ವಿದೇಶಗಳಿಂದ ಆಗುತ್ತಿರುವ ಕಳಪೆ ಗುಣಮಟ್ಟದ ಅಡಿಕೆಯ ಅಕ್ರಮವಾಗಿ ಆಮದಾಗುತ್ತಿದೆ. ಇದು ಸಂಪೂರ್ಣ ನಿಷೇಧವಾದರೆ ಅಡಿಕೆ ಧಾರಣೆ ಸ್ಥಿರ ಹಾಗೂ ಏರಿಕೆಯೂ ಸಾಧ್ಯವಿದೆ. ಇದೀಗ ಕೇಂದ್ರ ಸರಕಾರವು ಅಡಿಕೆ ಆಮದು ತಡೆಗೆ ಕ್ರಮ ಕೈಗೊಳ್ಳುತ್ತಿದೆ. ಇದೊಂದು ಕಾರಣದಿಂದ ಅಡಿಕೆ ಧಾರಣೆ ಏರಿಕೆ ನಿರೀಕ್ಷೆಯೂ ಇದ್ದು ಕಳೆದ ವಾರವೇ ಹೊಸ ಅಡಿಕೆಗೆ 2 ರೂಪಾಯಿ ಧಾರಣೆಯೂ ಏರಿಕೆ ಕಂಡಿದೆ.
ವಿದೇಶದಿಂದ ಕಳಪೆ ಅಡಿಕೆ ಆಮದನ್ನು ತಡೆಯುವ ಕುರಿತು ಕೇಂದ್ರ ಸರಕಾರವು ಗಮನಹರಿಸಬೇಕು ಹಾಗೂ ವಿದೇಶದಿಂದ ಅಕ್ರಮವಾಗಿ ಬರುತ್ತಿರುವ ಕಳಪೆ ಗುಣಮಟ್ಟದ ಅಡಿಕೆಯನ್ನು ಸಂಪೂರ್ಣ ನಿಷೇಧಿಸಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲು ಲೋಕಸಭೆಯಲ್ಲಿ ಸರಕಾರವನ್ನು ಒತ್ತಾಯಿಸಿದ್ದಾರೆ. ಇದರ ಜೊತೆಗೆ ಅಡಿಕೆ ಬೆಳೆಗಾರರ ಬಗ್ಗೆ ಹಾಗೂ ಅಡಿಕೆ ಕೃಷಿ ಬಗ್ಗೆ ಸಮಗ್ರ ವಿವರವನ್ನೂ ವಾಣಿಜ್ಯ ಸಚಿವರಿಗೆ ಕ್ಯಾಂಪ್ಕೋ ಹಾಗೂ ಅಡಿಕೆ ಬೆಳೆಗಾರರ ನಿಯೋಗ ನೀಡಿದೆ. ಅಧಿವೇಶನದ ಬಳಿಕ ಕ್ರಮವಾಗಲಿದೆ ಎಂದು ಮಾಹಿತಿ ಲಭ್ಯವಾಗಿದೆ.
ಪ್ರಮುಖವಾಗಿ ನೆರೆಯ ಬಾಂಗ್ಲಾ, ಬರ್ಮಾ, ನೇಪಾಳ, ಶ್ರೀಲಂಕಾ ಹಾಗೂ ಮಲೇಶಿಯಾ ದೇಶಗಳಿಂದ ಕಳಪೆ ಗುಣಮಟ್ಟದ ಅಡಿಕೆ ದೇಶದೊಳಗೆ ಬಂದು ಇಲ್ಲಿ ಭಾರತದ ಅಡಿಕೆ ಜೊತೆ ಬೆರೆಸಿ ಮಾರಾಟ ಮಾಡುವ ಪ್ರಕ್ರಿಯೆ ನಡೆಯುತ್ತಿತ್ತು. ಇದೀಗ ಕಳೆದ ಕೆಲವು ಸಮಯಗಳಿಂದ ನಿಗಾ ಇರಿಸಲಾಗಿದ್ದು ಸಮಗ್ರ ಮಾಹಿತಿಯನ್ನೂ ಕೇಂದ್ರ ಸರಕಾರಕ್ಕೆ ನೀಡಲಾಗಿದೆ. ಕಳಪೆ ಗುಣಮಟ್ಟದ ಅಡಿಕೆಯ ಕಾರಣದಿಂದ ಅಡಿಕೆ ಕೃಷಿಯನ್ನೇ ನಂಬಿ ಬದುಕು ಸಾಗಿಸುತ್ತಿರುವ ಸಾವಿರಾರು ರೈತ ಕುಟುಂಬಗಳು ಸಂಕಷ್ಟಕ್ಕೆ ಒಳಗಾಗಿವೆ . ಅಡಿಕೆ ಬೆಳೆಗೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದೆ ಕೃಷಿಕರು ಕಂಗಾಲಾಗಿರುತ್ತಾರೆ. ಈ ಬಾರಿ ಕೊಳೆರೋಗದಿಂದ ಅಡಿಕೆಯೂ ಕಡಿಮೆಯಾಗಿರುವ ಕಾರಣ ಧಾರಣೆ ಏರಿಕೆ ಈಗಲೇ ಕಾಣಬೇಕಿತ್ತು. ಆದರೆ ಏರಿಕೆಯಾಗದೆ ಕೃಷಿಕರೂ ಕಂಗಾಲಾಗಿದ್ದಾರೆ. ಇದೀಗ ಸರಕಾರವು ಸೂಕ್ತ ಕ್ರಮಕೈಗೊಂಡರೆ ಅಡಿಕೆ ಧಾರಣೆ ಏರಿಕೆ ನಿಶ್ಚಿತ.
ಈ ನಡುವೆ ಸಂಸದ ನಳಿನ್ ಕುಮಾರ್ ಕಟೀಲು ಅವರು ಅಧಿವೇಶನದಲ್ಲಿ ಅಡಿಕೆ ಬೆಳೆಗಾರರ ಪರವಾಗಿ ಧ್ವನಿ ಎತ್ತು ಕೇಂದ್ರ ಸರಕಾರವು ಈ ಕೂಡಲೇ ಮಧ್ಯಪ್ರವೇಶಿಸಿ ಅಡಿಕೆ ಬೆಳೆಗೆ ಬೆಂಬಲ ಬೆಲೆ ಮತ್ತು ಅಡಿಕೆ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಒತ್ತಾಯಿಸಿರುವುದು ಕೃಷಿಕರಿಗೆ ಆಶಾಭಾವನೆ ಮೂಡಿಸಿದೆ.