ಹಲಸಿನ ಬೆಳೆಯ ಹೊಸ ಸಾಧ್ಯತೆಗಳನ್ನು ತೆರೆದಿಡುವ “ಹಲಸು ಮೇಳ”

June 11, 2019
1:14 PM

ಇನ್ನೀಗ ಹಲಸು ಮೇಳಗಳು ನಡೆಯುತ್ತವೆ. ಅಲ್ಲಲ್ಲಿ  ಮೇಳದ ಗೌಜಿ ಕಾಣುತ್ತದೆ. ಇದುವರೆಗೆ ಹಲಸು ಆಂದೋಲನ ನಡೆದರೆ ಅದರ ಮುಂದುವರಿದ ಭಾಗ ಹಲಸು ಹಬ್ಬ, ಹಲಸು ಮೇಳ ನಡೆಯುತ್ತಿದೆ. ಈಗ ಹಲಸಿನ ಹೊಸ ಸಾಧ್ಯತೆಗಳನ್ನು  ಈ ಮೇಳಗಳು ತೆರೆದಿಡುತ್ತಿವೆ. ಪುತ್ತೂರಿನಲ್ಲಿ ಜೂ.15 ಹಾಗೂ 16 ರಂದು ಹಲಸು ಮೇಳ ಅದ್ದೂರಿಯಾಗಿ ನಡೆಯಲಿದೆ.  ಎರಡು ದಿನ ಹಲಸಿನ ವಸ್ತುಗಳ ಮಾರಾಟ ಹಾಗೂ ಹಲಸಿನ ಬಗ್ಗೆ ಚರ್ಚೆ ನಡೆಯಲಿದೆ.

ಹಲಸು ಸ್ನೇಹ ಸಂಗಮ ಪುತ್ತೂರು, ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ, (ಐ.ಐ.ಹೆಚ್.ಆರ್.) ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ಮತ್ತು ಜೆ.ಸಿ.ಐ. ಪುತ್ತೂರು ಇವರೆಲ್ಲರ ಸಂಯುಕ್ತ ಆಶ್ರಯದಲ್ಲಿ ‘ಹಲಸು ಸಾರ ಮೇಳ’ವು 2019 ಜೂನ್ 15 ಶನಿವಾರ ಮತ್ತು 16 ರವಿವಾರದಂದು ಜರುಗಲಿದೆ. ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ‘ಶ್ರೀ ನಟರಾಜ ವೇದಿಕೆ’ಯಲ್ಲಿ ದಿನಪೂರ್ತಿ ನಡೆಯುವ ಹಲಸು ಮೇಳದಲ್ಲಿ ಹೊಟ್ಟೆ ತಂಪಾಗಿಸುವ, ಮೆದುಳಿಗೆ ಮೇವನ್ನು ನೀಡುವ ವೈವಿಧ್ಯತೆಗಳಿವೆ.

ಸುಮಾರು ಮೂವತ್ತಕ್ಕೂ ಮಿಕ್ಕಿ ಮಳಿಗೆಗಳಲ್ಲಿ ತಾಜಾ ಹಲಸಿನ ಉತ್ಪನ್ನಗಳ ಮಾರಾಟವಿದೆ. ಯಾವುದೇ ಕೃತಕ ಬಣ್ಣ, ಒಳಸುರಿಗಳನ್ನು ಬಳಸದ ಉತ್ಪನ್ನಗಳು ಮೇಳದ ಹೈಲೈಟ್. ಸ್ಥಳದಲ್ಲೇ ತಯಾರಿಸುವ ಹಲವು ಪಾರಂಪರಿಕ ತಿಂಡಿಗಳು ಗ್ರಾಹಕರಲ್ಲಿ ರುಚಿವರ್ಧನೆಯನ್ನು ಮಾಡಲಿವೆ. ಹಲಸಿನ ತಳಿಗಳನ್ನು ಅಭಿವೃದ್ಧಿಪಡಿಸಿದ ಪ್ರಸಿದ್ಧ ನರ್ಸರಿಗಳಿಂದ ಗಿಡಗಳ ಪ್ರದರ್ಶನ ಮತ್ತು ಮಾರಾಟವಿದೆ.

