ಸುಳ್ಯ: ಶಾಸಕ ಅಂಗಾರ ಅವರಿಗೆ ಸಚಿವ ಸ್ಥಾನ ತಪ್ಪಿ ಹೋಗಿರುವುದಕ್ಕೆ ಮುನಿಸಿಕೊಂಡು ಸುಳ್ಯ ಬಿಜೆಪಿ ಅಸಹಕಾರ ಘೋಷಿಸಿಕೊಂಡು ಇನ್ನೂ ಒಂದು ವಾರ ಪೂರ್ತಿಯಾಗಿಲ್ಲ.ಇದೀಗ ಪಕ್ಷದ ರಾಜ್ಯಾಧ್ಯಕ್ಷರ ಪದಗ್ರಹಣ ಸಮಾರಂಭದ ಸುಳ್ಯದ ಬಿಜೆಪಿ ಮುಖಂಡರೇ ಭಾಗವಹಿಸುವ ಮೂಲಕ “ಸಹಕಾರ” ಚಳುವಳಿ ಮಾಡಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗುತ್ತಿದೆ.
ವಾರದ ಹಿಂದೆ ಶಾಸಕ ಅಂಗಾರ ಅವರಿಗೆ ಸಚಿವ ಸ್ಥಾನ ತಪ್ಪಿ ಹೋಗಿರುವುದಕ್ಕೆ ಮುನಿಸಿಕೊಂಡು ಸುಳ್ಯ ಬಿಜೆಪಿ ಅಸಹಕಾರ ಘೋಷಿಸಿದ ನಂತರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನಳಿನ್ ಕುಮಾರ್ ಹೆಸರು ಘೋಷಣೆಯಾಯಿತು. ಅದಾದ ಬಳಿಕವೂ ತಾಲೂಕಿನ “ಅಸಹಕಾರ”ಕ್ಕೆ ಬೆದರಿ ಶಾಸಕರಿಗೆ ಸಚಿವ ಸ್ಥಾನ ನೀಡುತ್ತೇವೆ ಎಂದು ಯಾವೊಬ್ಬ ರಾಜ್ಯ ನಾಯಕನೂ ಅಧಿಕೃತವಾಗಿ ಹೇಳಿಲ್ಲ. ಇಂದಿನ ರಾಜ್ಯ ರಾಜಕೀಯ ಬೆಳವಣಿಗೆಯ ಹಿನ್ನಲೆಯಲ್ಲಿ ಸುಳ್ಯ ಶಾಸಕರಿಗೆ ಸದ್ಯದಲ್ಲಿ ಸಚಿವ ಸ್ಥಾನ ಸಿಗುವ ಯಾವುದೇ ಲಕ್ಷಣಗಳೂ ಕಾಣುತ್ತಿಲ್ಲ. ಆದರೆ ಸುಳ್ಯ ಬಿಜೆಪಿ ಮುಖಂಡರು ಘೋಷಿಸಿದ ಅಸಹಕಾರ ಚಳವಳಿಯನ್ನು ಅವರೇ ಮರೆತಂತಿದೆ. ಶಾಸಕ ಅಂಗಾರರಿಗೆ ಸಚಿವ ಸ್ಥಾನ ಸಿಗದೆ ಜಿಲ್ಲೆಯ, ರಾಜ್ಯದ ನೇತೃತ್ವದ ಜೊತೆ ಯಾವುದೇ ಸಹಕಾರ ಇಲ್ಲ. ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ. ಸಚಿವ ಸ್ಥಾನ ಕೊಡದೆ ಯಾವುದೇ ನಾಯಕರು ಈ ಕಡೆ ಬರುವುದೂ ಬೇಡ. ಪಕ್ಷದ ಎಲ್ಲಾ ಚಟುವಟಿಕೆಗಳನ್ನು ಸ್ಥಗಿತ ಮಾಡಲಾಗಿದೆ….. ಎಂದು ಸುಳ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಘಂಟಾಘೋಷವಾಗಿ ಹೇಳಿದ್ದೂ ಆಗಿದೆ. ಅದಾದ ಬಳಿಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಟಂದೂರು ಅವರೂ ಆಗಮಿಸಿ ಮಾತನಾಡಿದ್ದೂ ಆಗಿದೆ. ಆದರೂ “ಬಿಸಿ” ಶಮನ ಆಗಿರಲಿಲ್ಲ.
