Advertisement
ಅನುಕ್ರಮ

ಅಡಿಕೆಗೆ ಕೊಳೆರೋಗ ಬಂದಾಯಿತು…!

Share

ಮಳೆ ಕಡಿಮೆ ಎಂದು ಬಹುತೇಕ ಕೃಷಿಕರು ಕೊಳೆರೋಗ ಬರುವ ಭಯವಿಲ್ಲವೆಂದು ನಿರಾಳವಾಗಿದ್ದರು. ಮೇ ತಿಂಗಳಿನಲ್ಲಿಯೇ ಮೊದಲ ಸಲ ಬೋರ್ಡೊ ಸಿಂಪಡಣೆ ಮಾಡುತ್ತಿದ್ದವರು ಮಳೆ ಬರಲಿ ಆ ಮೇಲೆ ನೋಡೋಣ ಅಂದವರಿದ್ದರು. ಜೂನ್ ತಿಂಗಳಿನಲ್ಲಿಯೂ ಮಳೆಗಾಲದ ವಾತಾವರಣವೇ ಇರಲಿಲ್ಲ. ಜುಲೈ ತಿಂಗಳಿನ ನಂತರ ಮಳೆ ಸಾಕೋ ಬೇಕೋ ಅಂತ ಕೇಳುತ್ತಿದೆ. ಅಂದು ನೀರಿಲ್ಲದೆ ಬರದಿಂದ ಅಡಿಕೆ ಕೃಷಿ ಕಂಗಾಲಾಯಿತು. ಕೈಗೆ ಸಿಗಬೇಕಾದ ಫಸಲು ಹಿಂಗಾರ ಒಣಗಿ ಸುಟ್ಟುಹೋಯಿತು. ಈಗ ಮಳೆಗಾಲ ಮಿತಿಮೀರಿ ಬಂದು ಅಳಿದುಳಿದ ಫಸಲನ್ನು ಆಪೋಶನ ತೆಗೆದುಕೊಳ್ಳುತ್ತಿದೆ. ಈ ಲೇಖನ ತಯಾರಾಗುವ ಹೊತ್ತಿಗೆ ಹನಿಕಡಿಯದೆ ಎರಡು ದಿನಗಳಿಂದ ಮಳೆ ಬರುತ್ತಾ ಇದೆ.ಮಳೆ ಬರುವುದೆಂದರೆ ಅಡಿಕೆ ತೋಟಕ್ಕೆ ಕೊಳೆರೋಗ ಹತ್ತಿಕೊಳ್ಳಲು ಬೇಕಾದ ಸಕಲ ಲಕ್ಷಣಗಳನ್ನು ಹೊತ್ತುಕೊಂಡೇ ಬರುತ್ತಿದೆ. ಇದು ಇನ್ನೆರಡು ದಿವಸಕ್ಕೆ ಎಳೆದು ಬಿಟ್ಟರೆ ಕೃಷಿಕನ ಭವಿಷ್ಯಕ್ಕೆ ಬೇರೆ ಬರೆ ಬೇಡ.

 

