ಅಂದು ಎಸ್.ಎಸ್.ಎಲ್.ಸಿ. ಫಲಿತಾಂಶ. ಗೋಡೆಯಲ್ಲಿ ರಿಸಲ್ಟಿನ ಉದ್ದ ಪಟ್ಟಿ ಅಂಟಿಸಿದ್ದರು. ಯಾರು ಪಾಸ್, ಫೇಲ್ ಎಂದು ಮುಖ ನೋಡಿಯೇ ಹೇಳಬಹುದಾಗಿತ್ತು. ‘ನಿನ್ನದು ಒಂದು ಸಬ್ಜೆಕ್ಟ್ ಹೋಗಿದೆ ಕಾಣ್ತದೆ’ ಸಹಪಾಠಿ ಮೆಲುತ್ತರ ನೀಡಿ ಗುಂಪಿನಲ್ಲಿ ಮರೆಯಾಗಿದ್ದ.
ಹೌದು.. ಆತ ಅಂದಂತೆ ಆಂಗ್ಲ ವಿಷಯದಲ್ಲಿ ಎರಡು ಅಂಕ ಕೈಕೊಟ್ಟಿತ್ತು. ಬಹುತೇಕ ಸಹಪಾಠಿಗಳು ಉತ್ತೀರ್ಣರಾಗಿದ್ದರು. ವರುಷದುದ್ದಕ್ಕೂ ಒಂದೇ ಬೆಂಚಿನಲ್ಲಿ ಕುಳಿತ ಮನಸ್ಸುಗಳು ಅನುತ್ತೀರ್ಣನಾದವನನ್ನು ಹಿಂದಿನ ಬೆಂಚಿಗೆ ತಳ್ಳಿದ ಅನುಭವ! ಯಾಕೆ ಹೀಗಾಯಿತು? ಈ ‘ಅಸಹಾಯಕತೆ’ಯನ್ನು ನೋಡುವ, ಕೇಳುವ, ಗಮನಿಸುವ ಮನಸ್ಸುಗಳ ಭಾವಗಳಂದು ತೂಕಡಿಸುತ್ತಿತ್ತು!
ಎಸ್.ಎಸ್.ಎಲ್.ಸಿ.ಯಲ್ಲಿ ಫೈಲ್ ಅಂದಾಗ ಮನೆಯಲ್ಲೇನೂ ಆತಂಕದ ವಾತಾವರಣವಿದ್ದಿರಲಿಲ್ಲ. ಇಷ್ಟು ಅಂಕ ಪಡೆಯಲೇಬೇಕೆಂಬ ಹಠವೂ ಇದ್ದಿರಲಿಲ್ಲ. ಅಂಕ ಬಿಡಿ, ಭವಿಷ್ಯದ ನೋಟವೂ ಹೆತ್ತವರಲ್ಲಿ ಇದ್ದಿರಲಿಲ್ಲ! ತಾವು ನಂಬಿದ, ಪ್ರೀತಿಸಿದ ವೃತ್ತಿಯ ಕೂಪದೊಳಗೆ ಬದುಕಿನ ನೊಗವು ಸಾಗುತ್ತಿತ್ತು!
ಆಂಗ್ಲ ಭಾಷೆಯ ವಿಷಯದಲ್ಲಿ ನೂರಕ್ಕೆ ಮೂವತ್ತಮೂರು ಅಂಕ. ಫೈಲ್ ಅಂಕಪಟ್ಟಿಯನ್ನು ನೋಡುತ್ತಾ ನೋಡುತ್ತಾ ಇದ್ದರೂ ಈಗಿನಂತೆ ‘ಆತ್ಮಹತ್ಯೆ’ಯ ಯೋಚನೆಯು ಬಂದಿರಲಿಲ್ಲ! ‘ಪರೀಕ್ಷೆಗೆ ಕುಳಿತರಾಯಿತು’ ಅಷ್ಟೇ. ಮುಂದಿನ ಪರೀಕ್ಷೆಯಲ್ಲಿ ಉತ್ತಮ ಅಂಕದಿಂದ ಎಸ್.ಎಸ್.ಎಲ್.ಸಿ.ಉತ್ತೀರ್ಣನಾದರೂ ಆಪ್ತ ವಲಯದಲ್ಲಿ ‘ಫೈಲ್’ ಹಣೆಪಟ್ಟಿ ಅಂಟಿತ್ತು.
ಮೊನ್ನೆಯಷ್ಟೇ ಎಸ್.ಎಸ್.ಎಲ್.ಸಿ. ಫಲಿತಾಂಶ ಪ್ರಕಟವಾಯಿತು. ಪ್ರಥಮ, ದ್ವಿತೀಯ ರ್ಯಾಂಕ್ ಪಡೆದವರ ಸಂಭ್ರಮಗಳು ಪತ್ರಿಕೆಗಳಲ್ಲಿ ಜಾಗ ಪಡೆದುವು. ಫಲಿತಾಂಶದ ಹಿಂದೆ ಒಂದಷ್ಟು ರಾಜಕೀಯ ಘಮಲುಗಳೂ ಸೇರಿದುವು! ಕೆಸರೆರೆಚಾಟಗಳೂ ನಡೆದುವು. ಇಷ್ಟು ವರುಷ ಮೆತ್ತಿಕೊಳ್ಳದ ರಾಜಕೀಯದ ಅಂಟಿನ ಹಿಂದಿನ ಹಾದಿ ಪ್ರಜ್ಞಾವಂತರಿಗೆ ಅರ್ಥವಾಗುತ್ತದೆ.
