ಮಡಿಕೇರಿ: ಜಿಲ್ಲೆಯಲ್ಲಿ ಮಳೆ ಮುಂದುವರಿದಿದೆ. ಕಳೆದ ಒಂದು ವಾರದಿಂದ ಸುರಿದ ಧಾರಾಕಾರ ಮಳೆಯಿಂದಾಗಿ ಸಂಕಷ್ಟ ಎದುರಾಗಿತ್ತು. ಸದ್ಯದ ಮಾಹಿತಿಯಂತೆ ಜಿಲ್ಲೆಯಲ್ಲಿ 147 ಮನೆಗಳು ಭಾಗಶಃ ಹಾನಿಯಾಗಿದ್ದು, 90 ಮನೆಗಳು ಪೂರ್ಣ ಹಾನಿಯಾಗಿದೆ. ಮಡಿಕೇರಿ ತಾಲ್ಲೂಕು 32, ವಿರಾಜಪೇಟೆ 42, ಸೋಮವಾರಪೇಟೆ 73 ಮನೆಗಳು ಭಾಗಶಃ ಹಾನಿಯಾಗಿದ್ದು, ಮಡಿಕೇರಿ ತಾ. 15, ವಿರಾಜಪೇಟೆ 41 ಮತ್ತು ಸೋಮವಾರಪೇಟೆಯಲ್ಲಿ 34 ಮನೆಗಳು ಪೂರ್ಣ ಹಾನಿಯಾಗಿವೆ.
ಜಿಲ್ಲೆಯಲ್ಲಿ ಒಟ್ಟು 79 ಪ್ರವಾಹ ಪೀಡಿತ ಪ್ರದೇಶಗಳೆಂದು ಗುರುತಿಸಲಾಗಿದೆ. ಮಡಿಕೇರಿ ತಾಲೂಕಿನಲ್ಲಿ 30, ವಿರಾಜಪೇಟೆ ತಾಲ್ಲೂಕಿನಲ್ಲಿ 32, ಸೋಮವಾರಪೇಟೆ ತಾಲ್ಲೂಕಿನಲ್ಲಿ 4, ಕುಶಾಲನಗರ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ 5, ವಿರಾಜಪೇಟೆ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ 8 ಪ್ರವಾಹ ಪೀಡಿತ ಪ್ರದೇಶಗಳಾಗಿವೆ. ಈವರೆಗೆ ಜಿಲ್ಲೆಯಲ್ಲಿ ಸುಮಾರು 1507 ಕ್ಕೂ ಹೆಚ್ಚು ಜನರು ಹಾಗೂ 19 ಕ್ಕೂ ಹೆಚ್ಚು ಜಾನುವಾರುಗಳನ್ನು ರಕ್ಷಿಸಲಾಗಿದೆ. ರಕ್ಷಣಾ ಕಾರ್ಯದಲ್ಲಿ ಎನ್‍ಡಿಆರ್ ಎಫ್, ಭಾರತೀಯ ಸೇನೆ, ಪೊಲೀಸ್ ಇಲಾಖೆ, ಕಂದಾಯ, ಗ್ರಾಮ ಪಂಚಾಯತ್ ಹಾಗೂ ಪಶುಪಾಲನಾ ಇಲಾಖೆ ಸಹಕಾರದಲ್ಲಿ ರಕ್ಷಣೆ ಮಾಡಲಾಗಿದೆ.
ಜಿಲ್ಲೆಯಲ್ಲಿ ಒಟ್ಟು 45 ಪರಿಹಾರ ಕೇಂದ್ರ ತೆರೆಯಲಾಗಿದ್ದು, 2270 ಕುಟುಂಬಗಳ 7873 ಸಂತ್ರಸ್ತರನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಬರೆ ಹಾಗೂ ಮರ ಬಿದ್ದು, ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಸರಿಪಡಿಸುವ ಕಾರ್ಯ ಜಿಲ್ಲಾಡಳಿತದಿಂದ ನಡೆದಿದೆ. ಅತಿ ವೃಷ್ಟಿಯಿಂದಾಗಬಹುದಾದ ತೊಂದರೆಯನ್ನು ಎದುರಿಸಲು ಜಿಲ್ಲಾಡಳಿತ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದು, ಜಿಲ್ಲೆಯಾದ್ಯಂತ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಿದ್ದಾರೆ. ತುರ್ತು ಸಂದರ್ಭ ಎದುರಿಸಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ.
ಜಿಲ್ಲೆಯ ಒಟ್ಟು 6 ರಸ್ತೆಗಳು ಭೂಕುಸಿತ ಹಾಗೂ ಪ್ರವಾಹದಿಂದ ಬಂದ್ ಆಗಿವೆ. ಮಡಿಕೇರಿ-ವಿರಾಜಪೇಟೆ, ಸಿದ್ದಾಪುರ-ಕರಡಿಗೋಡು, ಮಡಿಕೇರಿ-ವಿರಾಜಪೇಟೆ-ಮಾಕುಟ್ಟ, ಮೂರ್ನಾಡು-ನಾಪೋಕ್ಲು, ಸಿದ್ದಾಪುರ-ಕೊಂಡಂಗೇರಿ, ಗಾಳಿಬೀಡು-ಪಾಟಿ-ಕಾಲೂರು ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.