ಸಾಮಾನ್ಯವಾಗಿ ಮೇ ತಿಂಗಳಿನಲ್ಲಿ ಮೊದಲ ಸಿಂಪಡಣೆ ಕೃಷಿಕರು ಕೊಡುತ್ತಿದ್ದರು. ಈ ವರ್ಷ ಆ ಹೊತ್ತಿಗೆ ಭಾರಿ ಬಿಸಿಲು. ಮಳೆಯ ಯಾವ ಲಕ್ಷಣಗಳೂ ಇರಲಿಲ್ಲ. ಮಳೆ ಬಾರದೆ ಸಿಂಪಡಣೆ ಕೊಟ್ಟರೆ ಹಾನಿಯಾದೀತೆಂದು ಕೃಷಿಕರು ಹೆದರಿದ್ದು ಸಹಜ. ಮತ್ತೆ ಮಳೆ ಬಂದಾಗ ಬಿರುಸಿನ ಮಳೆ ಇಲ್ಲ. ಗಡಿಬಿಡಿ ಯಾಕೆ ಅಂತ ಕೃಷಿಕರಲ್ಲಿ ಕೆಲವರು ಉದಾಸೀನ ಮಾಡಿದ್ದಿದೆ. ಆದರೆ ಹಲವರು ಮರ ಹತ್ತುವ ಕುಶಲ ಕರ್ಮಿಗಳು ಬಂದಾಗ ಸಿಂಪಡಣೆ ಮಾಡಿಸಿಬಿಟ್ಟರು. ಅಂದು ಸಿಂಪಡಣೆ ಮಾಡದವರಿಗೆ ಮತ್ತು ಮಾಡಿದವರಿಗೆ ಈಗ ಬಂದ ಪರಿಸ್ಥಿತಿ ಒಂದೆ. ಮೊದಲ ಸಿಂಪಡಣೆ ಮಾಡಿಸಿದವರಿಗೆ ಮತ್ತೆ ಸಿಂಪಡಣೆಗೆ ದಿನವಾಗಿ ಕಳೆಯಿತು. ಮಳೆಯ ಈ ವರ್ಷದ ಕ್ರಮದಿಂದ ಕೃಷಿಕರಿಗೆ ಗೊಂದಲವೂ ಆಯಿತು ಸಮಸ್ಯೆಯೂ ಆಯಿತು.
ಕೃಷಿಕರೇ ಮುನ್ನಡೆಸುತ್ತಿರುವ ಸಾಮಾಜಿಕ ಜಾಲತಾಣಗಳಲ್ಲಿ ಈಗ ಕೊಳೆರೋಗದ್ದೇ ಸುದ್ಧಿ. ಬೇಸಿಗೆಯಲ್ಲಿ ಅನಾವೃಷ್ಠಿ. ಈಗ ಅತಿವೃಷ್ಠಿ. ಬಾಣಲೆಯಿಂದ ಒಲೆಯ ಬೆಂಕಿಗೆ ಬಿದ್ದ ಸ್ಥಿತಿ ಎಂಬ ಬಣ್ಣನೆ. ನೋವು, ನಿರಾಶೆ, ಹತಾಶೆ ಎಲ್ಲವೂ ಸಹಜ. ಯಾಕೆಂದರೆ ನಾಳೆಯ ಬದುಕನ್ನು ಕಟ್ಟಿಕೊಡುವ ಫಸಲು ನೆಲ ಸೇರಿದಾಗ ಆತಂಕ ಇದ್ದದ್ದೆ. ಆದರೆ ಇಲ್ಲೆಲ್ಲ ನಾವು ಗಮನಿಸ ಬೇಕಾದ ಇನ್ನಷ್ಟು ವಿಷಯಗಳಿವೆ. ಕೃಷಿಕರಾದ ನಮಗೆಲ್ಲ ಒಂದಷ್ಟು ಉದಾಸೀನ ಅಂಟಿಕೊಂಡಿದೆ. ನಮ್ಮ ಹಿರಿಯರು ಕಷ್ಟ ಪಟ್ಟು ನಮಗಾಗಿ ಬೆಳೆದ ತೋಟ, ಸಂಪತ್ತುಗಳನ್ನು ಮತ್ತು ನಮ್ಮದೇ ಭೂಮಿಯನ್ನು ನಾವು ಪ್ರೀತಿಯಿಂದ ನೋಡುವಲ್ಲಿ ಯಾವುದೊ ತೊಡಕುಗಳು ಬಂದುಬಿಟ್ಟಂತಿದೆ. ಕೃಷಿಯ ಬಗ್ಗೆ ಇರುವ ಪ್ರೀತಿ ಹೊರಟುಹೋಗಿ ಅದರ ಆದಾಯದ ಬಗ್ಗೆ ಉತ್ಸಾಹ ಬಂದು ಬಿಟ್ಟಿದೆ. ಸಮಯಕ್ಕೆ ಆಗಬೇಕಾದ ಕೆಲಸಗಳು ಆಗದೆ ಏನೆಲ್ಲ ಆಗುವುದೆ ಕೃಷಿಕರು ಹೆಚ್ಚು ಸಮಸ್ಯೆಗಳನ್ನು ಎದುರಿಸುವಂತಾಗಲು ಕಾರಣ. ಕಾರ್ಮಿಕರ ಜೊತೆ ಜೊತೆಗೆ ದುಡಿಯುವ ಕೃಷಿಕರಿದ್ದಲ್ಲಿ ಸಮಸ್ಯೆಗಳು ಕಡಿಮೆ. ಕಾರ್ಮಿಕರಲ್ಲಿ ಅದು ಇದು ಕೆಲಸ ಹೇಳಿ ಹೋಗುವ ಪ್ರಾಯೋಗಿಕ ಅನುಭವ ಇಲ್ಲದ ಕೃಷಿಕರ ಕೃಷಿಯಲ್ಲಿ ಸಮಸ್ಯೆಗಳು ಅಧಿಕ. ಅನೇಕ ಸಂದರ್ಭಗಳಲ್ಲಿ ಕೊಳೆರೋಗ ಕಾಲಿಡಲು ಅಸಮರ್ಪಕ ಕೆಲಸಗಳ ನಿರ್ವಹಣೆಯೂ ಕಾರಣವಾಗುವುದು ಇದೆ. ಮೊನ್ನೆ ಒಂದು ತೋಟದಲ್ಲಿ ನಾಲ್ಕು ಅಡಿಕೆ ಮರಕ್ಕೆ ಮಾತ್ರ ಕೊಳೆರೋಗ ಎರಗಿಬಿಟ್ಟಿತ್ತು. ಉಳಿದ ಯಾವ ಮರಗಳಲ್ಲಿಯೂ ಕಾಣದ ರೋಗ ಅದಕ್ಕೆ ಯಾಕೆ ಬಂತು ಅಂತ ಪರಿಶೀಲನೆ ಮಾಡಿದಾಗ ಅ ನಾಲ್ಕು ಮರಗಳ ಸೋಗೆಗಳು ಬಾಗಿತ್ತು. ಬಾಗಿದ ಸೋಗೆಯ ಒಳಗೆ ಇದ್ದ ಕಾಣದ ಗೊನೆಗಳಿಗೆ ಸಿಂಪಡಣೆ ಮಾಡಲು ಮರೆತರೊ ಅಥವ ಉದಾಸೀನ ಮಾಡಿದರೊ ಗೊತ್ತಿಲ್ಲ. ದೊಡ್ಡ ತೋಟಕ್ಕೆ ಕೊಳೆರೋಗ ಕಾಲಿಡಲು ಅ ನಾಲ್ಕು ಮರಗಳೇ ಬಾಗಿಲುಗಳಾದವು.