ಸಂಭ್ರಮಗಳ ಜತೆಗೆ ಆತ್ಮಹತ್ಯೆಗಳ ಸುದ್ದಿಯೂ ರಾಚಿತು. ಫಲಿತಾಂಶ ಬರುವ ಮೊದಲೇ ಇಹಲೋಕಕ್ಕೆ ಮನ ಮಾಡಿದ ಎಳೆಯ ಮನಸ್ಸಿನ ಹಿಂದಿನ ಬದುಕಿನ ವಾತಾವರಣ ಅಧ್ಯಯನವಾಗಬೇಕು. ಒಂದು ಮನೆಯ ಶೈಕ್ಷಣಿಕ ವಾತಾವರಣ, ಹೆತ್ತವರ ನಿರೀಕ್ಷೆಗಳು, ವಿದ್ಯಾರ್ಥಿಯ ಕಲಿಕೆಯ ಪ್ರಮಾಣ, ಧಾರಣ ಶಕ್ತಿ.. ಇವೆಲ್ಲವೂ ವಿದ್ಯಾರ್ಥಿಯ ಮೇಲೆ ಗಾಢ ಪರಿಣಾಮ ಬೀಳುತ್ತದೆ. ಎಲ್ಲರೂ ನೂರಕ್ಕೆ ನೂರು ಅಂಕ ತೆಗೆಯಲು ಸಾಧ್ಯವಿಲ್ಲವಲ್ಲಾ.
ವರ್ತಮಾನಕ್ಕೆ ಅಗತ್ಯ ಎಂದು ಹೇಳಲ್ಪಡುವ ‘ನೂರಕ್ಕೆ ನೂರು’ ಅಂಕ ಪ್ರಕ್ರಿಯೆಯು ವಿದ್ಯಾರ್ಥಿಯ ಮುಂದಿನ ಶೈಕ್ಷಣಿಕ ಕಲಿಕೆಗೆ ಪ್ರವೇಶಿಕೆಯಾಗಬಹುದು. ಆದರದು ಆ ವಿದ್ಯಾರ್ಥಿಯ ನಿಜ ಬೌದ್ಧಿಮತ್ತೆಯಲ್ಲ. ಈಗ ಹೇಳಲ್ಪಡುವ ಶೈಕ್ಷಣಿಕ ನಿರೂಪಗಳಿಗೆ ‘ಬುದ್ಧಿಮತ್ತೆ’ ಬೇಕಾಗಿಲ್ಲ. ಏನಿದ್ದರೂ ತೊಂಭತ್ತು-ತೊಂಭತ್ತೈದರ ಮೇಲಿನ ಅಂಕ.
ನಿನ್ನೆ ಅಚಾನಕ್ಕಾಗಿ ಹುಡುಕುತ್ತಿದ್ದಾಗ ಸಿಕ್ಕ ನನ್ನ ಎಸ್.ಎಸ್.ಎಲ್.ಸಿ. ಫೈಲ್ ಅಂಕಪಟ್ಟಿಯನ್ನು ನೋಡುತ್ತಿದ್ದಾಗ ಈ ಎಲ್ಲಾ ವಿಚಾರಗಳು ರಾಚಿದುವು. ‘ನಾನ್ಯಾಕೆ ಅಂದು ಆತ್ಮಹತ್ಯೆ ಮಾಡಿಕೊಂಡಿಲ್ಲ’? ಮನದೊಳಗೆ ಪ್ರಶ್ನೆ ರಿಂಗಣಿಸಿತು. ಅಂತಹ ಮನಸ್ಥಿತಿಗಳು, ಯೋಚನೆಗಳು ಬದುಕಿನಲ್ಲಿ ಇದ್ದಿರಲಿಲ್ಲ. ಹಾಗಾಗಿ ಬಚಾವಾದೆ! . ಎಲ್ಲಕ್ಕಿಂತಲೂ ಮುಖ್ಯವಾಗಿ ವೈಯಕ್ತಿಕ ಬದುಕಿನ ಸೂಕ್ಷ್ಮಾತಿಸೂಕ್ಷ್ಮಗಳನ್ನು ಪೋಸ್ಟ್ ಮಾರ್ಟಂ ಮಾಡಿ, ಹತ್ತಾರು ಕಂತುಗಳಲ್ಲಿ ಬಿತ್ತರಿಸುವ, ಪ್ರಕಟಿಸುವ ಮಾಧ್ಯಮಗಳಂದು ಇದ್ದಿರಲಿಲ್ಲ.