ಕ್ರಿಕೆಟ್ಟೇ ನನ್ನ ಜೀವ ಎನ್ನುತ್ತ ಇದೇ 2025ರ ಜೂನ್ 4 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಹರಿದು ಬಂದ ಅಭಿಮಾನಿಗಳಲ್ಲಿ ಈಗ ನಾವು ಈ ಪ್ರಶ್ನೆಯನ್ನು ಕೇಳಬಹುದಾಗಿದೆ. ಕ್ರಿಕೆಟನ್ನೇ ಜೀವವೆಂದು ಭಾವಿಸಿಕೊಳ್ಳಲು ಏನಿದೆ ಅದರಲ್ಲಿ? ಹನ್ನೊಂದು ಮಂದಿಯನ್ನು ಬಲಿ ಪಡೆದ ಕಾರಣ ವಿಮರ್ಶೆಗೆ ಒಳಗಾಗಿರುವ ಬೆಂಗಳೂರಿನ ಅಭಿಮಾನ ಎಷ್ಟು ಭ್ರಮಾತ್ಮಕವೆಂದು ತಿಳಿಯುತ್ತದೆ.
“ಕ್ರಿಕೆಟ್ ಆಟದಲ್ಲಿBowler ಮತ್ತು Batsman ಇಬ್ಬರೇ ಆಡುವುದು, ಉಳಿದವರೆಲ್ಲ ನೋಡುವುದೇ” ಎಂಬ ಟೀಕೆ ಇದೆ. ಎರಡೂ ತಂಡಗಳ ಆಟಗಾರರು ಹಾಗೂ extra players ಸೇರಿ ನೋಡುವವರ ಸಂಖ್ಯೆ ಸುಮಾರು ಮೂವತ್ತು ದಾಟುತ್ತದೆ. ಇನ್ನು ಬಂದು ಸೇರಿದ ಸಾವಿರಾರು ಪ್ರೇಕ್ಷಕರು ಆಟ ನೋಡುವುದನ್ನಷ್ಟೇ ನೆಚ್ಚಿಕೊಂಡಿರುತ್ತಾರೆ. ಒಬ್ಬೊಬ್ಬ ಆಟಗಾರನು ಮಾಡುವ ತಪ್ಪು ಅವನೊಬ್ಬನ ವೈಫಲ್ಯವಲ್ಲ, ಅದು ಇಡೀ ತಂಡದ ವೈಫಲ್ಯವಾಗುತ್ತದೆ. ಆಟದ ಕೌಶಲಕ್ಕಿಂತ ರನ್ನುಗಳ ಲೆಕ್ಕಾಚಾರದಲ್ಲಿ ತಂಡದ ಗೆಲುವು ನಿರ್ಧಾರವಾಗುತ್ತದೆ. ಸಿಕ್ಸರ್, ಬೌಂಡರಿಯಿಂದ ಹೊರಗೆ ಚೆಂಡು ಹೋಗುವಂತೆ ಹೊಡೆಯುವುದು, ಒಂದೆರಡು ರನ್ನುಗಳಿಗಾಗಿ ಬೇಟ್ ನ್ನು ಕುಟ್ಟುತ್ತ ಇರುವುದು, ಬೌಲಿಂಗ್ ಕೌಶಲ ಇತ್ಯಾದಿಗಳೆಲ್ಲವೂ ಒಬ್ಬೊಬ್ಬರ ಪ್ರಸಿದ್ಧಿಗೆ ಕಾರಣವಾಗುತ್ತವೆ. ಹಾಗಾಗಿ ಇಲ್ಲಿ ಟೀಂ ವರ್ಕ್ ಇದೆ ಎಂಬುದು ನಿಜವಲ್ಲ. ಕ್ರೀಡೆಯಲ್ಲಿ ಟೀಂ ವರ್ಕ್ ಇರುವುದು ಕಬಡ್ಡಿ, ಕೊಕ್ಕೊ, ವಾಲಿಬಾಲ್, ತ್ರೋಬಾಲ್ ಮುಂತಾದ ತಂಡಗಳಲ್ಲಿ. ಆದರೆ ಇವೆಲ್ಲವುಗಳಿಗಿಂತ ಹೆಚ್ಚಿನ ಸೆಳೆತ ಇರುವುದು ಕ್ರಿಕೆಟ್ ಗೆ!
