೃಷ್ಣ ಶಾಸ್ತ್ರಿ ಮಚ್ಚಿನ ಉದ್ಘಾಟಿಸಲಿದ್ದಾರೆ. ಕಾಲೇಜು ಪ್ರಾಂಶುಪಾಲ ಪ್ರೊ. ಸತೀಶ್ಚಂದ್ರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀ ಧ.ಮ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಯಶೋವರ್ಮ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕಾದಂಬರಿಕಾರ ಡಾ. ಪ್ರಭಾಕರ ಶಿಶಿಲ ಉಪಸ್ಥಿತರಿರುತ್ತಾರೆ.
ಆ ಬಳಿಕ ನಡೆಯಲಿರುವ ಉಪನ್ಯಾಸ ಕಾರ್ಯಕ್ರಮದಲ್ಲಿ ಹಿರಿಯ ಆರ್ಥಧಾರಿ ಜಬ್ಬಾರ್ ಸಮೋ ಪುಂಸ್ತ್ರೀಯ ಭೀಷ್ಮ ಮತ್ತು ಪರಶುರಾಮನ ಬಗ್ಗೆ, ನಿವೃತ್ತ ಉಪನ್ಯಾಸಕ ರಾಧಾಕೃಷ್ಣ ಕಲ್ಚಾರು ಪುಂಸ್ತ್ರೀಯ ಅಂಬೆ ಮತ್ತು ಸತ್ಯವತಿಯರ ಬಗ್ಗೆ ಹಾಗೂ ಹಿರಿಯ ಅರ್ಥಧಾರಿ ಗಣರಾಜ ಕುಂಬ್ಳೆ ಪುಂಸ್ತ್ರೀಯ ಸಾಲ್ವ, ಗಿರಿನಾಯಕ ಮತ್ತು ಪುರೋಹಿತ ಪಾತ್ರಗಳ ಬಗ್ಗೆ ಶಬ್ದ ಚಿತ್ರಣ ನೀಡಲಿದ್ದಾರೆ. ಉಪನ್ಯಾಸದ ಬಳಿಕ ಸಂವಾದಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ.
ಅಪರಾಹ್ನ 2.45 ರಿಂದ 4ರವರೆಗೆ ಕಾದಂಬರಿಕಾರ ಡಾ. ಪ್ರಭಾಕರ ಶಿಶಿಲರೊಡನೆ ಸಂವಾದ ಕಾರ್ಯಕ್ರಮ ನಡೆಯುತ್ತದೆ. ಇದರಲ್ಲಿ ಡಾ. ಎಸ್.ಡಿ. ಶೆಟ್ಟಿ, ಡಾ. ಟಿ. ಕೃಷ್ಣಮೂರ್ತಿ, ಡಾ. ಮಾಧವ ಭಟ್, ಸೀತಾರಾಮ ತೋಳ್ಪಾಡಿತ್ತಾಯ, ಡಾ. ಚೇತನ್ ಸೋಮೇಶ್ವರ, ರಾಮಕೃಷ್ಣ ಭಟ್, ಡಾ. ಸುಬ್ರಹ್ಮಣ್ಯ ಭಟ್, ಡಾ. ಧನೇಶ್ವರಿ, ಶೀಲಾವತಿ, ಬೆಳ್ತಂಗಡಿ ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಹಾಗೂ ಶ್ರೀ ಧ. ಮ. ಕಾಲೇಜು ಉಜಿರೆಯ ಐಚ್ಛಿಕ ಕನ್ನಡದ ವಿದ್ಯಾರ್ಥಿಗಳು ಮತ್ತು ಸಭಾಸದರು ಪಾಲ್ಗೊಳ್ಳುತ್ತಾರೆ. ಸಮನ್ವಯಕಾರರಾದ ಪ್ರಸಿದ್ಧ ಅರ್ಥಧಾರಿ ಉಜಿರೆ ಅಶೋಕ ಭಟ್ ಸಮಾರೋಪ ಭಾಷಣ ಮಾಡಲಿದ್ದಾರೆ.