ಸುಳ್ಯ: ತಾಲೂಕಿನ ಗ್ರಾಮೀಣ ಭಾಗಗಳ ಸಮಸ್ಯೆ ಈಗ ಹೆಚ್ಚಾಗಿದೆ. ಕರೆಂಟ್ ಒಂದು ಮಳೆಗೇ ಕಣ್ಣಾಮುಚ್ಚಾಲೆಯಾಡುತ್ತದೆ. ಅದರ ಬೆನ್ನಿಗೇ ಬಿ ಎಸ್ ಎನ್ ಎಲ್ ನೆಟ್ವರ್ಕ್ ಹೋಗುತ್ತದೆ, ಜೊತೆಗೆ ಇಂಟರ್ನೆಟ್ಟೂ ಕೈಕೊಡುತ್ತದೆ..!. ಈ ಸಮಸ್ಯೆ ಹೇಳೋದು ಯಾರಲ್ಲಿ ಅಂತ ಜನ ಆ ಕಡೆ ಈ ಕಡೆ ನೋಡುತ್ತಿದ್ದಾರೆ.
ಇಂದಿಗೂ ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಸಮಸ್ಯೆ ಸರಿಯಾಗಿಲ್ಲ. ರಾತ್ರಿ ವೇಳೆ ಕತ್ತಲ್ಲಲ್ಲೇ ಇರಬೇಕಾದ ಸ್ಥಿತಿ ಬಂದಿದೆ. ಒಂದು ಮಳೆ ಬಂದರೆ ಸಾಕು ವಿದ್ಯುತ್ ಕೈಕೊಡುತ್ತದೆ, ಕೇಳಿದರೆ ಮಾಮೂಲು ಉತ್ತರ, “ಟ್ರಿಪ್ ಆಗಿದೆ”. ಯಾಕೆ ಟ್ರಿಪ್ ಆಗುತ್ತದೆ ಎಂದರೆ ಮರದ ಗೆಲ್ಲುಗಳು ತಾಗುತ್ತವೆ. ಯಾಕೆ ಮರದ ಗೆಲ್ಲುಗಳು ತಾಗುತ್ತವೆ ಎಂದರೆ ಟ್ರೀ ಕಟ್ಟಿಂಗ್ ಆಗಿಲ್ಲ. ಆದರೆ ವಾರದಲ್ಲೊಂದು ದಿನ ಇದಕ್ಕೆಂದೇ ಪವರ್ ಕಟ್ ಮಾಡುವ ಬಗ್ಗೆ ಪತ್ರಿಕಾ ಹೇಳಿಕೆಗಳು ಬರುತ್ತದೆ. ಹಾಗಿದ್ದರೂ ಯಾಕೆ ವಿದ್ಯುತ್ ಕೈಕೊಡುತ್ತದೆ…!.
