ಒಯ್……..ಇಂದಿನ ವಾತಾವರಣ ತುಂಬಾ ವ್ಯತ್ಯಾಸ ಆಯ್ತು ಮಾರ್ರೆ…!

May 10, 2019
11:00 AM

1997 ಸೆಪ್ಟೆಂಬರ್ 4…..

Advertisement

ಪಡುವಣ ಕಡಲ ತೀರದಿಂದ ಮೂಡಣ ತೀರದ ಪಂಜ ಸೀಮೆಯ ಕಲ್ಮಡ್ಕವೆಂಬ ಪುಟ್ಟ, ಶಾಂತ ,ಸಮೃದ್ಧ ಊರಿಗೆ ಕೃಷಿಕರಾಗಿ ಬಾಳು ಕಟ್ಟಿಕೊಳ್ಳುವುದಕ್ಕೋಸ್ಕರ ಪುಟ್ಟ ಸಂಸಾರದೊಂದಿಗ ಬಂದೆವು.

‌ಆ ದಿನಗಳು ಇನ್ನೂ ಮನದಲ್ಲಿ ಹಸಿರಾಗಿಯೇ ಇದೆ. ದಿನವೂ ಮದ್ಯಾಹ್ನದ 1 ಗಂಟೆಯ ನಂತರ ಮಳೆ ಸೂಚಕವೋ ಎಂಬಂತೆ ಟ್ರೀಂ ಟ್ರೀಂ ಎಂದು ಕೂಗುವ ಸೀರುಂಡೆಗಳ ಹಿಮ್ಮೇಳ, ಮುಗಿಲ ತೇರು , ಗುಡುಗಿನ ಅಬ್ಬರದೊಂದಿಗೆ ಧೋ …ಎನ್ನುವ ಹಿಂಗಾರಿನ ಮಳೆ. ತಂತಿಯಲ್ಲಿ ಬರುವ ವಿದ್ಯುತ್ ಅದೇ ತಂತಿಯಲ್ಲಿ ಹಿಂತಿರುಗಿ ಹೋಗುತಿತ್ತು. ಫೋನ್ ಮುಸುಕೆಳೆದು ಹೊದ್ದು ಮಲಗುತಿತ್ತು….!  ಚಿಮಿಣಿ ದೀಪದ ಬೆಳಕೇ ನಮಗೆ ಹ್ಯಾಲೋಜನ್ ಬೆಳಕ ಸಂತಸ ನೀಡುತಿತ್ತು. ವಿಷಯ ಇದಲ್ಲ…., ಕೃಷಿಗೆ ಸಂಬಂದಿಸಿ ಪ್ರಾಕೃತಿಕ ಹಾಗೂ ಮಾನವ ಮನೋಭೂಮಿಕೆಯ ಬದಲಾವಣೆಯ ಬಗ್ಗೆ ಈ ಬರವಣಿಗೆ. ಅದರೂ ಒಂದಷ್ಟು ಪೀಠಿಕೆ… ಅಷ್ಟೇ….

ಪಡುವಣ ಕೃಷಿಪಾಠದಂತೆ ಸೆಪ್ಟೆಂಬರ್ ತಿಂಗಳಲ್ಲೇ ತೋಟದ ಕೆಲಸ ಶುರು ಮಾಡಿದೆವು. ಕಳೆ ತೆಗೆಯುವುದು,ಬುಡಬಿಡಿಸುವುದು, ಗೊಬ್ಬರ ಹಾಕುವುದು….ಇತ್ಯಾದಿ…. ಆದರೆ ಹಾಕಿದ ಗೊಬ್ಬರವೆಲ್ಲ ಅಬ್ಬರದ ಮಳೆಯೊಂದಿಗೆ ನಮ್ಮನ್ನು ಬಿಟ್ಟು ಪಡುವಣ ನಮ್ಮೂರಿನೆಡೆ ಮುಖ ಮಾಡಿತ್ತು…. ನೆಟ್ಟ ಎಡೆಗಿಡಗಳು… ಉಸಿರಾಡುವುದಕ್ಕೆ ಕಷ್ಟ ಪಟ್ಟವು…. ಅಂತೆಯೇ ನಾವು ಮೂಡಣ ವಾತಾವರಣದ ಪರಿಸ್ಥಿತಿಗೆ ಹೊಂದಿಕೊಳ್ಳುತ್ತಾ ಕೃಷಿ ಕಾರ್ಯ ಮಾಡಲು ರೂಢಿ ಮಾಡಿಕೊಂಡೆವು.

