ಮಳೆಗಾಲದ ನಂತರ ಅಡಿಕೆ ತೋಟಕ್ಕೆ ಯಾವಾಗ, ಎಷ್ಟು ನೀರು, ಎಷ್ಟು ಸಮಯದ ನಂತರ ಕೊಡಬೇಕು….? ಇದು ಕೃಷಿಕರ ಮನದ ಪ್ರಶ್ನೆ.
ಈ ಬಗ್ಗೆ ನನ್ನದೇ ಅನಿಸಿಕೆ ಮತ್ತು ಸ್ವಲ್ಪ ಅನುಭವ ಜನ್ಯ ಬರಹ ಅಷ್ಟೇ….ಈ ವಿಚಾರ ಇನ್ನಷ್ಟು ವಿಮರ್ಶೆಗೊಳಪಡಬೇಕು ಎಂಬುದು ಮುಖ್ಯ ಆಶಯ. (ಇಲ್ಲಿ ನಾನು ತೋಟ,ಮರ ಎಂಬುದು ಅಡಿಕೆ ,ಕಾಳು ಮೆಣಸಿನ ತೋಟ.)
ಆರೇಳು ತಿಂಗಳ ದೀರ್ಘ ಮಳೆಗಾಲ ಕಳೆದು ಇನ್ನೇನು ಸೂರ್ಯನ ಪ್ರಖರತೆ ಮತ್ತು ಚಳಿಯ ಪ್ರವೇಶದ ದಿನಗಳಲ್ಲಿ ಯಾವಾಗಿನಿಂದ ತೋಟಕ್ಕೆ ನೀರು ಹಾಯಿಸುವುದೂ ಎಂದು ಉದಾಸೀನವೂ ಸೇರಿಕೊಂಡ ಮನದಲ್ಲಿ ಮೂಡುವ ಪ್ರಶ್ನೆ.
ನನ್ನ ದೃಷ್ಟಿಯಲ್ಲಿ ಮಳೆ ಹೋಗಿ ಹತ್ತು ದಿನಗಳಲ್ಲಿ ನೀರು ಕೊಡಲೇ ಬೇಕು. ಚಳಿ ಶುರುವಾದಂತೆಯೇ ವಾತಾವರಣ ಮತ್ತು ಮಣ್ಣಲ್ಲೂ ತೇವಾಂಶ ನಿರೀಕ್ಷೆಗೂ ಮೀರಿ ಕಡಿಮೆಯಾಗುತ್ತದೆ,ಶುಷ್ಕವಾಗುತ್ತದೆ. ನವೆಂಬರ್ ತಿಂಗಳೆಂದರೆ ತೋಟದವರ ಮುಂದಿನ ಭವಿಷ್ಯದ ನಿರ್ಧಾರ ಆಗುವ ಸಮಯ. ನಮ್ಮ ವಾಡಿಕೆಯ ಭಾಷೆಯಲ್ಲಿ ಕೊಬೆ ತುಂಬುವುದು ಅಂದರೆ ಅಡಿಕೆ ಮರದ ಹಿಂಗಾರ ತುಂಬಿಕೊಂಡು ಹಿಂಗಾರ ಬಿಡುವ ಸಮಯ.ಯಾವ ರೀತಿ ಚಳಿಗಾಲದಲ್ಲಿ ನಮಗೆ ಬಾಯಾರದಿದ್ದರೂ ನೀರು ಅತೀ ಮುಖ್ಯವೋ ತೋಟಕ್ಕೂ ನೀರು ಅಷ್ಟೇ ಮುಖ್ಯ. ಚಳಿ ,ಬಿಸಿಲು,ಮತ್ತು ಬೆಳಗಿನ ಮಂಜು ತೋಟಕ್ಕೆ ಮಾರಕ. ಕ್ರಮಾಗತ ಕೃಷಿ ಪದ್ದತಿಯಂತೆ ಸೆಪ್ಟೆಂಬರ್ ಒಕ್ಟೋಬರ್ ತಿಂಗಳಲ್ಲಿ ತೋಟಕ್ಕೆ ಗೊಬ್ಬರ ಕೊಟ್ಟು ಸೋಗೆಗಳು,ಮೆಣಸಿನ ಬಳ್ಳಿಗಳು ಎಲ್ಲಾ ಫಸಲು ತುಂಬಿಕೊಂಡು ದಷ್ಟಪುಷ್ಟವಾಗಿರುವ ಸಮಯ.