ಕೂದಲು ದಟ್ಟವಾಗಿದ್ದಾಗ ಹೆಣ್ಣಿಗೆ ಸಹಜವಾದ ಸೌಂದರ್ಯ. ಅದರಲ್ಲೂ ಕಪ್ಪು ಬಣ್ಣದ ಕೂದಲು, ಅದೃಷ್ಟವೇ. ….
ಅದರಲ್ಲೂ ದೀರ್ಘ ಕಾಲ ಕೂದಲು ಕಪ್ಪಾಗಿದ್ದರಂತೂ ಸುಖಿಯೇ. ಮಿರಿಮಿರಿ ಮಿಂಚುವ ದಟ್ಟವಾಗಿರುವ ಕೂದಲು ಎಲ್ಲರ ಮೆಚ್ಚಿನದ್ದೇ.
ಮೊಮ್ಮಗಳ ಕೂದಲೆಂದರೆ ಅಜ್ಜಿ ಗೊಂದು ಪ್ರಯೋಗ ಶಾಲೆ. ಅಜ್ಜಿ ಹೇಗೆ ಕಟ್ಟಿದರೂ ಮೊಮ್ಮಗಳಿಗೆ ಇಷ್ಟವೇ. ದೂರದರ್ಶನ ದಲ್ಲಿ ವಾರ್ತಾವಾಚಕಿಯರಾದ ಕಾವೇರಿ ಮುಖರ್ಜಿ, ಸರಳಾ ಮಹೇಶ್ವರಿ, ಸಬೀಹಬಾನು, ಸುರಭಿ ರೇಣುಕಾ ಶಹಾನೆಯಾವರ ಹೇರ್ ಸ್ಟೈಲ್ ಗಳ, ಯಥಾವತ್ತಾಗಿ ಮೊಮ್ಮಗಳ ತಲೆ ಕೂದಲಲ್ಲಿ ಕಟ್ಟುವುದೇ ಖುಷಿಯ ವಿಷಯ ಅಜ್ಜಿಗೆ. ಹಿಂದೆ ತಿರುಗಿಸಿ, ಮುಂದೆ ನಿಲ್ಲಿಸಿ ಹೇಗೆ ಕಟ್ಟಿದರೂ ಸರಿಯಾಗದೆ ಮತ್ತೆ ಮತ್ತೆ ಬಿಚ್ಚಿ ಕಟ್ಟುವುದರಲ್ಲೇ ಅಜ್ಜಿಗೆ ನೆಮ್ಮದಿ. ರಜೆ ಇದ್ದಾಗ ಸುಮ್ಮನೆ ಕೂತುಕೊಳ್ಳುತ್ತಿದ್ದ ಮೊಮ್ಮಗಳು ಶಾಲಾ ದಿನಗಳಲ್ಲಿ ಗಡಿಬಿಡಿ ಮಾಡಿ ಓಡಿಬಿಡುತ್ತಿದ್ದಳು. ಆದರೂ ಸ್ಟೈಲಿಷ್ ಆಗಿ ಕಾಣುತ್ತಾ, ಎಲ್ಲರ ಹೊಟ್ಟೆ ಉರಿಸುತ್ತಾ ಇರುವುದೆಂದರೆ ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ. ದಿನಕ್ಕೊಂದು ನಮೂನೆಯ ಕೂದಲಿನ ಅಲಂಕಾರದಲ್ಲಿ ಕಂಗೊಳಿಸುತ್ತಾ ಗೆಳತಿಯರ ಹೀರೋಯಿನ್ ಆಗಿ ಮಿಂಚುವುದೇ…….
ಮಿರಿ ಮಿರಿ ಮಿಂಚುವ ಕಪ್ಪು ಕೂದಲು ಎಲ್ಲರ ಕನಸು. ಪ್ರಾಕೃತಿಕವಾಗಿ ಪಡೆದುಕೊಂಡ ಆಸ್ತಿ. ಕೂದಲಿನ ಬಣ್ಣಕಪ್ಪಾದರೂ ಒಂದೇ ರೀತಿಯ ಬಣ್ಣವಲ್ಲ. ಗಾಢವಾದ ಕಪ್ಪು , ಕೆಂಚು ಬಣ್ಣ, ಇನ್ನೂ ಹೊರದೇಶದವರಾದರೆ ಅಲ್ಲಿನವರ ಕೂದಲು ಬೇರೆಯೇ ( ಕೆಂಚು , ಬಿಳಿ, ಕಂದು) ಬಣ್ಣಗಳು. ಒಬ್ಬೊಬ್ಬರ ಕೂದಲು ಒಂದೊಂದು ನಮೂನೆಯದು. ಗುಂಗುರು , ನೇರ, ಅರ್ಧ ಗುಂಗುರು. ನಯವಾದ ಕೂದಲು ,ಒರಟು ಕೂದಲು. ಆಶ್ಚರ್ಯವೇನು ಗೊತ್ತಾ ಗುಂಗುರು ಇರುವವ ರಿಗೆ ನೇರವಿರಬೇಕೆಂಬ ಆಸೆ, ನೇರ ಕೂದಲನ್ನು ಗುಂಗುರು ಮಾಡಿದರೆ ಚೆಂದ ಎಂಬಾಸೆ. ಹೀಗೆ ನಮ್ಮದಲ್ಲದ ಕೂದಲನ್ನು ನಮ್ಮದಾಗಿಸುವ ಆಸೆಯಲ್ಲಿ ಹಲವು ಸರ್ಕಸ್ ಗಳಿಗೆ ಬಲಿಯಾಗುವುದು ಪಾಪದ ಕೂದಲು.
