Advertisement
ಅನುಕ್ರಮ

ಗೌಜಿಗಳ ಮಧ್ಯೆ ನರಳುವ ಗೋಷ್ಠಿಗಳು

Share

ಉದ್ಘಾಟನಾ ಬಳಿಕದ ಕೃಷಿ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದೆ. ಸಭಾಭವನ ತುಂಬಿತ್ತು. ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿಗಳು. ಮೊದಲೇ ವಿಷಯ ಹಂಚೋಣ ನಿರ್ಧರಿತವಾಗಿತ್ತು. ಕಾರ್ಯಕ್ರಮ ಆರಂಭವಾಯಿತು. ಢಾಳು ಢಾಳು ಶುಷ್ಕ ಸ್ವಾಗತ, ಉಪಚಾರ. ವಿಷಯ ಕೊರತೆ ಆರಂಭ. ಸಭಾಸದರಿಗೂ ವೇದಿಕೆಯ ಮಂದಿಗೂ ಏನೇನೂ ಸಂಬಂಧವಿಲ್ಲವೆಂಬಂತೆ ಸಾಗಿತು ಕೃಷಿಯ ಕೊರತೆಗಳ ಕೊರೆತ. ಲಾಭದ ಲೆಕ್ಕಾಚಾರದ ಅಂಕಿಅಂಶ. ಎಷ್ಟು ಮಂದಿ ಕೇಳಿಸಿಕೊಂಡರೋ, ಬಿಟ್ಟರೋ! ಸಭಾಸದರು ಅವರಷ್ಟಕ್ಕೆ ಏನೇನೋ ಹರಟುತ್ತಾ ಇದ್ದರು. ಕೆಲವರು ಆಕಳಿಸಿಕೊಂಡು ಸಮಯ ಕೊಲ್ಲುತ್ತಿದ್ದರು. ಮಾಮೂಲಿ ಧನ್ಯವಾದದೊಂದಿಗೆ ವಿಚಾರ ಸಂಕಿರಣ ಸಮಾಪ್ತಿ.

ಕಾರ್ಯಕ್ರಮ ಮುಗಿಸಿ ಮರಳುತ್ತಿದ್ದಾಗ ನನ್ನೊಳಗೆ ಹಲವು ವಿಚಾರಗಳು ರಿಂಗಣಿಸುತ್ತಿದ್ದುವು. ದೂರದೂರಿನಿಂದ ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಿದ್ದರ ಔಚಿತ್ಯವು ಕುಟುಕಿತು. ವೇದಿಕೆಯ ವಿಚಾರಗಳು ಎಷ್ಟು ಮಂದಿಯ ಮನಸ್ಸಿನೊಳಗೆ ಇಳಿಯಿತು? ಎಷ್ಟು ಮಂದಿ ಕಿವಿಯರಳಿಸಿ ಕೇಳಿದ್ದರು? ಸಾಮಯಿಕ ವಿಚಾರಗಳ ಅಪ್‍ಡೇಟ್‍ಗಳನ್ನು ಎಷ್ಟು ಮಂದಿ ಮನನಿಸಿದ್ದಾರೆ. ಇಂತಹ ಹತ್ತಾರು ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡಾಗ ದಿಗಿಲಾಗುತ್ತದೆ. ಯಾಕೆಂದರೆ ಸಭಾಸದರಿಗೆ ವಿಚಾರ ಗೋಷ್ಠಿ ಬೇಕಾಗಿಲ್ಲ, ಆದರೆ ಸಂಘಟಕರಿಗೆ ಬೇಕಾಗಿತ್ತು! ಅತ್ತ ಸಂಪನ್ಮೂಲ ವ್ಯಕ್ತಿಗಳ ಸಮಯವೂ ಹಾಳು, ಇತ್ತ ಸಂಘಟಕರ ಪರಿಶ್ರಮಕ್ಕೂ ಬೆಲೆಯಿಲ್ಲ.