ಈ ಗೊಬ್ಬರವನ್ನು ಅರಗಿಸಿಕೊಳ್ಳಲು ಚಳಿಯ ಪ್ರವೇಶದ ದಿನಗಳಲ್ಲಿ ತೋಟಕ್ಕೆ ನೀರು ಅತೀ ಅಗತ್ಯ. ಚಳಿಗಾಲದಲ್ಲಿ ಸಾಧಾರಣವಾಗಿ ಬೇರುಗಳು ಅಷ್ಟೊಂದು ಕ್ರಿಯಾಶೀಲವಾಗಿರುವುದಿಲ್ಲ.ಈ ಸಂದರ್ಭದಲ್ಲಿ ಹಸಿರು ಹಸಿರಾಗಿರುವ ತೋಟ, ಸೋಗೆ ಚಳಿ ಮತ್ತು ಮಂಜಿಗೆ ಮೈಟ್ ರೋಗಕ್ಕೂ ಒಳಗಾಗುವ ಸಾಧ್ಯತೆ ಇದೆ.ಇತ್ತೀಚಿನ ವರ್ಷಗಳಲ್ಲಿ ದೊಡ್ಡ ಮರಗಳಿಗೂ ಮೈಟ್ ಬಾಧೆ ಸಾಮಾನ್ಯ. ನಮ್ಮ ಕಣ್ಣೋಟಕ್ಕೆ ಕಾಣದ ಕಾರಣ ನಾವು ಆ ಬಗ್ಗೆ ಚಿಂತಿಸುತ್ತಿಲ್ಲ. ಈಗ ಬಂದ ಮೈಟ್ ರೋಗ ಸೋಗೆಗಳನ್ನು ನಿಶ್ಯಕ್ತಿಗೊಳಿಸುತ್ತದೆ ಮತ್ತು ಮಾರ್ಚ್ ಕೊನೆಯ ಎಪ್ರಿಲ್ ತಿಂಗಳ 35 ಡಿಗ್ರಿ ಮೇಲಿನ ಬಿಸಿಲಿಗೆ ಮೈಟ್ ಭಾಧಿತ ತೋಟಕ್ಕೆ ಇನ್ನಷ್ಟು ಆಘಾತ ಮಾಡುತ್ತದೆ….ಪರಿಣಾಮ ನಳ್ಳಿ ಉದುರುವುದು….ಯಾವ ರೀತಿ ವರ್ಷವಿಡೀ ಗೊಬ್ಬರ ನಿರ್ವಹಣೆ ಅತೀ ಮುಖ್ಯವೋ ಅದೇ ರೀತಿ ಮಳೆಗಾಲ ಕಳೆದ ಕೂಡಲೇ ನೀರಾವರಿ ನಿರ್ವಹಣೆಯೂ ಕೂಡಾ ಅತೀ ಮುಖ್ಯ.ಅಂತೆಯೇ ಮಾರ್ಚ್ ಅಂದರೆ ಶಿವರಾತ್ರಿಯ ನಂತರದ ದಿನಗಳಲ್ಲಿ ತೋಟಕ್ಕೆ ನೀರು ಸ್ವಲ್ಪ ಕಡಿಮೆಯಾದರೂ ತೊಂದರೆ ಇಲ್ಲ…. ಕಾರಣ ಸೆಖೆಯ ಪ್ರವೇಶದ ದಿನಗಳಲ್ಲಿ ಬೇರುಗಳು ಉತ್ಸಾಹಿಗಳಾಗಿ ಕ್ರಿಯಾಶೀಲವಾಗಿರುತ್ತವೆ. ವಾತಾವರಣದಲ್ಲಿ ತೇವಾಂಶ ತುಂಬಿಕೊಳ್ಳುತ್ತದೆ ಮತ್ತು ಭೂಮಿಯಲ್ಲೂ ,ನಾವು ಬೆವರಿದಂತೆ,ನೀರಿನ ಮೇಲ್ಮುಖ ಒತ್ತಡದಿಂದಾಗಿ ಕ್ರಿಯಾಶೀಲ ಬೇರುಗಳಿಗೆ ಒಂದಷ್ಟು ನೀರ ತೇವ ಸಿಗುತ್ತದೆ.
