ಸುಳ್ಯ; ಆರ್ಥಿಕ ಸಂಕಷ್ಟದ ನೆಪವೊಡ್ಡಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುವ ಗೃಹ ರಕ್ಷಕ ದಳದ ಸಿಬ್ಬಂದಿಗಳ ಸಂಖ್ಯೆಯನ್ನು ಕಡಿತ ಮಾಡುವ ನಿರ್ಧಾರವನ್ನು ಹಿಂಪಡೆಯಬೇಕೆಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಬಿ.ಸದಾಶಿವ ಆಗ್ರಹಿಸಿದ್ದಾರೆ.
ಸುಳ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರ್ತವ್ಯದಲ್ಲಿರುವ 211 ಮಂದಿಯಲ್ಲಿ 86 ಮಂದಿಯನ್ನು ಕರ್ತವ್ಯದಿಂದ ವಿಮಕ್ತಿ ಮಾಡಲು ನಿರ್ಧರಿಸಿರುವುದಾಗಿ ತಿಳಿದು ಬಂದಿದೆ. ಅದರಲ್ಲೂ ಸುಳ್ಯದಲ್ಲಿ 28ರಲ್ಲಿ 20 ಮಂದಿಯನ್ನು ಬಿಟ್ಟು 8 ಮಂದಿಯನ್ನು ಮಾತ್ತ ಉಳಿಸಿಕೊಳ್ಳಲು ನಿರ್ಧರಿಸಿದ್ದಾರೆ. ಸುಳ್ಯ ನಗರದಲ್ಲಿ ಸಂಚಾರ ವ್ಯವಸ್ಥೆಯನ್ನು ಸುಸೂತ್ರವಾಗಿ ನಿರ್ವಹಿಸುತ್ತಿದ್ದ ಗೃಹರಕ್ಷಕ ದಳದ ಸಿಬ್ಬಂದಿಗಳ ಸಂಖ್ಯೆಯನ್ನು ಕಡಿತ ಮಾಡಿದರೆ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗಲಿದೆ. ಗೃಹ ರಕ್ಷಕ ದಳದ ಸಿಬ್ಬಂದಿಗಳ ಸಂಖ್ಯೆ ಕಡಿತದಿಂದ ಪೊಲೀಸರಿಗೆ ಹೆಚ್ಚು ಕೆಲಸದ ಒತ್ತಡ ಉಂಟಾಗಲಿದೆ. ಅಲ್ಲದೆ ಹಲವು ಮಂದಿ ಸಿಬ್ಬಂದಿಗಳು ಕೆಲಸ ಇಲ್ಲದೆ ಅತಂತ್ರರಾಗುವ ಪರಿಸ್ಥಿತಿ ಉಂಟಾಗಬಹುದು.
ಗೃಹರಕ್ಷಕ ದಳ ಸಿಬ್ಬಂದಿ ಸಂಖ್ಯೆ ಕಡಿತ ನಿರ್ಧಾರವನ್ನು ಹಿಂಪಡೆಯುವಂತೆ ಆಗ್ರಹಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಸಲ್ಲಿಸಲಾಗುವುದು. ಇದಕ್ಕಾಗಿ ಸಾರ್ವಜನಿಕರಿಂದ ಸಹಿ ಸಂಗ್ರಹ ಮಾಡಲಾಗುವುದು. ನಗರದ ಪ್ರತಿ ಪೆಟ್ರೋಲ್ ಪಂಪ್ ಗಳಲ್ಲಿ ಮನವಿಯನ್ನು ಇರಿಸಲಾಗುವುದು. ಸಾರ್ವಜನಿಜರು ಸಹಿ ಹಾಕಿ ಗೃಹರಕ್ಷಕ ದಳದ ಸಿಬ್ಬಂದಿಗಳ ಪರವಾಗಿ ಧ್ವನಿ ಎತ್ತಬೇಕು ಎಂದು ಅವರು ಹೇಳಿದರು.
ಋಣಮುಕ್ತ ಕಾಯಿದೆ ಅನುಷ್ಠಾನ ಮಾಡಬೇಕು ಮತ್ತು ಬಡ ಮಹಿಳೆಯರು ಪಡೆದಿರುವ ಸಾಲವನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ಫೆ.25 ರಂದು ಬೆಂಗಳೂರಿನಲ್ಲಿ ನಡೆಯುವ ಬೃಹತ್ ಚಳವಳಿ ನಡೆಯಲಿದೆ. ಸುಳ್ಯದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಭಾಗವಹಿಸಲಿದ್ದಾರೆ. ಇದರ ಪೂರ್ವಭಾವಿಯಾಗಿ ಫೆ.18 ರಂದು ಸುಳ್ಯದಲ್ಲಿ ಪೂರ್ವಭಾವಿ ಸಭೆ ನಡೆಯಲಿದೆ. ಚಳವಳಿಯಲ್ಲಿ ಭಾಗವಹಿಸುವವರು ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಬೇಕು ಎಂದು ಅವರು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಹಸೈನಾರ್ ಜಯನಗರ ಇದ್ದರು.