ಇಂತಹುದೇ ಇನ್ನೊಂದು ಘಟನೆ. ಐದಾರು ವರುಷಗಳ ಹಿಂದೆ ಕಾಫಿನಾಡಲ್ಲೊಂದು ಹಲಸು ಮೇಳ. ಪವರ್ ಪಾಯಿಂಟ್ ಸಿದ್ಧತೆಯೊಂದಿಗೆ ಒಪ್ಪತ್ತು ಮುಂಚಿತವಾಗಿ ತಲುಪಿದ್ದೆ. ಸಮಯಕ್ಕೆ ಸರಿಯಾಗಿ ಕಾರ್ಯಕ್ರಮದ ಸ್ಥಳಕ್ಕೆ ಓಡಿದ್ದೆ. ಆಮಂತ್ರಣ ಪತ್ರಿಕೆಯಲ್ಲಿ ಗೊತ್ತುಪಡಿಸಿದ ಹಾಲ್ ತಲುಪಿದಾಗ ಮೇಳದ ಯಾವ ಸೂಚನೆಯೂ ಕಾಣಲಿಲ್ಲ. ಹಿಂದಿನ ದಿವಸದ ಅದ್ದೂರಿ ಕಾರ್ಯಕ್ರಮದ ಅವಶೇಷಗಳು ಅಣಕಿಸುತ್ತಿದ್ದುವು. ಈ ಮಧ್ಯೆ ರಕ್ತದೊತ್ತಡ ಏರಿಸಿಕೊಂಡ ಒಂದಿಬ್ಬರು ಸಿಬ್ಬಂದಿಗಳು ಮೇಲಧಿಕಾರಿಗಳನ್ನು ಕಾಯುತ್ತಿದ್ದರು. ಒಂಭತ್ತೂವರೆಯ ಕಾರ್ಯಕ್ರಮ ಹನ್ನೊಂದಕ್ಕೆ ಶುರುವಾಯಿತು. ಸಂಬಂಧಪಡದ ಗಣ್ಯರು, ಹಲಸಿನ ಹಣ್ಣನ್ನು ತಿನ್ನದ ಮಹಾನುಭಾವರು, ರಾಜಕೀಯ ಅಂಟಿಸಿಕೊಂಡವರಿಂದ ಕೊರೆತವೋ ಕೊರೆತ. ಸಾವಿರ ಮಂದಿ ಕುಳಿತುಕೊಳ್ಳುವ ಸಭಾಭವನದಲ್ಲಿ ಲೆಕ್ಕ ಮಾಡಿದರೆ ನೂರು ಮಂದಿ ಮೀರದು! ಉದ್ಘಾಟನೆ ಮುಗಿಯುವಾಗಲೇ ಊಟದ ತಟ್ಟೆ ಸದ್ದುಮಾಡುತ್ತಿತ್ತು.

ವಿಚಾರ ಗೋಷ್ಠಿಯ ಶುಭಚಾಲನೆಗೆ ಉದ್ಘೋಷಕರಿಂದ ಹಸಿರು ನಿಶಾನೆ. ಸಭಾಭವನದಲ್ಲಿದ್ದವರು ಊಟದ ಟೇಬಲಿನ ಮುಂದೆ ಕ್ಯೂ ನಿಂತಿದ್ದರು. ಸಂಘಟಕರ, ಸಂಪನ್ಮೂಲ ವ್ಯಕ್ತಿಗಳ ಮೇಲಿನ ಗೌರವದಿಂದ ಉಪಸ್ಥಿತರಿದ್ದ ಹತ್ತಾರು ಮಂದಿ ಆಕಳಿಸುತ್ತಾ ಗೋಷ್ಠಿಗೆ ಸಾಕ್ಷಿಯಾದರು. ಊಟ ಮುಗಿಸಿ, ವೀಳ್ಯ ಜಗಿಯುತ್ತಾ, ಹರಟುತ್ತಾ ಬಹ್ವಂಶ ಕರಗಿಹೋದರು. ಗೋಷ್ಠಿ ನಡೆಯುತ್ತಾ ಇರುವಾಗ ಸಮಾರೋಪಕ್ಕೆ ತರಾತುರಿ. ಮೂರು ದಿವಸದಿಂದ ನನ್ನಂತೆ ತಯಾರಿ ನಡೆಸಿ ಬಂದಿದ್ದವರ ಸಮಯವು ಸಂಘಟಕರ ಅವಜ್ಞೆಯಿಂದಾಗಿ ಟುಸ್ಸಾಯಿತು!

