ಸುಳ್ಯ: ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ(ರಿ.) ಸುಳ್ಯ ವತಿಯಿಂದ ರಂಗನಿರ್ದೇಶಕ ಜೀವನ್ ರಾಂ ಸುಳ್ಯ ಇವರ ಮಾತೃಶ್ರೀ ವನಜಾಕ್ಷಿ ಜಯರಾಮ ಇವರ ಸ್ಮರಣಾರ್ಥ ನೀಡುವ 6 ನೇ ವರ್ಷದ ವನಜ ರಂಗಮನೆ ಪ್ರಶಸ್ತಿ ಗೆ ಯಕ್ಷಗಾನದ ಮೊತ್ತ ಮೊದಲ ಮಹಿಳಾ ವೃತ್ತಿಪರ ಭಾಗವತರಾದ ಲೀಲಾವತಿ ಬೈಪಡಿತ್ತಾಯರನ್ನು ಆಯ್ಕೆ ಮಾಡಲಾಗಿದೆ.
ಪ್ರಶಸ್ತಿಯನ್ನು ಆ.25 ರಂದು ಸುಳ್ಯದ ರಂಗಮನೆಯಲ್ಲಿ ನಡೆಯುವ ಯಕ್ಷ ಸಂಭ್ರಮ ದ ಸಂದರ್ಭ ನೀಡಲಾಗುವುದು. ಪ್ರಶಸ್ತಿಯು ಯಕ್ಷ ಸ್ಮರಣಿಕೆ,ಪ್ರಶಸ್ತಿ ಫಲಕ ಹಾಗೂ 10,000 ನಗದು ಒಳಗೊಂಡಿರುತ್ತದೆ ಎಂದು ರಂಗಮನೆ ರೂವಾರಿ ಜೀವನ್ ರಾಂ ಸುಳ್ಯ ತಿಳಿಸಿದ್ದಾರೆ.
ಲೀಲಾವತಿ ಬೈಪಡಿತ್ತಾಯ :
ಮೂಢ ನಂಬಿಕೆಗಳ ಕಟ್ಟಳೆಯನ್ನೆಲ್ಲಾ ಮೆಟ್ಟಿ ನಿಂತು, ತೆಂಕು ತಿಟ್ಟಿನ ಅಗ್ರಮಾನ್ಯ ಭಾಗವತರಾಗಿ ಮೆರೆದ ಲೀಲಾ ಬೈಪಾಡಿತ್ತಾಯ ಅವರು, ಏಕೈಕ ವೃತ್ತಿಪರ ಮಹಿಳಾ ಭಾಗವತರು ಎಂಬ ಪಟ್ಟ ಅಲಂಕರಿಸಿಕೊಂಡವರು.. ಸುಬ್ರಹ್ಮಣ್ಯ ಮೇಳ, ಪುತ್ತೂರು ಮೇಳ, ಕದ್ರಿ ಮೇಳ, ಕರ್ನಾಟಕ ಮೇಳ, ಅರುವ (ಅಳದಂಗಡಿ) ಮೇಳ, ಬಪ್ಪನಾಡು ಮೇಳ, ಕುಂಬಳೆ, ತಲಕಳ ಮೇಳ ಮುಂತಾಗಿ ಸತತವಾಗಿ ಇಪ್ಪತ್ತು ವರ್ಷಗಳ ಕಾಲ ಡೇರೆ ಮೇಳಗಳಲ್ಲಿಯೂ, ಬಯಲಾಟದ ಮೇಳಗಳಲ್ಲಿಯೂ ಪತಿ ಹರಿ ನಾರಾಯಣ ಬೈಪಡಿತ್ತಾಯರೊಂದಿಗೆ ವೃತ್ತಿಪರರಾಗಿ ಊರಿಂದೂರಿಗೆ ತಿರುಗಾಟ ಮಾಡಿದ ಇವರು ಅದೆಷ್ಟೋ ಮಹಾನ್ ಕಲಾವಿದರನ್ನು ಕುಣಿಸಿದವರು..ಎಂಭತ್ತರ ದಶಕದಲ್ಲಿ ಅರುವ ನಾರಾಯಣ ಶೆಟ್ಟರು ಕಟ್ಟಿದ ಅಳದಂಗಡಿ ಮೇಳದಲ್ಲಿ ಪ್ರಧಾನ ಭಾಗವತರಾಗಿ ಮೆರೆದರು.