ಕೇಂದ್ರ ಸರಕಾರ ಹೊರಡಿಸಿದ ಲಾಕ್ಡೌನ್ ಆದೇಶದ ಎರಡನೇ ಪರಿಷ್ಕೃತ ಪಟ್ಟಿಯಲ್ಲಿ ಕೃಷಿ ಉತ್ಪನ್ನ ಖರೀದಿ ಹಾಗೂ ಮಾರಾಟಕ್ಕೆ ಅವಕಾಶ ನೀಡಿತ್ತು. ಇದರಲ್ಲಿ ಅಡಿಕೆ, ಕೊಕೋ, ಗೇರುಬೀಜ, ಸಾಂಬಾರ ಬೆಳೆಗಳೂ ಸೇರಿತ್ತು. ಇದರಂತೆ ಜಿಲ್ಲೆಯ ಪುತ್ತೂರು ಸೇರಿದಂತೆ ವಿವಿದೆಡೆ ಖಾಸಗಿ ವರ್ತಕರಿಂದ ಅಡಿಕೆ ಖರೀದಿಗೆ ಅವಕಾಶ ನೀಡಲಾಗಿತ್ತು. ಸುಳ್ಯದಲ್ಲಿ ಅಧಿಕೃತವಾಗಿ ಈ ಅವಕಾಶ ಇರಲಿಲ್ಲ. ಇದೀಗ ಶಾಸಕ ಅಂಗಾರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಖರೀದಿಗೆ ಅವಕಾಶ ನೀಡಲಾಗಿದೆ.
ಆದರೆ ನಿಯಮದ ಪ್ರಕಾರ ಖಾಸಗಿ ವಾಹನಗಳು ರಸ್ತೆಗಿಳಿಯಬಾರದು . ಹೀಗಾಗಿ ಎಪಿಎಂಸಿ ವತಿಯಿಂದಂದಲೇ ವಾಹನ ವ್ಯವಸ್ಥೆ ಮಾಡಲಾಗುತ್ತಿದೆ. ಅಡಿಕೆ ಮತ್ತು ಗೇರು ಬೀಜ ಮಾರಾಟ ಮಾಡುವ ರೈತರು ತಮ್ಮವ್ಯಾಪ್ತಿಯ ಎಪಿಎಂಸಿ ಸದಸ್ಯರುಗಳನ್ನು ಅಥವಾ ಸುಳ್ಯ ಎಪಿಎಂಸಿ ಕಚೇರಿ (08257-233711) ನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ. ಬೆಳಗ್ಗೆ 7 ಗಂಟೆ ಯಿಂದ ಮಧ್ಯಾಹ್ನ 12 ಗಂಟೆ ವರೆಗೆ ಖರೀದಿ ನಡೆಯುತ್ತದೆ.
ಸಭೆಯಲ್ಲಿ ಪುತ್ತೂರು ಸಹಾಯಕ ಕಮಿಷನರ್ ಡಾ.ಯತೀಶ್ ಉಳ್ಳಾಲ್, ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ಎ.ಪಿ.ಎಂ.ಸಿ.ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ, ಉಪಾಧ್ಯಕ್ಷ ಸಂತೋಷ್ ಜಾಕೆ, ತಹಶೀಲ್ದಾರ್ ಅನಂತ ಶಂಕರ್ ಮೊದಲಾದವರಿದ್ದರು.