“ಬಹಳ ದೂರದಿಂದ ಆಗಮಿಸಿ ಹಲಸಿನ ಕುರಿತು ಉಪಯುಕ್ತವಾದ ಮಾಹಿತಿ ನೀಡಿದ್ದಾರೆ. ಇದು ಕೃಷಿಕರ ಅಭಿವೃದ್ಧಿಗೆ ಸಹಕಾರಿಯಾಗುವುದರಲ್ಲಿ ಸಂಶಯವಿಲ್ಲ,’ ಉದ್ಘೋಷಕರ ತೀರ್ಪು ಆಲಿಸುತ್ತಿದ್ದಂತೆ ಚೂರಿಯಿಂದ ಇರಿದ ಅನುಭವ. ಸಭಾಭವನದಲ್ಲಿದ್ದ ಹತ್ತೋ ಇಪ್ಪತ್ತೋ ಮಂದಿ ಇದ್ದರಲ್ಲಾ, ಅವರೆಲ್ಲಾ ಕೃಷಿಕರಲ್ಲ. ಮೇಳದ ಅನ್ಯಾನ್ಯ ವಿಭಾಗಗಳನ್ನು ನಿಭಾಯಿಸುತ್ತಿದ್ದವರಷ್ಟೇ. ಇಷ್ಟು ಕಾರ್ಯಕ್ರಮಕ್ಕೆ ಲಕ್ಷಗಟ್ಟಲೆ ವೆಚ್ಚ! ಆ ಮೇಳದ ಉದ್ಘಾಟನೆಯಲ್ಲಿ ಭಾಗವಹಿಸಿ ಹೊಟ್ಟೆ ತುಂಬಾ ಉಂಡುಹೋಗಿದ್ರಲ್ಲಾ, ಅವರೆಲ್ಲಾ ಯಾರು? ಇವರು ಗೋಷ್ಠಿ ಬಿಡಿ, ಸಮಾರೋಪದಲ್ಲೂ ಪತ್ತೆ ಇಲ್ಲವಲ್ಲಾ. ವಾರದ ಬಳಿಕ ಸನಿಹದ ಕೃಷಿಕರೊಬ್ಬರು ಮಾತಿಗೆ ಸಿಕ್ಕರು – ಸಂಘಟಕರಿಗೆ ಮಾತ್ರ ಮೇಳದ ಅರಿವಿತ್ತು. ಕೃಷಿಕರಿಗೆ ಯಾವುದೇ ಮಾಹಿತಿ ಇರಲಿಲ್ಲ. ಪ್ರಚಾರವಿರಲಿಲ್ಲ. ರಸ್ತೆ ಬದಿಯಲ್ಲಿ ದೊಡ್ಡ ದೊಡ್ಡ ಪ್ಲೆಕ್ಸಿಗಳನ್ನು ತೂಗಿಸಿದರೆ ಏನೂ ಪ್ರಯೋಜನ?

ಸರಕಾರಿ ಪ್ರಣೀತ ಕಲಾಪಗಳ ಕತೆನೂ ಇಷ್ಟೇನೇ. ಉದ್ಘಾಟನೆ, ಸಮಾರೋಪ, ಕಿರು ಪುಸ್ತಕ ಬಿಡುಗಡೆ.. ಈ ತ್ರಿದೋಷಗಳು ವಿಚಾರಗೋಷ್ಠಿಗಳಿಗೆ ದೊಡ್ಡ ಶಾಪ. ಇವು ಬೇಡವೆಂದಲ್ಲ, ಕಡಿಮೆ ಅವಧಿಯಲ್ಲಿ ಚೊಕ್ಕವಾಗಿ ಮಾಡಿ ವಿಷಯಕ್ಕೆ ನ್ಯಾಯ ಸಲ್ಲಿಸುವ ಎಷ್ಟು ಕಾರ್ಯಕ್ರಮಗಳು ಬೇಕು? ಶಿಷ್ಠಾಚಾರವನ್ನು ಬಿಡಲಾಗದ ಒದ್ದಾಟ, ಚಡಪಡಿಕೆ. ಆಹ್ವಾನಿಸಿದ ಕೃಷಿಕರಿಗೆ ನೋವಾದರೂ ಪರವಾಗಿಲ್ಲ, ವರಿಷ್ಠರಿಗೆ ಎಲ್ಲಿ ನೋವಾಗಿಬಿಡುತ್ತದೋ ಎಂಬ ಭಯ. ಕೃಷಿಕಪರ ಮನಸ್ಸಿನ ಅಧಿಕಾರಿಗಳನ್ನೂ ಬಿಡದ ಶಿಷ್ಠಾಚಾರದ ವೈರಸ್.

ಗೋಷ್ಠಿಗಳಿಗೆ ಪ್ರಚಾರ ನೀಡಿ, ಕೃಷಿಕರನ್ನು ಸಂಪರ್ಕಿಸಿ, ಅವರನ್ನು ಗೌರವದಿಂದ ಆಹ್ವಾನಿಸುವ, ಗೌರವಿಸುವ ಸಂಘಟಕರು ಸಾಕಷ್ಟಿದ್ದಾರೆ. ಇಲ್ಲೂ ‘ಬುದ್ಧಿಪೂರ್ವಕವಾಗಿ’ ಎಡವಟ್ಟು ಆಗಿಬಿಡುತ್ತದೆ ಸಂಪನ್ಮೂಲ ವ್ಯಕ್ತಿಗಳು ಅನ್ಯಭಾಷಿಕರವರಾಗಿದ್ದರೆ ಅವರ ಪವರ್ ಪಾಯಿಂಟ್ ಪ್ರಸ್ತುತಿ, ಭಾಷಣಗಳು ಬಹುತೇಕರಿಗೆ ಅರ್ಥವಾಗದು. ಕೆಲವೆಡೆ ಕನ್ನಡಕ್ಕೆ ಭಾಷಾಂತರಿಸುವ ವ್ಯವಸ್ಥೆ ಇದ್ದರೂ ಹೊತ್ತು ಮೀರಿರುತ್ತದೆ. ಆಗ ಚಿತ್ತಸ್ಥಿತಿ ಅಸ್ವಸ್ಥವಾಗಿರುತ್ತವೆ!
ಪ್ರತಿಷ್ಠಿತ ಸಂಸ್ಥೆಗಳು ತಮ್ಮ ಮಹಾಸಭೆ, ಪ್ರದರ್ಶನ, ಬೆಳ್ಳಿ-ಚಿನ್ನದ ಹಬ್ಬಗಳನ್ನು ದೊಡ್ಡ ಮಟ್ಟದಲ್ಲಿ ಹಮ್ಮಿಕೊಳ್ಳುವುದುಂಟು. ವಿಚಾರಗೋಷ್ಠಿಗಳೇ ಕಾರ್ಯಕ್ರಮದ ಜೀವಾಳ ಅಂತ ಮುಜುಗರವಾಗುವಷ್ಟೂ ಹೇಳುತ್ತಾರೆ. ಗೌಜಿ-ಗಮ್ಮತ್ತುಗಳ ಮಧ್ಯೆ ಗೋಷ್ಠಿಗಳು ನರಳುತ್ತಿರುತ್ತವೆ. ಜತೆಗೆ ಜವಾಬ್ದಾರಿ ಹೊತ್ತ ವ್ಯಕ್ತಿಯೂ ನೋವಿಂದ ನರಳುವ ದೃಶ್ಯವನ್ನು ಹತ್ತಿರದಿಂದ ನೋಡಿದ್ದೇನೆ. ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟವಾಗುತ್ತವೆ. ಅದರಲ್ಲಿ ಪದಾಧಿಕಾರಿಗಳ, ಅತಿಥಿಗಳ ಭಾವಚಿತ್ರಗಳು ಯಥೇಷ್ಟ. ಉದ್ಘಾಟನೆ, ಸಮಾರೋಪ, ಸಾಂಸ್ಕøತಿಕ ಕಾರ್ಯಕ್ರಮಗಳ ವಿಚಾರಗಳು ಕಣ್ಣಿಗೆ ರಾಚುವಷ್ಟು ಮುದ್ರಿತವಾಗಿರುತ್ತವೆ. ಆದರೆ ಜಾಹೀರಾತಿನಲ್ಲಿ ಗೋಷ್ಠಿಗಳ ವಿವರಗಳಿಗೆ ಜಾಗವೇ ಇಲ್ಲ!