ಬೆಂಗಳೂರಿನ ಐಐಹೆಚ್‍ಆರ್ ಸಂಸ್ಥೆಯು ಹಲಸಿನ ಉತ್ಕøಷ್ಟ ತಳಿಗಳನ್ನು ಪ್ರದರ್ಶನ ಮಾಡಲಿದೆ. ಇದರ ವಿಜ್ಞಾನಿಗಳು ಹಲಸು ಕೃಷಿಯ ಮತ್ತು ಮಾರಾಟದ ಕುರಿತಾದ ಕೃಷಿಕ ಕೌಶಲ್ಯ ತರಬೇತಿಯನ್ನು ನೀಡಲಿದ್ದಾರೆ. ಕೃಷಿಕರು ತಮ್ಮಲ್ಲಿದ್ದ ವಿವಿಧ ರುಚಿಯ ಹಲಸಿನ ಹಣ್ಣುಗಳನ್ನು ತಂದು ಪ್ರದರ್ಶನ ಮತ್ತು ಮಾರಾಟಕ್ಕಿಡುವ ವ್ಯವಸ್ಥೆಯಿದೆ. ಹಲಸು ಅಲ್ಲದೆ ವಿವಿಧ ಹಣ್ಣುಗಳು, ಕಾಡುಹಣ್ಣುಗಳನ್ನು ಕೂಡಾ ಮಾರಾಟಕ್ಕಿಡಬಹುದಾಗಿದೆ.

ವಿದ್ಯಾರ್ಥಿಗಳಿಗೆ ಹಲಸಿನ ಅರಿವನ್ನು ಮೂಡಿಸುವ ಉದ್ದೇಶದಿಂದ ಚಿತ್ರಬಿಡಿಸುವ, ಕವನ ರಚಿಸುವ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಹಲಸಿನ ಹಣ್ಣಿನ ಸೊಳೆಯನ್ನು ತಿನ್ನುವ ಸ್ಪರ್ಧೆಯಿದೆ. ಅಲ್ಲದೆ ಮನೆಗಳಲ್ಲಿ ಸಿದ್ಧಪಡಿಸಿ ತಂದ ವಿಶೇಷ ಹಲಸಿನ ಖಾದ್ಯಗಳ ಸ್ಪರ್ಧೆ ನಡೆಯಲಿದೆ. ಹಲಸು ಪ್ರಿಯರಿಗೆ ಈ ಎಲ್ಲಾ ಕಾರ್ಯಕ್ರಮಗಳಿಗೆ ಮುಕ್ತ ಪ್ರವೇಶ.

ಹಲಸು ಸ್ನೇಹ ಸಂಗಮದ ಆಧ್ಯಕ್ಷ ಸೇಡಿಯಾಪು ಜನಾರ್ದನ ಭಟ್ಟರ ಅಧ್ಯಕ್ಷತೆಯಲ್ಲಿ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಬೆಂಗಳೂರು ಐಐಹೆಚ್‍ಆರ್ ಇದರ ನಿರ್ದೇಶಕ ಡಾ.ದಿನೇಶ್ ಇವರು ಮೇಳವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪುತ್ತೂರಿನ ಸಹಾಯಕ ಕಮಿಶನರ್ ಕೃಷ್ಣಮೂರ್ತಿ, ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಂಚಿ ಶ್ರೀನಿವಾಸ ಆಚಾರ್, ಪುತ್ತೂರು ಮುಳಿಯ ಜ್ಯುವೆಲ್ಲರ್ಸ್ ಇದರ ಕೃಷ್ಣನಾರಾಯಣ ಮುಳಿಯ, ಮಾಜಿ ಶಾಸಕಿ ಶ್ರೀಮತಿ ಶಕುಂತಳಾ ಟಿ. ಶೆಟ್ಟಿ, ನಗರಸಭಾ ಸದಸ್ಯರಾದ ಶಕ್ತಿಸಿಂಹ ಭಾಗವಹಿಲಿರುವರು.

ಬಳಿಕ ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಶ್ರೀ ಪಡ್ರೆಯವರಿಂದ ‘ಹಲಸಿನ ಮೌಲ್ಯವರ್ಧನೆ ಮತ್ತು ಮಾರುಕಟ್ಟೆ’ – ದೇಶ ವಿದೇಶಗಳ ಆಗುಹೋಗುಗಳ ಚಿತ್ರಣಗಳ ಪವರ್‍ಪಾಯಿಂಟ್ ಪ್ರಸ್ತುತಿ ಜರುಗಲಿದೆ.

ಅಪರಾಹ್ಣ ಐಐಹೆಚ್‍ಆರ್ ವಿಜ್ಞಾನಿಗಳಾದ ಡಾ.ಜಿ.ಕರುಣಾಕರನ್, ಡಾ.ಹೆಚ್.ಸಿ,ಪ್ರಸನ್ನ, ವೈಭವ್ ಬಿ.ಎಸ್. ಇವರಿಂದ “ಹಲಸಿನ ತಳಿಗಳು, ಕೃಷಿ ಕ್ರಮಗಳು, ತಾಂತ್ರಿಕತೆ ಮತ್ತು ಅವಕಾಶಗಳು”ಕುರಿತು ಮಾತುಕತೆ ನಡೆಯಲಿದೆ. ಹಲಸಿನ ವಿವಿಧ ಬಳಕೆಗಳ ಸ್ವಾನುಭವವನ್ನು ವಸಂತಿ ಭಟ್ ಮುಡಿಪು ಹಂಚಿಕೊಳ್ಳಲಿದ್ದಾರೆ. ಸಂಜೆ ಡಿಂಡಿಮ ಬಳಗ ಪುತೂರು ಇವರಿಂದ ವಿವಿಧ ವೈವಿಧ್ಯ ಕಾರ್ಯಕ್ರಮಗಳು ನಡೆಯಲಿವೆ.

ಜೂನ್ 16ರಂದು ಪೂರ್ವಾಹ್ನ ಗಂಟೆ 10ಕ್ಕೆ ಪೆರ್ಲದ ಕೃಷಿಕ ಶಿವಪ್ರಸಾದ್ ವರ್ಮುಡಿ ಇವರಿಂದ ‘ಹಲಸಿನ ಕೃಷಿ’ ಕುರಿತ ಅನುಭವ ಕಥನ ಮತು ಪ್ರಶ್ನೋತ್ತರ; ನಳಿನಿ ಮಾಯಿಲಂಕೋಡಿ ಮತ್ತು ಎ.ಪಿ.ಉಮಾಶಂಕರಿ ಮರಿಕೆ ಇವರಿಂದ ಅಡುಗೆ ಖಾದ್ಯಗಳ ಪ್ರಾತ್ಯಕ್ಷಿಕೆ ಸಂಪನ್ನವಾಗಲಿದೆ.

ಅಪರಾಹ್ಣ ಹಲಸು ಸ್ನೇಹ ಸಂಗಮದ ಗೌರವಾಧ್ಯಕ್ಷ ಸುಧಾಕರ ಎನ್.ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ನಿವೃತ್ತ ಅರಣ್ಯ ಅಧಿಕಾರಿ ಗ್ಯಾಬ್ರಿಯಲ್ ವೇಗಸ್ ಸಮಾರೋಪ ಭಾಷಣ ಮಾಡಲಿದ್ದಾರೆ. ಪುತ್ತೂರಿನ ಶಾಸಕ ಸಂಜೀವ ಮಠಂದೂರು, ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಕಸಿತಜ್ಞ ಕೃಷ್ಣ ಕೆದಿಲಾಯ ಇವರನ್ನು ಗೌರವಿಸಲಾಗುವುದು.
ಸಮಾರೋಪದ ಬಳಿಕ ವಿದ್ವಾನ್ ಕಾಂಚನ ಈಶ್ವರ ಭಟ್ಟರ ಶಿಷ್ಯೆ ಕು.ಅನುಷಾ ಮತ್ತು ಬಳಗದವರಿಂದ ‘ಸಂಗೀತ ಕಛೇರಿ’ ನಡೆಯಲಿದೆ. ಪುತ್ತೂರಿನ ಅನ್ಯಾನ್ಯ ಹಲಸುಪ್ರಿಯ ಸುಮನಸಿಗರು ಹಲಸು ಮೇಳಕ್ಕೆ ಬೆಂಬಲ ನೀಡಿದ್ದಾರೆ.

 

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಇಂದೂ ಕರಾವಳಿ ಜಿಲ್ಲೆಯಲ್ಲಿ ಮಳೆಯಾಗುವ ಸಾಧ್ಯತೆ ಇದೆ | ಹವಾಮಾನ ಇಲಾಖೆ ಮುನ್ಸೂಚನೆ
March 13, 2025
11:10 AM
by: ದ ರೂರಲ್ ಮಿರರ್.ಕಾಂ
ಕೊಡಗು ಜಿಲ್ಲೆಯ ಕೆಲವೆಡೆ ಲಘು ಭೂಕಂಪನ | ಆತಂಕಪಡುವ ಅಗತ್ಯವಿಲ್ಲ | ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ ಸ್ಪಷ್ಟನೆ
March 12, 2025
10:13 PM
by: The Rural Mirror ಸುದ್ದಿಜಾಲ
ದಕ್ಷಿಣ ಕನ್ನಡ ಜಿಲ್ಲೆಯ ವಿವಿದೆಡೆ ಗುಡುಗು ಸಹಿತ ಗಾಳಿ-ಮಳೆ | ಎರಡನೇ ಬಾರಿ ಸುರಿದ ಧಾರಾಕಾರ ಮಳೆ |
March 12, 2025
10:03 PM
by: ದ ರೂರಲ್ ಮಿರರ್.ಕಾಂ
 ಕೃಷಿ ಉತ್ಪನ್ನಗಳ ದೇಸಿ ತಳಿಗಳು ಪೋಷಕಾಂಶಗಳಲ್ಲಿ ಸಮೃದ್ಧ
March 12, 2025
7:13 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror