ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸರ್ಪ ಸಂಸ್ಕಾರ ಸೇವೆ ಈಗ ಮತ್ತೆ ಕಿರಿಕ್ ಗೆ ಕಾರಣವಾಗಿದೆ. ಕಳೆದ ಕೆಲವು ಸಮಯಗಳಿಂದ ಚರ್ಚೆ, ವಿವಾದಕ್ಕೆ ಕಾರಣವಾಗಿದ್ದ ಈ ಸೇವೆ ಈಗ ಮತ್ತೆ ಚರ್ಚೆಗೆ ಕಾರಣವಾಗಿದೆ. ಅದಕ್ಕೆ ಕಾರಣವಾದ್ದು ಎರಡು ದಿನಗಳ ಘಟನೆ.
ಕುಕ್ಕೆ ಸುಬ್ರಹ್ಮಣ್ಯಕ್ಕೆ ಸರ್ಪಸಂಸ್ಕಾರ ಪೂಜೆ ಮಾಡಿಸಲು ಆಗಮಿಸುವ ಭಕ್ತಾಧಿಗಳನ್ನು ಕ್ಷೇತ್ರದ ಪಕ್ಕದಲ್ಲೇ ಇರುವ ಸಂಪುಟ ನರಸಿಂಹ ಮಠದಲ್ಲಿ ಸರ್ಪ ಸಂಸ್ಕಾರ ನಡೆಸುವಂತೆ ಒತ್ತಾಯಿಸುತ್ತಿದ್ದ ಅರ್ಚಕನೋರ್ವನನ್ನು ಸಾರ್ವಜನಿಕರು ಹಿಡಿದು ದೇವಸ್ಥಾನದ ಆಡಳಿತ ಮಂಡಳಿಗೆ ಒಪ್ಪಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಅರ್ಚಕ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಇನ್ನು ಮುಂದೆ ಈ ರೀತಿ ಮಾಡುವುದಿಲ್ಲ ಎಂದು ಹೇಳಿದ ವಿಡಿಯೋ ವೈರಲ್ ಆಗಿದೆ. ಇದೂ ಅಲ್ಲದೆ ದೇವಸ್ಥಾನದ ವತಿಯಿಂದ ಜೂ.1 ರಂದು ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಿರುವುದು ತಿಳಿಯುತ್ತದೆ.
ಅದಾದ ಬಳಿಕ ನಡೆದ ಬೆಳವಣಿಗೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ತಮ್ಮ ಮೇಲೆ ಹಲ್ಲೆ ನಡೆಸಿರುವುದಾಗಿ ಅರ್ಚಕ ಆರೋಪಿಸಿದ್ದಾರೆ. ಅಲ್ಲದೇ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗುವ ವಿಡಿಯೋ ಕೂಡಾ ಮಾಡಲಾಗಿದ್ದು ಇದೂ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಕೆಲವು ಸಂದೇಹವನ್ನು ಜನರು ವ್ಯಕ್ತಪಡಿಸುತ್ತಾರೆ. ಗಂಭೀರ ಹಲ್ಲೆ ಒಳಗಾಗಿದ್ದ ಎನ್ನುವ ವ್ಯಕ್ತಿ ಆಗಾಗ ಎದ್ದು ನೋಡುವ ದೃಶ್ಯ ಆ ವಿಡಿಯೋದಲ್ಲಿ ಕಾಣುತ್ತದೆ. ಅಲ್ಲದೆ ಸಿಸಿಟಿವಿ ದಾಖಲೆ ಪರಿಶೀಲನೆ ಮಾಡಿದಾಗಲೂ ಅದೇ ಅರ್ಚಕ ದೇವಸ್ಥಾನದ ವಿಚಾರಣೆ ನಂತರ ನೇರವಾಗಿ ತೆರಳಿದ್ದು ತಿಳಿಯುತ್ತದೆ. ಹೀಗಾಗಿ ಯಾವುದು ಸತ್ಯ ಸುಳ್ಳು ಯಾವುದು ಎಂದು ಪವಿತ್ರ ಕ್ಷೇತ್ರದಲ್ಲೇ ಚರ್ಚೆ ನಡೆಯುತ್ತಿರುವುದು ವಿಪರ್ಯಾಸ. ಇಂತಹ ಘಟನೆಗಳು ಭಕ್ತರ ನಂಬಿಕೆಯ ಮೇಲೆ ಘಾಸಿ ಮಾಡುತ್ತಿದೆ ಎಂದು ಭಕ್ತರು ಹೇಳುತ್ತಾರೆ.
