ಪುತ್ತೂರು: ಒಂದು ಆಂದೋಳನವು ಬದುಕಿನ ಭಾಗವಾದಾಗ ಅದು ಅನುಭವವಾಗುತ್ತದೆ, ಅನುಭಾವವಾಗುತ್ತದೆ. ಬದುಕಿನ ಭಾಗವಾಗುವ ಆಂದೋಳನಗಳಲ್ಲಿ ಹೋರಾಟದ ಕಿಚ್ಚಿಲ್ಲ, ಬಣ್ಣಗಳಿಲ್ಲ, ಧ್ವಜಗಳಿಲ್ಲ, ಘೋಷಣೆಗಳಿಲ್ಲ. ಅಲ್ಲಿರುವುದು ಸಾತ್ವಿಕತೆ ಒಂದೇ!
ಬಂಟ್ವಾಳ ತಾಲೂಕಿನ ಕೇಪು ಉಬರು ‘ಹಲಸು ಸ್ನೇಹಿ ಕೂಟ’ವು ದಶಕದೀಚೆಗೆ ಊಟದ ಬಟ್ಟಲನ್ನು ವಿಷಮುಕ್ತಗೊಳಿಸುವ ಆಂದೋಳನವನ್ನು ಸದ್ದಿಲ್ಲದೆ ಮಾಡಿದೆ, ಮಾಡುತ್ತಿದೆ. ಕೂಟದ ತೆಕ್ಕೆಗೆ ಬಂದ ಕುಟುಂಬಗಳ ಊಟದ ಮೇಜುಗಳಲ್ಲಿ ಸಾವಯವ ಉತ್ಪನ್ನಗಳಿಗೆ ಸ್ಥಾನ, ಮಾನ. ಹಲಸು, ಮಾವು, ಸಿರಿಧಾನ್ಯ, ತರಕಾರಿ, ಸೊಪ್ಪು.. ಹೀಗೆ ಅನ್ಯಾನ್ಯ ಒಳಸುರಿಗಳು ಖಾದ್ಯಗಳ ಮೂಲವಸ್ತುಗಳು.
ತರಬೇತಿ, ಪ್ರಾತ್ಯಕ್ಷಿಕೆ, ಮೇಳ ಮೊದಲಾದ ಪ್ರಕ್ರಿಯೆಗಳಿಂದ ಹಲಸು ಸ್ನೇಹಿ ಕೂಟವು ಸುಮನಸಿಗರ ಒಂದು ತಂಡವಾಗಿ ರೂಪುಗೊಂಡಿದೆ. ಹಸಿರು ಎನ್ನುವುದು ಕೇವಲ ಪ್ರಕೃತಿ, ಆಹಾರ ಇಷ್ಟಕ್ಕೆ ಸೀಮಿತವಾಗಿಲ್ಲ. ಅದರ ಅರಿವನ್ನು ಬಿಂಬಿಸುವ ಹಲವಾರು ‘ಕೆಣಿ’ಗಳನ್ನೂ ಅನುಷ್ಠಾನಗೊಳಿಸಿದೆ. ಈ ರೀತಿಯ ಕೆಣಿಗಳು ಮನದೊಳಗೆ ಗಾಢವಾಗಿ ಇಳಿದ ಪರಿಣಾಮಗಳ ಫಲಿತಾಂಶ ಇಲ್ಲಿದೆ ನೋಡಿ.
ಇದು ರಾಧಾಕೃಷ್ಣ ಶರ್ಮ ಮುಳಿಯ ಇವರ ವಿವಾಹದ ಆಮಂತ್ರಣ. ಬಾಳೆಯ ಕುಂಡಿಗೆಯ (ಪೂಂಬೆ) ದಳಗಳಾಕೃತಿಯ ವಿನ್ಯಾಸ. ಮೂರು ಎಸಳುಗಳ ಆರು ಪುಟಗಳಲ್ಲಿ ಮದುವೆಯ ವಿವರಗಳು. ಬಂಟ್ವಾಳದ ಕಲಾವಿದ ಮೌನೀಶ ಮಲ್ಯರ ವಿನ್ಯಾಸ. ಅಧ್ಯಾಪಕ ಅರವಿಂದ ಕುಡ್ಲರ ಸಂಯೋಜನೆ. ಮುಳಿಯ ಶರ್ಮ ಮನೆಮಂದಿಯ ಕಲ್ಪನೆ.
