ಸುಬ್ರಹ್ಮಣ್ಯ: ದೇಶದ ಮೂಲೆ ಮೂಲೆಯಿಂದ ಆಗಮಿಸುವ ಭಕ್ತಾದಿಗಳ ಅನುಕೂಲಕ್ಕಾಗಿ 25 ಹಾಸಿಗೆಯ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಲು ಆರೋಗ್ಯ ಇಲಾಖೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ್ ತಿಳಿಸಿದರು.
ಅವರು ಸರ್ಪಸಂಸ್ಕಾರ ಸೇವೆ ನಡೆಸಲು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ತಂಗಿರುವ ಸಂದರ್ಭ ಗುರುವಾರ ಸಂಜೆ ಸುದ್ದಿಗಾರರ ಜೊತೆ ಮಾತನಾಡಿದರು. ಕ್ಷೇತ್ರದ ಆಸುಪಾಸಿನಲ್ಲಿ ಸುಸಜ್ಜಿತ ಆಸ್ಪತ್ರೆ ಹೊಂದಲು ದೇಗುಲದ ಆಡಳಿತ ಮಂಡಳಿ ಆಸಕ್ತಿ ಹೊಂದಿದೆ. ಹೀಗಾಗಿ ಆರೋಗ್ಯ ಇಲಾಖೆ ಪೂರ್ಣ ಸಹಕಾರ ನೀಡಲಿದೆ. ಇದಕ್ಕಾಗಿ ದೇಗುಲದ ಆಡಳಿತವು ಈಗಾಗಲೇ ಜಾಗವನ್ನು ಕಾಯ್ದಿರಿಸಿದೆ. ದೇಗುಲದ ವತಿಯಿಂದ ಕಟ್ಟಡ ನಿರ್ಮಿಸಿಕೊಟ್ಟಲ್ಲಿ ಆಸ್ಪತ್ರೆಗೆ ವೈದ್ಯರ ಸಹಿತ ಸಿಬಂದಿ ಹಾಗೂ ಸವಲತ್ತು ಒದಗಿಸಲಾಗುವುದು. ಆ ಬಳಿಕ ಸಂಪೂರ್ಣ ನಿರ್ವಹಣೆ ಸರಕಾರವೇ ಮಾಡಲಿದೆ. ಸುಬ್ರಹ್ಮಣ್ಯದಲ್ಲಿ ಸುಸಜ್ಜಿತ ಆಸ್ಪತ್ರೆ ಅಗತ್ಯ ಎಂದರು.
ರಾಜ್ಯದಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ನೀಗಿಸಲು ಕ್ರಮ ಕೈಗೊಳ್ಳಲಾಗಿದೆ. ವಿದ್ಯಾರ್ಥಿ ದಿಸೆಯಲ್ಲೇ ಸಹಕಾರ ಮಾಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಸಹಿತ ಹಲವು ವ್ಯವಸ್ಥೆ ಕಲ್ಪಿಸಲಾಗುತ್ತಿದೆ ವೈದ್ಯರ ಕೊರತೆ ನಿವಾರಿಸುವ ಪ್ರಯತ್ನ ನಡೆಯುತ್ತಿದೆ. ಹೊರರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ವೈದ್ಯರ ಸಂಖ್ಯೆ ಹೆಚ್ಚಿದೆ ಎಂದರು.
ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಶುಶ್ರೂಶಕಿಯರ ಪೈಕಿ 800 ಮಂದಿ ತುಂಬಲು ಪ್ರಕ್ರಿಯೆ ನಡೆಯುತ್ತಿದೆ. ಆರೋಗ್ಯ ಇಲಾಖೆಯಲ್ಲಿ ಇನ್ನಷ್ಟು ವಿಭಾಗದ ಹುದ್ದೆಗಳು ಖಾಲಿ ಇದ್ದು ಇವುಗಳನ್ನು ಹಂತಹಂತವಾಗಿ ಭರ್ತಿಗೊಳಿಸುವ ಸಂಬಂಧ ಸರಕಾರದ ಆರ್ಥಿಕ ವಿಭಾಗಕ್ಕೆ ಪತ್ರ ಬರೆದಿದೆ ಎಂದರು. ಆರ್ಥಿಕ ನಷ್ಟದ ಕಾರಣಕ್ಕಾಗಿ ಆಸ್ಪತ್ರೆಗಳಲ್ಲಿನ ಗ್ರೂಪ್ ಡಿ ಹಾಗೂ ಫಾರ್ಮಸಿಸ್ಟ್ ಹುದ್ದೆಗಳನ್ನು ವಜಾಗೊಳಿಸುವ ಇತ್ತೀಚಿನ ಆದೇಶವನ್ನು ವಾಪಸ್ ಪಡೆದಿರುವುದಾಗಿ ಸಚಿವರು ತಿಳಿಸಿದರು. 108 ಆರೋಗ್ಯ ಕವಚ ಸೇವೆಯಲ್ಲಿ ಸಿಬಂದಿ ಹಾಗೂ ಗುತ್ತಿಗೆ ವಿಚಾರವಾಗಿ ಒಂದಷ್ಟು ಸಮಸ್ಯೆಗಳಿವೆ. ಅವುಗಳ ಸುಧಾರಣೆಗೂ ಅಗತ್ಯ ಕ್ರಮಗಳನ್ನು ಇಲಾಖೆ ಕೈಗೊಳ್ಳುತ್ತಿದೆ ಎಂದರು.
ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಸಚಿವರನ್ನು ಶಾಲು ಹೊದಿಸಿ ಗೌರವಿಸಿದರು. ಈ ಸಂದರ್ಭ ಸುಳ್ಯ ತಾಲೂಕು ಆರೋಗ್ಯಧಿಕಾರಿ ಡಾ. ಸುಬ್ರಹ್ಮಣ್ಯ, ವೈದ್ಯ ಡಾ.ತ್ರಿಮೂರ್ತಿ, ಹಾಗೂ ಡಾ.ಹೇಮಂತ್ ಉಪಸ್ಥಿತರಿದ್ದರು.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕಲೆ, ಸಾಹಿತ್ಯ, ಧಾರ್ಮಿಕ, ಕೃಷಿ, ವಿಶೇಷ ಲೇಖನ , ಅಂಕಣ, ವಿಶೇಷ ವರದಿಗಳು , ರಾಜಕೀಯ ವಿಶ್ಲೇಷಣೆ, ದಿನದ ಫೋಕಸ್ ಸ್ಟೋರಿ, ದಿನದ ಚಿತ್ರ, ವಾರದ ವ್ಯಕ್ತಿ , ಜಿಲ್ಲೆ, ರಾಜ್ಯ, ರಾಷ್ಟ್ರೀಯ ಪ್ರಮುಖ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಸುಬ್ರಹ್ಮಣ್ಯದಲ್ಲಿ ಸುಸಜ್ಜಿತ ಆಸ್ಪತ್ರೆಯತ್ತ ಚಿತ್ತ – ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆರೋಗ್ಯ ಸಚಿವರ ಹೇಳಿಕೆ"