ಇದುವರೆಗೆ ಮಳೆಯ ಕೊರತೆ ಇತ್ತು. ಈಗ ಆಶ್ಲೇಷ ನಕ್ಷತ್ರದಲ್ಲಿ ಭರ್ಜರಿ ಮಳೆಯಾಗುತ್ತಿದೆ. ಈ ವರ್ಷ ಮೊದಲ ಬಾರಿಗೆ ಹೊಳೆ, ನದಿಗಳಲ್ಲಿ ನೀರು ತುಂಬಿ ಹರಿದಿದೆ. ಈಗ ಯಬೋ… ಮಳೆಯೇ….! ಅಂತ ಜನರು ಹೇಳಲು ಶುರು ಮಾಡಿದ್ದಾರೆ. ನಿನ್ನೆಯವರೆಗೆ “ಹೊಳೆಯ ಕಸವೂ ತೊಳೆದು ಹೋಗಿಲ್ಲ” ಎನ್ನುತ್ತಿದ್ದವರು ಎಂತಾ ಮಳೆ ಮಾರ್ರೆ ಅಂತ ಹೇಳಲು ಶುರು ಮಾಡಿದ್ದಾರೆ. ಪುತ್ತೂರು ಸೇರಿದಂತೆ ಕೆಲವು ಕಡೆಗಳಲ್ಲಿ ತಗ್ಗು ಪ್ರದೇಶಗಳಿಗೆ ನೀರು ಹರಿದಿದೆ. ಭಾಗಮಂಡಲದ ಸುತ್ತಮುತ್ತಲೂ ಉತ್ತಮ ಮಳೆಯಾಗುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸೋಮವಾರದಿಂದ ಉತ್ತಮ ಮಳೆಯಾಗುತ್ತಿದೆ. ಈ ವರ್ಷ ಮೊದಲ ಬಾರಿ ಇಷ್ಟೊಂದು ಪ್ರಮಾಣದಲ್ಲಿ ಮಳೆ ಸುರಿದಿದೆ. ಇದುವರೆಗೆ ಮಳೆ ಇಲ್ಲ, ಮಳೆ ಕಡಿಮೆ ಎನ್ನುತ್ತಿದ್ದವರು ಈಗ ಎಂತಾ ಮಳೆ ಮಾರ್ರೆ…! ವಾ ಬರ್ಸಯೇ…! ಅಂತ ಹೇಳಲು ಶುರು ಮಾಡಿದ್ದಾರೆ. ಹವಾಮಾನ ಇಲಾಖೆ ಪ್ರಕಾರ ಇನ್ನೂ ಎರಡು ದಿನಗಳ ಕಾಲ ಇದೇ ಪ್ರಮಾಣದಲ್ಲಿ ಮಳೆ ಸುರಿಯುತ್ತದೆ.
ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಮುಂಗಾರು ಚುರುಕುಗೊಂಡಿದ್ದು, ಕಾವೇರಿಯ ಉಗಮಸ್ಥಾನ ತಲಕಾವೇರಿ, ಭಾಗಮಂಡಲ ಸುತ್ತಲಮುತ್ತಲ ಪ್ರದೇಶದಲ್ಲಿ ಆಶ್ಲೇಷ ಮಳೆ ರೈತಾಪಿ ವರ್ಗದಲ್ಲಿ ಆಹ್ಲಾದ ಮೂಡಿಸಿದೆ. ಕಾವೇರಿ, ಕನ್ನಿಕೆ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ನಾಪೋಕ್ಲು-ಭಾಗಮಂಡಲ ರಸ್ತೆಯ ಮೇಲೆ ನೀರು ಹರಿಯಲಾರಂಭಿಸಿದೆ. ಮಳೆ ಇದೇ ರೀತಿ ಮುಂದುವರಿದಲ್ಲಿ ಭಾಗಮಂಡಲದ ಶ್ರೀ ಭಗಂಡೇಶ್ವರ ಕ್ಷೇತ್ರ ಜಲಾವೃತಗೊಳ್ಳುವ ಸಾಧ್ಯತೆ ಇದೆ. ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿ.ಪಂ.ಸಿಇಒ ಕೆ.ಲಕ್ಷ್ಮೀಪ್ರಿಯಾ ಅವರು ಭಾಗಮಂಡಲಕ್ಕೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿಯನ್ನು ಅವಲೋಕಿಸಿದರು. ರಕ್ಷಣಾ ತಂಡಗಳು ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳನ್ನು ಪರಿಶೀಲಿಸಿದರು. ಬಳಿಕ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ಭಾಗಮಂಡಲ ದೇವಾಲಯ ವ್ಯವಸ್ಥಾಪನಾ ಸಮಿತಿ ಸಭೆ ನಡೆಸಿದರು.
