# ಪೊಲಿಟಿಕಲ್ ಕರೆಸ್ಪಾಂಡೆಂಟ್, ಸುಳ್ಯನ್ಯೂಸ್.ಕಾಂ
ಸುಳ್ಯ: ಆರು ಬಾರಿ ಗೆದ್ದು ಗೆಲುವಿನ ಡಬಲ್ ಹ್ಯಾಟ್ರಿಕ್ ಗಳಿಸಿದರೂ ಸುಳ್ಯ ಶಾಸಕರು ಸಚಿವರಾಗಲಿಲ್ಲ. ಸುಳ್ಯಕ್ಕೆ ಗೂಟದ ಕಾರು ಬರಬಹುದು ಎಂಬ ಜನರ ನಿರೀಕ್ಷೆಯೂ ಈಡೇರಲಿಲ್ಲ. ಗದ್ದುಗೆಗಾಗಿ ಹಾತೊರೆಯದೆ, ಲಾಬಿ ಮಾಡದೆ, ಪಕ್ಷ ನಿಷ್ಟೆ, ತತ್ವ ಸಿದ್ಧಾಂತವನ್ನೇ ಉಸಿರಾಗಿಸಿದರೂ, ಸರಳತೆಯ ಪ್ರತಿರೂಪವಾದರೂ ಶಾಸಕ ಅಂಗಾರರನ್ನು ಅರಸಿ ಅಧಿಕಾರ ಬರಲಿಲ್ಲ.
ಅಧಿಕಾರ ಸಿಕ್ಕಿಲ್ಲ, ಸಚಿವರಾಗಲಿಲ್ಲ. ಸಚಿವ ಸಂಪುಟದಲ್ಲಿ ಸ್ಥಾನ ಇಲ್ಲ ಎಂದಾಗಲೂ ಅದರ ವಿರುದ್ಧ ಗಟ್ಟಿ ಧ್ವನಿಯನ್ನೂ ಅವರು ಎತ್ತಲಿಲ್ಲ. ಅಧಿಕಾರ ಮತ್ತೆ ಒಲಿದು ಬರಬಹುದಾ ಎಂದು ಯಾವ ಬಾಗಿಲಲ್ಲೂ ಎಡತಾಕುವುದಿಲ್ಲ, ಯಾರಲ್ಲಿಯೂ ಅಂಗಲಾಚುವುದಿಲ್ಲ. ಸರಳ ಸಜ್ಜನಿಕೆಯ ಪ್ರತಿರೂಪ, ಶಾಂತ ಮೂರ್ತಿ ಎಸ್.ಅಂಗಾರ ಅವರಿಂದ ಅದು ಸಾಧ್ಯವೂ ಇಲ್ಲ ಬಿಡಿ. ಆದರೆ ಆರು ಬಾರಿ ಸತತವಾಗಿ ಮತ ಹಾಕಿದ ಮತದಾರ, ಹಗಲಿರುಳು ಎನ್ನದೆ ದುಡಿದ ಕಾರ್ಯಕರ್ತರಿಗೆ ಅಂಗಾರರ ಹೆಸರು, ಅವರ ವ್ಯಕ್ತಿತ್ವ ಗೊತ್ತಿರುವ ಪ್ರತಿಯೊಬ್ಬರಿಗೂ ಬೇಸರವಾಗಿದೆ. ಕೆಲವರು ಅದನ್ನು ಗಟ್ಟಿಯಾಗಿಯೇ ವ್ಯಕ್ತಪಡಿಸುತ್ತಿದ್ದರೆ, ಹಲವರು ತಮಗಾದ ನೋವನ್ನು ತಮ್ಮಷ್ಟಕ್ಕೆ ತೋಡಿಕೊಳ್ಳುತ್ತಿದ್ದಾರೆ.