ಹೀಗೆ ಹೇಳಿ ವಾರ ಆಗುವ ಮುನ್ನವೇ ಬೆಂಗಳೂರಿನಲ್ಲಿ ನಡೆದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಪದಗ್ರಹಣ ಸಮಾರಂಭಕ್ಕೆ ಸುಳ್ಯದ ಬಿಜೆಪಿ ನಾಯಕರ ದಂಡೇ ಭಾಗವಹಿಸಿದೆ. ಅಸಹಕಾರ ಚಳವಳಿಯನ್ನು ಮರೆತರೇ ಎಂಬ ಪ್ರಶ್ನೆಯನ್ನು ಬಿಜೆಪಿ ಕಾರ್ಯಕರ್ತರೇ ಕೇಳುತ್ತಿದ್ದಾರೆ. ರಾಜ್ಯಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ನಾಯಕರು, ಕಾರ್ಯಕರ್ತರು ಭಾಗವಹಿಸಬೇಕಾದ್ದೆ. ಆದರೆ ಇಂತಹ ಸಂದರ್ಭಗಳಲ್ಲಿ ಭಾಗವಹಿಸುವುದರಲ್ಲಿಯೂ ಒಂದಿಷ್ಟು ಅಸಹಕಾರವನ್ನು ತೋರಿಸುತ್ತಿದ್ದರೆ ನಮ್ಮ ಭಾವನೆ ನಾಯಕರಿಗೆ ಸರಿಯಾಗಿ ಮುಟ್ಟಿ, ನಮ್ಮ ಬೇಡಿಕೆಗಳಿಗೂ ಬೆಲೆ ಬರುತ್ತಿತ್ತು ಎಂಬ ಮಾತನ್ನು ಸುಳ್ಯ ಬಿಜೆಪಿಯ ಕೆಲವು ಮುಖಂಡರು, ಕಾರ್ಯಕರ್ತರು ವ್ಯಕ್ತಪಡಿಸುತ್ತಿದ್ದಾರೆ.
ಸರಕಾರ ಇರುವ ಸಂದರ್ಭದಲ್ಲಿ ಮುನಿಸಿ ಕೂತರೆ ತಮ್ಮನ್ನು ರಾಜ್ಯ ನಾಯಕರು ಕಡೆಗಣಿಸಿದರೆ, ಮುಂದೆ ಬರಬಹುದಾದ ಸ್ಥಾನ ಮಾನಗಳು ತಪ್ಪಿ ಹೋಗಬಹುದೇ ಎಂಬ ಕೆಲವು ನಾಯಕರ ಆತಂಕವೂ ಅಸಹಕಾರವನ್ನು ಮರೆಯುವಲ್ಲಿ ಕೆಲಸ ಮಾಡಿದೆ ಎಂಬ ಮಾತು ಬಿಜೆಪಿ ವಲಯದಲ್ಲಿ ಹರಿದಾಡುತ್ತಿದೆ.ಸುಳ್ಯದ ಹಲವು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರೆ, ಅಸಹಕಾರ ಚಳವಳಿ ಇದೆಯಲ್ಲಾ ಎಂದು ತಾಲೂಕಿನ ಜನಪ್ರತಿನಿಧಿಗಳು, ಮಾಜಿ ಜನಪ್ರತಿನಿಧಿಗಳು, ಜವಾಬ್ದಾರಿ ಇರುವ ಪಕ್ಷದ ಪ್ರಮುಖರು ಕಾರ್ಯಕ್ರಮಕ್ಕೆ ಹೋಗದೆ ಮನೆಯಲ್ಲಿಯೇ ಕುಳಿತವರೂ ಹಲವರು ಇದ್ದಾರೆ. ‘ಅಸಹಕಾರ ಚಳವಳಿ ಇದೆ, ಆದರೆ ರಾಜ್ಯಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮಕ್ಕೆ ನಮ್ಮ ಸಹಕಾರವೂ ಇದೆ‘ ಎಂದು ಬಿಜೆಪಿ ಮುಖಂಡರೋರ್ವರ ಪ್ರತಿಕ್ರಿಯೆ ಹೀಗಿತ್ತು.