ಭಾರತದಲ್ಲಿ ಕ್ರಿಕೆಟ್‍ನ ಇತಿಹಾಸವನ್ನು ಹುಡುಕಿದರೆ ಅದು 17ನೇ ಶತಮಾನದಲ್ಲಿ ಬ್ರಿಟಿಷ್ ನಾವಿಕರು ಮತ್ತು ವ್ಯಾಪಾರಿಗಳಿಂದ ಬೆಳೆದು ಬಂತು ಎಂದು ತಿಳಿಯುತ್ತದೆ. ಹಾಗಾಗಿ ಅದು ಪ್ರತಿಷ್ಠಿತರ ಕ್ರೀಡೆಯಾಗಿ ಪರಿಗಣಿಸಲ್ಪಟ್ಟಿತು. ಮುಂದೆ 18, 19 ಮತ್ತು 20ನೇ ಶತಮಾನದುದ್ದಕ್ಕೂ ಒಂದು ಕ್ರೀಡೆಯಾಗಿ ಆಟಗಾರರ ಕೌಶಲ ಪ್ರದರ್ಶನಕ್ಕೆ ಅವಕಾಶವಿತ್ತು. ಐದು ದಿನಗಳ ಪಂದ್ಯವನ್ನು ಆಡುವ ಪರಿಪಾಠದಿಂದಾಗಿ ಹಾಗೂ ರಾಷ್ಟ್ರೀಯ ತಂಡಗಳನ್ನು ಕಟ್ಟುವ ಮೂಲಕ ದೇಶ-ದೇಶಗಳ ಮಧ್ಯೆ ಟೂರ್ನಮೆಂಟ್ ನಡೆಯತೊಡಗಿದವು. ಟಿ.ವಿ ಪರದೆಯು ಮನೆಗಳನ್ನು ಆಕ್ರಮಿಸುವ ತನಕ ರೇಡಿಯೋದಲ್ಲಿ ಕಮೆಂಟ್ರಿಯನ್ನು ಮಾತ್ರ ಕೇಳುತ್ತಿದ್ದ ಅಭಿಮಾನಿಗಳು ಮುಂದೆ ಟಿ. ವಿ. ಗಳ ಎದುರು ಪ್ರತಿಷ್ಠಾಪಿಸ ತೊಡಗಿದರು. ಇದರಿಂದಾಗಿ ಮೈದಾನಕ್ಕೆ ಹೋಗಿ ಕ್ರಿಕೆಟ್ ವೀಕ್ಷಿಸುವವರ ಸಂಖ್ಯೆ ಕಡಿಮೆಯಾಯಿತು. ಟಿ.ವಿ. ಗಳಲ್ಲಿ ಜಾಹಿರಾತುಗಳ ಸ್ಪರ್ಧೆಯಿಂದಾಗಿ ಕ್ರಿಕೆಟಿಗೆ ಕಮರ್ಷಿಯಲ್ ಚಹರೆ ಬಂತು. ಐದು ದಿನಗಳ ಕ್ರಿಕೆಟ್ ಆಕರ್ಷಣೆ ಕಳೆದುಕೊಂಡು 20 ಓವರ್ ಗಳ 20-20 ಆರಂಭವಾಯಿತು. ಇದು ಅಭಿಮಾನಿಗಳನ್ನು ಆಕರ್ಷಿಸುತ್ತದೆಂದು ತಿಳಿದ ಬಂಡವಾಳಶಾಹಿಗಳು ಕ್ರೀಡೆಯನ್ನು ಜೂಜು ಮಾಡಿದರು. ಅಭಿಮಾನಿಗಳು ಅದರ ಬಗ್ಗೆ ಲಕ್ಷ್ಯ ಹರಿಸಲೇ ಇಲ್ಲ. ಅವರಿಗೆ ಟಿ.ವಿ.ಗಳಲ್ಲಿ ಮನರಂಜನೆ ಸಿಗುತ್ತಿತ್ತು. ಒಂದೇ ದಿನದಲ್ಲಿ ಪಂದ್ಯ ಮುಗಿಯುವುದರಿಂದ ಕೆಲಸಕ್ಕೆ ರಜೆ ಹಾಕಿ ಕ್ರಿಕೆಟ್ ನೋಡುವವರು ಹುಟ್ಟಿಕೊಂಡರು. ಏನಿದ್ದರೂ ಭರ್ಜರಿ ಸಂಖ್ಯೆಯ ಪ್ರೇಕ್ಷಕರ ನಡುವೆ ಆಡುವ ಮಜಾವೇ ಬೇರೆ. ಹಾಗೆಯೇ ಭರ್ಜರಿ ಸಂಖ್ಯೆಯ ಅಭಿಮಾನಿಗಳ ಸಮ್ಮುಖದಲ್ಲಿ ಅಭಿನಂದಿಸಲ್ಪಡುವ ಮಜಾವೇ ಬೇರೆ. ಈ ಮಜಾದ ಹಪಾಹಪಿಯಿಂದಾಗಿ ಮೊನ್ನೆ ಜೂನ್ 4 ರಂದು ಖಅಃ ವೀರರನ್ನು ನೋಡಲು ಜನ ಬರಬೇಕಾಗಿತ್ತು. ಹಣ ಕೊಟ್ಟು ಜನ ಬರುತ್ತಾರೋ ಇಲ್ಲವೋ ಎಂಬ ಅನುಮಾನ ಇದ್ದುದರಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಉಚಿತ ಪಾಸ್ ಗಳ ಘೋಷಣೆಯಾಯಿತು. ಅಂದಾಜು ಮೀರಿ ಬಂದ ಅಭಿಮಾನಿಗಳ ಧಾವಂತದಿಂದಾಗಿ ತೆರೆದಿಟ್ಟಷ್ಟು ಗೇಟ್ ಗಳಲ್ಲಿ ಕಾಲ್ತುಳಿತವಾಯಿತು. ಯಶಸ್ವಿ ಬದುಕನ್ನು ಕಟ್ಟಿಕೊಳ್ಳುವ ಕನಸು ಹೊಂದಿದ್ದ ಹನ್ನೊಂದು ಸುಂದರ ಯುವಜನರು ಸಾವಿಗೀಡಾದರು. ಅವರ ಕುಟುಂಬಕ್ಕಾದ ನಷ್ಟವನ್ನು ಊಹಿಸಲೂ ಸಾಧ್ಯವಿಲ್ಲ.
Indian Premier League ಹೆಸರಿನಲ್ಲಿIPL ಪಂದ್ಯಗಳು 2008 ರಲ್ಲಿ ಆರಂಭವಾದುವು. ಆಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಆರಂಭವಾಗಿದೆ. ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಲು ಆಗದಿದ್ದರೂ ಸಂಘಟಕರಿಗೆ ಈ ಪಂದ್ಯವು ಸಾಕಷ್ಟು ಸಂಪಾದನೆಯನ್ನು ನೀಡಿತ್ತು. ಆಗ ಹುಟ್ಟಿಕೊಂಡ ಎಂಟು ತಂಡಗಳ ಯಜಮಾನರಿಗೆ ತಮ್ಮ ತಂಡವು ಗೆದ್ದರೂ ಸೋತರೂ ಲಾಭ ಇದ್ದೇ ಇತ್ತು. ಶಾರುಖ್ ಖಾನ್, ಪ್ರೀತಿ ಝಿಂಟ ಮುಂತಾದ ಸಿನೆಮಾ ತಾರೆಗಳು ಯಜಮಾನರಾಗಿದ್ದ ತಂಡಗಳ ಆಟವಿದ್ದಾಗ ಅವರೇ ಪ್ರೇಕ್ಷಕರ ಮಧ್ಯೆ ಕುಳಿತು ಆದಾಯವನ್ನು ಇನ್ನೂ ಹೆಚ್ಚಿಸಿಕೊಳ್ಳುತ್ತಿದ್ದರು. ಹೀಗೆ IPL ನಿರಂತರವಾಗಿ ಪ್ರತಿ ವರ್ಷ ಇದು ನಡೆಯುತ್ತಲೇ ಬಂದಿದೆ. ಸಂಘಟಕರಿಗೂ ಆಟಗಾರರಿಗೂ ಚಿನ್ನದ ಮೊಟ್ಟೆ ಇಡುವ ಕೋಳಿಯಾಗಿ IPL