ಗಂಡಸರೇ ಇರುವ ಯಕ್ಷಗಾನ ಕ್ಷೇತ್ರದಲ್ಲಿ ಕಾಲಿಟ್ಟ ಮೊದಲ ಮಹಿಳೆಯಾಗಿ ಗಂಡಸರಿಗೇ ಮೀಸಲಾಗಿದ್ದ ಭಾಗವತಿಕೆಯಲ್ಲಿ ಯಕ್ಷಗಾನಕ್ಕೆ ಹೆಣ್ಣು ಕಂಠವೂ ಹೊಂದುತ್ತದೆ ಎಂದು ಸಾಧಿಸಿ ತೋರಿಸಿದವರು. ರಾತ್ರಿಯಿಡೀ ನಿದ್ದೆಗೆಟ್ಟು ಊರಿಂದೂರಿಗೆ ಮೇಳವು ಹೋದಲ್ಲೆಲ್ಲಾ ತಿರುಗಾಟ ಮಾಡುವ, ಸಹ-ಭಾಗವತರೇನಾದರೂ ಕೈಕೊಟ್ಟರೆ, ಇಡೀ ರಾತ್ರಿ ನಿದ್ದೆ ಬಿಟ್ಟು ಇಡೀ ಆಟವನ್ನು ಆಡಿಸಿದ ಕೀರ್ತಿ ಇವರದು.
ಲೋಪವಿಲ್ಲದಂತಹಾ ಸಾಹಿತ್ಯ ಶುದ್ಧಿ, ಭಾಷಾ ಶುದ್ಧಿ,ಪುರಾಣದ ಬಗೆಗಿನ ಅಪಾರ ಜ್ಞಾನ,ಭಾವಪೂರ್ಣ ಭಾಗವತಿಕೆಯಿಂದಾಗಿ ಅವರದ್ದೇ ಆದ ಲಕ್ಷಾಂತರ ಅಭಿಮಾನಿ ಬಳಗವನ್ನು ಸೃಷ್ಠಿಸಿಕೊಂಡವರು.ಇವರ ಯಕ್ಷ ಸೇವೆಗೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ , ಅಗರಿ ಭಾಗವತ ಪ್ರಶಸ್ತಿ, ಉಳ್ಳಾಲದ ರಾಣಿ ಅಬ್ಬಕ್ಕ ಪ್ರಶಸ್ತಿ,ಆಳ್ವಾಸ್ ನುಡಿಸಿರಿ ಪ್ರಶಸ್ತಿ,ಹಿರಿಯ ನಾಗರಿಕರ ರಾಜ್ಯ ಪ್ರಶಸ್ತಿ, ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನ ಪ್ರಶಸ್ತಿಗಳು ಸೇರಿದಂತೆ ನೂರಾರು ಪ್ರಶಸ್ತಿ ಸಮ್ಮಾನಗಳು ಇವರಿಗೆ ಲಭಿಸಿವೆ.45 ವರ್ಷಗಳಿಂದ ಸುದೀರ್ಘವಾಗಿ ಯಕ್ಷಗಾನ ಭಾಗವತಿಕೆಯಲ್ಲಿ ತೊಡಗಿಸಿಕೊಂಡ ಇವರು, ಈಗಲೂ ಅಲ್ಲಲ್ಲಿ ಭಾಗವತಿಕೆ ತರಗತಿಗಳನ್ನು ನಡೆಸುವ ಮೂಲಕ ನೂರಾರು ಶಿಷ್ಯ ವೃಂದವನ್ನೂ ಹೊಂದಿದ್ದಾರೆ.
ಇದೀಗ ಲೀಲಾವತಿಯವರು ಆ.25 ರಂದು ಸುಳ್ಯದ ರಂಗಮನೆಯಲ್ಲಿ ಯಕ್ಷಕಲೆಯನ್ನು ನಿಷ್ಠೆಯಿಂದ ಪೂಜಿಸುವ ಕಲಾವಿದರಿಗೆ ನೀಡುವ 2019 ನೇ ಸಾಲಿನ ವನಜ ರಂಗಮನೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.