ಬರ್ಮಿಂಗ್ಹ್ಯಾಂ: ಸಂಘಟಿತ ಪ್ರದರ್ಶನ ನೀಡಿದ ಭಾರತ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಬಾಂಗ್ಲಾದೇಶದ ಎದುರು 28 ರನ್ಗಳ ಜಯ ದಾಖಲಿಸಿತು. ಈ ಮೂಲಕ ಟೀಂ ಇಂಡಿಯಾ ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸಿತು.
ಇಲ್ಲಿನ ಎಜ್ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 314 ರನ್ ಗಳಿಸಿತು. ಈ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾ 48 ಓವರ್ಗಳಲ್ಲಿ 10 ವಿಕೆಟ್ ನಷ್ಟಕ್ಕೆ 286 ರನ್ ಗಳಿಸಿ ಸೋಲನುಭವಿಸಿತು.
ಬಾಂಗ್ಲಾದೇಶದ ಶಕೀಬ್ ಆಲ್ ಹಸನ್ (66), ಸೌಮ್ಯ ಸರ್ಕಾರ್ (33), ಸಬ್ಬೀರ್ ರಹಮಾನ್ (36) ಹಾಗೂ ಮೊಹಮ್ಮದ್ ಸೈಫುದ್ದೀನ್ (51*) ಉತ್ತಮ ಪ್ರದರ್ಶನ ತೋರಿದರೂ ಗೆಲುವು ಸಾಧ್ಯವಾಗಲಿಲ್ಲ.
ಭಾರತದ ಪರ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಜಸ್ಪ್ರೀತ್ ಬುಮ್ರಾ 4, ಹಾರ್ದಿಕ್ ಪಾಂಡ್ಯ 3, , ಭುವನೇಶ್ವರ್ ಕುಮಾರ್ , ಮೊಹಮ್ಮದ್ ಶಮಿ ಹಾಗೂ ಯಜುವೇಂದ್ರ ಚಾಹಲ್ ತಲಾ ಒಂದು ವಿಕೆಟ್ ಕಬಳಿಸಿದರು.
ಇದಕ್ಕೂ ಮೊದಲು ಬ್ಯಾಟ್ ಮಾಡಿದ ಭಾರತ ಹಿಟ್ ಮ್ಯಾನ್ ರೋಹಿತ್ ಶರ್ಮ(92 ಬಾಲ್ ಗಳಲ್ಲಿ 104 ರನ್) ಆಕರ್ಷಕ ಶತಕ, ಕನ್ನಡಿಗ ಕೆ.ಎಲ್ ರಾಹುಲ್ (77) ಅರ್ಧ ಶತಕದ ನೆರವಿನಿಂದ ಉತ್ತಮ ಮೊತ್ತ ಕಲೆ ಹಾಕಿತು. ವಿರಾಟ್ ಕೊಹ್ಲಿ (26) ಹಾರ್ದಿಕ್ ಪಾಂಡ್ಯ (0), ರಿಷಬ್ ಪಂತ್ (48), ದಿನೇಶ್ ಕಾರ್ತಿಕ್ (8), ಮಹೇಂದ್ರ ಸಿಂಗ್ ಧೋನಿ (35) ಭುವನೇಶ್ವರ್ ಕುಮಾರ್ (2), ಮೊಹಮ್ಮದ್ ಶಮಿ (1) ಓಟ್ ಆದರು. ಜಸ್ಪ್ರೀತ್ ಬುಮ್ರಾ (0*) ಔಟಾಗದೆ ಉಳಿದರು.
ಬಾಂಗ್ಲಾ ಪರ ಮುಸ್ತಾಫಿಜುರ್ ರೆಹಮಾನ್ 5, ಶಕೀಬ್ ಆಲ್ ಹಸನ್, ರುಬೆಲ್ ಹೊಸ್ಸಿನ್ ಮತ್ತು ಸೌಮ್ಯ ಸರ್ಕಾರ್ ತಲಾ ಒಂದು ವಿಕೆಟ್ ಪಡೆದುಕೊಂಡರು.
ರೋಹಿತ್ ಪಂದ್ಯಶ್ರೇಷ್ಠ:
ಕೇವಲ 92 ಬಾಲ್ ಗಳಲ್ಲಿ 5 ಸಿಕ್ಸರ್ 7 ಬೌಂಡರಿ ಸಹೀತ 104 ರನ್ ಸಿಡಿಸಿ ಭಾರತ ತಂಡಕ್ಕೆ ಆಸರೆಯಾದ ರೋಹಿತ್ ಶರ್ಮ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಈ ವಿಶ್ವಕಪ್ ಪಂದ್ಯದಲ್ಲಿ ನಾಲ್ಕು ಶತಕ ಸಿಡಿಸುವ ಮೂಲಕ ರೋಹಿತ್ ದಾಖಲೆ ಸೃಷ್ಠಿಸಿದರು. ಈ ವಿಶ್ವಕಪ್ ನಲ್ಲಿ ದಕ್ಷಿಣ ಆಫ್ರಿಕಾ(122), ಪಾಕಿಸ್ಥಾನ(140), ಇಂಗ್ಲೆಂಡ್(102), ಬಾಂಗ್ಲಾದೇಶ (104) ವಿರುದ್ಧ ರೋಹಿತ್ ಶತಕ ದಾಖಲಿಸಿದ್ದರು.
ಸೆಮಿಗೆ ಟಿಂ ಇಂಡಿಯಾ:
ಒಂದು ಪಂದ್ಯ ಉಳಿದಿರುವಂತೆಯೇ ಟಿಂ ಇಂಡಿಯಾ ಸೆಮಿಫೈನಲ್ ಪ್ರವೇಶಿಸಿದೆ. 8 ಪಂದ್ಯಗಳನ್ನು ಆಡಿದ ಭಾರತ 6 ಜಯ ದಾಖಲಿಸಿ ಉಪಾಂತ್ಯ ಪಂದ್ಯಕ್ಕೆ ಲಗ್ಗೆಯಿಟ್ಟಿದೆ. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಪಾಕಿಸ್ಥಾನ, ವೆಸ್ಟ್ ಇಂಡೀಸ್, ಅಫ್ಘಾನಿಸ್ತಾನ, ಬಾಂಗ್ಲಾದೇಶ ವಿರುದ್ಧ ಟಿಂ ಇಂಡಿಯಾ ಜಯ ಗಳಿಸಿದರೆ, ನ್ಯೂಜಿಲೆಂಡ್ ವಿರುದ್ಧದ ಪಂದ್ಯ ರದ್ದಾದ ಕಾರಣ ಅಂಕವನ್ನು ಹಂಚಿಕೊಂಡರೆ ಇಂಗ್ಲೆಂಡ್ ವಿರುದ್ಧ ಸೋಲನುಭವಿಸಿದೆ.
ಶ್ರೀಲಂಕಾ ವಿರುದ್ಧದ ಪಂದ್ಯ ಬಾಕಿ ಇದೆ. 8 ಪಂದ್ಯದಲ್ಲಿ ಒಟ್ಟು 13 ಅಂಕ ಪಡೆದಿರುವ ಭಾರತ ಎರಡನೇ ಸ್ಥಾನದಲ್ಲಿದೆ. 8 ಪಂದ್ಯದಲ್ಲಿ ಏಳು ಜಯ ಗಳಿಸಿ 14 ಅಂಕ ಪಡೆದಿರುವ ಆಸ್ಟ್ರೇಲಿಯಾ ಪ್ರಥಮ ಸ್ಥಾನದಲ್ಲಿದೆ.