* ಸ್ಪೆಷಲ್ ಕರೆಸ್ಪಾಂಡೆಂಟ್, ಸುಳ್ಯನ್ಯೂಸ್.ಕಾಂ
ಸುಳ್ಯ: ಎಸ್‍ಸಿಡಿಸಿಸಿ ಬ್ಯಾಂಕ್‍ನ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಸಂಘಗಳ ಪ್ರತಿನಿಧಿಗಳು ಅಡ್ಡ ಮತದಾನ ಮಾಡಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಯ ಸೋಲಿಗೆ ಕಾರಣವಾದ ಹಿನ್ನಲೆಯಲ್ಲಿ ಮತದಾನಕ್ಕೆ ನಿಯೋಜನೆಗೊಂಡ ಎಲ್ಲಾ 17 ಮಂದಿಯೂ ರಾಜಿನಾಮೆ ನೀಡಬೇಕೆಂದು ಗಡುವು ನೀಡಲಾಗಿದ್ದು, ಗಡುವು ಮುಗಿದ ಹಿನ್ನಲೆಯಲ್ಲಿ ರಾಜಿನಾಮೆ ನೀಡದವರ ವಿರುದ್ಧ ಕ್ರಮ ಜರುಗಿಸಲು ಬಿಜೆಪಿ ಮುಂದಾಗಿದೆ.
ಜೂನ್.25 ರೊಳಗೆ ಮತದಾನದಲ್ಲಿ ಭಾಗವಹಿಸಿದ ಎಲ್ಲಾ 17 ಮಂದಿಯೂ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಬಿಜೆಪಿ ಮತ್ತು ಸಂಘ ಪರಿವಾರ ಸೂಚನೆ ನೀಡಿತ್ತು. ಆದರೆ ಬಹುತೇಕ ಮಂದಿ ಇನ್ನೂ ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿಲ್ಲ. ರಾಜಿನಾಮೆ ಸಲ್ಲಿಕೆಗೆ ನೀಡಿದ್ದ ಗಡುವು ಮುಕ್ತಾಯಗೊಂಡ ಹಿನ್ನಲೆಯಲ್ಲಿ ಜೂನ್.30ರೊಳಗೆ ಬಿಜೆಪಿಯ ಕೋರ್ ಕಮಿಟಿ ಸಭೆ ನಡೆಸಿ ರಾಜಿನಾಮೆ ನೀಡದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಸ್ಪಷ್ಟಪಡಿಸಿದ್ದಾರೆ. ಇದರಿಂದ ಈ ಬಾರಿ ಕ್ರಮ ನಿಶ್ಚಿತ ಎಂದೇ ಹೇಳಲಾಗುತಿದೆ. ಯಾವುದೇ ಕಾರಣಕ್ಕೂ ಈ ಪ್ರಕರಣವನ್ನು ಹಾಗೆಯೇ ಬಿಡುವ ಪ್ರಶ್ನಯೇ ಇಲ್ಲ. ಕೆಲವೇ ದಿನದಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಪ್ರಕರಣಕ್ಕೆ ಇತಿಶ್ರೀ ಹಾಡುವುದು ನಿಶ್ಚಿತ ಎಂದು ಎಂದು ವೆಂಕಟ್ ವಳಲಂಬೆ ಹೇಳಿದ್ದಾರೆ.
ವಿಫಲವಾದ ಪತ್ತೆ ಕಾರ್ಯ:
ಕಳೆದ ಮಾರ್ಚ್‍ನಲ್ಲಿ ನಡೆದ ಎಸ್‍ಸಿಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಯಲ್ಲಿ ಬಹುಮತವಿದ್ದರೂ ಏಳು ಮಂದಿ ಅಡ್ಡಮತದಾನ ಮಾಡಿದ ಕಾರಣ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗೆ ಸೋಲಾಗಿತ್ತು. ಇದು ಸುಳ್ಯ ಬಿಜೆಪಿ ಮತ್ತು ಸಂಘ ಪರಿವಾರದಲ್ಲಿ ದೊಡ್ಡ ಕೋಲಾಹಲವೇ ಸೃಷ್ಠಿಸಿತು. ಅಡ್ಡ ಮತದಾನ ಮಾಡಿದವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕೆಂದು ಕಾರ್ಯಕರ್ತರಿಂದ ತೀವ್ರ ಒತ್ತಡ ಉಂಟಾಗಿತ್ತು. ಅಡ್ಡ ಮತದಾನ ಮಾಡಿದವರನ್ನು ಪತ್ತೆ ಹಚ್ಚಲು ಹಲವು ಸುತ್ತಿನ ಮಾತುಕತೆ, ಚರ್ಚೆ, ಪ್ರಸಿದ್ಧ ದೈವಸ್ಥಾನದಲ್ಲಿ ಆಣೆ ಪ್ರಮಾಣ ಸೇರಿದಂತೆ ಎಲ್ಲಾ ಪ್ರಯತ್ನ ನಡೆಸಿದರೂ ಅಡ್ಡ ಮತದಾನ ಮಾಡಿದ ಏಳು ಮಂದಿಯನ್ನು ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ.