ಅದರಲ್ಲೂ ದಕ್ಷಿಣ ಕೊಡಗಿನಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಪರಿಣಾಮವಾಗಿ ವೀರಾಜಪೇಟೆಯಿಂದ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಅಂತರರಾಜ್ಯ ಹೆದ್ದಾರಿಯ ಮಾಕುಟ್ಟ ಬಳಿ ರಸ್ತೆ ಕುಸಿದಿದ್ದು, ಈ ಮಾರ್ಗದಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಕಳೆದ ಸಾಲಿನಲ್ಲೂ ಮಾಕುಟ್ಟ ರಸ್ತೆಯಲ್ಲೇ ಪ್ರಥಮ ಭೂಕುಸಿತವಾಗಿದ್ದು, ಅದಾದ ಬಳಿಕ ಜಿಲ್ಲೆಯ ವಿವಿಧೆಡೆಗಳಲ್ಲಿ ಭೂಕುಸಿತ, ಜಲ ಪ್ರಳಯ ಸಂಭವಿಸಿದ್ದರಿಂದ ಕೊಡಗಿನ ಜನತೆ ಇದೀಗ ಆತಂಕಕ್ಕೆ ಒಳಗಾಗಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಆ.5ರಿಂದ 7ರ ಬೆಳಗಿನವರೆಗೆ 115.6ಮಿ.ಮೀ.ನಿಂದ 204.4.ಮಿ.ಮೀ.ನಷ್ಟು ಮಳೆಯಾಗಲಿರುವುದಾಗಿ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಆ ಹಿನ್ನೆಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮತ್ತೊಂದೆಡೆ ಆ.7ರಿಂದ 9ರ ಬೆಳಗಿನವರೆಗೆ ಜಿಲ್ಲೆಯಲ್ಲಿ 204.4ಮಿ.ಮೀ.ಗಿಂತಲೂ ಅಧಿಕ ಮಳೆ ಬೀಳುವ ಸಾಧ್ಯತೆ ಇರುವುದರಿಂದ ರೆಡ್ ಅಲರ್ಟ್ ಘೋಷಿಸಲಾಗಿದ್ದು, 9ರ ಬೆಳಗಿನಿಂದ ಆ.10ರ ಬೆಳಗಿನವರೆಗೆ ಮತ್ತೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈ ಅವಧಿಯಲ್ಲಿ ಸಾರ್ವಜನಿಕರು ಹಾಗೂ ಪ್ರವಾಸಿಗರು ಎಚ್ಚರಿಕೆಯಿಂದ ಇರುವಂತೆ ಕೊಡಗು ಜಿಲ್ಲಾಡಳಿತ ಮನವಿ ಮಾಡಿದ್ದು, ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗೆ ಜಿಲ್ಲಾಡಳಿತ 24*7 ಕಂಟ್ರೋಲ್ ರೂಮ್‍ನ ದೂರವಾಣಿ ಸಂಖ್ಯೆ 08272-221077 ಅಥವಾ ವಾಟ್ಸ್‍ಆಪ್ ಸಂಖ್ಯೆ 8550001077ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ. ಭಾರೀ ಮಳೆಯಿಂದಾಗಿ ಸೋಮವಾರ ಬೆಳಗಿನ ಜಾವ ವೀರಾಜಪೇಟೆ-ಮಾಕುಟ್ಟ ರಸ್ತೆಯ ಒಂದು ಬದಿಯಲ್ಲಿ ಭೂ ಕುಸಿತ ಉಂಟಾಗಿದ್ದು, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಬೆಳ್ಳಂಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹಾರಂಗಿ ಜಲಾಶಯದ ನೀರಿನ ಮಟ್ಟ: ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳಾಗಿದ್ದು, ಸೋಮವಾರ ಜಲಾಶಯದ 2833.29 ಅಡಿಗಳಿಗೆ ಏರಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 2857.71 ಅಡಿ ನೀರು ಸಂಗ್ರಹವಾಗಿತ್ತು. ಪ್ರಸಕ್ತ ಜಲಾಶಯಕ್ಕೆ 1230 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಕಳೆದ ವರ್ಷ ಇದೇ ದಿನಾಂಕದಂದು ನೀರಿನ ಒಳಹರಿವು 5662 ಕ್ಯುಸೆಕ್‍ನಷ್ಟಿತ್ತು. ಇದೀಗ ಜಲಾಶಯದಿಂದ ನದಿಗೆ 30 ಕ್ಯುಸೆಕ್, ನಾಲೆಗೆ 1200 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದ್ದು, ಕಳೆದ ವರ್ಷ ಇದೇ ದಿನಾಂಕದಂದು ನದಿಗೆ 2867, ನಾಲೆಗೆ 1000 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿತ್ತು.
ದಕ್ಷಿಣ ಕನ್ನಡದಲ್ಲೂ ಮಳೆಯಬ್ಬರ ಹೆಚ್ಚಾಗಿದ್ದು ಪುತ್ತೂರು ನಗರದಲ್ಲಿ ತೋಡು ಉಕ್ಕಿ ಹರಿದ ಪರಿಣಾಮವಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ತಕ್ಷಣವೇ ಅಧಿಕಾರಿಗಳು ಕಾರ್ಯುಪ್ರವೃತ್ತರಾಗಿ ಸ್ಥಳಾಂತರ ಪ್ರಕ್ರಿಯೆ ನಡೆಸಲಾಯಿತು. ಕುಮಾರಧಾರಾ, ನೇತ್ರಾವತಿ ನದಿಗಳೂ ಉಕ್ಕಿ ಹರಿಯುತ್ತಿವೆ. ಅಲ್ಲಲ್ಲಿ ಸಣ್ಣಪುಟ್ಟ ಬರೆಗಳು ಕುಸಿತಗೊಂಡಿವೆ.
ಎಂಟು ಶತಮಾನಗಳ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ನಾಡಿನ ಪವಿತ್ರ ಕ್ಷೇತ್ರ…
ಖಾದಿ ದೇಶದ ಅಸ್ಮಿತೆಯಾಗಿದ್ದು, ಇದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಉತ್ತೇಜನ-ಪ್ರೋತ್ಸಾಹ ಅತ್ಯಗತ್ಯವಾಗಿದೆ ಎಂದು…
ಎಲ್ಲಾ ಪಡಿತರ ಕಾರ್ಡ್‌ಗಳನ್ನು ಯಥಾವತ್ತಾಗಿ ಮುಂದುವರಿಸಲು ಮುಖ್ಯಮಂತ್ರಿಯವರ ಆದೇಶದಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು…
ವಿಶ್ವ ಆರೋಗ್ಯ ಸಂಸ್ಥೆಯು(WHO) ಅಡಿಕೆ ಕ್ಯಾನ್ಸರ್ ಕಾರಕವೆಂದು ಸಾಬೀತುಪಡಿಸಲು ಸಂಶೋಧನಾ ವರದಿಗಳನ್ನೇ ತಿರುಚಿ…
ಅಡಿಕೆಯ ಔಷಧೀಯ ಗುಣಗಳು ಹಲವಾರು ಇವೆ. ಅಡಿಕೆಯ ಚೊಗರಿನಿಂದ ತಯಾರು ಮಾಡುವ ಸೋಪು…
ಮಂಗಳೂರಿನಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ 2025ನೇ ಸಾಲಿನ ಇಂಡಿಯನ್ ಅಕಾಡೆಮಿ ಆಫ್ ಓರಲ್…