ಮಡಿಕೇರಿ : ಒಂಟಿ ಸಲಗವೊಂದು ಹಾಕತ್ತೂರು ಗ್ರಾಮಕ್ಕೆ ಲಗ್ಗೆ ಇಟ್ಟಿದ್ದು, ವಾಸದ ಮನೆ, ತೋಟ ಮತ್ತು ಗದ್ದೆಗೆ ಹಾನಿ ಮಾಡಿ ಗ್ರಾಮದಲ್ಲಿ ಆತಂಕ ಸೃಷ್ಟಿಸಿದೆ. ಒಂದು ವಾರದ ಹಿಂದೆ ದಿಢೀರ್ ಆಗಿ ಪ್ರತ್ಯಕ್ಷವಾದ ಒಂಟಿ ಕಾಡಾನೆ ಗ್ರಾಮದ ವಿವಿಧೆಡೆ ದಾಂಧಲೆ ನಡೆಸಿದೆ. ಲಕ್ಷಾಂತರ ರೂ. ಮೌಲ್ಯದ ಬೆಳೆ ನಷ್ಟವಾಗಿದ್ದು, ಕಾಡಾನೆ ದಾಳಿಯನ್ನು ನಿಯಂತ್ರಿಸಲು ಅರಣ್ಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಅರಣ್ಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡುವ ಸಂದರ್ಭ ಮರೆಯಾಗುವ ಒಂಟಿ ಸಲಗ ಯಾವ ಸಂದರ್ಭದಲ್ಲಿ ದಾಳಿ ಮಾಡುತ್ತದೋ ತಿಳಿಯದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಹಾಕತ್ತೂರು ವ್ಯಾಪ್ತಿಯಲ್ಲೇ ಬೀಡು ಬಿಟ್ಟಿರುವ ಕಾಡಾನೆ ಅಮ್ಮಾಟಂಡ ಕುಟುಂಬಸ್ಥರಿಗೆ ಸೇರಿದ ತೋಟ ಮತ್ತು ಗದ್ದೆಗೆ ಹಾನಿಯಾಗಿದ್ದು, ಮನೆ ಹಾಗೂ ತೋಟದ ಗೇಟ್‍ಗಳನ್ನು ನಾಶ ಮಾಡಿದೆ. ಬಟ್ಟಿರ ಗದ್ದೆ, ಚೊಟ್ಟೆಯಂಡ ಶಂಕರಿ, ಅಮ್ಮಾಟಂಡ ಪೂವಣ್ಣ, ಪ್ರಸಾದ್ ಗಣಪತಿ, ಚೇತನ್ ದೇವಯ್ಯ ಮತ್ತಿತರ ಗ್ರಾಮಸ್ಥರ ತೋಟಗಳು ಆನೆ ದಾಳಿಗೆ ತುತ್ತಾಗಿದೆ.
ಗ್ರಾಮಸ್ಥರು ದೂರು ನೀಡಿದ ಹಿನ್ನೆಲೆ ಅರಣ್ಯಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು. ಆದರೆ ಅಧಿಕಾರಿಗಳ ಭೇಟಿ ಸಂದರ್ಭ ನಾಪತ್ತೆಯಾಗಿದ್ದ ಒಂಟಿ ಸಲಗ ಮತ್ತೆ ಸೆ.17 ರಂದು ರಾತ್ರಿ ಕಾಣಿಸಿಕೊಂಡು ಅಮ್ಮಾಟಂಡ ಮುತ್ತಪ್ಪ ಅವರ ಮನೆಯ ಗೇಟ್ ಮತ್ತು ಪೂವಣ್ಣ ಅವರ ತೋಟದ ಗೇಟನ್ನು ಮುರಿದು ಹಾಕಿದೆ.
ಅಮ್ಮಟಂಡ ಚಿಣ್ಣಪ್ಪ ಅವರ ಮನೆಯವರೆಗೆ ಬಂದ ಕಾಡಾನೆ ಬಟ್ಟಿರ ಕುಟುಂಬಸ್ಥರ ಗದ್ದೆಗೆ ದಾಳಿ ಮಾಡಿ ಕೃಷಿ ನಾಶ ಪಡಿಸಿದೆ. ಇದೀಗ ಆನೆ ಯಾವ ಕಡೆ ತೆರಳಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಸುತ್ತಮುತ್ತಲ ಗ್ರಾಮಸ್ಥರು, ವಿದ್ಯಾರ್ಥಿಗಳು ರಸ್ತೆಯಲ್ಲಿ ಓಡಾಡಲು ಭಯ ಪಡುತ್ತಿದ್ದಾರೆ. ಕಾರ್ಮಿಕರು ತೋಟಕ್ಕೆ ಬರಲು ಹಿಂಜರಿಯುತ್ತಿದ್ದಾರೆ, ಒಂಟಿ ಸಲಗದ ದಾಳಿಯಿಂದ ತಪ್ಪಿಸಿಕೊಳ್ಳುವ ಬಗ್ಗೆಯೇ ಚಿಂತಿತರಾಗಿರುವ ಗ್ರಾಮಸ್ಥರು, ಕಡಗದಾಳು ಗ್ರಾಮದಲ್ಲಿ ಕಾಡಾನೆ ದಾಳಿಗೆ ಸಿಲುಕಿ ಇತ್ತೀಚೆಗೆ ಪೊಲೀಸ್ ಅಧಿಕಾರಿಯೊಬ್ಬರು ಮೃತಪಟ್ಟ ಪ್ರಕರಣವನ್ನು ಉಲ್ಲೇಖಿಸಿ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಅರಣ್ಯ ಇಲಾಖೆ ಗ್ರಾಮದಲ್ಲಿ ಹೆಚ್ಚಿನ ಸಿಬ್ಬಂದಿಗಳನ್ನು ನಿಯೋಜಿಸಿ ಗಜಮಾರ್ಗವನ್ನು ಪತ್ತೆಹಚ್ಚಿ ಉಪಟಳ ನೀಡುತ್ತಿರುವ ಒಂಟಿ ಸಲಗವನ್ನು ಕಾಡಿಗಟ್ಟುವಂತೆ ಗ್ರಾಮಸ್ಥರಾದ ಅಮ್ಮಾಟಂಡ ಕೆ.ಚಿಣ್ಣಪ್ಪ, ಅಮ್ಮಾಟಂಡ ಪೂವಣ್ಣ, ಅಮ್ಮಾಟಂಡ ಪ್ರಸಾದ್ ಗಣಪತಿ, ಅಮ್ಮಾಟಂಡ ಮುತ್ತಪ್ಪ, ಚೊಟ್ಟೆಯಂಡ ಸಿ.ಶಂಕರಿ, ಕೋಲಿರ ಪೆಮ್ಮಯ್ಯ ಮತ್ತಿತರರು ಒತ್ತಾಯಿಸಿದ್ದಾರೆ.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…