15 ಮಂದಿ ದೈವ ಸನ್ನಿಧಿಯಲ್ಲಿ ಪ್ರಮಾಣ ಮಾಡಿದಾಗ ಇನ್ನೇನು ಮಾಡುವುದು ಎಂದು ನೇತೃತ್ವವೇ ದಂಗಾಗಿ ಹೋಗಿತ್ತು. ಇದು ಸಾಕಷ್ಟು ಚರ್ಚೆಗೂ ಗ್ರಾಸವಾಗಿತ್ತು. ಈ ಹಿನ್ನಲೆಯಲ್ಲಿ ಚುನಾವಣೆಯಲ್ಲಿ ಮತದಾರರಾಗಿದ್ದ ಎಲ್ಲಾ 17 ಮಂದಿಯೂ ರಾಜಿನಾಮೆ ನೀಡಬೇಕೆಂದು ಎರಡು ತಿಂಗಳ ಹಿಂದೆಯೇ ಸೂಚನೆ ನೀಡಲಾಗಿತ್ತು. ಆದರೆ ಕೆಲವು ಮಂದಿ ಮಾತ್ರ ರಾಜಿನಾಮೆ ನೀಡಿದ್ದರು. ಬಹುತೇಕ ಮಂದಿ ಸಂಘಪರಿವಾರದ ಸೂಚನೆಗೆ ಕ್ಯಾರೇ ಎನ್ನಲಿಲ್ಲ. ಬಳಿಕ ಲೋಕಸಭೆ ಮತ್ತು ನಗರ ಪಂಚಾಯತ್ ಚುನಾವಣೆ ಬಂದ ಕಾರಣ ಬಿಜೆಪಿಗೆ ಕ್ರಮ ಕೈಗೊಳ್ಳುವುದು ಬಿಸಿ ತುಪ್ಪವಾಗಿ ಪರಿಣಮಿಸಿತು. ಇದೀಗ ಚುನಾವಣೆಯ ಬಳಿಕ ಮತ್ತೆ ರಾಜಿನಾಮೆಗೆ ಗಡುವು ನೀಡಲಾಗಿತ್ತು. ಹಾಗಿದ್ದರೂ ಕೆಲವರು ಮಾತ್ರವೇ ರಾಜಿನಾಮೆ ನೀಡಿದ್ದಾರೆ. ಇನ್ನೂ ಕೆಲವರು ಕೊನೆಗೆ ರಾಜಿನಾಮೆ ನೀಡುವುದಾಗಿ ಹೇಳಿದ್ದಾರೆ.
ಉಚ್ಚಾಟನೆ ಸೇರಿದಂತೆ ಕಠಿಣ ಕ್ರಮ:
ಎರಡೆರಡು ಬಾರಿ ರಾಜಿನಾಮೆ ಕೇಳಿದ್ದರೂ ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರ ಸೂಚನೆಗೆ ಕವಡೆ ಕಾಸಿನ ಕಿಮ್ಮತ್ತನ್ನೂ ನೀಡದ ಕಾರಣ ಚುನಾವಣೆಯಲ್ಲಿ ಪ್ರತಿನಿಧಿಗಳಾಗಿದ್ದವರ ಮೇಲೆ ಪಕ್ಷ ಕಠಿಣ ಕ್ರಮವನ್ನೇ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತಿದೆ. ರಾಜಿನಾಮೆ ನೀಡದಿದ್ದರೆ ಪಕ್ಷದಿಂದ ಮತ್ತು ಸಂಘಟನೆಯಿಂದ ಅಮಾನತು, ಉಚ್ಚಾಟನೆ ಸೇರಿದಂತೆ ಕಠಿಣ ಕ್ರಮವನ್ನೇ ಕೈಗೊಳ್ಳಲಾಗುವುದು ಎಂಬ ಸ್ಪಷ್ಟ ಸಂದೇಶವನ್ನು ಸಂಘ ಪರಿವಾರ ಸಂಘಟನೆಯ ಪ್ರಮುಖರು ನೀಡಿದ್ದಾರೆ ಎಂದು ತಿಳಿದು ಬಂದಿದೆ. ಅಡ್ಡಮತದಾನ ಮಾಡಿ ಪಕ್ಷದ ಅಭ್ಯರ್ಥಿಯ ಸೋಲಿಗೆ ಕಾರಣರಾಗಿರುವುದರ ಜೊತೆಗೆ ಹಲವು ಸುತ್ತಿನ ಮಾತುಕತೆ, ಚರ್ಚೆ ನಡೆಸಿದರೂ ಅಡ್ಡಮತದಾನ ಮಾಡಿದವರು ಒಪ್ಪಿಕೊಳ್ಳಲಿಲ್ಲ. ಹಲವು ಬಾರಿ ರಾಜಿನಾಮೆ ಕೇಳಿದರೂ ರಾಜಿನಾಮೆ ನೀಡಲು ಒಪ್ಪಲಿಲ್ಲ.
ಡಿಸಿಸಿ ಬ್ಯಾಂಕ್ ನಿರ್ದೇಶಕರ ಸ್ಥಾನಕ್ಕೆ ಸೀಟ್ ಸಿಗದ ಆಕ್ರೋಶ, ಅಸಮಾಧಾನಗಳು, ಜಾತಿ ಲೆಕ್ಕಾಚಾರ ಸೇರಿದಂತೆ ಇನ್ನೂ ಹಲವು `ಫ್ಯಾಕ್ಟರ್’ ಗಳು ಚುನಾವಣಾ ಸೋಲಿನಲ್ಲಿ ಕೆಲಸ ಮಾಡಿದೆ ಎಂಬ ಸಂದೇಹ ಆರಂಭದಿಂದಲೂ ಕೇಳಿ ಬಂದಿತ್ತು. ಇದು ಸಂಘಪರಿವಾರಕ್ಕೂ ತೀವ್ರ ಇರಿಸು ಮುರಿಸು ತಂದಿತ್ತು. ಆದುದರಿಂದ ಈ ರೀತಿಯ ಬೆಳವಣಿಗೆ ಪಕ್ಷದಲ್ಲಿ ಮುಂದುವರಿಯದಂತೆ ತಡೆಯಲು ಕಠಿಣ ತೆಗೆದುಕೊಳ್ಳಲೇ ಬೇಕಾದ ಒತ್ತಡ ಒಂದೆಡೆಯಾದರೆ ಮುಂದೆ ಬರುವ ಗ್ರಾಮ ಪಂಚಾಯತ್ ಮತ್ತು ಸಹಕಾರಿ ಸಂಘಗಳ ಚುನಾವಣೆಗೆ ಮತದಾರರ ಬಳಿಗೆ ಹೋಗಿ ಮತ ಕೇಳಲು ಕ್ರಮ ತೆಗೆದುಕೊಳ್ಳಲೇ ಬೇಕಾದ ಅನಿವಾರ್ಯತೆ ಪಕ್ಷಕ್ಕಿದೆ ಎಂದು ವಿಶ್ಲೇಷಿಸಲಾಗುತಿದೆ. ಜಾತಿರಹಿತವಾಗಿ, ಹಿಂದುತ್ವದ ಆಧಾರದಲ್ಲಿಯೇ ಸುಳ್ಯದಲ್ಲಿ ಬಿಜೆಪಿ ಬೆಳೆದಿದೆ. ಎಲ್.ಕೆ.ಅಡ್ವಾಣಿ ಅವರಂತಹ ನಾಯಕರೇ ಸುಳ್ಯ ಬಿಜೆಪಿ ಹೆಬ್ಬಾಗಿಲು ಎಂದು ಬಣ್ಣಿಸಿದ್ದಾರೆ. ಅಂತಹ ಕ್ಷೇತ್ರದಲ್ಲಿ ಈಗ ಜಾತಿ ಲೆಕ್ಕಾಚಾರ, ಹಿಂದುತ್ವದ ಮೇಲಿನ ನಂಬಿಕೆಗೆ ಹೊಡೆತ ಕಂಡುಬಂದಿರುವುದು ರಾಜ್ಯಮಟ್ಟದಲ್ಲಿಯೇ ಸಂಘಪರಿವಾರದಲ್ಲಿ ಈಗ ಚರ್ಚೆಯಾಗುತ್ತಿದೆ.