ನಲ್ಲಿ ಆಟಗಾರರು ಹರಾಜಿಗೆ ಒಳಗಾಗುತ್ತಿದ್ದರು. ಅವರಿಗೆ ಅದು ಅಪಮಾನವೆನ್ನಿಸಲಿಲ್ಲ. ತಂಡ ಕಟ್ಟುತ್ತಿದ್ದ ಬಂಡವಾಳಶಾಹಿಗಳು ತಮ್ಮ ಸಾಮಥ್ರ್ಯಕ್ಕೆ ತಕ್ಕಂತೆ ಆಟಗಾರರ ಬೆಲೆ ನಿರ್ಣಯಿಸುತ್ತಿದ್ದರು. ಕೌಶಲಭರಿತ ಆಟಗಾರರು ಹೆಚ್ಚು ಮೊತ್ತಕ್ಕೆ ಹರಾಜು ಕೂಗಿದವರ ಪಾಲಾಗುತ್ತಿದ್ದರು. ಅಂದರೆ ಆಟಗಾರರಿಗೆ ತಮ್ಮ ತಂಡವನ್ನು ಆಯ್ಕೆ ಮಾಡಲು ಅವಕಾಶವಿಲ್ಲ. ಹಾಗೆಯೇ ತಮ್ಮ ಮಾಲಕರು ನೇಮಿಸಿದರೆ ತಂಡದ ನಾಯಕನಾಗಬೇಕು. ಇಲ್ಲವಾದರೆ ಆಟಗಾರನಾಗಿ ಸಹಕರಿಸಬೇಕು. ನನ್ನ ದೃಷ್ಟಿಯಲ್ಲಿ ಇದೊಂದು ಆತ್ಮಗೌರವದ ಅವಕಾಶವಲ್ಲ. ಆದರೆ ಹಣ ಸಿಕ್ಕುವಾಗ ಆತ್ಮಗೌರವದ ಪ್ರಶ್ನೆ ಇಟ್ಟುಕೊಂಡು ಏನು ಮಾಡುವುದು? ತಮ್ಮ ತಂಡದ ಹೆಸರಿನಲ್ಲಿ ‘ಬೆಂಗಳೂರು’ ಎಂಬ ಸ್ಥಳನಾಮ ಇದ್ದುದರಿಂದ ಇದನ್ನು ನಮ್ಮೂರಿನ ಪ್ರತಿಷ್ಠೆಯ ಪ್ರಶ್ನೆ ಎಂಬುದಾಗಿ ತಿಳಿದ ಆಟಗಾರರು ತಂಡದಲ್ಲಿ ಒಬ್ಬರಾದರೂ ಇದ್ದಾರೆಯೇ? ಹಣ ಸಿಕ್ಕುವುದಾದರೆ ಊರಿನ ಹೆಸರು ಯಾವುದಾದರೇನು?
ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಳೆದ ಗುರುವಾರ (4-6-2025) ನಡೆದ ಕಾಲ್ತುಳಿತವು ಅಪರಿಮಿತ ಅಭಿಮಾನಿಗಳ ಪ್ರವಾಹದಿಂದಾಯಿತು ಎಂಬುದು ಒಂದು ವಿವರಣೆ. ಅಷ್ಟೊಂದು ಸಂಖ್ಯೆಯಲ್ಲಿ ಅಭಿಮಾನಿಗಳು ಬರಲು ‘ಉಚಿತ’ ಪ್ರವೇಶದ ಆಮಿಷವೇ ಕಾರಣ ಎಂಬುದು ಪೂರಕ ವಿವರಣೆ. Royal challengees ಎನ್ನುವುದಕ್ಕಿಂತ ಪ್ರಮುಖವಾಗಿ ‘ಬೆಂಗಳೂರು’ ಗೆದ್ದದ್ದು ಎಂಬ ಪ್ರಚಾರವು ಆಟಗಾರರನ್ನು ನೇರವಾಗಿ ನೋಡುವ ಅವಕಾಶಕ್ಕಾಗಿ ಅಭಿಮಾನಿಗಳ ಆಸಕ್ತಿಯನ್ನು ಕೆರಳಿಸಿತು. ತಂಡದಲ್ಲಿದ್ದವರು ಬೆಂಗಳೂರಿನವರಷ್ಟೇ ಅಲ್ಲ, ಯಾರ್ಯಾರೋ ಇದ್ದರು ಎಂಬ ವಾಸ್ತವವನ್ನು ವಿಮರ್ಶಿಸಿಕೊಳ್ಳದೆ, ಉಚಿತ ಪ್ರವೇಶದ ಸಾಧ್ಯತೆಯನ್ನು ಬಳಸಿಕೊಳ್ಳುವ ಮನಸ್ಸು ಮಾಡಿದ್ದು ಜನಸಂದಣಿಯ ಒತ್ತಡಕ್ಕೆ ಕಾರಣವಾಯಿತು. ಅಲ್ಲದೆ ‘ಉಚಿತ’ವೆಂದು ಹೇಳಿದ ಬಳಿಕ ‘ಪಾಸ್’ ಎಂಬ ಪದ ಬಳಕೆ ಅಗತ್ಯವಿರಲಿಲ್ಲ. ಇನ್ನು ಉಚಿತವೆಂದಾದ ಬಳಿಕ ಕೆಲವು ಗೇಟ್ ಗಳನ್ನು ಮುಚ್ಚಿಟ್ಟಿರುವ ಮತ್ತು ಕೆಲವನ್ನು ಅರ್ಧ ತೆರೆದಿಡುವ ಅಗತ್ಯವಿರಲಿಲ್ಲ. ಇಷ್ಟೆಲ್ಲಾ ಅವ್ಯವಸ್ಥೆಗಳ ಹಿಂದೆ ಉಪಮುಖ್ಯಮಂತ್ರಿ ಶ್ರೀ ಡಿ.ಕೆ.ಶಿ. ಯವರ ಜನಪ್ರಿಯತೆಯ ಚಾಕೋಲೇಟ್ ಹಂಚುವ ಆಸಕ್ತಿ ಇತ್ತೆಂದು ಹೇಳಲಾಗುತ್ತದೆ. ವಿಧಾನ ಸೌಧದ ಮೆಟ್ಟಿಲುಗಳಲ್ಲಿ ಸನ್ಮಾನ ನಡೆಸಿದ ಬಳಿಕ ಉಪಮುಖ್ಯಮಂತ್ರಿಗಳು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹೋದದ್ದು ಯಾಕೆ? ಈ ಪ್ರಶ್ನೆಯನ್ನು ಮುಖ್ಯಮಂತ್ರಿಗಳೇ ಉಪಮುಖ್ಯ ಮಂತ್ರಿಗಳಲ್ಲೇ ಕೇಳಿದ್ದು ವರದಿಯಾಗಿದೆ. ಪ್ರಾಯಶಃ ಮಾನ್ಯ ಡಿ.ಕೆ.ಶಿ. ಯವರು ಹೋಗದಿರುತ್ತಿದ್ದರೆ ಪ್ರಸ್ತುತ ಸರಕಾರದ ಮೇಲೆ ಕೇಂದಿಕೃತವಾಗುತ್ತಿರುವ ಆಪಾದನೆಗಳು ಕಡಿಮೆಯಾಗುವ ಸಾಧ್ಯತೆ ಇತ್ತು. “ನಾನಲ್ಲ” “ನನ್ನಿಂದಾಗಿ ಅಲ್ಲ”, “ಸರಕಾರ ರಾಜಿನಾಮೆ ಕೊಡಬೇಕಾಗಿಲ್ಲ” “ಬೆಂಗಳೂರು ತಂಡದ ಕ್ರೀಡಾಳುಗಳನ್ನು ಸನ್ಮಾನಿಸಿದ್ದರಲ್ಲಿ ಏನು ತಪ್ಪಿದೆ?” ಇತ್ಯಾದಿ ಪ್ರಶ್ನೆಗಳನ್ನು ಆಡಳಿತ ಪಕ್ಷದ ವಕ್ತಾರರು ಕೇಳುವ ಮೂಲಕ ಸದ್ಯ ಮೃತರಿಗೆ 25 ಲಕ್ಷ ಪರಿಹಾರ ನೀಡಿದಲ್ಲಿಗೆ ನಾವು ನಿರಪರಾಧಿಗಳು ಎಂಬ ಧೋರಣೆ ಕಾಣಿಸುತ್ತದೆ. ಆದರೆ ಅದು ತಪ್ಪನ್ನು ದಕ್ಕಿಸಿಕೊಳ್ಳುವ ಉಪಾಯವಾಗುತ್ತದೆ ಅಷ್ಟೇ.