ಅಂದರೆ,ಒಕ್ಟೋಬರ್ ಕೊನೆಯ ದಿನಗಳಲ್ಲಿ ಕಳೆ ತೆಗೆಯುವುದು,ಗೊಬ್ಬರ ಕೊಡುವುದು,ಗಿಡ ನೆಡುವುದು….ಡಿಸೆಂಬರ್ ಸುರೂವಿಗೆ ಅಂಗಳ ರಿಪೇರಿ, ಅಡಿಕೆ ಕೊಯಿಲು… ,.ಇತ್ಯಾದಿ…… ಸಾಧಾರಣ ನವೆಂಬರ್ ಕೊನೆ ತನಕವೂ ಮಳೆ…. ಡಿಸೆಂಬರ್ ತಿಂಗಳಲ್ಲಿ ಆಗೊಮ್ಮೆ ಈಗೊಮ್ಮೆ ಬಂದು ಸುಬ್ರಹ್ಮಣ್ಯ ಷಷ್ಠಿಯ ವಾಯಿದೆಗೆ ಕೊನೆಯ ಭರ್ಜರಿ ಮಳೆಯೊಂದಿಗೆ ಕೊನೆಗೊಂಡು ನಂತರ ಮಾರ್ಚ್ ಹತ್ತು ಹದಿನೈದರಂದಾಜಿಗೆ ಪುನರಪಿ ಹಾಜರಾಗಿ ನೀರಿನ ಬವಣೆಯೇ ಕಾಡುತ್ತಿರಲಿಲ್ಲ. ಆ ದಿನಗಳಲ್ಲಿ 33-35 ಡಿಗ್ರಿ ಉಷ್ಣಾಂಶ ವಾತಾವರಣದಲ್ಲಿ ಬಂದಾಗ ನಿಶ್ಚಿತವಾಗಿ ಮಳೆರಾಯ  ಸಮೃದ್ಧ ಮಳೆಗರೆಯುತ್ತಿದ್ದ. ಡಿಸೆಂಬರ್ ಕೊನೆಗೆ ತೋಟದೊಳಗಿನ ಬಸಿಗಾಲುವೆಗಳಿಗೆ ಕಟ್ಟ ಕಟ್ಟಿ ತುಂಬಿದರೆ ಮಾರ್ಚ್ ತನಕವೂ ತುಂಬಿರುತ್ತಿತ್ತು.ನಂತರ ಬರಿದಾಗುತ್ತಾ ಬಂದಂತೆ ಮಳೆಬಂದು ತುಂಬುತಿತ್ತು.ಪಂಪ್ ಸ್ಪಿಂಕ್ಲರ್ ಗಳು ಮೂರು ನಾಲ್ಕು ತಿಂಗಳ ಕೆಲಸದ ನಂತರ ಆರಾಮದ ನಿಟ್ಟುಸಿರು ಬಿಟ್ಟು ವಿಶ್ರಾಂತಿ ಪಡೆಯುತ್ತಿದ್ದವು…..  ಆದರೆ….ಆದರೆ…..ವರ್ಷಗಳು  ಉರುಳಿದಂತೆಯೇ….. ಜನಮಾನಸವೂ, ಬದಲಾಯಿತು,ಪ್ರಕೃತಿಯೂ…..ಹತ್ತು ಪಟ್ಟು ವೇಗದಲ್ಲಿ ಬದಲಾಗುತ್ತಾ ಬಂತು.
ಸಾಧಾರಣ 2009 ನೇ ಇಸವಿಯಿಂದ ಈ ಪರಿಸ್ಥಿತಿಗಳು ನಿಧಾನವಾಗಿ ಬದಲಾಗುತ್ತಾ ಬರಲಾರಂಬಿಸಿತು. ಏನೋಪ್ಪಾ….”ಎಲ್ ನಿ ನೋ ಎಫೆಕ್ಟ್” ಅಂತ ಹೇಳ್ತಾರೆ. ನಾನು ಅರ್ಥ ಮಾಡಿದ್ದು ಈ ರೀತಿ  ಎಲ್=ಲೋ,ನಿ=ನಿನ್ನ ,ನೋ=ನೋಡ್ಕೋತೀನಿ ಅಂದರೆ ಪ್ರಕೃತಿ ಲೋ ನಿನ್ನ ನೋಡ್ಕೋತೀನಿ ಅಂತ ಮಾನವನಿಗೆ ಎಚ್ಚರಿಕೆ ಕೊಡುತ್ತಾ ತಾನೂ ಮನುಜನ ಓಟಕ್ಕಿಂತ ಹತ್ತು ಪಟ್ಟು ವೇಗದಲ್ಲಿ ಬದಲಾಗ ಹೊರಟಿತು.