ಪ್ರಕರಣದ ಹಿನ್ನೋಟ:
ಸುಳ್ಯ ತಾಲೂಕಿನನಿಂದ ಸ್ಪರ್ಧಿಸಿದ್ದ ಸಹಕಾರ ಭಾರತಿ ಅಭ್ಯರ್ಥಿಯ ಸೋಲಿಗೆ ಕಾರಣವಾಗಿದ್ದ ಅಡ್ಡ ಮತದಾನ ರಾಜಕೀಯ ವಲಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಠಿಸಿ ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ಎಸ್‍ಸಿಡಿಸಿಸಿ ಬ್ಯಾಂಕ್‍ನ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿಯ ಅಭ್ಯರ್ಥಿಯಾಗಿ ವೆಂಕಟ್ ದಂಬೆಕೋಡಿ ಮತ್ತು ಎಂ.ಎನ್.ರಾಜೇಂದ್ರಕುಮಾರ್ ನೇತೃತ್ವದ ಸಹಕಾರ ಬಳಗದ ಅಭ್ಯರ್ಥಿಯಾಗಿ ಕೆ.ಎಸ್.ದೇವರಾಜ್ ಸ್ಪರ್ಧಿಸಿದ್ದರು. ಸುಳ್ಯ ತಾಲೂಕಿನ 23 ಸಹಕಾರ ಸಂಘಗಳ ಪ್ರತಿನಿಧಿಗಳು ಮತದಾರರಾಗಿದ್ದರು. ಇದರಲ್ಲಿ 17 ಸಂಘಗಳು ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಕೈಯಲ್ಲಿ ಮತ್ತು ಆರು ಸಂಘಗಳು ಕಾಂಗ್ರೆಸ್ ಕೈಯಲ್ಲಿತ್ತು. ಆದುದರಿಂದ ಚುನಾವಣೆಯಲ್ಲಿ ವೆಂಕಟ್ ದಂಬೆಕೋಡಿ ಗೆಲುವು ನಿಶ್ಚಿತ ಎಂದು ಹೇಳಲಾಗಿತ್ತು. ಆದರೆ ಚುನಾವಣಾ ಫಲಿತಾಂಶ ಬಂದಾಗ 13 ಮತ ಪಡೆದ ಕೆ.ಎಸ್.ದೇವರಾಜ್ ಗೆಲುವು ಸಾಧಿಸಿ ನಿರ್ದೇಶಕರಾಗಿ ಆಯ್ಕೆಯಾದರು. ಏಳು ಮಂದಿ ಬಿಜೆಪಿ ಬೆಂಬಲಿತರು ಅಡ್ಡಮತದಾನ ಮಾಡಿದ ಕಾರಣ ಕೇವಲ 10 ಮತ ಪಡೆದ ಸಹಕಾರ ಭಾರತಿ ಅಭ್ಯರ್ಥಿಗೆ ಸೋಲಾಯಿತು. ಇದು ಸುಳ್ಯದ ಬಿಜೆಪಿ ನಾಯಕರಲ್ಲಿ ಮತ್ತು ಕಾರ್ಯಕರ್ತರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಅಡ್ಡಮತದಾನ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ನಿರಂತರ ಕೇಳಿ ಬಂದಿತ್ತು. ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯ ಇತರ ಕಡೆಗಳಲ್ಲೂ ಇದೇ ಚುನಾವಣೆಯಲ್ಲಿ ಅಡ್ಡಮತದಾನ ಆಗಿದ್ದರೂ ಅಲ್ಲಿ ಗೆದ್ದವರು ಬಿಜೆಪಿ, ಸಹಕಾರ ಭಾರತಿ ಬಂಡಾಯ ಅಭ್ಯರ್ಥಿಗಳಾದರೆ ಸುಳ್ಯದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗೆಲುವಾಗಿರುವುದು ಸಂಘಟನೆಯ ದುರ್ಬಲತೆಯನ್ನು ತೋರಿಸಿದೆ. ಹೀಗಾಗಿ ಈಗ ಕ್ರಮ ನಡೆಸಲೇಬೇಕಾದ ಅನಿವಾರ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಅಡ್ಡಮತದಾನದ ಪ್ರಕರಣದ ಬಳಿಕ ರಾಜಿನಾಮೆ ಸಲ್ಲಿಕೆಗೆ ನೀಡಿದ್ದ ಗಡುವು ಮುಕ್ತಾಯಗೊಂಡ ಹಿನ್ನಲೆಯಲ್ಲಿ ಜೂನ್.30ರೊಳಗೆ ಬಿಜೆಪಿಯ ಕೋರ್ ಕಮಿಟಿ ಸಭೆ ನಡೆಸಿ ಕೆಲವೇ ದಿನದಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಪ್ರಕರಣಕ್ಕೆ ಇತಿಶ್ರೀ ಹಾಡಲಾಗುವುದು ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಹೇಳಿದ್ದಾರೆ.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…