ಉಳಿದೆಲ್ಲಾ ತಾಲೂಕುಗಳಲ್ಲಿ ಮಳೆಗಾಲಕ್ಕೆ ಮುನ್ನ ಮುಂಜಾಗ್ರತಾ ಸಭೆಯಾಗುತ್ತದೆ. ಕೊಡಗು ಜಿಲ್ಲೆಯಲ್ಲಿ 500 ಮಂದಿ ಹೆಚ್ಚುವರಿ ಸಿಬ್ಬಂದಿಗಳನ್ನು ಮಳೆಗಾಲದ ಅವಧಿಗೆಂದು ಸರ್ವ ಸನ್ನದ್ಧ ರೀತಿಯಲ್ಲಿ ನಿಯೋಜನೆ ಮಾಡುತ್ತಾರೆ. ವಿದ್ಯುತ್ ಕೈಕೊಡದಂತೆ ಎಚ್ಚರಿಕೆ ವಹಿಸುತ್ತಾರೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅದರಲ್ಲೂ ಸುಳ್ಯದಲ್ಲಿ ಮಾತ್ರಾ ಇದೇಕೆ ಇಂತಹ ಸಮಸ್ಯೆ..!. ಮಳೆಗಾಲದ ಮುನ್ನ ಪ್ರಕೃತಿ ವಿಕೋಪದ ಸಭೆಯಲ್ಲಿ ಏಕೆ ಈ ಬಗ್ಗೆ ಚರ್ಚೆಯಾಗುವುದಿಲ್ಲ ಎಂಬುದಕ್ಕೂ ಉತ್ತರವಿಲ್ಲ..!. ಉದಾಹರಣೆಗೆ ಸುಳ್ಯದಿಂದ ಗುತ್ತಿಗಾರು ಸುಬ್ರಹ್ಮಣ್ಯದ ಕಡೆಗೆ ಬರುವ ವಿದ್ಯುತ್ ಲೈನ್ ನಲ್ಲಿ ಉಬರಡ್ಕದ ಬಳಿ ಕಳೆದ ಹಲವಾರು ವರ್ಷಗಳಿಂದ ವಿದ್ಯುತ್ ತಂತಿಗೆ ಬಿದಿರುತಾಗುತ್ತದೆ, ಕಂಬ ವಾಲಿದೆ, ಇದರ ದುರಸ್ತಿಯಾಗಿಲ್ಲ. ಹೀಗಾಗಿ ಈ ಲೈನ್ ಪದೇ ಪದೇ ಟ್ರಿಪ್ ಆಗುತ್ತದೆ..!.
ವಿದ್ಯುತ್ ಕೈಕೊಡುವ ಜೊತೆಗೇ ಬಿ ಎಸ್ ಎನ್ ಎಲ್ ಮೊಬೈಲ್ ಕೂಡಾ ಮಾಯವಾಗುತ್ತದೆ. ವಿದ್ಯುತ್ ಹೊಂದಿಕೊಂಡು ಇರುವ ಮೊಬೈಲ್ ಟವರ್ ಆಫ್ ಆಗುತ್ತದೆ. ಇಂದಿಗೂ ಗ್ರಾಮೀಣ ಭಾಗದಲ್ಲಿ ಬಿ ಎಸ್ ಎನ್ ಎಲ್ ಮೊಬೈಲ್ ಬಳಕೆ ಹೆಚ್ಚಿದೆ. ವಿದ್ಯುತ್ ಕೈಕೊಡುವ ಕಾರಣದಿಂದ ಮೊಬೈಲ್ ಕೂಡಾ ಇಲ್ಲವಾಗುತ್ತದೆ ಸಂಪರ್ಕ ಮರೆಯಾಗುತ್ತದೆ. ಬಿ ಎಸ್ ಎನ್ ಎಲ್ ಡೀಸೆಲ್ ಸರಬರಾಜು ಮಾಡದೇ ಇರುವ ಕಾರಣ ಟವರ್ ಆಫ್. ಅಲ್ಲೂ ಕಾರಣ ಕೇಳಿದರೆ ಕರೆಂಟ್ ಇಲ್ಲ…!. ಇತ್ತೀಚೆಗೆ ಅನಾರೋಗ್ಯದ ಸಂದರ್ಭದಲ್ಲೂ ತುರ್ತಾಗಿ ಸಂಪರ್ಕ ಮಾಡಬೇಕಾದರೆ ಸಂಕಷ್ಟ ಪಡಬೇಕಾದ ಸ್ಥಿತಿ ಗ್ರಾಮೀಣ ಭಾರತದ್ದು..! ನೂತನ ಸರಕಾರ ಬಂದ ಬಳಿಕ ಇದೆಲ್ಲಾ ಸರಿಯಾಗುತ್ತದೆ ಎನ್ನಲಾಗಿತ್ತು , ಈಗ ಅದಕ್ಕೂ ಚಾಲನೆ ಸಿಕ್ಕಿಲ್ಲ.