ನಾಗವೇಣಿಯರ ನೀಳ ಜಡೆಗಳಿಗೊಲಿದ ಪುಣ್ಯಾತ್ಮರೆಷ್ಟೋ. ಯಾಕೆ ಅವುಳ ಗೆಳತನ ಮಾಡಿದ್ದೀಯಾ ಅಂದಾಗ ನೋಡು ಅವಳ ಜಡೆ ಎಷ್ಟು ಚಂದವಾ ನನ್ನದು ನೋಡು ಮೋಟು ಮೋಟಾಗಿದೆ. ಅವಳ ಜೊತೆಗಿದ್ದುದಕ್ಕಾದರು ನನ್ನ ಕೂದಲು ಉದ್ದವಾಗುತ್ತದೇನೋ ಎಂಬ ಆಸೆ ಮಾರಾಯ್ತಿ ಎಂದು ಹೇಳಿದ ಹಲವು ಗೆಳತಿಯರಿದ್ದಾರೆ. ಉದ್ದ ಜಡೆಯವರಿಗೆ ಅದನ್ನು ನಿತ್ಯದ ಜಂಜಾಟದಲ್ಲಿ ನಿರ್ವಹಿಸುವುದೇ ಕಷ್ಟಕರ. ದೂಳು, ಮಣ್ಣು ,ಬೆವರು ಸೇರುವುದರಿಂದ ನಿತ್ಯ ತಲೆಗೆ ಸ್ನಾನ ಮಾಡುವ ಅನಿವಾರ್ಯತೆ. ಸ್ನಾನಮಾಡಿದರೆ ಸಾಕೆ ಒಣಗಿಸಬೇಕಲ್ಲಾ ಅದು ಕಷ್ಟದ ಕೆಲಸವೇ. ನಿತ್ಯ ಆರೈಕೆ ಮಾಡದಿದ್ದರೆ ಹೇನು ಕಜ್ಜಿ ಆಗಿಬಿಡುತ್ತದೆ. ಒಮ್ಮೆ ಹೇನು ಸೇರಿತೆಂದರೆ ಮುಗಿಯಿತು, ಅದರಿಂದ ಮುಕ್ತಿ ಪಡೆಯುವುದು ಅಷ್ಟೇ ಕಷ್ಟ. ಮನೆಯಲ್ಲಿ ಅಜ್ಜಿಗೆ ಹೇನಿಗೆ ನಿವೃತ್ತಿ ಮಾಡದೇ ಸಮಾಧಾನವೇ ಇರದು. ಹಗಲು ಬಾಚಲು ಬಿಡದೆ ಓಡುವ ಮೊಮ್ಮಗಳು ನಿದ್ದೆ ಹೋದ ಮೇಲೆ ಬಿಳಿಯ ಪೇಪರ್ ತಲೆಯಡಿಗೆ ಹಾಸಿ ಟಾರ್ಚ್ ಲೈಟಿನ ಬೆಳಕಿನಲ್ಲಿ ಮೆತ್ತಗೆ ಬಾಚಿ ಹೇನು ಹುಡುಕುವ ಅಜ್ಜಿ ಇವತ್ತು 20 ಹೇನು ಕೊಂದೆ ಮಾರಾಯ್ತಿ ಎಂದು ಸೊಸೆಯ ಬಳಿ ಹೇಳಿಕೊಂಡಾಗಲೇ ಮನಸ್ಸಿಗೇನೋ ನೆಮ್ಮದಿ. ನಾಳೆ ಹಗಲು ಬೆಳಕಲ್ಲೇ ಬಾಚಿ ಖಾಲಿ ಮಾಡಿಯೇ ತೀರಬೇಕೆಂಬ ಶಪತ ದಿನಾ ಮಾಡುವುದೇ…
ಎಣ್ಣೆ ಹಾಕಿ ,ಸೀಗೆ ಬಾಗೆ, ಗೊಂಪು ಹಾಕಿ ತೊಳೆದು ,ಕಾಪಾಡಿದ ಕೂದಲು, ಶ್ರದ್ಧೆಯಿಂದ ದಿನಾಲೂ ಬಾಚಿ , ಎರಡು ಜಡೆ ಕಟ್ಟಿ ಜತನ ಮಾಡಿದ ಕೂದಲಿಗೆ, ಕಾಲೇಜು ಸೇರುತ್ತಿದ್ದಂತೆ ಕತ್ತರಿ ಪ್ರಯೋಗವಾದಾಗ ಅಜ್ಜಿ, ಅಮ್ಮನ ಕಣ್ಣಲ್ಲಿ ಕಂಡೂ ಕಾಣದೆ ಹರಿದು ಹೋಗಿ ಬಿಡುವ ಕಣ್ಣೀರು……
