ಮಡಿಕೇರಿ : ಕಳೆದು ಹೋದ ಪ್ರಕೃತಿಯನ್ನು ಉಳಿಸಿಕೊಳ್ಳಲಾಗದೆ ಮತ್ತೊಬ್ಬರ ನಂಬಿಕೆಯನ್ನು ಪ್ರಶ್ನಿಸಿ ಮಾನಸಿಕ ಹಿಂಸೆ ನೀಡುವ ಪ್ರಯತ್ನಗಳು ಹೆಚ್ಚಾಗುತ್ತಿದೆ ಎಂದು ಶಿವಮೊಗ್ಗ ಕವಿಕಾವ್ಯ ಟ್ರಸ್ಟ್ ನ ರಂಗಕರ್ಮಿ ಪ್ರಸನ್ನ ವಿಷಾದ ವ್ಯಕ್ತಪಡಿಸಿದ್ದಾರೆ.
ಕೊಡಗು ಲೇಖಕ ಮತ್ತು ಕಲಾವಿದರ ಬಳಗ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜ್‍ನ ಸಂಯುಕ್ತಾಶ್ರಯದಲ್ಲಿ ಕಾಲೇಜು ಆವರಣದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಸಭಾಂಗಣದಲ್ಲಿ ಬಿ.ಆರ್.ಜೋಯಪ್ಪ ಅವರು ಬರೆದ “ಕಾಟಿಬೆಟ್ಟದ ಕತೆಗಳು” ಪುಸ್ತಕ ಅನಾವರಣ ಕಾರ್ಯಕ್ರಮ ನಡೆಯಿತು.
ಪುಸ್ತಕವನ್ನು ಅನಾವರಣಗೊಳಿಸಿ ಮಾತನಾಡಿದ ಪ್ರಸನ್ನ ಅವರು, ಹಿಂದೆ ಪರಿಸರವನ್ನು ಉಳಿಸಿ ಬೆಳೆಸುವ ಸಂಸ್ಕೃತಿಯನ್ನು ಅನುಸರಿಸಲಾಗುತ್ತಿತ್ತು. ಆದರೆ ಪ್ರಸ್ತುತ ದಿನಗಳಲ್ಲಿ ಬೆಟ್ಟ, ಗುಡ್ಡಗಳನ್ನು ನಾಶ ಮಾಡಿ, ಕಟ್ಟಡ ಕಾಮಗಾರಿಗಳಿಂದ ಪ್ರಕೃತಿಯ ಸೊಬಗನ್ನು ನಿರಂತರವಾಗಿ ನಾಶ ಮಾಡಲಾಗುತ್ತಿದೆ. ಬಾಲ್ಯವೆಂಬುದು ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಮಹತ್ತರ ಘಟ್ಟವಾಗಿದೆ. ಆದರೆ ಆಧುನಿಕತೆಯ ಆಡಂಬರದಿಂದಾಗಿ ಮಕ್ಕಳ ಬದುಕು ಸಂಕುಚಿತಗೊಳ್ಳುತ್ತಿದೆ. ಹೆಣ್ಣು ಮಕ್ಕಳು ತಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಆಚಾರ ವಿಚಾರವನ್ನು ಗೌರವಿಸುತ್ತಿದ್ದರು. ಆದರೆ ಇಂದು ಪದ್ದತಿ, ಪರಂಪರೆಗಳು ನಾಶವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಪರಿಸರದ ಅಳಿವು-ಉಳಿವು ಸ್ತ್ರೀಶಕ್ತಿ ಕೈಯಲಿದೆ ಎಂದರು. ವಿದ್ಯಾರ್ಥಿಗಳಲ್ಲಿ ಪುಸ್ತಕ ಓದುವ ಹವ್ಯಾಸ ಕಡಿಮೆಯಾತ್ತಿದ್ದು, ತಾಂತ್ರಿಕತೆಯೊಂದಿಗೆ ಓದಿನ ಮೇಲೆ ಆಸಕ್ತಿ ಬೆಳೆಸಿಕೊಳ್ಳಬೇಕೆಂದು ಪ್ರಸನ್ನ ಕಿವಿಮಾತು ಹೇಳಿದರು.
ಹೆಸರಾಂತ ಕತೆಗಾರ ಹಾಗೂ ಮೈಸೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ಅಬ್ದುಲ್ ರಶೀದ್ ಮಾತನಾಡಿ, ಹಿಂದಿನ ಕಾಲದಲ್ಲಿ ಒಂದು ಪುಸ್ತಕವನ್ನು ಪ್ರಕಟ ಮಾಡಬೇಕಾದರೆ ಅದರಲ್ಲಿ ಅನೇಕರ ಪರಿಶ್ರಮ ಅಡಕವಾಗಿರುತ್ತಿತ್ತು. ಆದರೆ ಪ್ರಸ್ತುತ ದಿನಗಳಲ್ಲಿ ನೂತನ ತಂತ್ರಜ್ಞಾನದಿಂದಾಗಿ ಲೇಖನ ಪ್ರಕಟ, ಪುಸ್ತಕ ಮುದ್ರಣ ಮತ್ತು ಓದುವುದು ಸುಲಭವಾಗಿದೆ ಎಂದರು.
“ಬೆಟ್ಟದ ಕತೆಗಳು” ಕೃತಿಕಾರ ಬಿ.ಆರ್.ಜೋಯಪ್ಪ ಮಾತನಾಡಿ ಕೃತಿ ರಚನೆಯ ಅನುಭವಗಳನ್ನು ಹಂಚಿಕೊಂಡರು. ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಯಂ.ಪಿ.ಕೇಶವ ಕಾಮತ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಲೇಜ್‍ನ ಪ್ರಾಂಶುಪಾಲ ಪಿ.ಆರ್.ವಿಜಯ, ಕಲಾವಿದರ ಬಳಗದ ಪ್ರಧಾನ ಕಾರ್ಯದರ್ಶಿ ವಿಲ್ಫರ್ಡ್ ಕ್ರಾಸ್ತಾ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್, ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.