ಸುಳ್ಯ: ರಾಜ್ಯದಲ್ಲಿ ಏಕರೂಪ ಶಿಕ್ಷಣ ನೀತಿಯ ಅಗತ್ಯತೆ ಇದೆ. ಈ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಸುಳ್ಯ ಶಾಸಕ ಎಸ್.ಅಂಗಾರ ಅಭಿಪ್ರಾಯಪಟ್ಟಿದ್ದಾರೆ. ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ, ಶಿಕ್ಷಣ ಸಂಪನ್ಮೂಲ ಕೇಂದ್ರ ಸುಳ್ಯ, ಪಡಿ ಮಂಗಳೂರು ಸಹಯೋಗದಲ್ಲಿ ಸುಳ್ಯದ ಶಿವಕೃಪಾ ಕಲಾಮಂದಿರದಲ್ಲಿ ನಡೆದ ಮಕ್ಕಳ ಹಕ್ಕುಗಳ ಸಂಸತ್ತು ಮತ್ತು ಮಕ್ಕಳೊಂದಿಗೆ ಶಾಸಕರ ಮುಖಾಮಖಿ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾ ಅವರು ಮಾತನಾಡಿದರು. ಸರ್ಕಾರಿ ಶಾಲೆಗಳಿದ್ದರೂ ಮಕ್ಕಳನ್ನು ಯಾಕೆ ಖಾಸಗೀ ಶಾಲೆಗೆ ಸೇರಿಸುತ್ತಾರೆ ಎಂಬ ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿದ ಶಾಸಕರು ಮಕ್ಕಳು ಎಲ್ಲಾ ಭಾಷೆ ಕಲಿಯಬೇಕು ಅದರಲ್ಲೂ ಇಂಗ್ಲೀಷ್ ಭಾಷೆಯಲ್ಲಿ ಪ್ರಾವೀಣ್ಯತೆಯನ್ನು ಪಡೆಯಬೇಕೆಂದು ಪೋಷಕರು ಯೋಚನೆ ಮಾಡಿದರೆ ಅದು ತಪ್ಪು ಎಂದು ಹೇಳಲು ಸಾಧ್ಯವಿಲ್ಲ. ಸರ್ಕಾರಿ ಶಾಲೆಗಳಲ್ಲಿ ಎಲ್ಲಾ ಭಾಷೆಯನ್ನು ಕಲಿಸಿದರೆ ಮತ್ತು ಗುಣಮಟ್ಟದ ಶಿಕ್ಷಣ ನೀಡಿದರೆ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಪೋಷಕರು ಮನಸ್ಸು ಮಾಡಬಹುದು. ಈ ನಿಟ್ಟಿನಲ್ಲಿ ಸರ್ಕಾರ ಈಗಾಗಲೇ ಯೋಚನೆ ಮಾಡಿ ಕರ್ನಾಟಕ ಪಬ್ಲಿಕ್ ಸ್ಕೂಲ್‍ಗಳನ್ನು ಆರಂಭಿಸಿದೆ. ಈ ರೀತಿಯ ಶಾಲೆಗಳು ಹೆಚ್ಚು ಹಚ್ಚು ಆರಂಭಿಸಿ ಎಲ್ಲರಿಗೂ ಕಲಿಯಲು ಅವಕಾಶ ನೀಡಬೇಕಾಗಿದೆ. ಈ ಕುರಿತು ಸರ್ಕಾರದ ಮುಂದೆ ಬೇಡಿಕೆ ಇರಿಸಲಾಗುವುದು ಎಂದು ಅವರು ಹೇಳಿದರು.
ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ವಿದ್ಯಾರ್ಥಿಗಳು ಮುಂದಿರಿಸಿದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು. ಶಾಲೆಗಳಲ್ಲಿ ಅಗತ್ಯ ಇದ್ದ ಕಡೆ ಶಾಲಾ ಕೊಠಡಿ, ಶೌಚಾಲಯ, ರಂಗಮಂದಿರಗಳ ನಿರ್ಮಾಣಕ್ಕೆ, ವಿದ್ಯಾರ್ಥಿಗಳಿಗೆ ಪ್ರಯಾಣಕ್ಕೆ ಕೆಎಸ್‍ಆರ್‍ಟಿಸಿ ಬಸ್ ವ್ಯವಸ್ಥೆ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಶಾಲೆಯ ಬಳಿಯಲ್ಲಿ ಮತ್ತು ಆಟದ ಮೈದಾನದಲ್ಲಿರುವ ಅಪಾಯಕಾರಿ ಮರಗಳ ತೆರವಿಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು. ಜ್ಯೋತಿ ವೃತ್ತದ ಬಳಿಯ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆಟದ ಮೈದಾನಕ್ಕೆ ತಡೆಗೋಡೆ ನಿರ್ಮಾಣಕ್ಕೆ ಮತ್ತು ಶಾಲೆಯ ಬಳಿಯಲ್ಲಿ ಮುಖ್ಯ ರಸ್ತೆಯಲ್ಲಿ ಮಕ್ಕಳಿಗೆ ರಸ್ತೆ ದಾಟಲು ಜೀಬ್ರಾ ಕ್ರಾಸಿಂಗ್ ಮಾರ್ಕ್ ಅಳವಡಿಕೆಗೆ ಸೂಚಿಸುವುದಾಗಿ ಅವರು ಹೇಳಿದರು. ಶಿಕ್ಷಣಕ್ಕೆ ಜಾತಿ ಆಧಾರದಲ್ಲಿ ಮೀಸಲಾತಿ ನೀಡುವ ಬದಲು ಆರ್ಥಿಕ ಸ್ಥಿತಿಯ ಆಧಾರದಲ್ಲಿ ಮೀಸಲಾತಿ ಯಾಕೆ ನೀಡಬಾರದು ಎಂಬ ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿದ ಅಂಗಾರ ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರ ಚಿಂತನೆ ನಡೆಸಬಹುದು ಎಂದ ಹೇಳಿದರು.
ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷ ಮಾಧವ ಗೌಡ ಸುಳ್ಯಕೋಡಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯಿತಿ ಅಧ್ಯಕ್ಷ ಚನಿಯ ಕಲ್ತಡ್ಕ, ಮಂಗಳೂರು ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ರೆನ್ನಿ ಡಿಸೋಜ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಶಿಕ್ಷಣ ಸಂಯೋಜಕ ಡಾ.ಸುಂದರ ಕೇನಾಜೆ, ಪ್ರೊಬೇಷನರಿ ಎಸ್‍ಐ ಸಂತೋಷ್.ಬಿ.ಪಿ, ಕೆಎಸ್‍ಆರ್‍ಟಿಸಿಯ ಕರುಣಾಕರ, ಆರೋಗ್ಯ ಇಲಾಖೆಯ ವಾಸುದೇವ ನಾಯಕ್, ಸಮಾಜ ಕಲ್ಯಾಣ ಇಲಾಖೆಯ ಮಾಧವ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವಿಜಯ, ಮಕ್ಕಳ ರಕ್ಷಣಾ ಘಟಕದ ವಜೀರ್ ಅಹಮ್ಮದ್, ಚೈಲ್ಡ್‍ಲೈನ್ ಮಂಗಳೂರು ಇದರ ಸಂಯೋಜಕ ದೀಕ್ಷತ್ ಅಚ್ರಪ್ಪಾಡಿ, ಸುಳ್ಯ ತಾಲೂಕು ಎಸ್‍ಡಿಎಂಸಿ ಅಧ್ಯಕ್ಷೆ ರಾಜೇಶ್ವರಿ ಕಾಡುತೋಟ ವೇದಿಕೆಯಲ್ಲಿ ಉಸ್ಥಿತರಿದ್ದರು. ಶಿಕ್ಷಕಿಯರಾದ ಪದ್ಮಾ ರಂಗನಾಥ್, ಸವಿತಾ, ಪ್ರವೀಣಕುಮಾರಿ ಅವರನ್ನು ಸನ್ಮಾನಿಸಲಾಯಿತು. ಸುಳ್ಯ ಶಿಕ್ಷಣ ಸಂಪನ್ಮೂಲ ಕೇಂದ್ರದ ಕಾರ್ಯದರ್ಶಿ ಮೋನಪ್ಪ ಕೊಳಗೆ ಸ್ವಾಗತಿಸಿ, ಕೋಶಾಧಿಕಾರಿ ಶಂಕರ ಪೆರಾಜೆ ವಂದಿಸಿದರು. ನಾರಾಯಣ ಕಿಲಂಗೋಡಿ ಕಾರ್ಯಕ್ರಮ ನಿರೂಪಿಸಿದರು.
ಸಂಸತ್ತಿನಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳು: ಮಕ್ಕಳ ಹಕ್ಕುಗಳ ಸಂಸತ್ತಿನಲ್ಲಿ ವಿದ್ಯಾರ್ಥಿಗಳು ಶಾಸಕರೊಂದಿಗೆ ಸಂವಾದ ನಡೆಸಿದರು. ವಿವಿಧ ಶಾಲೆಗಳನ್ನು ಪ್ರತಿನಿಧಿಸಿ ವಿದ್ಯಾರ್ಥಿಗಳಾದ ಕೆ.ಪಿ.ರೋಹಿತ್, ಬಿಂದುಶ್ರೀ, ಶಾಫಿಯಾ, ಅಲೋಕ್, ನಿಹಾಲ್.ಎಸ್ ಕೋಡ್ತುಗುಳಿ, ಹವ್ಯಶ್ರೀ ಕೆ.ಎಸ್, ಗೌತಂ ಪೇರಾಲು, ಶ್ರೀದೇವಿ, ನಾಗರಾಜ್, ಕೃತಸ್ವರದೀಪ್ತ, ಆಕಾಶ್, ಇಸ್ತಿಫಾ, ಮಹಮ್ಮದ್ ಜಮಾಲುದ್ದೀನ್, ಆಯಿಷಾತ್ ಫರ್ವೀನ್, ರಕ್ಷಿತಾ, ಶರಣ್ಯ.ಪಿ.ವಿ, ರಕ್ಷಿತ್, ಧೀರಜ್, ಸುಷ್ಮಾ ಮತ್ತಿತರರು ವಿವಿಧ ಪ್ರಶ್ನೆಗಳನ್ನು ಶಾಸಕರ ಮುಂದಿರಿಸಿದರು.
Advertisement
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…