ಮಡಿಕೇರಿ: ರಸ್ತೆ ವಿಸ್ತರಣೆಯ ನೆಪದಲ್ಲಿ ವಿರಾಜಪೇಟೆ ಪಟ್ಟಣ ಪಂಚಾಯತ್ ಅವೈಜ್ಞಾನಿಕ ಕಾಮಗಾರಿಗೆ ಮುಂದಾಗಿದೆ ಎಂದು ಆರೋಪಿಸಿ ವಿವಿಧ ಬಡಾವಣೆಗಳ ಕಟ್ಟಡ ಮಾಲಕರು, ನಿವಾಸಿಗಳು, ವಕೀಲರು ಹಾಗೂ ವರ್ತಕರು ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಸುಂಕದಕಟ್ಟೆಯಿಂದ ಮೀನುಪೇಟೆಯವರೆಗೆ ರಸ್ತೆ ವಿಸ್ತರಣೆಗೆ ಯೋಜನೆ ರೂಪಿಸಿರುವ ಪಟ್ಟಣ ಪಂಚಾಯತ್ ಅವೈಜ್ಞಾನಿಕ ಯೋಜನೆಯ ಮೂಲಕ ಸಾರ್ವಜನಿಕರಿಗೆ ತೊಂದರೆ ನೀಡಲು ಮುಂದಾಗಿದೆ ಎಂದು ಪ್ರತಿಭಟನಾಕಾರರು ತಾಲೂಕು ಕಚೇರಿ ಎದುರು ಆರೋಪಿಸಿದರು. ಜುಲೈ ತಿಂಗಳಿನಲ್ಲಿ ರಸ್ತೆ ವಿಸ್ತರಣೆ ಸಂಬಂಧ ಸರ್ವೆ ಕಾರ್ಯ ನಡೆಸಿ ಕಟ್ಟಡಗಳ ತೆರವು ಕಾರ್ಯಾಚರಣೆ ಕುರಿತು ಅಧಿಕಾರಿಗಳು ಮುನ್ಸೂಚನೆ ನೀಡಿದ್ದರು. ಆದರೆ ಕಟ್ಟಡ ಮಾಲಕರುಗಳಿಗೆ ಸರಕಾರದ ನಿಯಮದಂತೆ ಪರಿಹಾರ ಒದಗಿಸುವ ಬಗ್ಗೆ ಎಲ್ಲೂ ಪ್ರಸ್ತಾಪಿಸಿಲ್ಲವೆಂದು ಪ್ರಮುಖರು ಅಸಮಾಧಾನ ವ್ಯಕ್ತಪಡಿಸಿದರು.
ಸುಮಾರು 200 ವರ್ಷಗಳ ಇತಿಹಾಸ ಹೊಂದಿರುವ ವೀರರಾಜೇಂದ್ರ ಪೇಟೆಯನ್ನು ಅಭಿವೃದ್ಧಿ ಹೆಸರಿನಲ್ಲಿ ಹದಗೆಡಿಸಲಾಗುತ್ತಿದೆ. ಮಲೆತಿರಿಕೆ ಬೆಟ್ಟವನ್ನು ಕೊರೆದು ರಸ್ತೆ ವಿಸ್ತರಣೆ ಮಾಡಿದರೆ ಮಣ್ಣು ಸಡಿಲಗೊಂಡು ಪೂರ್ಣ ಪ್ರಮಾಣದಲ್ಲಿ ಬೆಟ್ಟ ಕುಸಿದು ಪಟ್ಟಣವನ್ನು ಆವರಿಸುವ ಆತಂಕವಿದೆ ಎಂದು ಹಿರಿಯರಾದ ಡಾ.ಐ.ಅರ್.ದುರ್ಗಪ್ರಸಾದ್ ಗಮನ ಸೆಳೆದರು.
ಕಟ್ಟಡ ಮಾಲಕರಿಗೆ ಪರಿಹಾರ ನೀಡಿದ ನಂತರ ರಸ್ತೆ ವಿಸ್ತರಣೆ ಮಾಡಬೇಕೆನ್ನುವ ನಿಯಮವಿದೆ. ಆದರೆ ಪಟ್ಟಣ ಪಂಚಾಯತ್ ಅಧಿಕಾರಿಗಳು ಅದೇಶಗಳನ್ನು ಗಾಳಿಗೆ ತೂರಿ ರಸ್ತೆ ವಿಸ್ತರಣೆಗೆ ಮುಂದಾಗಿದ್ದಾರೆ ಎಂದು ವಕೀಲ ರವೀಂದ್ರಕಾಮತ್ ಆರೋಪಿಸಿದರು. ವಕೀಲ ಟಿ.ಪಿ.ಕೃಷ್ಣ ಅವರು ಮಾತನಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಉಪವಿಭಾಗಾಧಿಕಾರಿ ಜವರೇಗೌಡ ಅವರು ಸಾರ್ವಜನಿಕರ ಅಭಿಪ್ರಾಯಗಳನ್ನು ಜಿಲ್ಲಾಧಿಕಾರಿಗಳ ಮೂಲಕ ಸರಕಾರದ ಗಮನ ಸೆಳೆಯುವುದಾಗಿ ಭರವಸೆ ನೀಡಿದರು. ಪ್ರತಿಭಟನಾ ಮೆರವಣಿಗೆ ತೆಲುಗರಬೀದಿ, ಮುಖ್ಯರಸ್ತೆಯ ಮೂಲಕ ಸಾಗಿ ಮೀನುಪೇಟೆಯಿಂದ ತಾಲೂಕು ಕಚೇರಿಯವರೆಗೆ ನಡೆಯಿತು.