(ಸಾಂದರ್ಭಿಕ ಚಿತ್ರ)

ಬೋರ್ಡೊ ದ್ರಾವಣ ತಯಾರಿಯಲ್ಲಿ, ಅಡಿಕೆ ಮರದ ಗೊನೆಗಳ ಮೇಲ್ಭಾಗದ ಮುತ್ತಿಗೆ ಸಿಂಪಡಣೆ ತಾಗಿಸುವಲ್ಲಿ, ತೋಟದ ಕರೆಬರಿಗಳಲ್ಲಿ ಇರುವ ಮರಗಳ ಆಚೆ ಬದಿಯ ಗೊನೆಗಳಿಗೆ ಸಿಂಪಡಣಾ ದ್ರಾವಣ ತಾಗಿಸುವಲ್ಲಿ ಇರುವ ಉದಾಸೀನ ಮತ್ತು ನಿರ್ಲಕ್ಷ್ಯ ಕೊಳೆರೋಗಕ್ಕೆ ಆಹ್ವಾನ ಕೊಡುತ್ತದೆ. ನಮಗೆಲ್ಲ ಅರಿವಿದೆ. ಆದರೆ ಸಿಂಪಡಣೆ ಮಾಡುವ ಹೊತ್ತಿಗೆ ನಮ್ಮ ಮೈಮೇಲೆ ಮದ್ದು ಬೀಳುತ್ತದೆ ಎಂದು ತೋಟಕ್ಕಿಳಿಯದೆ ಮನೆಯಿಂದಲೇ ಕಾರ್ಬಾರು ಮಾಡಿದ್ದರ ಫಲ ನಾವೇ ಉಣ್ಣಬೇಕಾಗುತ್ತದೆ. ಬಹುತೇಕ ಕೃಷಿಕರು ತಮ್ಮ ಅಮೂಲ್ಯ ಸಮಯವನ್ನು ಮೊಬೈಲ್‍ಗಾಗಿ ವಿನಿಯೋಗಿಸುವುದಿದೆಯಲ್ಲ ಇದೊಂದೇ ಕೃಷಿಯ ಅವನತಿಗೆ ಸಾಕು. ಬೆಳಿಗ್ಗೆ ಎದ್ದ ಕೂಡಲೇ ಅರಂಭಿಸುವ ಕೆಲಸ ರಾತ್ರೆ ಹನ್ನೊಂದಾದರೂ ಕೆಲವರಿಗೆ ನಿದ್ದೆ ತರಿಸುವುದು ಕಡಿಮೆ. ಇಂತಹ ಉದಾಸೀನ, ನಿರ್ಲಕ್ಷ್ಯ ನಾಳೆಯ ದಿನಗಳನ್ನು ಇನ್ನಷ್ಟು ಕಠಿಣಗೊಳಿಸೀತು. ಕೊಳೆರೋಗ ಊರಿಗೆ ಕಾಲಿಟ್ಟ ಸಮಯದಲ್ಲಿ ಯುದ್ಧೋತ್ಸಾಹದಲ್ಲಿರಬೇಕಾದವರು ತಣ್ಣಗಿದ್ದರೆ ಭವಿಷ್ಯ ಡೋಲಾಯಮಾನ ಖಂಡಿತ.