ಕೃಷಿಕರ ಔದಾಸೀನ್ಯವೂ ಗೋಷ್ಠಿಗಳ ವಿಫಲತೆಗೆ ಮತ್ತೊಂದು ಕಾರಣ. ಗೋಷ್ಠಿ ನಡೆಯುವ ದಿನ, ವಿಷಯಗಳು ತಲುಪದಿರುವುದೇ ಹೆಚ್ಚು. ಒಂದು ವೇಳೆ ಎಲ್ಲವೂ ಗೊತ್ತಾಗಿದ್ದರೂ, ಅಲ್ಲಿಗೆ ಹೋಗಿ ಮಾಡುವುದೇನಿದೆ? ನಮ್ಮ ಅನುಭವದ ಮುಂದೆ ಅವೆಲ್ಲಾ ಏನು? ನಮಗೆ ಅವರು ಹೇಳಬೇಕಾಗಿಲ್ಲ… ಇಂತಹ ಮನಃಸ್ಥಿತಿಗಳೂ ಇಲ್ಲದಿಲ್ಲ. ತುಂಬಿದ ಕೊಡ ಎಂದೂ ತುಳುಕದು ಅಲ್ವಾ. ಮಾಹಿತಿಗಳು ಅಪ್‍ಡೇಟ್ ಆಗುವ ಕಾಲವಿದು. ಅನುಭವಕ್ಕೆ ವರ್ತಮಾನ ಸೇರಿಕೊಂಡರೆ ವೃತ್ತಿಯಲ್ಲಿ ಸುಭಗತೆ ಕಾಣುವುದಕ್ಕೆ ಸಾಧ್ಯ.

ಕೃಷಿ ಗೋಷ್ಟಿಗಳಲ್ಲಿ ನಿಜವಾದ ಕೃಷಿಕರು ಉಪಸ್ಥಿತರಿರಲಿ. ಅವರನ್ನು ಗೌರವದಿಂದ ಕಾಣುವಂತಾಗಬೇಕು. ಆಹ್ವಾನಿಸಿದ ಸಂಪನ್ಮೂಲ ವ್ಯಕ್ತಿಗಳ ಅನುಭವದ ಮಾತಿಗೆ ಕಿವಿಗಳು ಸಾಕ್ಷಿಯಾಗಲಿ. ಕೃಷಿಕರ ಸಮಯಕ್ಕೂ ಬೆಲೆಯಿದೆ ಅಲ್ವಾ. ಹಸಿವು ನೀಗಲು ಊಟೋಪಚಾರ ಸಾಕು. ಕಾಂಚಾಣವೇ ನುಂಗುವ ಅದ್ದೂರಿತನದಿಂದ ಬರಿಗುಲ್ಲು-ನಿದ್ದೆಗೇಡು. ಕೃಷಿ ಕಾರ್ಯಕ್ರಮಗಳಿಗೆ ‘ಜನ ಸೇರಿಸುವ’ ಯತ್ನಕ್ಕಿಂತ ‘ಜನರು ಬರುವಂತೆ ಮಾಡುವ’ ಜಾಣ್ಮೆ ಮುಖ್ಯ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ನಾ.ಕಾರಂತ ಪೆರಾಜೆ

ಪತ್ರಕರ್ತ , ಕಲಾವಿದ , ಅಂಕಣಕಾರ ನಾ.ಕಾರಂತ ಪೆರಾಜೆ ಅವರು ಪ್ರಸ್ತುತ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಕರ್ತರಾಗಿ, ಕಲಾವಿದರಾಗಿ, ಅಂಕಣಕಾರರಾಗಿ ಗುರುತಿಸಿಕೊಂಡಿರುವ ನಾ.ಕಾರಂತ ಅವರು ತಾಳಮದ್ದಳೆಯಲ್ಲಿ ಅರ್ಥದಾರಿಯಾಗಿ ಹಾಗೂ ವಿವಿಧ ಮೇಳಗಳಲ್ಲಿ ವೇಷಧಾರಿಯೂ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪುತ್ತೂರು ತಾಲೂಕಿನ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

Published by
ನಾ.ಕಾರಂತ ಪೆರಾಜೆ

Recent Posts

ಗ್ರಾಮೀಣ ಮೌಲ್ಯಗಳು ಮತ್ತು ನಗರ ಜೀವನ – ಸಮತೋಲನವೇ ನಿಜವಾದ ಮಾರ್ಗ!