ಪಕ್ಷದೊಂದಿಗೆ ವಾರದಲ್ಲಿ ಸಹಕಾರದ ಪತಾಕೆ ಹಾರಿಸಿದ ಬಿಜೆಪಿಯ ಅಸಹಕಾರ ಚಳವಳಿ ಯಾರೊಂದಿಗೆ ಎಂಬ ಜಿಜ್ಞಾಸೆ ಇದೆ. ಬಿಜೆಪಿ ಜನಪ್ರತಿನಿಧಿಗಳು, ಗ್ರಾಪಂ ಸದಸ್ಯರುಗಳು ಸೇರಿದಂತೆ ಹಲವು ಮಂದಿ ರಾಜಿನಾಮೆ ನೀಡಿ ಕಚೇರಿಗೆ ತೆರಳುತ್ತಿಲ್ಲ. ಹಾಗಾದರೆ ಕ್ಷೇತ್ರದ ಜನರೊಂದಿಗೆ ಮಾತ್ರ ಅಸಹಕಾರವೇ ಎಂಬ ಪ್ರಶ್ನೆ ಉಳಿದಿದೆ. ಜನಪ್ರತಿನಿಧಿಗಳ, ರಾಷ್ಟ್ರೀಯ ವಿಚಾರ ಹೊಂದಿರುವ ಹಾಗೂ ಶಿಸ್ತಿಗೆ ಹೆಸರಾದ ಬಿಜೆಪಿ ಪಕ್ಷದ ಪ್ರಮುಖರ ಸಭೆ ನಡೆಸಿ ತೆಗೆದುಕೊಂಡ ನಿರ್ಧಾರ ಅಷ್ಟು ಬೇಗ ಹೇಗೆ ಬದಲಾಯಿತು ಎಂದು ಹಲವರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.
ಬಿಜೆಪಿ ನೇತೃತ್ವದ ಈ ನಿರ್ಧಾರದ ವಿರುದ್ಧ ಹಲವು ಮಂದಿ ಸಾಮಾಜಿಕ ಜಾಲತಾಣಗಳ ಮೂಲಕವೂ ಆಕ್ರೋಶ, ಅಸಹಿಷ್ಣುತೆ ವ್ಯಕ್ತಪಡಿಸುತ್ತಿದ್ದಾರೆ. ಏಳು ವರ್ಷದ ಹಿಂದೆ ಬಿಜೆಪಿ ಇದೇ ರೀತಿಯ ಒಂದು ಅಸಹಕಾರ ಚಳವಳಿ ನಡೆಸಿತ್ತು. ಒಂದು ತಿಂಗಳ ಕಾಲ ಬಿಜೆಪಿ ಕಚೇರಿಯೇ ತೆರೆದಿರಲಿಲ್ಲ. ಅಂದಿನ ನೇತೃತ್ವ ತಳೆದಿದ್ದ ಕಠಿಣ ನಿಲುವು ಪಕ್ಷದ ರಾಜ್ಯ ನಾಯಕರಿಗೆ ಒಂದಿಷ್ಟು ಬಿಸಿ ಮುಟ್ಟಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ಇದೀಗ ಘೋಷಿಸಿರುವ ಅಸಹಕಾರ ಚಳವಳಿ ಯಾವ ರೀತಿಯ ಫಲಿತಾಂಶ ನೀಡಲಿದೆ ಎಂಬ ಜಿಜ್ಞಾಸೆ ಮಾತ್ರ ಉಳಿದಿದೆ.