ಆದರೆ ಅಂಗಾರರು ಮಾತ್ರ ತಮ್ಮ ನೋವನ್ನೂ ಹೇಳಿಕೊಳ್ಳುವುದಿಲ್ಲ. ನಾನು ನಿಮಿತ್ತ ಅಸ್ಟೇ.. ಮತ ಹಾಕಿದ ಮತದಾರರಿಗೆ, ದುಡಿದ ಕಾರ್ಯಕರ್ತರಿಗೆ ನೋವಾಗಿದೆ, ಅನ್ಯಾಯ ಆಗಿದೆ ಅದನ್ನು ಸರಿಪಡಿಸಿ ಅವರು ಅಷ್ಟನ್ನು ಮಾತ್ರ ಹೇಳುತ್ತಿದ್ದಾರೆ. ಅಧಿಕಾರದ ಹಿಂದೆ ಎಂದೂ ಹೋಗುವುದಿಲ್ಲ.. ಅರಸಿ ಬಂದರೆ ಸ್ವೀಕರಿಸುತ್ತೇನೆ ಎಂದು ಅಂಗಾರರು ಪ್ರತಿ ಬಾರಿಯೂ ಹೇಳುತ್ತಾರೆ. ಅಂಗಾರರು ನುಡಿದಂತೆ ನಡೆದಿದ್ದಾರೆ. ಅಧಿಕಾರವನ್ನು ಅರಸುತ್ತಾ ಅವರು ಹೋಗಿಲ್ಲ. ಆದರೆ ರಾಜಕೀಯದ ಈ ಅಪರೂಪದ ‘ಬಂಗಾರವನ್ನು’ ಅರಸಿ ಅಧಿಕಾರ ಬರಬಹುದೇ.. ಇದು ಪ್ರಶ್ನೆ.. ಹಾಗೆ ಬರಬೇಕಾದರೆ ಸುಳ್ಯ ಬಿಜೆಪಿ ಈಗ ನಡೆಸುತ್ತಿರುವ ಪ್ರಯತ್ನ ಸಾಕೇ.. ಅದು ಫಲ ಕೊಡುತ್ತದಾ?.
ಸುಳ್ಯ ಬಿಜೆಪಿ ಅಸಹಾಕಾರ ಚಳವಳಿ ಘೋಷಿಸಿದೆ. ಸುಳ್ಯದ ಜನಪ್ರತಿನಿಧಿಗಳು ತಮ್ಮ ರಾಜಿನಾಮೆಯನ್ನು ಮಂಡಲ ಸಮಿತಿ ಅಧ್ಯಕ್ಷರಿಗೆ ಸಲ್ಲಿಸುತ್ತಿದ್ದಾರೆ. ಇದು ಯಾವ ರೀತಿಯ ಫಲ ನೀಡಲಿದೆ ಎಂದು ಕಾದು ನೋಡಬೇಕಾಗಿದೆ. ಡಿ.ವಿ.ಸದಾನಂದ ಗೌಡ ಮುಖ್ಯಮಂತ್ರಿ ಸ್ಥಾನದಿಂದ ಇಳಿದ ಬಳಿಕ ಬಂದ ಜಗದೀಶ್ ಶೆಟ್ಟರ್ ಸಚಿವ ಸಂಪುಟದಲ್ಲಿ ಶಾಸಕ ಅಂಗಾರರಿಗೆ ಸ್ಥಾನ ನೀಡಿಲ್ಲ ಎಂದು ಸುಳ್ಯ ಬಿಜೆಪಿ ಉಗ್ರ ಪ್ರತಿಭಟನೆಯನ್ನೇ ನಡೆಸಿತ್ತು. ಒಂದು ತಿಂಗಳ ಕಾಲ ಬಿಜೆಪಿ ಕಚೇರಿಯೇ ತೆರೆದಿರಲಿಲ್ಲ. ಬಳಿಕ ಕ್ಷೇತ್ರದ ಅಭಿವೃದ್ಧಿಗೆ ಒಂದಷ್ಟು ಅನುದಾನವನ್ನು ನೀಡಿ ಸುಳ್ಯ ಬಿಜೆಪಿಯನ್ನು ಸಮಾಧಾನ ಪಡಿಸಿತ್ತು. ಬಳಿಕ ನಡೆದ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ನೆಲ ಕಚ್ಚಿದಾಗಲೂ, ಜಿಲ್ಲೆಯ ಎಂಟರಲ್ಲಿ ಏಳು ಸ್ಥಾನಗಳನ್ನು ಕಳೆದುಕೊಂಡರೂ ಅಂಗಾರ ಮಾತ್ರ ತನ್ನ ವ್ಯಕ್ತಿ ಪ್ರಭಾವದಿಂದ ಅಜೇಯರಾಗಿ ತಲೆ ಎತ್ತಿ ತ ಜೈತ್ರಯಾತ್ರೆಯನ್ನು