ಎಲ್ಲಿ ಉಚಿತವೆಂಬ ಆಮಿಶ ಇದೆಯೋ ಅಲ್ಲಿ ತಳ್ಳಾಟವೂ ಇರುತ್ತದೆ. ಸರಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ನೀಡಿದ ಆರಂಭದಲ್ಲಿ ನೂಕುನುಗ್ಗಲು ಮತ್ತು ಸೀಟಿಗಾಗಿ ಪರದಾಟ ಇರುತ್ತಿತ್ತು. ತಳ್ಳಾಟ ಹಾಗೂ ಎಳೆದಾಟವು ಜರಗಿತ್ತು. ಸಾಮಾನ್ಯವಾಗಿ ಪ್ರಯಾಣಿಸುವ ಉದ್ದೇಶವೇ ಇಲ್ಲದಿದ್ದ ಮಹಿಳೆಯರು ತಮ್ಮ ಪ್ರಯಾಣಕ್ಕೆ ಉದ್ದೇಶಗಳನ್ನು ಪೋಣಿಸಿಕೊಂಡರು. ಪ್ರಸಿದ್ಧ ದೇವಾಲಯಗಳಿಗೆ ಕ್ಷೇತ್ರ ಪ್ರವಾಸವೊಂದು ಕಾರಣವಾಯಿತು. ಹೀಗೆ ಉಚಿತವಾಗಿ ಬಂದ ಮಹಿಳೆಯರಿಂದಾಗಿ ದೇವಸ್ಥಾನಗಳಲ್ಲಿ ಕಾಣಿಕೆ ಡಬ್ಬಿಗಳಲ್ಲಿ ಹಣ ತುಂಬುವ ಪ್ರಮಾಣ ಹೆಚ್ಚಾಯಿತು ಎಂದು ಧರ್ಮಾಧಿಕಾರಿಗಳು ಹೇಳಿದರು. ಹೀಗೆಯೇ ಉಚಿತ ಬೇಳೆ, ಉಚಿತ ಅಕ್ಕಿ, ಉಚಿತ ವಿದ್ಯುತ್, ಉಚಿತ ಶಿಕ್ಷಣ ಇತ್ಯಾದಿಗಳು ಬೇಕಿದ್ದರೂ ಬೇಡದಿದ್ದರೂ ಜನರ ಉಡಿಗೆ ಬಂದು ಬಿದ್ದುವು.
ಮುಖ್ಯ ವಿಷಯವೆಂದರೆ ಬೆಂಗಳೂರು ತಂಡದ ಮೂಲ ಮಾಲಕರು ಪ್ರಸಿದ್ಧ ಉದ್ಯಮಿ ವಿಜಯ ಮಲ್ಯರು. ಆಗ ಅವರ ವಿಳಾಸ ಬೆಂಗಳೂರಿನಲ್ಲಿತ್ತು. ಈಗ ಅವರು ಆರ್ಥಿಕ ಅಪರಾಧಿಯಾಗಿ ವಿದೇಶದಲ್ಲಿದ್ದಾರೆ. ಈಗ RCB ಅವರ ಕೈಯಲ್ಲಿಲ್ಲ. ಅದರ ಸ್ವಾಮ್ಯವು ಇಂಗ್ಲೇಂಡಿನ ಡಿಯಾಜಿಯೋ ಕಂಪೆನಿಯ ಕೈಯಲ್ಲಿದೆ. ಮಲ್ಯರು RCB ಮಾರಾಟಕ್ಕೆ ಇದೆಯೆಂದರೂ ಡಿಯಾಜಿಯೋ ಕಂಪೆನಿ ಮಾರುವುದಿಲ್ಲ ಎನ್ನುತ್ತಿದೆ. ಸತ್ಯ ಹೀಗಿರುವಾಗ ಸರಕಾರವಾದರೂ ಬೆಂಗಳೂರಿನ ತಂಡ ಗೆದ್ದಿತೆಂಬ ಕಾರಣಕ್ಕೆ ಸಂಭ್ರಮಾಚರಣೆ ಮಾಡಿರುವುದಕ್ಕೆ ಅರ್ಥವಿದೆಯೇ?
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel