ಮೊನ್ನೆ ಮೊನ್ನೆಯವರೆಗೂ ಭಾಷಣ ಕೇಳುತ್ತಿತ್ತು, ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ. ಅನೇಕ ಕೃಷಿ ಭೂಮಿಗಳು ಬರಡಾಗಿವೆ. ಭವಿಷ್ಯದಲ್ಲಿ ಕೃಷಿಗೆ ಭವಿಷ್ಯ ಇದೆ…. ಹೀಗೆಲ್ಲಾ ಭಾಷಣ ಕೇಳುತ್ತಾ ಚಪ್ಪಾಳೆ ಹೊಡೆಸಿಕೊಳ್ಳುತ್ತಿರುವುದನ್ನು ಕಂಡಿದ್ದೇವೆ. ಈಗ ಕಾಲ ಬದಲಾಗಿದೆ. ಹಳ್ಳಿಗಳು ಯುವಕರ ಶಕ್ತಿ ಕೇಂದ್ರವಾಗುತ್ತಿದೆ. ಈಗ ನೀವು ಹಳ್ಳಿಗೆ ಏನು ಕೊಡುತ್ತೀರಿ ? ಭಾಷಣ ಮಾಡುತ್ತಾ ನೀವೇನು ಕೊಟ್ಟಿದ್ದೀರಿ ಹಳ್ಳಿಗೆ…?
ಹೀಗಾಗಬಹುದು ಎಂದು ಯಾರೂ ಊಹಿಸಿರಲಿಲ್ಲ.
ಕೊರೋನಾ ಇಡೀ ಜಗತ್ತನ್ನು ಬದಲಾಯಿತು. ನಿನ್ನೆ ಮೊನ್ನೆಯವರೆಗೆ ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ಯುವಕರು ಇಂದು ನೇರವಾಗಿ ಹಳ್ಳಿಗೆ ಇಳಿಯಬೇಕಾದ ಸ್ಥಿತಿ ಬಂದಿದೆ. ಈಚೆಗೆ ವಿಡಿಯೋ ಒಂದು ವೈರಲ್ ಆಗಿತ್ತು, ಗದ್ದೆಯ ಪರಿಚಯ ಮಾಡುವ ಉದ್ಯೋಗಿ ಯುವಕ ಗದ್ದೆಯಲ್ಲಿ ಕೆಲಸ ಮಾಡುವ ಟೆಕ್ನಿಶಿಯನ್ ಗಳ ಪರಿಚಯ ಮಾಡುತ್ತಿದ್ದ, ಕೊರೋನಾ ಪರಿಸ್ಥಿತಿಯನ್ನು ಹಳಿಯುವ ಬದಲು ಸ್ವೀಕರಿಸಿದ್ದ. ಈಗಿನ ಸ್ಥಿತಿಯಲ್ಲಿ ಆಗಬೇಕಾದ್ದೂ ಅದೇ, ಪರಿಸ್ಥಿತಿಯನ್ನು ಹಳಿಯುವ ಬದಲು ಬದಲಾವಣೆಯತ್ತ ಒಗ್ಗಿಕೊಳ್ಳಬೇಕು. ನನ್ನೊಬ್ಬ ಆಪ್ತರು ಇದ್ದಾರೆ, ಅನೇಕ ವರ್ಷಗಳ ಹಿಂದೆ ಎಂ ಎಸ್ ಡಬ್ಯು ಮಾಡಿ ಸಂಪೂರ್ಣವಾಗಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ, ಹಳ್ಳಿ ಬದುಕನ್ನು ಸ್ವೀಕರಿಸಿದ್ದಾರೆ. ಇಂದಿನ ಪರಿಸ್ಥಿತಿಯಲ್ಲಿ ದೊಡ್ಡ ಉದ್ಯೋಗ, ದೊಡ್ಡ ಡಿಗ್ರಿಯ ಮುಂದೆ ಸದ್ಯ ಕೃಷಿ, ಕೃಷಿಕ ಎನ್ನಲು ಭಯ ಬೇಕಾಗಿಲ್ಲ. ಕೊರೋನೋತ್ತರದಲ್ಲಿ ಬದಲಾವಣೆ ಅಗತ್ಯವಾಗಿದೆ. ಹೀಗಾಗಿ ಈಗ ಹಳ್ಳಿಗಳನ್ನು ಮತ್ತೆ ಕಟ್ಟುವ ಕೆಲಸ ಶುರು ಮಾಡಬೇಕು. ಏಕೆಂದರೆ ಅನೇಕ ವರ್ಷಗಳಿಂದ ಶಿಥಿಲವಾಗಿದ್ದ, ಜೀವಂತಿಕೆ ಕಳೆದುಕೊಂಡಿದ್ದ ಹಳ್ಳಿಗಳಲ್ಲಿ ಈಗ ವಿದ್ಯಾವಂತ ಯುವಕರು ತುಂಬುತ್ತಿದ್ದಾರೆ, ವೃದ್ಧಾಶ್ರಮಗಳು ದೂರವಾಗುತ್ತಿವೆ. ಈಗ ಜವಾಬ್ದಾರಿಗಳು ಅಷ್ಟೇ ಇವೆ. ಅದು ಭಾಷಣ ಮಾಡಿದಷ್ಟು ಸುಲಭವಲ್ಲ. ಕೃಷಿ ಬೆಳೆಸುವುದು ಹಿಂದಿನ ಪದ್ಧತಿಯಿಂದ ಬದಲಾಗಬೇಕಿದೆ, ಆನ್ ಲೈನ್ ವ್ಯವಸ್ಥೆ, ವರ್ಕ್ ಫ್ರಂ ಹೋಂ ಕ್ರಮೇಣವಾಗಿ ವರ್ಕ್ @ ತೋಟವಾಗಿ ಬದಲಾಗಬೇಕಾಗಿದೆ. ಇದಕ್ಕಾಗಿಯೇ ವೃದ್ಧಾಶ್ರಮ ಎಂದು ಭಾಷಣ ಮಾಡುತ್ತಿದ್ದ , ಕೃಷಿ ಸಂಸ್ಕೃತಿ, ಋಷಿ ಸಂಸ್ಕೃತಿ , ಭಾರತದ ಮೂಲಸತ್ವ ಕೃಷಿ ಎನ್ನುತ್ತಿದ್ದವರಿಗೆಲ್ಲಾ ಈಗ ಜವಾಬ್ದಾರಿ ಹೆಚ್ಚಿದೆ. ಈ ಹಂತದಲ್ಲಿ ಯುವಕರಿಗೆ ತಕ್ಷಣಕ್ಕೆ ಹಣ ಬೇಕಾಗಿಲ್ಲ, ಅನುದಾನಗಳು ಬೇಕಾಗಿಲ್ಲ. ಅವರಲ್ಲಿ ಕೌಶಲ್ಯ ಇದೆ, ಐಡಿಯಾ ಇದೆ, ಹೊಸ ಅನ್ವೇಷಣೆ ಇದೆ. ಮತ್ತೆ ಕನಸುಗಳನ್ನು ಕಟ್ಟಿಕೊಂಡಿದ್ದಾರೆ. ಹೀಗಾಗಿ ಹಳ್ಳಿಗಳಿಗೆ ಸೌಲಭ್ಯಗಳನ್ನು ಕೊಡಬೇಕಿದೆ. ಏಕೆಂದರೆ….?
ಹಳ್ಳಿಗಳಿಗೆ ಈಗ ಬರುವ ಯುವಕರು ಹೊಸಬರಾಗಿ ಬಂದಿದ್ದಾರೆ. ಅವರಲ್ಲಿ ಆಧುನಿಕ ತಾಂತ್ರಿಕತೆ ಇದೆ. ಕೃಷಿ ಭೂಮಿಗೆ ಸುಲಭದಲ್ಲಿ ಇಳಿಯುತ್ತಾರೆ. ಹಳೆಯ ಪದ್ಧತಿ ಬಿಟ್ಟು ಸಣ್ಣ ಸಣ್ಣ ಮೋಟೋ ಕಾರ್ಟ್ ಗಳ ಮೂಲಕ ಕೃಷಿ ಭೂಮಿಗೆ ಇಳಿಯುತ್ತಾರೆ. ಔಷಧಿ ಸಿಂಪಡಣೆಗೆ ಹೊಸ ತಂತ್ರಜ್ಞಾನ ಬಳಕೆ ಯೋಚನೆ ಮಾಡುತ್ತಾರೆ. ಭವಿಷ್ಯದಲ್ಲಿ ಯಾವ ಬೆಳೆ ಎಂದು ಆಯ್ಕೆ ಮಾಡಿಯೇ ಬಿತ್ತನೆ ಮಾಡುತ್ತಾರೆ. ಅದಾದ ನಂತರ ಇರುವ ಸವಾಲು ಎದುರಿಸಲು ಸಿದ್ಧತೆ ನಡೆಯಬೇಕು.
