ಸಂಪಾಜೆ : ಮೊಣ್ಣಂಗೇರಿ ಪ್ರದೇಶದಲ್ಲಿ ಬೃಹತ್ ಗಾತ್ರದ ಬಂಡೆಕಲ್ಲುಗಳು ಬಾಯ್ದೆರೆದು ನಿಂತಿದೆ. ಒಂದೆರಡು ಮಳೆಗೆ ಕುಸಿಯುವ ಭೀತಿ ಇದೆ. ಆ ಪ್ರದೇಶದಲ್ಲಿ ಈಗ ನಡೆಯುವುದೇ ಭಯ…!.
ಕಳೆದ 3 ದಿನಗಳಲ್ಲಿ ಕಳೆದ ಬಾರಿ ಮೊಣ್ಣಂಗೇರಿ, ಜೋಡುಪಾಲದ ಜಲಪ್ರಳಯದ ನೆನಪುಗಳು ಹಾಗೂ ಇಂದಿನವರೆಗಿನ ಸ್ಥಿತಿಯ ದರ್ಶನವಾಗಿದೆ. ಮನೆಗಳೇ ಇಲ್ಲ, ಕೃಷಿ ನಾಶ, ಮುಚ್ಚಿದ ಶಾಲೆ ಸೇರಿದಂತೆ ಅಲ್ಲಿನ ಜನರ ಇಂದಿನ ಬದುಕು ದರ್ಶನವಾಗಿದೆ. ಈಗ ಮುಂದಿನ ಸ್ಥಿತಿಯ ಬಗ್ಗೆ ಯೋಚಿಸಿದರೆ ಭಯವಾಗುತ್ತಿದೆ. ಆ ಜನರಿಗೆ ನಿತ್ಯವೂ ಭಯವಾದರೆ ಮೊಣ್ಣಂಗೇರಿಯ ಆ ರಸ್ತೆಯಲ್ಲಿ ಓಡಾಡಿದರೆ ಎದೆ ಢವ ಢವ ಎನ್ನುತ್ತದೆ. ಆ ಬಂಡೆಗಳು ಈಗ ಬೀಳುತ್ತೋ ಮತ್ತೆ ಬೀಳುತ್ತೋ ಎನ್ನುವ ಸ್ಥಿತಿ ಇದೆ. ಈ ನಡುವೆ ಸಾಕಷ್ಟು ನೀರು ಹರಿಯುತ್ತಿದೆ ಅಲ್ಲಿ, ಆದರೆ ಆ ನೀರು ಅಲ್ಲಿನ ಜನರಿಗೆ ಈಗ ಉಪಯೋಗಕ್ಕೆ ಬರುತ್ತಿಲ್ಲ. ತೋಟ, ಮನೆ ಎತ್ತರದಲ್ಲಾದರೆ , ನೀರು ಕೆಳಭಾಗದಲ್ಲಿ ಹರಿಯುತ್ತಿದೆ. ಅದರ ದೃಶ್ಯ ಹೀಗಿದೆ….
ಕಳೆದ ಬಾರಿಯ ಪ್ರಳಯದ ನಂತರ ರಸ್ತೆ ದುರಸ್ತಿಯಾಗಿದೆ. ಇದು ಇಲ್ಲಿನ ಜನರಿಗೆ ಪ್ರಯೋಜನವಾಗಿದೆ. ಆದರೆ ಅದಕ್ಕಿಂತಲೂ ಭಯಾನಕ ಸ್ಥಿತಿ , ಈ ವರ್ಷ ಹೇಗೆ ಎಂದು ? ಒಂದೆರಡು ಮಳೆ ಬಿದ್ದರೆ ಭಯ ಶುರುವಾಗುತ್ತದೆ. ಗುಡ್ಡದ ಮಣ್ಣು ಕುಸಿಯುತ್ತದೆ, ಕಲ್ಲುಗಳು ಬೀಳುತ್ತದೆ. ಎರಡು ಕಲ್ಲುಗಳು ಉಜ್ಜಿಕೊಂಡು ಬೀಳುವ ವೇಳೆ ದೊಡ್ಡದಾದ ಸದ್ದು ಕೇಳುತ್ತದೆ. ಮಳೆ ಬಂದಾಗ ನೀರು ಹೆಚ್ಚಾಗಿ ಬಂದು ಸಡಿಲವಾಗಿರುವ ಮಣ್ಣು ಕೊರೆದು ಹೋದಾಗ ಕಲ್ಲುಗಳೂ ಆಧಾರ ಕಳೆದುಕೊಂಡು ಬೀಳುತ್ತವೆ. ಹೀಗಾಗಿ ಭಯ ಎಂದು ಹೇಳುತ್ತಾರೆ ಮೊಣ್ಣಂಗೇರಿಯ ಸತೀಶ್ ನಾಯ್ಕ್.
ಈ ಬಾರಿಯ ಮಳೆಗಾಲದ ಮುನ್ನ ಸೂಕ್ತ ಮುಂಜಾಗ್ರತಾ ಕ್ರಮವಾಗಬೇಕು. ಈಗಿರುವ ಜನರಿಗೆ ಸೂಕ್ತ ರಕ್ಷಣೆ ಬೇಕು ಎನ್ನುವುದು ಅಲ್ಲಿಗೆ ಹೋದ ಯಾರು ಬೇಕಾದರೂ ಹೇಳಬಹುದು. ಇದನ್ನು ಅಧಿಕಾರಿಗಳು ಈಗಲೇ ಗಮನಿಸಬೇಕು.