ಈ ಹಿಂದೆ ಡಿಸಿಸಿ ಬ್ಯಾಂಕ್ ಅಡ್ಡಮತದಾನ ಪ್ರಕರಣದಲ್ಲೂ ಸುಳ್ಯದ ಬಿಜೆಪಿ, ಸಂಘಪರಿವಾರದ ನೇತೃತ್ವವೂ ಇದೇ ಮಾದರಿಯಲ್ಲಿ ನಡೆದುಕೊಂಡಿತ್ತು ಎಂದೂ ಈಗ ಚರ್ಚೆ ಆರಂಭವಾಗಿದೆ. ಅಡ್ಡಮತದಾನ ಪ್ರಕರಣದಲ್ಲಿ ರಾಜೀನಾಮೆ, ಸಾಮೂಹಿಕ ರಾಜೀನಾಮೆ, ಕಾನತ್ತೂರಿನಲ್ಲಿ ಪ್ರಮಾಣ ಇತ್ಯಾದಿಗಳನ್ನು ನಡೆಸಿದರೂ ಅಂತಿಮ ರೂಪ ಇಂದಿಗೂ ಪಡೆಯಲಿಲ್ಲ. ಇಡೀ ಜಿಲ್ಲೆಯಲ್ಲಿ ಸಹಕಾರ ಭಾರತಿ ಅಡ್ಡಮತದಾನಕ್ಕೆ ಸಂಬಂಧಿಸಿದಂತೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಸುಳ್ಯದಲ್ಲೂ ಡಿಸಿಸಿ ಬ್ಯಾಂಕ್ ಮತದಾನದಲ್ಲಿ ಭಾಗವಹಿಸಿದ ಎಲ್ಲರಿಗೂ ಒಂದೇ ರೀತಿಯ ಕ್ರಮಗಳು ನಡೆಯಲಿಲ್ಲ. ಪ್ರಾಥಮಿಕ ಸಹಕಾರಿ ಸಂಘದ ನಿರ್ದೇಶಕ- ಅಧ್ಯಕ್ಷರಿಗೆ ಮಾತ್ರವೇ ಕ್ರಮಗಳು ನಡೆಯುತ್ತಿವೆ ….. ಹೀಗೇ ಸುಳ್ಯದ ಬಿಜೆಪಿ ಈಗ ಸಾಮಾಜಿಕ ಜಾಲತಾಣಗಳಲ್ಲಿ, ಬಿಜೆಪಿ ಕಾರ್ಯಕರ್ತರ ನಡುವೆ ಚರ್ಚೆಯ ಕೇಂದ್ರವಾಗಿದೆ. ತಾತ್ವಿಕವಾದ, ರಾಷ್ಟ್ರೀಯ ವಿಚಾರದ ಅಡಿಯಲ್ಲಿರುವ ಸಂಘಪರಿವಾರದ ಅಂಗಸಂಸ್ಥೆಗಳೇ ಹೀಗೇ ನಡೆದರೆ ವಿಶ್ವಾಸದ ಮೇಲೆ ಪ್ರಶ್ನೆಗಳು ಬರುತ್ತವೆ ಎಂದು ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.
ಮಣ್ಣಿನಲ್ಲಿ ಬಿದ್ದ ಬೀಜವು ಜೀವಂತಿಕೆಯಿಂದ ತನ್ನ ಬೇರುಗಳನ್ನು ಸಿಕ್ಕಿದ ಬಿರುಕುಗಳಲ್ಲಿ ಹಬ್ಬಿಸುತ್ತ ತೆವಳುತ್ತ…
ಮುಂದಿನ ಆರ್ಥಿಕ ವರ್ಷದಿಂದ ರಾಜ್ಯದ ಸಾವಯವ ಉತ್ಪನ್ನಗಳ ಮಾರಾಟಕ್ಕೆ ಎಪಿಎಂಸಿಗಳಲ್ಲಿ ಮಾರುಕಟ್ಟೆ ವ್ಯವಸ್ಥೆ…
ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ಅಧ್ಯಯನ ಮಾಡಲು ಶ್ರೀಲಂಕಾದಿಂದ 38 ಮಂದಿ “ಲಂಕಾ…
ಬದಲಾದ ಕಾಲದಲ್ಲಿ ನಾವು ಇಂತಹ ಪರಿಕರಕೊಳ್ಳುವ ಮೊದಲು ನಮಗೆಷ್ಟು ಇದು ಪ್ರಯೋಜನಕಾರಿ ಎಂದು…
ಐತಿಹಾಸಿಕ ಕುಂಭಮೇಳ ನಡೆಯುತ್ತಿರುವ ಪ್ರಯಾಗ್ ರಾಜ್ ನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧ್ಯಕ್ಷತೆಯಲ್ಲಿ …
ರಾಸಾಯನಿಕಗಳನ್ನು ಹೊಂದಿರುವ ಗೊಬ್ಬರದ ಅತಿಯಾದ ಬಳಕೆಯಿಂದಾಗಿ ಭೂಮಿಯಲ್ಲಿ ಎರೆಹುಳು ಸೇರಿದಂತೆ ಎಲ್ಲ ಜೀವಿಗಳು…