ಬೆಳೆದ ಬೆಳೆಗೆ ರೋಗ ನಿರ್ವಹಣೆ, ಸಮೃದ್ಧ ಫಸಲು ಹೇಗೆ ಎಂಬಲ್ಲಿಂದ ತೊಡಗಿ ಮಾರುಕಟ್ಟೆ ವ್ಯವಸ್ಥೆಯವರೆಗೆ ಯುವಕರಿಗೆ ಸೂಕ್ತ ಮಾರ್ಗದರ್ಶನದ ಅವಶ್ಯಕತೆ ಇದೆ. ಇದಕ್ಕಾಗಿ ಆನ್ ಲೈನ್ ವ್ಯವಸ್ಥೆ ಬೇಕಿದೆ. ಅದರ ಜೊತೆಗೇ ಆಧುನಿಕ ಯುಗದಲ್ಲಿ ಮಾರುಕಟ್ಟೆಗೆ ಸೂಕ್ತ ವೇದಿಕೆ ಬೇಕಿದೆ. ಅದಕ್ಕೂ ಆನ್ ಲೈನ್ ಅಗತ್ಯವಿದೆ. ಸರಿಯಾದ ರಸ್ತೆ ವ್ಯವಸ್ಥೆಯೂ ಬೇಕಾಗುತ್ತದೆ. ಹೈನುಗಾರಿಕೆ ಮಾಡುವ ಮಿತ್ರ ಲಕ್ಷ್ಮಣ ಹೇಳುತ್ತಿದ್ದರು, 10 ಲೀಟರ್ ಹಾಲು ಕರೆದು ಹಾಲು ಸೊಸೈಟಿಗೆ ತಲಪುವಾಗ ಕನಿಷ್ಠ ಅರ್ಧ ಲೀಟರ್ ಖಾಲಿಯಾಗುತ್ತದೆ, ರಸ್ತೆ ವ್ಯವಸ್ಥೆ ಸರಿ ಇಲ್ಲದ ಕಾರಣದಿಂದ ವ್ಯರ್ಥವಾಗುತ್ತದೆ ಎನ್ನುತ್ತಾರೆ. ಇಂತಹ ಮೂಲಭೂತ ವ್ಯವಸ್ಥೆಗಳಿಗೆ ಆದ್ಯತೆ ಬೇಕಿದೆ. ಆದರೆ ಭಾಷಣ ಮಾಡುವ ಮಂದಿ ಇಂತಹ ಮೂಲಭೂತ ವ್ಯವಸ್ಥೆಗೆ ಆದ್ಯತೆ ನೀಡಲಿಲ್ಲ, ಕೇವಲ ಓಟ್ ಬ್ಯಾಂಕ್ ರಚನೆ ಮಾಡಿದರು, ಭಾವನಾತ್ಮಕವಾಗಿ ರಂಜಿಸಿದರು.
ಸಾಮಾಜಿಕ ವ್ಯವಸ್ಥೆಯ ಕಡೆಗೆ ಬಂದಾಗಲೂ ಅನೇಕ ಸುಧಾರಣೆ ಬೇಕಿದೆ, ಮಿತ್ರ ಉದಯ ಹೇಳುತ್ತಾನೆ ಮನೆಯ ಕನ್ವರ್ಶನ್ ಗೆ ತಿಂಗಳುಗಟ್ಟಲೆ ಅಲೆದಾಡಿದ್ದೇನೆ, ಈಗಲೂ ಆಗಿಲ್ಲ ಅನ್ನುತ್ತಾನೆ. ಭ್ರಷ್ಟಾಚಾರ ಇಷ್ಟವಿಲ್ಲ ಹಾಗಾಗಿ ಹಣ ನೀಡಿಲ್ಲ ಎನ್ನುತ್ತಾ ಅಲೆದಾಡಿ ಕಳೆದುಹೋದ ದಿನಗಳ ನೆನಪಿಸುತ್ತಾನೆ. ಮಿತ್ರ ಸುಧಾಕರ ಹೇಳುತ್ತಾರೆ, ಭೂಮಿಯ ಪಹಣಿಗಾಗಿ ಅಲೆದಾಟ ಮಾಡಿದ್ದನ್ನು ನೆನಪಿಸುತ್ತಾರೆ. ಹೀಗಾಗಿ ಹಳ್ಳಿಗಳಲ್ಲೂ ಆನ್ ಲೈನ್ ವ್ಯವಸ್ಥೆ ಬರಬೇಕು. ಆದರೆ ಭಾಷಣ ಮಾಡುವ ಮಂದಿ ಇಂತಹ ಮೂಲಭೂತ ವ್ಯವಸ್ಥೆಗೆ ಆದ್ಯತೆ ನೀಡಲಿಲ್ಲ, ಕೇವಲ ಓಟ್ ಬ್ಯಾಂಕ್ ರಚನೆ ಮಾಡಿದರು, ಭಾವನಾತ್ಮಕವಾಗಿ ರಂಜಿಸಿದರು.
