ಸುಳ್ಯ: ಅರೆಭಾಷಾ ಸಾಹಿತ್ಯ, ಸಂಸ್ಕೃತಿ, ಆಚಾರ ವಿಚಾರ ಪರಂಪರೆಗಳ ಕುರಿತು ಯುವ ಸಮೂಹದಲ್ಲಿ ಅರಿವು ಮೂಡಿಸಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಇದೇ ಫೆಬ್ರವರಿ ತಿಂಗಳಿನಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಅಕಾಡೆಮಿಯ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತರೆ ಭಾಷಾ ಅಕಾಡೆಮಿಗಳು ರಂಗ ಚಟುವಟಿಕೆಗಳಿಗೆ ಹೆಚ್ಚಿನ ಒತ್ತನ್ನು ನೀಡುತ್ತಿದ್ದು, ಅದರಂತೆಯೇ ಇದೀಗ ಅರೆಭಾಷಾ ಅಕಾಡೆಮಿ ರಂಗ ತರಬೇತಿ ಶಿಬಿರವನ್ನು ಸುಳ್ಯದ ರಂಗಮನೆಯಲ್ಲಿ ಆಯೋಜಿಸಿದೆ. ರಾಜ್ಯದ ವಿವಿಧೆಡೆಗಳ 16 ಶಿಬಿರಾರ್ಥಿಗಳು ಪಾಲ್ಗೊಂಡಿದ್ದು, ಒಂದು ತಿಂಗಳ ಅವಧಿಯ ಶಿಬಿರ ಫೆ.3 ರಿಂದ ಆರಂಭಗೊಂಡಿದೆ. ವಿದ್ಯಾರ್ಥಿಗಳನ್ನು ಕೇಂದ್ರವಾಗಿರಿಸಿಕೊಂಡು ಮೇ ತಿಂಗಳಿನಲ್ಲಿ ಕೊಡಗಿನಲ್ಲಿ ರಂಗ ತರಬೇತಿ ಕಾರ್ಯಕ್ರಮ ನಡೆಸಲು ಉದ್ದೇಶಿಸಿರುವುದಾಗಿ ತಿಳಿಸಿದರು.
ಸಾಹಿತ್ಯ ಸಂಘ ರಚನೆ: ಅಕಾಡೆಮಿಯು ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯದ ಬೆಳವಣಿಗೆಗೆ ಪೂರಕವಾದ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸುತ್ತ ಬರುತ್ತಿದೆ. ಇದರ ಭಾಗವಾಗಿ ಫೆ.6 ರಂದು ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ಮಹಾ ವಿದ್ಯಾಲಯದಲ್ಲಿ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಸಂಘವನ್ನು ರಚಿಸಲಾಗುತ್ತಿದೆ. ಹಿರಿಯರಾದ ಕುಂಞಿಟಿ ಶಿವರಾಮ ಗೌಡ ಅವರು ಸಂಘವನ್ನು ಉದ್ಘಾಟಿಸಲಿದ್ದಾರೆ.
ಫೆ.8 ರಂದು ಮಡಿಕೇರಿ ತಾಲ್ಲೂಕಿನ ಅವಂದೂರು ಗ್ರಾಮದಲ್ಲಿ ಅರೆಭಾಷೆ ಸಂಸ್ಕೃತಿಲಿ ಕೆಡ್ಡಾಸ ಹಬ್ಬ ಎನ್ನುವ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಅದೇ ರೀತಿ ಫೆ.16 ರಂದು ಅರೆಭಾಷೆ ಸಿರಿ ಸಂಸ್ಕೃತಿ ಮತ್ತು ಕೆಡ್ಡಸ ಗೌಜಿ ಕಾರ್ಯಕ್ರಮವು ಚೆಂಬು ಗ್ರಾಮದಲ್ಲಿ ಶ್ರೀ ಭಗವನ್ ಸಂಘ ಹಾಗೂ ಸ್ವಾಮಿ ವಿವೇಕಾನಂದ ಯುವಕ ಮಂಡಲದ ಸಹಯೋಗದೊಂದಿಗೆ ನಡೆಯಲಿದ್ದು, ಕೊಡಗು ಜಿ.ಪಂ. ಅಧ್ಯಕ್ಷ ಬಿ.ಎ.ಹರೀಶ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಡಿಕೇರಿ ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಸದಸ್ಯರಾದ ನಾಗೇಶ್ ಕುಂದಲ್ಪಡಿ ಮತ್ತಿತರ ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಅಂದು ಸಂಜೆ 4 ಗಂಟೆಗೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹೆಸರಾಂತ ಯಕ್ಷಗಾನ ಕಲಾವಿದ ಜಬ್ಬಾರ್ ಸಮೋ ಸಂಪಾಜೆ ಇವರ ನೇತೃತ್ವದಲ್ಲಿ ಶರಸೇತು ಅರೆಭಾಷೆ ಯಕ್ಷಗಾನ ತಾಳಮದ್ದಳೆ ಪ್ರದರ್ಶನಗೊಳ್ಳಲಿದೆ ಎಂದು ಲಕ್ಷ್ಮೀನಾರಯಣ ಕಜೆಗದ್ದೆ ಮಾಹಿತಿ ನೀಡಿದರು.
ಅರೆಭಾಷೆ ಸಾಹಿತ್ಯ ಸಮ್ಮೇಳನ : ಸೋಮವಾರಪೇಟೆ ತಾಲೂಕಿನ ಆಲೂರು ಸಿದ್ದಪುರ ಗೌಡ ಸಮಾಜದ ಸಹಯೋಗದಲ್ಲಿ ಸಂಗಯ್ಯನಪುರ ಗ್ರಾಮದಲ್ಲಿ ಫೆ.23 ರಂದು ಅರೆಭಾಷೆ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ. ಸಮ್ಮೇಳನದ ಅಧ್ಯಕ್ಷರಾಗಿ ಅರೆಭಾಷೆ ಕವಿ, ಅಕಾಡೆಮಿ ಗೌರವ ಪುರಸ್ಕೃತರಾದ ಹೊದ್ದೆಟ್ಟಿ ಭವಾನಿ ಶಂಕರ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಲಕ್ಷ್ಮೀನಾರಾಯಣ ಕಜೆಗದ್ದೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ಸದಸ್ಯರುಗಳಾದ ಬೈತಡ್ಕ ಜಾನಕಿ ಬೆಳ್ಯಪ್ಪ, ಧನಂಜಯ್ ಅಗೋಳಿಕಜೆ, ಚೊಕ್ಕಾಡಿ ಪ್ರೇಮ ರಾಘವಯ್ಯ ಹಾಗೂ ಸ್ಮಿತಾ ಅಮೃತರಾಜ್ ಉಪಸ್ಥಿತರಿದ್ದರು.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…