ಮೊಬೈಲ್ ನೆಟ್ವರ್ಕ್ ಅನ್ನೇ ಹೊಂದಿಕೊಂಡಿರುವ ಡಿಜಿಟಲ್ ಇಂಡಿಯಾದ ಭಾಗವಾಗಿರುವ ಇಂಟರ್ನೆಟ್ ಕೂಡಾ ಇಲ್ಲವಾಗುತ್ತದೆ. ಯುವಕರಿಂದ ತೊಡಗಿ ಎಲ್ಲರೂ ಇಂದು ಡಿಜಿಟಲ್ ಯುಗದತ್ತ ಹೊರಳಿರುವಾಗ, ಇದ್ಯಾವುದೂ ಇಲ್ಲದೆ ಮೇಲೆ ಕೆಳಗೆ ನೋಡಬೇಕಾದ ಸ್ಥಿತಿ ಗ್ರಾಮೀಣ ಭಾರತದಲ್ಲಿದೆ.
ಇದೆಲ್ಲಾ ನಿವಾರಣೆಯಾಗದ ಸಮಸ್ಯೆಯಲ್ಲ. ಜನಪ್ರತಿನಿಧಿಗಳು ಈ ಬಗ್ಗೆ ಖಡಕ್ ಆಗಿ ಮಾತನಾಡಿದರೆ ಎಲ್ಲವೂ ಒಂದೇ ವಾರದಲ್ಲಿ ಸರಿಯಾಗಲು ಸಾಧ್ಯವಿದೆ. ರಚನಾತ್ಮಕವಾಗಿ ನೋಡಿದರೆ ಗ್ರಾಮೀಣ ಭಾರತದ ಸುಧಾರಣೆಗೆ ಇಂದು ಕರೆಂಟು – ನೆಟ್ವರ್ಕ್ – ಇಂಟರ್ನೆಟ್ ಅಗತ್ಯವಾಗಿದೆ. ಹೀಗಾಗಿ ಅಭಿವೃದ್ಧಿಪರವಾಗಿ ಯೋಚಿಸಿದರೆ ಈ ಸಮಸ್ಯೆಗಳು ಪರಿಹಾರವಾಗಲು ಸಾಧ್ಯವಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆ.1 ರಂದು ಕೇಂದ್ರ ಬಜೆಟ್ ಮಂಡಿಸಲಿದ್ದು,…
ಮಾನಸಿಕ ವಿಕಲಚೇತನರಾಗಿ ಉಡುಪಿಯಲ್ಲಿ ರಸ್ತೆ ಬದಿ ತಿರುಗಾಡುತ್ತಿದ್ದ ಬಿಹಾರದ ರಮಾದೇವಿ ಅವರು ವರ್ಷದ…
ಮಣ್ಣಿನಲ್ಲಿ ಬಿದ್ದ ಬೀಜವು ಜೀವಂತಿಕೆಯಿಂದ ತನ್ನ ಬೇರುಗಳನ್ನು ಸಿಕ್ಕಿದ ಬಿರುಕುಗಳಲ್ಲಿ ಹಬ್ಬಿಸುತ್ತ ತೆವಳುತ್ತ…
ಮುಂದಿನ ಆರ್ಥಿಕ ವರ್ಷದಿಂದ ರಾಜ್ಯದ ಸಾವಯವ ಉತ್ಪನ್ನಗಳ ಮಾರಾಟಕ್ಕೆ ಎಪಿಎಂಸಿಗಳಲ್ಲಿ ಮಾರುಕಟ್ಟೆ ವ್ಯವಸ್ಥೆ…
ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ಅಧ್ಯಯನ ಮಾಡಲು ಶ್ರೀಲಂಕಾದಿಂದ 38 ಮಂದಿ “ಲಂಕಾ…
ಬದಲಾದ ಕಾಲದಲ್ಲಿ ನಾವು ಇಂತಹ ಪರಿಕರಕೊಳ್ಳುವ ಮೊದಲು ನಮಗೆಷ್ಟು ಇದು ಪ್ರಯೋಜನಕಾರಿ ಎಂದು…