ಈಚೆಗೆ ಅಡಿಕೆ ತೋಟಗಳಲ್ಲಿರುವ ಸಮಸ್ಯೆ ಬಗ್ಗೆ ವಿವಿಧ ತೋಟಗಳಿಗೆ ಭೇಟಿ ನೀಡಬೇಕಾಯಿತು. ವಿಜ್ಞಾನಿಗಳ ತಂಡ ಜೊತೆಯಲ್ಲಿತ್ತು. ತಂಡದಲ್ಲಿದ್ದವರು ಯುವ ವಿಜ್ಞಾನಿಗಳು. ಕೃಷಿ ವಿಜ್ಞಾನಿಗಳು ಎಂದಾಗಲೇ ಅಲರ್ಜಿ ಇತ್ತು ಹಲವರಿಗೆ. ಸುಮ್ಮನೆ ಬಂದು ಹೋಗುತ್ತಾರೆ, ವಿಷ ಸಿಂಪಡಣೆಗೆ ಸಲಹೆ ನೀಡುತ್ತಾರೆ, ಖರ್ಚು ಮಾಡುತ್ತಾರೆ, ಹಳೆ ವರದಿ ನೀಡುತ್ತಾರೆ ಎಂಬಿತ್ಯಾದಿ ಸಲಹೆಗಳು ಇತ್ತು. ಇಡೀ ದಿನ ಯುವ ವಿಜ್ಞಾನಿಗಳ ತಂಡದ ಜೊತೆಗೆ ಹೋದ ಬಳಿಕ ಅನಿಸಿತು. ಗ್ರಹಿಕೆಯಲ್ಲಿ ತಪ್ಪಾಗಿದೆ. ಯುವ ವಿಜ್ಞಾನಿಗಳಿಗೆ ಆಸಕ್ತಿ ಇದೆ, ಆದರೆ ಈವರೆಗಿನ ಕೃಷಿ ವಲಯ ಅವರನ್ನು ಹಾಗೆ ಮಾಡಿಸಿದೆ. ಎರಡು ದಿನಗಳ ಬಳಿಕ ಯುವ ವಿಜ್ಞಾನಿ ಪೇಸ್ ಬುಕ್ ಮೂಲಕ ಕೃಷಿ ಸಮಸ್ಯೆಗೆ ಉತ್ತರ ಹೇಳುವುದನ್ನು ನೋಡಿದೆ, ಇರುವ ತಪ್ಪು ಅಭಿಪ್ರಾಯವನ್ನು ಪರಿಹರಿಸುವುದನ್ನು ನೋಡಿದೆ. ಆ ಯುವ ವಿಜ್ಞಾನಿಗಳ ತಂಡಕ್ಕೆ ಹೇಳಿದೆ, ನನಗೆ ವಿಷ ಸಿಂಪಡಣೆಯ ಹೊರತಾದ ಪರಿಹಾರವೂ ಬೇಕೆಂದಾಗ ಅದನ್ನೂ ಉಲ್ಲೇಖಿಸಿ ವರದಿ ನೀಡಿದ್ದನ್ನೂ ನೋಡಿದೆ. ಮುಂದೆ ಬಂದು ಈಗ ಕಂಡಿರುವ ಕೃಷಿ ಸಮಸ್ಯೆಗೆ ಅಧಿಕೃತವಾದ ಹಾಗೂ ಸಮಗ್ರವಾದ ಅಧ್ಯಯನ ಬೇಕು ಎಂದಾಗ ಒಂದು ವರ್ಷ ಕಾಯಿರಿ ಈಗಾಗಲೇ ಆರಂಭಿಸಿದ್ದೇನೆ ಎಂದೂ ಆ ಯುವ ವಿಜ್ಞಾನಿ ಹೇಳಿದ…!. ಹೀಗಾಗಿ ಈಗ ಕೃಷಿ ಸಮಸ್ಯೆ ಬಂದಾಗ ಸಮಗ್ರ ಮಾಹಿತಿ ನೀಡಲು ಯುವ ವಿಜ್ಞಾನಿಗಳ ತಂಡವೂ ಸಿದ್ಧವಿದೆ. ಆದರೆ ಭಾಷಣ ಮಾಡುವ ಮಂದಿ ವಿಜ್ಞಾನಿಗಳ ತಂಡವನ್ನು ಗಟ್ಟಿ ಮಾಡುವ ವ್ಯವಸ್ಥೆಗೆ ಆದ್ಯತೆ ನೀಡಲಿಲ್ಲ, ಕೃಷಿ ವಿಜ್ಞಾನಿಗಳಿಗೆ ಅಧ್ಯಯನ ಮಾಡಬೇಕಾದ ವಿಷಯವನ್ನು ಹೇಳಲಿಲ್ಲ, ಕೇವಲ ಓಟ್ ಬ್ಯಾಂಕ್ ರಚನೆ ಮಾಡಿದರು, ಭಾವನಾತ್ಮಕವಾಗಿ ರಂಜಿಸಿದರು.