ಶಂಕರನಾರಾಯಣ ಖಂಡಿಗೆ
‘ಶ್ಯಾಮಕೃಪಾ’ ನಾಗೋಡಿ
ಅಂಚೆ : ಪೆರ್ಲ – 671552
ಕಾಸರಗೋಡು ಜಿಲ್ಲೆ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಶಂ. ನಾ. ಖಂಡಿಗೆ

ಕೃಷಿಕ, ಬರಹಗಾರರು

Published by
ಶಂ. ನಾ. ಖಂಡಿಗೆ

Recent Posts

ಶಾಲಾ–ಕಾಲೇಜುಗಳ ಬಳಿ ಧೂಮಪಾನ ವಸ್ತು ಮಾರಾಟ ಮಾಡಿದರೆ ಲೈಸನ್ಸ್ ರದ್ದು! ಮಂಗಳೂರಿನಲ್ಲಿ ಕಠಿಣ ಎಚ್ಚರಿಕೆ

ಶಾಲಾ–ಕಾಲೇಜುಗಳ ಬಳಿ ಧೂಮಪಾನ ವಸ್ತು ಮಾರಾಟ ಮಾಡಿದರೆ ಲೈಸನ್ಸ್ ರದ್ದು ಮಾಡಲು ಪೊಲೀಸ್…

7 hours ago

ದಕ್ಷಿಣ ಕನ್ನಡದಲ್ಲಿ ಉಷ್ಣಾಂಶ ಏರಿಕೆ | ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಆರೋಗ್ಯಾಧಿಕಾರಿ ಎಚ್ಚರಿಕೆ

ದಕ್ಷಿಣ ಕನ್ನಡದಲ್ಲಿ ಉಷ್ಣಾಂಶ ಏರಿಕೆಯಾಗುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮ ಅಗತ್ಯವಾಗಿದೆ. ನೀರು ಹೆಚ್ಚು…

1 day ago

ಕೃಷಿಕರ ಜೀವನಾಡಿ ‘ಕ್ಯಾಂಪ್ಕೊ’ ವಿಟ್ಲ ಶಾಖೆಗೆ ನೂತನ ಕಟ್ಟಡ | ಮಾರ್ಚ್ 27ರಂದು ಶಂಕುಸ್ಥಾಪನೆ

ವಿಟ್ಲದಲ್ಲಿ ₹12 ಕೋಟಿ ವೆಚ್ಚದ ಕ್ಯಾಂಪ್ಕೊ ನೂತನ ಕಟ್ಟಡಕ್ಕೆ ಮಾರ್ಚ್ 27ರಂದು ಶಂಕುಸ್ಥಾಪನೆ…

1 day ago

ಕೃಷಿಗೆ ಹವಾಮಾನ ಅಪಾಯ ಹೆಚ್ಚಳ | ರೈತರಿಗೆ ಕಠಿಣ ಕಾಲ ಬರುವ ಸೂಚನೆ ? ದೇಶದ 310 ಜಿಲ್ಲೆಗಳು ಅಪಾಯ ವಲಯದಲ್ಲಿ..!

ದೇಶದ 651 ಜಿಲ್ಲೆಗಳ ಹವಾಮಾನ ಅಪಾಯ ಮೌಲ್ಯಮಾಪನದಲ್ಲಿ 310 ಜಿಲ್ಲೆಗಳು ಹೆಚ್ಚು ದುರ್ಬಲವೆಂದು…

2 days ago

ಹವಾಮಾನ ವರದಿ | 25.03.2026 | ಕರಾವಳಿಯಲ್ಲಿ ಇಂದು ಸಂಜೆ ಮಳೆ ಸಾಧ್ಯತೆ | ಏಪ್ರಿಲ್‌ 5ರವರೆಗೆ ಬೇಸಿಗೆ ಮಳೆ ಸಕ್ರಿಯ!

26.03.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ರಾಜ್ಯದ ವಿವಿಧ…

3 days ago