ಅಕಾಲ ಮಳೆ,ಗಾಳಿ,ಬರ…ಇತ್ಯಾದಿ ಮಾಮೂಲಾಗ ಹೊರಟಿತು…..ಈ ಸಮಯದಿಂದಲೇ ಅಲ್ವೇ ಜನವರಿ ಫೆಬ್ರವರಿ ತಿಂಗಳಲ್ಲೂ ಕೊಯಿಲಿನ ಅಡಿಕೆಗೂ ಪ್ಲಾಸ್ಟಿಕ್ ಮುಚ್ಚುವ ಪರಿಸ್ಥಿತಿ ಬಂದು ಪ್ಲಾಸ್ಟಿಕ್ ಅಂಗಡಿಯವರ ಭಾಗ್ಯದ ಬಾಗಿಲು ತೆರೆದದ್ದು.

ಸರಿ….ಸೆಪ್ಟೆಂಬರ್ ಕೊನೆಗೆ ಮಾನ್ಸೂನ್ ಹೋದ ಮೇಲೆ ಸೀರುಂಡೆಗಳು ಎಷ್ಟು ರೋಧಿಸಿದರೂ ಮಳೆರಾಯ ಅಷ್ಟಕ್ಕಷ್ಟೇ.ಒಕ್ಟೋಬರ್ ಕೊನೆಯ ದಿನಗಳು ಬಂದಾಗ ನಾವು ನಿದ್ದೆ ಬಿಟ್ಟು ಪಂಪುಗಳನ್ನು ನಿದ್ದೆಯಿಂದ ಏಳಿಸಬೇಕಾಯ್ತು. ಬಸಿಗಾಲುವೆ ಕಟ್ಟಗಳು ನವೆಂಬರ್ ಕೊನೆಗೆ ಕಟ್ಟುವುದಕ್ಕೆ ಸುರುವಾಯ್ತು. ಜನವರಿ ಕೊನೆಗೆ ಆರಿ ಮುಗಿದೂ ಹೋಯ್ತು. ಪಂಪುಗಳು ಎಪ್ರಿಲ್ ಮೇ ತನಕವೂ ವಿದ್ಯುತ್ ಸೇವಿಸುತ್ತಾ ಆಳಕ್ಕಾಳಕ್ಕಿಳಿದು ಏದುಸಿರು ಬಿಡ ತೊಡಗಿದವು…..ವಾತಾವರಣದ ಉಷ್ಣತೆ 37-40 ಕ್ಕೆ ಮುಟ್ಟಿತು ಎಂದು ಮಾಪಕ ತೋರಿಸತೊಡಗಿತು. ರೋಧಿಸುತ್ತಿದ್ದ ಸೀರುಂಡೆಗಳು ನಮ್ಮೂರ ಬಿಟ್ಟಿರಬೇಕು. ಅವರ ಸ್ಥಾನವನ್ನು…….ಮಾನವ ರೋಧನ ತುಂಬಿತು…..ಮಳೆರಾಯನ ಕಿವಿಗೆ ನಮ್ಮ ರೋಧನ ಕೇಳದು ಯಾಕೆಂದರೆ ಎಲ್… ನೀ….ನೋ… ಎಂದು ಪ್ರಕೃತಿ ಶಪಥ ಮಾಡಿದೆಯಲ್ಲವೇ. ಮುಗಿಲ ತೇರು ಏರಿಬಂದರೂ ನೆಲವ ಚುಂಬಿಸಲಾರದೆ ಮುನಿಸ ತೋರಿದ ಮಳೆರಾಯ. ಮೊನ್ನೆ ಕಡು ಬಿಸಿಲಿನ ಝಳಕ್ಕೆ ಉಷ್ಣ ಮಾಪಕ 40 ಡಿಗ್ರಿ ತೋರಿಸತೊಡಗಿದಾಗ ಸಹನಾ ಆತಂಕದಲ್ಲಿ ಹೇಳಿದಳು.“ಒಯಿ…ಅಂದಿನ ವಾತಾವರಣಕ್ಕೂ ಇಂದಿಗೂ ತುಂಬಾ ವ್ಯತ್ಯಾಸ ಆಯಿತು… ನಾವು ಈಗ ಇದಕ್ಕೂ ಎಡ್ಜಸ್ಟ್ ಆದೆವಲ್ಲವೇ …“.