ಫಕ್ಕನೆ ಮೇಲ್ನೋಟಕ್ಕೆ ನೋಡುವಾಗ ಆಮಂತ್ರಣ ಪತ್ರಿಕೆಯ ವಿನ್ಯಾಸದಲ್ಲಿ ಹೊಸತು ಕಾಣದಿರಬಹುದು. ಆದರೆ ಹಸಿರು, ಕೃಷಿಯು ಮನದೊಳಗೆ ಇಳಿದು ‘ನಾವು ಅದೇ’ ಆದಾಗ ಇಂತಹ ಯೋಚನೆಗಳು, ಯೋಚನೆಗಳು ರೂಪುಗೊಳ್ಳುತ್ತವೆ.
ರಾಧಾಕೃಷ್ಣರ ತಂದೆ ಮುಳಿಯ ವೆಂಕಟಕೃಷ್ಣ ಶರ್ಮ. ಇವರು ತಮ್ಮ ಹಿರಿಯ ಮಗನ ವಿವಾಹದ ಆಮಂತ್ರಣವನ್ನು ಹಲಸಿನ ವಿನ್ಯಾಸದಲ್ಲಿ ಅಚ್ಚು ಹಾಕಿಸಿದ್ದರು. ಈ ಮೂಲಕವಾದರೂ ಹಲಸು, ಕುಂಡಿಗೆಗಳು ಮತ್ತೊಮ್ಮೆ ಅನ್ನದ ಬಟ್ಟಲಲ್ಲಿ ಸ್ಥಾನ ಪಡೆದುಕೊಳ್ಳಲಿ, ಅಲ್ವಾ.
ಇಂತಹ ಆಮಂತ್ರಣ ಪತ್ರಿಕೆಯನ್ನು ಒಂದು ಕಲೆಯಾಗಿ, ಆಂದೋಳನದ ಉಪಾಧಿಯಾಗಿ ನೋಡುವ ಮನಸ್ಸುಗಳು ಬೇಕಾಗಿವೆ!
( ನಿರೂಪಣೆ : ನಾ.ಕಾರಂತ ಪೆರಾಜೆ )
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…
ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಗೆ ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ…
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಸಂಕ್ರಾಂತಿ ಸಂಭ್ರಮ ವಿಶೇಷ ಕಾರ್ಯಕ್ರಮ…
ನಾಗರಿಕತೆ ಬೆಳವಣಿಗೆ, ಅಭಿವೃದ್ಧಿ ಅಂದರೆ ವ್ಯಕ್ತಿತ್ವಗಳೂ ಬೆಳೆಯಬೇಕು. ಅಭಿವೃದ್ಧಿಯ ಸೂಚ್ಯಂಕವೇ ವ್ಯಕ್ತಿತ್ವದ ಬೆಳವಣಿಗೆ…
ನಾಡಿನ ಸಮಸ್ತರಿಗೂ ಮಕರ ಸಂಕ್ರಾಂತಿ ಶುಭಾಶಯ. ರೈತರಿಗೂ ಇದು ಸುಗ್ಗಿಯ ಹಬ್ಬ. ಈ…
ಕರಾವಳಿ ಜಿಲ್ಲೆಗಳಲ್ಲಿ ಸಂಜೆ ಹಾಗೂ ರಾತ್ರಿಯ ತನಕವೂ ಪಶ್ಚಿಮದ ಗಾಳಿಯ ಪ್ರಭಾವ ಇರುವುದರಿಂದ…