ಈ ನಡುವೆ ರಾತ್ರಿ ವೇಳೆ ಅರ್ಚಕ ವಾಂತಿ ಮಾಡಿದಾಗ ವಿಚಾರಿಸಿದಾಗ ದೇವಸ್ಥಾನದಲ್ಲಿ ಹಲ್ಲೆ ನಡೆಸಿದ್ದಾರೆ ಎಂಬುದು ತಿಳಿಯಿತು. ಹೀಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಠದ ಮೂಲಗಳು ತಿಳಿಸಿವೆ.
ಕ್ಷೇತ್ರಕ್ಕೆ ಬರುವ ಭಕ್ತಾಧಿಗಳನ್ನು ದಾರಿ ತಪ್ಪಿಸಿ ಮಠಕ್ಕೆ ಕರೆದೊಯ್ಯುವ ವ್ಯವಸ್ಥಿತ ಷಡ್ಯಂತ್ರ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ನಡೆಯುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಈ ಬಗ್ಗೆ ಚರ್ಚೆ ನಡೆದರೆ ಕೆಲವು ಮಾಧ್ಯಮಗಳ ಮೂಲಕ ಪ್ರಕರಣ ತಿರುಚಿ ಬಿಂಬಿಸಲಾಗುತ್ತಿದೆ. ಅಲ್ಲದೆ ಕೆಲವರು ತಪ್ಪು ಮಾಹಿತಿಯನ್ನು ಮಾಧ್ಯಮದ ಮಂದಿಗೆ ನೀಡುತ್ತಿದ್ದಾರೆ ಎಂಬುದೂ ಈಗ ಚರ್ಚೆಯಾಗುತ್ತಿದೆ. ಹೀಗಾಗಿ ಈಗ ಸರಕಾರ ಹಾಗೂ ಸಂಬಂಧಪಟ್ಟ ಇಲಾಖೆ ಈ ವಿಚಾರದಲ್ಲಿ ಶೀಘ್ರ ಮಧ್ಯಪ್ರವೇಶಿಸದೇ ಹೋದಲ್ಲಿ ಕ್ಷೇತ್ರದಲ್ಲಿ ಮತ್ತೆ ಸಂಘರ್ಷ ನಡೆಯಲಿರುವ ಸಾಧ್ಯತೆ ಹೆಚ್ಚಾಗಿದೆ. ಎರಡು ದಿನಗಳ ಹಿಂದೆ ಬೆಂಗಳೂರಿನ ಭಕ್ತರೊಬ್ಬರು ತಪ್ಪು ಮಾಹಿತಿ ನೀಡಿ ಮಠದಲ್ಲಿ ಪೂಜೆ ಮಾಡಿಸಿದ್ದಾರೆ ಎಂಬ ಬಗ್ಗೆ ಪೊಲೀಸರಿಗೆ ದೂರು ನೀಡಿರುವುದು ಈಗ ತಿಳಿದುಬಂದಿದೆ.
ಹೀಗೆಲ್ಲಾ ಇದ್ದರೂ ಯಾವುದು ಸತ್ಯ , ಯಾವುದು ಸುಳ್ಳು ಎಂಬುದರ ಬಗ್ಗೆ ಅನಾದಿ ಕಾಲದ, ಪರಂಪರೆಯನ್ನು ಹೊಂದಿದ , ಸುಬ್ರಹ್ಮಣ್ಯನ ಆರಾಧನಾ ಕ್ಷೇತ್ರದಲ್ಲಿ ನಡೆಯುವುದು ಒಂದು ಕಡೆಯಾದರೆ, ಧಾರ್ಮಿಕ ಸಂಸ್ಥೆಗಳ ಜವಾಬ್ದಾರಿ ಹಾಗೂ ಪ್ರಸ್ತುತತೆಯನ್ನು ಧಾರ್ಮಿಕ ಮುಖಂಡರೇ ಮತ್ತೊಮ್ಮೆ ತಿಳಿಸಲೇಬೇಕಾದ ಅನಿವಾರ್ಯತೆ ಬಂದಿದೆ. ಮಠಗಳ ಕೆಲಸ ಹಾಗೂ ದೇವಸ್ಥಾನದ ಉದ್ದೇಶ, ಕಾರ್ಯಗಳು ಏನು ಎಂಬುದರ ಬಗ್ಗೆ ಧಾರ್ಮಿಕ ಮುಖಂಡರು ತಿಳಿಸಿಕೊಡಬೇಕಾದ ಅವಶ್ಯಕತೆ ಇದೆ ಎಂದು ಭಕ್ತರು ಹೇಳುತ್ತಾರೆ.