ಮುಂದುವರಿಸಿದರು. ಐದನೇ ಬಾರಿ ಗೆದ್ದು ಬಂದರು. ಯಾರೂ ಊಹಿಸಲಾಗದಷ್ಟು ಬಹುಮತ ಪಡೆದು ಕಳೆದ ವರ್ಷ ಆರನೇ ಬಾರಿಯೂ ಆಯ್ಕೆಯಾದರು. ಆದರೆ ಅಧಿಕಾರದ ವಿಚಾರದಲ್ಲಿ ಪ್ರತಿ ಬಾರಿಯೂ ಇತಿಹಾಸ ಮರುಕಳಿಸುತ್ತಲೇ ಇದೆ. ಸಚಿವ ಸ್ಥಾನ ಸಿಗಲಿಲ್ಲ.. ಸುಳ್ಯದ ಬಿಜೆಪಿ ಮಾತ್ರ ಮುನಿಸಿ ಕುಳಿತಿದೆ. ಅದು ಬಿಟ್ಟರೆ ಅಂಗಾರರನ್ನು ಸಚಿವರನ್ನಾಗಿ ಮಾಡಿ ಎಂದು ಬೇರೆ ಎಲ್ಲಿಂದಲೂ ಒಂದೇ ಒಂದು ಗಟ್ಟಿ ಧ್ವನಿಯೂ ಕೇಳಿಸುತ್ತಿಲ್ಲ. ಅನರ್ಹರು, ಅತೃಪ್ತರ ದಂಡೇ ಇರುವಾಗ ಮುಂದೆ ಸಚಿವರಾಗಬಹುದಾದ ಸಾಲಿನಲ್ಲಿಯೂ ಅಂಗಾರರ ಹೆಸರು ಕಾಣುವುದಿಲ್ಲ.. ಈಗ ನಿಗಮದ ಅಧ್ಯಕ್ಷ, ಸಂಸದೀಯ ಕಾರ್ಯದರ್ಶಿ ಹುದ್ದೆಯ ಮಾತು ಕೇಳಿ ಬರುತಿದೆ. ನಿಗಮದ ಅಧ್ಯಕ್ಷರಾಗಲು.. ಆರು ಬಾರಿ ಗೆಲ್ಲಬೇಕಾ.. ಇಷ್ಟು ವರುಷ ಕಾಯಬೇಕಾಗಿತ್ತಾ… ಸುಳ್ಯದ ಜನರ, ಕಾರ್ಯಕರ್ತರ ಈ ಪ್ರಶ್ನೆ ನ್ಯಾಯಯುತವಾಗಿಯೇ ಇದೆ..
ಅದಕ್ಕೆ ನ್ಯಾಯಯುತ ಉತ್ತರ ದೊರಕುವುದೇ ಎಂಬುದೇ ಈಗಿರುವ ಮಿಲಿಯನ್ ಡಾಲರ್ ಪ್ರಶ್ನೆ..!
ಹೊಸರುಚಿಯ ಮೂಲಕ ಈ ವಾರ ಪಪಾಯ ಹಣ್ಣು ಬರ್ಫಿಯ ಬಗ್ಗೆ ಹೇಳಿದ್ದಾರೆ ಗೃಹಿಣಿ…
ರಾಮಸೀತೆಯರೊಂದಾಗಿ ಕುಶಲವರಿಗೆ ತಂದೆ ತಾಯಿ ಲಭಿಸಿದ ಘಳಿಗೆಯು ಎಲ್ಲರಿಗೂ ಸಂಭ್ರಮಯೋಗ್ಯವಾಗಿ ಕಾಣುತ್ತದೆ. ಹಾಗಾಗಿ…
ಅಲ್ಪಾವಧಿ ಬೆಳೆ ಸಾಲದ ಬಗ್ಗೆ ಕಳೆದ ವಾರ ತಿಳಿಸಲಾಗಿತ್ತು. ಅದರ ಮುಂದುವರಿದ ಭಾಗವಾಗಿ…
ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಲು ಈಗಾಗಲೇ ತುಮಕೂರು ಜಿಲ್ಲೆಯಲ್ಲಿ ತೆರೆದಿರುವ 10…
ಮಕ್ಕಳ ಆರೋಗ್ಯ ಮತ್ತು ಭವಿಷ್ಯದ ಹಿತದೃಷ್ಟಿಯಿಂದ ರೈತರು ತಮ್ಮ ಬೆಳೆಗಳಲ್ಲಿ ಹೆಚ್ಚಿನ ರಾಸಾಯನಿಕಗಳು…
ಕಾರವಾರದ ರವೀಂದ್ರನಾಥ್ ಟಾಗೋರ್ ಕಡಲ ತೀರದ ಮಯೂರ ವರ್ಮ ವೇದಿಕೆಯಲ್ಲಿ ಏಪ್ರಿಲ್ 18…