ಮಾವನ ಮದುವೆ ದಿಬ್ಬಣ ಹೊರಡುವ ಗೌಜಿ. ನಾವೆಲ್ಲಹೊಸ ಬಟ್ಟೆ ಧರಿಸಿ ತಯಾರಾಗಿ ನಿಂತಿದ್ದೆವು. ನಾನು ತಂಗಿ ಒಂದೇ ರೀತಿಯ ಅಂಗಿ ಹಾಕಿ ವಾಹನವೇರಲು ಸಜ್ಜಾಗಿದ್ದೆವು. ನಾವು ಜಗಳ ಮಾಡಬಾರದೆಂದು ಅಪ್ಪ ಯಾವಾಗಲೂ ಒಂದೇ ವಿನ್ಯಾಸ, ಬಣ್ಣದ ಬಟ್ಟೆಗಳನ್ನು ತರುತ್ತಿದ್ದರು.ಈ ಬಾರಿ ಬೇರೆ ಹೊಸ ರೀತಿಯದ್ದು ತಂದಿದ್ದರು. ಲೇಸು ,ಬಟನ್ ,ಹೊಸ ಡಿಸೈನ್ನಿನ ಈ ರೀತಿಯ ಉಡುಗೆ ನಮ್ಮ ಊರಲ್ಲಿ ಯಾರು ಧರಿಸಿದ್ದನ್ನು ನಾವು ನೋಡಿರಲಿಲ್ಲ. ಹಾಗಾಗಿ ನಾವು ತುಂಬಾ ಖುಷಿಯಲ್ಲಿದ್ದೆವು.
ಮುಖಕ್ಕೆ ಪೌಡರು ಮೋಟುಜಡೆಗೆ ಉದ್ದನೆಯ ಮಲ್ಲಿಗೆ ಕೈತುಂಬಾ ಬಳೆ ಹಾಕಿ ಕುಣಿದಾಡುತ್ತಿದ್ದ ನಮ್ಮನ್ನು ,ತಯಾರಾಗಿ ಬಂದ ಮಾವ ನೋಡಿದರು. ಎಂತ ವೇಷ ಇದು ಇನ್ನೂ ಡ್ರೆಸ್ ಮಾಡಲಿಲ್ಲವಾ?… . ಲೇಟಾಯಿತು ಬೇಗ ಅಂಗಿ ಹಾಕಿ ಹೊರಡಿ ಎಂದು ಗಡಿಬಿಡಿ ಮಾಡಿದರು. ನಾವು ರೆಡಿ ಮಾವ ಎಂದೆವು. ಹೀಗಾ , ನೈಟಿ ಹಾಕಿಕೊಂಡು ಮದುವೆ ಮನೆಗೆ ಹೊರಟದ್ದಾ? ಇದು ಮನೆಯಲ್ಲಿ ರಾತ್ರಿ ಹಾಕಿ ಕೊಳ್ಳುವ ಬಟ್ಟೆ ಕಾರ್ಯಕ್ರಮಕ್ಕೆ ಹಾಕುವ ಉಡುಪಲ್ಲ ಎಂದು ನಗರ ನಿವಾಸಿಯಾದ ಮಾವ ಹೇಳಿದರು. ನಾನೇನೋ ಬದಲಿಸಿದೆ. ತಂಗಿ ಒಪ್ಪಲಿಲ್ಲ. ಅದೇ ಉಡುಗೆಯಲ್ಲಿ ಮದುವೆ ಸುಧಾರಣೆ ಮಾಡಿದಳು. ಮದುವೆ ಹಳ್ಳಿಯಲ್ಲಾದ ಕಾರಣ ಯಾರೂ ತಲೆಕೆಡಿಸಲ್ಲಿಲ್ಲ. ಇಂದಿಗೂ ಮಾವ ನಿಮ್ಮ ನೈಟಿ ವೇಷವೇ ಎಂದು ನಮ್ಮ ಕಾಲೆಳೆಯುತ್ತಾರೆ.