ಇಷ್ಟು ಮಾತ್ರವೇ ಅಲ್ಲದೇ ಅಡಿಕೆ ಮರಗಳ ಹಿಂಗಾರ ಬಿಡುವ ಮತ್ತು ಅಡಿಕೆ ಫಸಲು ಹಣ್ಣಾಗುವ ಬೆಳವಣಿಗೆಯ ಹಂತಗಳಿಗೂ ನೀರು ಅತೀ ಮುಖ್ಯ. ಹಾಗೆಯೇ ಮಳೆಗಾಲದಲ್ಲಿ ಹಾನಿಗೊಳಗಾಗಿರುವ ಕಾಳು ಮೆಣಸಿನ ಬಳ್ಳಿಯ ಬೇರುಗಳೂ ಮಣ್ಣಿನ ಮೇಲ್ಮೈಯಲ್ಲೇ ಇರುವುದರಿಂದ ಕಾಳು ಮೆಣಸು ತುಂಬಿದ ಬಳ್ಳಿಗಳೂ ನೀರಿನ ಕೊರತೆಯಿಂದ ಸೊರಗುತ್ತವೆ….ಇದರಿಂದಾಗಿ ಬಳ್ಳಿ ಮತ್ತು ಬಳ್ಳಿಯಲ್ಲಿರುವ ಫಸಲಿನ ಗುಣಮಟ್ಟಕ್ಕೂ ಹೊಡೆತ ಬರುತ್ತದೆ.ಈ ನಿಟ್ಟಿನಲ್ಲೂ ಮಳೆಯ ಹತ್ತು ದಿನಗಳಲ್ಲಿ ನೀರು ತೀರಾ ಅಗತ್ಯ.
ಬೇಗ ನೀರಾವರಿ ಮಾಡಿದರೆ ಕೊಳೆರೋಗದ ಅಣುಗಳಿಗೆ ಪೂರಕ ಎಂಬ ವಾದವನ್ನೂ ನಾನು ಒಪ್ಪುವುದಿಲ್ಲ.ಯಾಕೆಂದರೆ ಕೊಳೆರೋಗದ ಶಿಲೀಂಧ್ರಗಳು ಸಾಯಬೇಕಾದರೆ ನೂರು ಡಿಗ್ರಿ ಸೆಂಟಿಗ್ರೇಡ್ಂದ ಹೆಚ್ಚು ಉಷ್ಣತೆ ಬೇಕಾದೀತು….ಅದೇ ತೋಟದೊಳಗೆ ಮಳೆಗಾಲ ಹೋಗಿ ಚಳಿಗಾಲ ಪ್ರವೇಶದ ದಿನಗಳಲ್ಲಿ ಉಷ್ಣತೆ 30 ಡಿಗ್ರಿ ದಾಟಲಾರದು ,ಆಗ ಈ ಶಿಲೀಂಧ್ರಗಳು ಹೇಗೆ ತಾನೇ ನಾಶವಾದವು. ಈ ಶಿಲೀಂಧ್ರಗಳು ಸುಪ್ತಾವಸ್ಥೆಗಿಳಿದರೆ ವರ್ಷಗಟ್ಟಲೆ ಹಾಗೇ ಇರಬಲ್ಲವಂತೆ….ಅದೇ ಸೂಕ್ತ ವಾತಾವರಣ ಸಿಕ್ಕಾಗ ವೃದ್ದಿಗೊಳ್ಳುವವಂತೆ.ಆದ್ದರಿಂದ ನೀರಾವರಿ ಮತ್ತು ರೋಗದ ಶಿಲೀಂಧ್ರಗಳಿಗೆ ಸಂಭಂದ ಅಷ್ಟಕ್ಕಷ್ಟೇ ಇದ್ದೀತು.
ಕಾಡು ಮರಗಳನ್ನೂ ನೋಡೋಣ ಪ್ರಾಕೃತಿಕವಾಗಿ ಚಳಿ ಬಂದಾಗ ಎಲೆ ಉದುರಿಸುತ್ತದೆ ಯಾಕೇ…
ಒಂದು…. ಶುಷ್ಕ ವಾತಾವರಣವನ್ನು ಎದುರಿಸಲು ಮತ್ತು ವಿಷಯ ಎರಡು….ಎಲೆ ಉದುರಿಸಿ ಹೊಸತನಕ್ಕೆ ಪ್ರವೇಶಿಸಲು…ಅಂದರೆ ಹೊಸ ಎಲೆಗಳು, ಹೂ….ಕಾಯಿ…..ಹಣ್ಣು….ಹೀಗೆ ಪ್ರಾಕೃತಿಕ ಚಕ್ರ.
ಅದೇ ತೋಟದಲ್ಲಿ ನೀರು ಕೊಡದೇ ಇದ್ದಾಗ ಸೋಗೆಗಳಿಗೆ ಹೊಡೆತ ಬಂದರೆ “ಕೃಷಿ” ಎಂದು ನಾವು ಉದ್ದೇಶ ಇಟ್ಟು ಮಾಡುವ ಕೆಲಸಕ್ಕೆ ಹೊಡೆತ ಬಂದೀತು.ಆದ್ದರಿಂದ ಮಳೆ ಹೋಗಿ ಹತ್ತು ದಿನಗಳಲ್ಲಿ ನೀರು ಕೊಡುವುದು ತೀರಾ ಅವಶ್ಯಕ.
( 9449639215)
ಶೇ.30-40 ರಷ್ಟು ಅಡಿಕೆ ಕೊಳೆರೋಗದಿಂದ ಹಾನಿಯಾಗಿರುವ ಹಾಗೂ ಶೇ.50 ಕ್ಕಿಂತ ಅಧಿಕ ಅಡಿಕೆ…
ಹಲಸಿನ ಬೇಳೆ ಸೂಪ್ ಗೆ ಬೇಕಾಗುವ ವಸ್ತುಗಳು : ಹಲಸಿನ ಬೇಳೆ, ಉಪ್ಪು…
ಮಗನಿಗೆ ತಂದೆ, ಮಗಳಿಗೆ ತಾಯಿ, ಸಿಬ್ಬಂದಿಗಳಿಗೆ ಸಂಸ್ಥೆಯು - ಕಾಮಧೇನು. ಕಾಮಿಸಿದ, ಇಚ್ಛಿಸಿದ…
ಪ್ರೀತಿ ಎಂದರೆ ಜೀವನದ ಅತ್ಯುತ್ತಮ ಅನುಭವಗಳಲ್ಲಿ ಒಂದು. ಆದರೆ ಎಲ್ಲರಿಗೂ ಪ್ರೀತಿಯಲ್ಲಿ ಒಂದೇ…
ಕಾಸರಗೋಡು ಮೂಲದ ಸ್ವಾಮೀಜಿಯೊಬ್ಬರ ಚಾತುರ್ಮಾಸ್ಯ ಕಾರ್ಯಕ್ರಮದಲ್ಲಿ ಈಚೆಗೆ ನಡೆದ ತಾಳಮದ್ದಳೆ ಸಪ್ತಾಹ ಕಾರ್ಯಕ್ರಮದಲ್ಲಿ…
ನಾಲಿಗೆ ಶುದ್ಧವಾಗಿದ್ದರೆ ಮಾತ್ರ ನಮ್ಮ ವ್ಯಕ್ತಿತ್ವವೂ ಶುದ್ಧವಾಗಿರಲು ಸಾಧ್ಯ; ಆದ್ದರಿಂದ ಕಲುಷಿತಗೊಂಡಿರುವ ನಮ್ಮ…