ಹೌದು ಇಂದು ನಾವು ಎಡ್ಜಸ್ಟ್ ಆಗೋದರಲ್ಲೇ ಸಂತಸ ಪಡಬೇಕಷ್ಟೇ ,ಸರಿಪಡಿಸಲಾರದಷ್ಟು ದೂರ ಸಾಗಿಯಾಗಿದೆ….ಆದರೆ ಈ ಬದಲಾವಣೆಯ ವೇಗ ನೋಡಿದರೆ ಹಿಂದಿನ ಇಪ್ಪತ್ತು ವರ್ಷದ ಬದಲಾವಣೆ ಮುಂದಿನ ಐದು ವರ್ಷಗಳಲ್ಲೇ ಆಗಬಹುದೇನೋ…ಅಂತ ಮನಸ್ಸು ಹೆದರುತ್ತಿದೆ…….. ಮಳೆ ಬಗ್ಗೆ ಮುನ್ಸೂಚನೆ ಕೊಡುವ ಆಪ್ ಗಳು ಸೋತು ಬಿಡುತ್ತಿವೆ. ದಿನದ ಉಷ್ಣತೆ ಯಲ್ಲಿ 10-15 ಡಿಗ್ರಿ ವ್ಯತ್ಯಾಸ ಕಂಡುಬರುತ್ತಿದೆ (ಮದ್ಯಾಹ್ನ 40 ಇದ್ದರೆ ಮುಂಜಾನೆ 25 ರ ಆಸುಪಾಸು) ಅಂತೂ ಬದಲಾವಣೆ ಯಾವ ದಿಕ್ಕಿಗೆ ಎನ್ನುವುದು ತೋಚದಾಗಿದೆ. ಮೊನ್ನೆ ಮೊನ್ನೆ ಪಡುವಣದ ನನ್ನೂರಿಗೆ ಹೋಗಿದ್ದೆ..ಕೆಲವು ತೋಟಗಳ ಅಡಿಕೆ ಮರಗಳ ತಲೆ ಇನ್ನೂ ಮೇಲಕ್ಕೇರಲಾರೆ,ಬಿಸಿಲ ಝಳ ತಾಳಲಾರೆನೆಂದು ಸೋತು ಮರದ ಬುಡ ಸೇರಿ ಬಟಾಬಯಲಾಗಿದೆ.ಅಲ್ಲಿಯ ಕೆರೆ ಜಲಮೂಲಗಳು ಬತ್ತಿ ಬೋರ್ವೆಲ್ಲಿನ 700-800 ಗಡಿದಾಟಿ….ಪಂಪ್ ಶೆಡ್ ಇಂಡಿಕೇಟರ್ ಕೆಂಪಗಾಗಿ ಕೆಂಗಣ್ಣು ಬೀರುತ್ತಿವೆ. ಇರಲಿ.
ಸಾವಿರಾರು ಮೈಲಿಗಳ ದೂರದಿಂದ ಸಾವಿರಾರು ಮೆಟ್ರಿಕ್ ಟನ್ ಮುಗಿಲು ರೂಪದ ಜೀವ ಜಲವನ್ನು ಕ್ಷಣ ಮಾತ್ರದಲ್ಲಿ ಹೊತ್ತು ತರುವ ಪ್ರಕೃತಿಗೆ.ಮಾನವನ ಅಸಂಬದ್ಧ ವೇಗ ಯಾವ ಲೆಕ್ಕ ಬೂಮ್ ರಾಂಗ್ ಮಾಡಿಬಿಟ್ಟೇನು ಎಂದು ವಾತಾವರಣ ಏರುಪೇರಾಗುತ್ತಿದೆ.ತನ್ನ ನಿಯಮವನ್ನೂ ಬದಲಾಯಿಸಿಕೊಂಡಿದೆ.