ಗ್ರಾಮ ಮತ್ತು ನಗರ ಜೀವನ ಪರಸ್ಪರ ವಿರುದ್ಧವಲ್ಲ, ಪೂರಕ ಶಕ್ತಿಗಳು. ಸಮತೋಲನವೇ ಸಮೃದ್ಧ…

8 hours ago

ದೇಶಾದ್ಯಂತ ಹವಾಮಾನದಲ್ಲಿ ಬದಲಾವಣೆ..! 13 ರಾಜ್ಯಗಳಲ್ಲಿ ಮಳೆ-ಚಂಡಮಾರುತ ಎಚ್ಚರಿಕೆ, ಉತ್ತರ ಭಾರತದಲ್ಲಿ 40°C ದಾಟಿದ ಉಷ್ಣತೆ

ದೇಶದಲ್ಲಿ ಹವಾಮಾನ ತೀವ್ರ ಬದಲಾವಣೆ ಕಂಡುಬರುತ್ತಿದ್ದು, 13 ರಾಜ್ಯಗಳಲ್ಲಿ ಮಳೆ ಮತ್ತು ಗಾಳಿ…

9 hours ago

ಅಂಜನಾದ್ರಿ ಬೆಟ್ಟ ಏರುವವರಿಗೆ ಸಮಯ ನಿಗದಿ .! ಮಧ್ಯಾಹ್ನ 11ರಿಂದ 4ರವರೆಗೆ ಪ್ರವೇಶ ಬ್ಯಾನ್

ಅಂಜನಾದ್ರಿ ಬೆಟ್ಟ ಏರಲು ಮಧ್ಯಾಹ್ನ 11ರಿಂದ ಸಂಜೆ 4ರವರೆಗೆ ನಿರ್ಬಂಧ ವಿಧಿಸಲಾಗಿದೆ. ಬಿಸಿಲಿನ…

9 hours ago

ಕಲಬುರಗಿಯಲ್ಲಿ 43.2°C ತಾಪಮಾನ ದಾಖಲು..! ರಾಜ್ಯದಲ್ಲಿ ಬಿಸಿ ಏರಿಕೆ – ಮುಂದಿನ 5 ದಿನ ಎಚ್ಚರಿಕೆ

ರಾಜ್ಯದಲ್ಲಿ ಉಷ್ಣಾಂಶ ಏರಿಕೆ ಮುಂದುವರಿದಿದ್ದು, ಕಲಬುರಗಿಯಲ್ಲಿ 43.2°C ದಾಖಲಾಗಿದೆ. ಮುಂದಿನ ದಿನಗಳಲ್ಲಿ ಕರಾವಳಿಯಲ್ಲಿ…

9 hours ago

ಹವಾಮಾನ ವರದಿ | 17-04-2026 | ಕರ್ನಾಟಕದ ಹವಾಮಾನದಲ್ಲಿ ಬದಲಾವಣೆ – ಏಪ್ರಿಲ್ 18 ರಿಂದ ಮಳೆ ಹೆಚ್ಚಳ

ಏಪ್ರಿಲ್ 18ರಿಂದ ರಾಜ್ಯದಲ್ಲಿ ಹವಾಮಾನ ಬದಲಾವಣೆ ಕಂಡುಬರುತ್ತಿದ್ದು, ಹಂತ ಹಂತವಾಗಿ ಮಳೆಯ ಚಟುವಟಿಕೆ…

1 day ago

ಒಡಿಶಾ ಕರಾವಳಿಯಲ್ಲಿ ಅಕ್ರಮ ಅಡಿಕೆ ಸಾಗಣೆ ಪತ್ತೆ – 700 ಕ್ಕೂ ಹೆಚ್ಚು ಗೋಣಿ ಚೀಲ ವಶಕ್ಕೆ

ಒಡಿಶಾ ಕರಾವಳಿಯಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 700 ಕ್ಕೂ ಹೆಚ್ಚು ಗೋಣಿ ಚೀಲಗಳ ಅಡಿಕೆ…

2 days ago