ಕೂದಲಿನದ್ದು ಒಬ್ಬೊಬ್ಬರದು ಒಂದೊಂದು ಕಥೆ. ಇಂದಿನ ದಿನಗಳಲ್ಲಿ ಪ್ರಾಯಕ್ಕೂ ಕೂದಲಿನ ಬಣ್ಣಕ್ಕೂ ಸಂಬಂಧವಿಲ್ಲ. ಕೆಲವರದ್ದು ಬೇಗ ಬಿಳಿಯಾಗುತ್ತದೆ, ಇನ್ನೂ ಕೆಲವರದ್ದು ನಿಧಾನವಾಗಿ. ಅವರವರ ದೇಹ ಧರ್ಮ. ಅನುವಂಶೀಯವಾಗಿ ಕೆಲವರದ್ದು ಅರವತ್ತಾದರೂ ಕೂದಲು ಅಲ್ಲೊ ಇಲ್ಲೋ ಒಂದೊಂದು ಬಿಳಿಯಾಗಿರುತ್ತದಷ್ಟೇ . ಇನ್ನು ಕೆಲವರದ್ದು ಮೂವತ್ತಕ್ಕೇ ಐವತ್ತುಪ್ರತಿಶತ ಕೂದಲು ಬಿಳಿಯಾಗಿರುತ್ತವೆ. ಕೂದಲು ಬೆಳ್ಳಗಾಗಲು ಕಾರಣ ಹಲವಿರಬಹುದು. ಆಹಾರಕ್ರಮ ಮುಖ್ಯ ಕಾರಣವೆನ್ನುತ್ತಾರೆ. ಮತ್ತೆ ನಾವು ಬಳಸುವ ನೀರು, ಸಾಬೂನು, ಶ್ಯಾಂಪೋ ಹೀಗೆ ಹಲವಾರು. ಆದರೆ ಯಾಕೆ ಬಿಳಿಯಾಯಿತೆಂದು ಯಾರು ಕೇಳುವುದಿಲ್ಲ. ಓಹ್ ಎಷ್ಟು ಬಿಳಿಯಾಗಿದೆಯಲ್ಲವಾ ಕೂದಲು ಅನ್ನುತ್ತಾರಷ್ಟೇ.
ಕೂದಲು ಒಂದೊಂದೇ ಬಿಳಿಯಾಗಲಾರಂಭಿಸಿದಾಗ ಅದನ್ನು ಕಿತ್ತೋ, ಬಣ್ಣ ಹಾಕಿಯೋ ಮರೆಮಾಚಲಾರಂಭಿಸುತ್ತೇ ವೆ. ಯಾಕೆ ಬಿಳಿಯಾಯಿತೆಂದು ಯೋಚಿಸಲು ಹೋಗುವುದಿಲ್ಲ. ಸಮಸ್ಯೆಯ ಮೂಲವನ್ನು ಅರಿತರೆ ಪರಿಹಾರ ಸಾಧ್ಯವೇನೋ. ?!!!!
ಕೆಲವೊಮ್ಮೆ ವಿಟಮಿನ್ ಕೊರತೆಯಿಂದಲೂ ಕೂದಲಿನ ಬಣ್ಣ ಬಿಳಿಯಾಗುವುದು. ಕೆಲವೊಂದು ಔಷಧಗಳ ಅಡ್ಡ ಪರಿಣಾಮವೂ ಹೌದು. ಕೆಲವರದ್ದಂತು ಕೂದಲು ಅಕಾಲದಲ್ಲಿ ಉದುರಿ ಬಕ್ಕ ತಲೆಯ ಸಮಸ್ಯೆ ಕಾಡುತ್ತದೆ. ಅದಕ್ಕೂ ಕೂದಲಿನ ಕಸಿ ಕಟ್ಟಿ ಚಿಕಿತ್ಸೆ ಮಾಡಿ ಆ ಸಮಸ್ಯೆಗೂ ಪರಿಹಾರ ಕಂಡು ಹುಡುಕಿದ್ದಾರೆ. ಪ್ರಕೃತಿದತ್ತವಾಗಿ ಕೂದಲು ಚೆನ್ನಾಗಿ ಇದ್ದಾಗ ಅದನ್ನು ಹಾಳು ಮಾಡದೆ ಜತನದಿಂದ ಆರೈಕೆ ಮಾಡಿ ಉಳಿಸಿ ಕಾಪಾಡಿಕೊಂಡಾಗ ದೇಹಕ್ಕೂ , ಮನಸಿಗೂ ಸೌಖ್ಯ.
* ಅಶ್ವಿನಿ ಮೂರ್ತಿ ಅಯ್ಯನಕಟ್ಟೆ