ಸಿನೆಮಾ ದೂರದರ್ಶನ ದಲ್ಲಿ ದರ್ಶನವಾಗುತ್ತಿದ್ದ ನೈಟಿ ಎಂಬತ್ತರ ದಶಕದಂಚಿನಲ್ಲಿ ಮನೆ ಮನೆಗೆ ಕಾಲಿಟ್ಟಿತು. ನೈಟಿ ಧರಿಸದೆ ಕೆಲಸ ಮಾಡಲಾರೆವು ಎಂಬ ಮಟ್ಟಿಗೆ ನಮ್ಮ ಬದುಕಿನ ಅವಿಭಾಜ್ಯ ಅಂಗವಾಯಿತು. ಹಿಂದೆ ಹೆಣ್ಣುಮಕ್ಕಳಿಗೆ ಸೀರೆಯೊಂದೇ ಉಡುಪಾಗಿತ್ತು. ಅದರಲ್ಲೇ ವೆರೈಟಿಗಳಿದ್ದವು. ಪ್ರಾಯಕ್ಕೆ ಸರಿಯಾಗಿ , ದುಡ್ಡಿಗೆ ಸರಿಯಾಗಿ ಸೀರೆಗಳಿದ್ದವು. ಮನೆಯಲ್ಲಿ ಕಾಟನ್, ಹೊರಗೆ ನೈಲನ್, ಕಾರ್ಯಕ್ರಮಗಳಿಗೆ ರೇಷ್ಮೆ ಹೀಗೆ ಸಾಗುತ್ತಿತ್ತು ಆಯ್ಕೆಗಳು.ಈಗ ಮನೆಯ ಮಟ್ಟಿಗೆ ನೈಟಿಯೇ ಎಲ್ಲರ ಆಯ್ಕೆ. ಪುಟ್ಟ ಮಕ್ಕಳಿಂದ ಹಿಡಿದು ಪ್ರಾಯದ ಅಜ್ಜಿಯರ ಮೆಚ್ಚಿನ ಆಯ್ಕೆ ನೈಟಿಯಾಗಿದೆ. ಇಂದು ಉದ್ದನೆಯ ನಿಲುವಂಗಿಯಾಗಿ ಮಾತ್ರ ನೈಟಿ ಉಳಿದಿಲ್ಲ. ಅದರಲ್ಲಿ ಹಲವು ವೆರೈಟಿಗಳು ಮಾರುಕಟ್ಟೆಯಲ್ಲಿ ದೊರೆಯುತ್ತದೆ. ರಂಗು ರಂಗಿನ , ಹಲವು ಡಿಸೈನ್ ನ, ಲೇಸಿನ, ಪ್ಯಾನ್ಸಿ ನಮೂನೆಯ, ಕಾಟನ್, ಸಿಂಥೆಟಿಕ್, ಎಂಬ್ರಾಯಿಡರಿ, ಕಿಸೆಯಿರುವ, ಹಾಲುಕುಡಿಸುವ ಅಮ್ಮಂದಿರಿಗೆ ಅನುಕೂಲವಾಗುವಂತಹ ರೀತಿಯಲ್ಲಿ ವಿನ್ಯಾಸ ಗೊಳಿಸಿದ ನೈಟಿಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ.
ಕೈಗೆಟುಕುವ ದರ ನೂರರಿಂದ ಹಿಡಿದು ಕೈಗೆಟುಕದ ಸಾವಿರಾರು ರೂಪಾಯಿ ದರದಲ್ಲಿ ಮಾರುಕಟ್ಟೆಯಲ್ಲಿ ದೊರೆಯುತ್ತದೆ. ನೈಟಿ ಎಷ್ಟೇ ಬೆಲೆಬಾಳುವುದಾದರೂ ರಾತ್ರಿ ಧರಿಸಿದರಷ್ಟೇ ಚೆನ್ನ. ಇಂದು ಎಲ್ಲೆಂದರಲ್ಲಿ ನೈಟಿ ಧರಿಸಿಕೊಂಡು ಮಹಿಳೆಯರು ತಿರುಗುವುದನ್ನು ನಾವು ಕಾಣುತ್ತೇವೆ. ಅಂಗಡಿಯಿಂದ ಸಾಮಾನು ತರುವಾಗ , ಹಾಲಿನ ಅಂಗಡಿಗಳಲ್ಲಿ, ತರಕಾರಿ ಅಂಗಡಿಯ ಬಳಿಯಲ್ಲಿ, ಮಕ್ಕಳನ್ನು ಶಾಲೆಗೆ ಬಿಡುವಾಗ ಹೀಗೆ ನೈಟಿ ಸುಂದರಿಯರು ನಮ್ಮ ಕಣ್ಣಿಗೆ ಬೀಳುತ್ತಾರೆ. ಹೀಗೆ ಎಲ್ಲೆಂದರಲ್ಲಿ ನೈಟಿಯಲ್ಲಿ ಕಂಡುಬಂದಾಗ ನಮಗೆ ಅಭಾಸವಾಗಿಬಿಡುತ್ತದೆ. ಮನಸ್ಸಿಗೇನೋ ಕಸಿವಿಸಿ.
ಕೆಲವು ಶಾಲೆಗಳಿಂದ ಹೆತ್ತವರಿಗೆ ನೋಟಿಸನ್ನೂ ಕೊಡುತ್ತಾರೆ. ಮಕ್ಕಳನ್ನು ಶಾಲಾವಾಹನದ ಬಳಿಗೆ ಬಿಡುವಾಗ ಗೌರವಯುತವಾದ ಉಡುಪು ಧರಿಸಿ. ಆವರಣದ ಒಳಗಡೆ ನೈಟಿಯಲ್ಲಿ ಬರಬೇಡಿ ಎಂದು ಸೂಚನೆಯನ್ನೇ ಕೊಟ್ಟು ಬಿಡುತ್ತಾರೆ!. ನೈಟಿ ನೈಟ್ಗೇ ಸೀಮಿತವಾಗಬೇಕಾದ ಉಡುಪು. ರಾತ್ರಿ ಧರಿಸಿದರೇ ಚೆನ್ನ.