ಹೌದು, ಈಗ ಕೃಷಿಯಲ್ಲಿ ಬೇಕಿರುವುದು ತಾಂತ್ರಿಕತೆ ಅಳವಡಿಕೆ, ಸ್ವಾವಲಂಬನೆ. ತಾನೇ ಔಷಧಿ ಹೇಗೆ ಸಿಂಪಡಣೆ ಮಾಡಬಹುದು , ಹೇಗೆ ಕೌಶಲ್ಯ ಬಳಕೆ ಮಾಡಬಹುದು , ಕಡಿಮೆ ಶ್ರಮ ಹೇಗೆ ಮಾಡಬಹುದು ಎಂಬ ಚಿಂತನೆಗೆ ಪ್ರೋತ್ಸಾಹ. ಅನೇಕರಲ್ಲಿ ಹೊಸ ಹೊಸ ಐಡಿಯಾ ಇದೆ. ಆದರೆ ಶೇರ್ ಮಾಡಿಕೊಳ್ಳಲು ಜಾಗವಿಲ್ಲ. ಅಧಿಕೃತ ಸಲಹೆಗೆ , ಮಾರ್ಗದರ್ಶನಕ್ಕೆ ತಕ್ಷಣದ ವ್ಯವಸ್ಥೆ ಬೇಕಾಗಿದೆ.
ಇನ್ನಷ್ಟು ಯುವ ಮಂದಿ ಹಳ್ಳಿಗೆ ಬರುತ್ತಾರೆ, ಭವಿಷ್ಯದಲ್ಲಿ ಹಳ್ಳಿಗಳೇ ಯುವಕರದ್ದಾಗಲಿದೆ. ಈ ಕಾರಣಕ್ಕೆ ಅವರಿಗೆ ಇನ್ನೂ ಹಳೆಯ ತಾಂತ್ರಿಕತೆ, ವ್ಯವಸ್ಥೆಯನ್ನು ತಿಳಿಸುವ ಬದಲಾಗಿ ಹೊಸದಾದ ವ್ಯವಸ್ಥೆಯನ್ನು ಕಲ್ಪಿಸುವ ವ್ಯವಸ್ಥೆಗೆ ಸಮಾಜ ಸಿದ್ಧವಾಗಬೇಕಿದೆ. ವಿಜ್ಞಾನ-ವಿಜ್ಞಾನಿಗಳು, ತಂತ್ರ-ತಾಂತ್ರಿಕತೆ, ಕೌಶಲ್ಯ-ಸಾಮರ್ಥ್ಯ ಇವುಗಳ ಬಗ್ಗೆ ಪರಿಚಯ ಮಾಡಬೇಕಿದೆ. ಕೃಷಿಯಲ್ಲಿ , ಹಳ್ಳಿಯಲ್ಲಿ ಆದಾಯವೂ ಬೇಕು, ವ್ಯವಸ್ಥೆಯೂ ಬೇಕು ಎಂಬ ಸ್ಥಿತಿಯನ್ನು ಪರಿಚಯ ಮಾಡಿಕೊಡಬೇಕಿದೆ. ಇದಕ್ಕಾಗಿ ಹಳ್ಳಿಗಳನ್ನು ಮತ್ತೆ ಕಟ್ಟಬೇಕಾಗಿದೆ… ಇದಕ್ಕಾಗಿ ಸಿದ್ಧರಾಗೋಣ….
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…