ಏನು ಮಾಡಬಹುದೂ….., ಹಳ್ಳಿ ಬದುಕು ಕಷ್ಟ ಎಂದು ಪೇಟೆಗೋಡಿ ಅಡಗಿ ಕುಳಿತರೂ ಮೇಲಿನವನ ಕಣ್ಣು ತಪ್ಪಿಸಲು ಸಾಧ್ಯವೇ, ಕೇರಿಗೆ ಬಂದದ್ದು ಊರಿಗೆ ಬರದಿದ್ದೀತೇ , ಸಾವಿರಾರು ವರ್ಷಗಳಲ್ಲಿ ಆಗದ ಪ್ರಾಕೃತಿಕ ಬದಲಾವಣೆ ಇತ್ತೀಚಿನ ಕೆಲವು ವರ್ಷಗಳ ಲ್ಲಿ ಆಗಿಬಿಟ್ಟಿದೆಯಂತೆ.ಪ್ರಾಕೃತಿಕ ಸಮತೋಲನ ಇದ್ದರೆ ಮಾತ್ರ ಸುಲಲಿತ ಜನ ಜೀವನ ಸಾಧ್ಯ. ಅಂತೂ…., ಮಾನವನ ಕುರುಡು ಕಾಂಚಾಣದ ಹಿಂದಿನ ಓಟ ಅವನ ನೋಟವನ್ನು ಕುರುಡಾಗಿಸಿದೆ.ಹಣದ ಹಿಂದಿನ ಓಟ ಮತ್ತು ಪ್ರಕೃತಿಯ ಜೊತೆ ಕೂಟ ಎರಡೂ ವಿರುದ್ಧ ದ್ರುವಗಳಲ್ಲವೇ.. …ಎಲ್ಲೋಗೋಣಾ….ಎನ್ಮಾಡೋಣಾ……!!

“ಆಡಿಸುವಾತನ ಕೈ ಚಳಕದಲೀ ಎಲ್ಲಾ ಅಡಗಿದೇ….
ಆತನ ಕರುಣೆಯು ಜೀವವ ತುಂಬಿ ಕುಣಿಸಿ ನಲಿಸಿದೇ….
ಆ ಕೈ ಸೋತರೆ ಬೊಂಬೆಯ ಕಥೆಯೂ ಕೊನೊಯಾಗುವುದೇ….
ಆಡಿಸಿ ನೋಡೂ ಬೀಳಿಸಿ ನೋಡೂ…..

 

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ

‌ ಪ್ರಗತಿಪರ ಕೃಷಿಕ, ಬರಹಗಾರ

ಇದನ್ನೂ ಓದಿ

ಬದುಕು ಪುರಾಣ | ಅದು ‘ಎಚ್ಚರ’ದ ರೇಖೆ!
April 27, 2025
11:29 AM
by: ನಾ.ಕಾರಂತ ಪೆರಾಜೆ
ಯುದ್ಧ……
April 27, 2025
10:33 AM
by: ವಿವೇಕಾನಂದ ಎಚ್‌ ಕೆ
ಹೊಸರುಚಿ | ಹಲಸಿನ ಕಾಯಿ ಪೂರಿ
April 26, 2025
8:00 AM
by: ದಿವ್ಯ ಮಹೇಶ್
ಬದುಕು ಕಲಿಸುವ ಪಾಠಗಳು
April 24, 2025
6:23 AM
by: ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

You cannot copy content of this page - Copyright -The Rural Mirror

Join Our Group