ನಿಂತಿಕಲ್ಲು : ಸರಕಾರ ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಹಸಿರು ನಿಶಾನೆ ತೋರಿದ ಬೆನ್ನಲ್ಲೇ ಸುಳ್ಯ ತಾಲೂಕಿನ ಗ್ರಾಮೀಣ ಭಾಗದ ಎರಡು ಸರಕಾರಿ ಶಾಲೆಗಳಲ್ಲಿ ಈ ವರ್ಷದಿಂದ ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸಲು ಹೆತ್ತವರು ಹಾಗು ಊರವರು ಮುಂದೆ ಬಂದಿದ್ದಾರೆ.
ಅಲೆಕ್ಕಾಡಿ, ಪಂಜದಲ್ಲಿ ಪೂ.ಪ್ರಾ ಶಾಲೆ:
ಅಲೆಕ್ಕಾಡಿ ಮುರುಳ್ಯ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ಶಾಲೆಗೆ ದಾಖಲಾತಿ ಆರಂಭವಾಗಿದ್ದು, 20ಕ್ಕೂ ಅಧಿಕ ವಿದ್ಯಾರ್ಥಿಗಳು ದಾಖಲಾತಿಗೆ ಹೆಸರು ನೋಂದಾಯಿಸಿದ್ದಾರೆ. ಸುಮಾರು 6ಲಕ್ಷ ರೂ ವೆಚ್ಚದ ಈ ಯೋಜನೆಗೆ ಸಹಕರಿಸಲು ಊರವರು ಹಾಗು ಹೆತ್ತವರೇ ಮುಂದೆ ಬಂದಿರುವುದು ವಿಶೇಷವಾಗಿದೆ. ಪೂರ್ವ ಪ್ರಾಥಮಿಕ ಶಾಲೆ ಆರಂಭಿಸಲು ಸಮಿತಿಯನ್ನು ರಚಿಸಲಾಗಿದ್ದು, ವಿದ್ಯಾರ್ಥಿಗಳ ದಾಖಲಾತಿ ಕಾರ್ಯದಲ್ಲಿ ಸಮಿತಿಯ ಪಾತ್ರ ಉದಯೋನ್ಮುಖವಾಗಿದೆ. 4 ವರ್ಷ 5 ತಿಂಗಳು ತುಂಬಿದ ಮಕ್ಕಳನ್ನು ಇಲ್ಲಿ ದಾಖಲಾತಿಗೊಳಿಸಲಾಗುತ್ತಿದೆ. ಈ ಶಾಲೆಗಳಲ್ಲಿ ದಾಖಲಾತಿ ಪಡೆಯುವ ಮಕ್ಕಳಿಗೆ ಉಚಿತ ಶಿಕ್ಷಣದೊಂದಿಗೆ ಊಟ, ಇನ್ನಿತರ ಖರ್ಚುಗಳನ್ನು ದಾನಿಗಳ ನೆರವಿನೊಂದಿಗೆ ಭರಿಸಲು ನಿರ್ಣಯಿಸಲಾಗಿದೆ.
ಪಂಜದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಸಕ್ತ ವರ್ಷದಿಂದ ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ ಶಾಲೆ ಆರಂಭಗೊಳ್ಳುತ್ತಿದ್ದು 3 ವರ್ಷ 5 ತಿಂಗಳು ತುಂಬಿದ ಮಕ್ಕಳನ್ನು ಎಲ್.ಕೆ.ಜಿ ತರಗತಿಗೆ, 4 ವರ್ಷ 5 ತಿಂಗಳು ತುಂಬಿದ ಮಕ್ಕಳನ್ನು ಯುಕೆಜಿಗೆ ದಾಖಲಾತಿ ಮಾಡಲಾಗುತ್ತಿದೆ. ಇಲ್ಲಿಯೂ 35ಕ್ಕೂ ಅಧಿಕ ಮಕ್ಕಳು ದಾಖಲಾತಿಗೆ ಹೆಸರು ನೋಂದಾಯಿಸಿದ್ದಾರೆ. ಇಲ್ಲಿ ಇಬ್ಬರು ಶಿಕ್ಷಕಿಯರು ಹಾಗು ಒಬ್ಬರು ಸಹಾಯಕರು ಕಾರ್ಯನಿರ್ವಹಿಸಲಿದ್ದಾರೆ. ಪೂರ್ವ ಪ್ರಾಥಮಿಕ ಶಾಲೆ ಆರಂಭಕ್ಕೆ ಈಗಾಗಲೇ ಕ್ಷೇತ್ರ ಶಿಕ್ಷಣಾಧಿಕಾರಿಯ ಉಪಸ್ಥಿತಿಯಲ್ಲಿ ಸಭೆ ನಡೆಸಲಾಗಿದ್ದು, ಪೂರ್ವ ಪ್ರಾಥಮಿಕ ಶಾಲಾ ಸಮಿತಿಯನ್ನು ರಚಿಲಾಗಿದೆ.
ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳಕ್ಕೆ ಶ್ರಮ
ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಿ ಸರಕಾರಿ ಶಾಲೆಗಳನ್ನು ಮುಚ್ಚುವ ಹಂತಕ್ಕೆ ಬಂದಿರುವ ಈ ದಿನಗಳಲ್ಲಿ ಶಾಲೆಯನ್ನು ಜೀವಂತ ಉಳಿಸಲು ಹೆತ್ತವರೇ ಕಾಳಜಿ ವಹಿಸಿ ಗ್ರಾಮೀಣ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಮುಂದಾಗಿದ್ದು, ಇದರಿಂದ ಮುಂದೆ ಇದೇ ಮಕ್ಕಳು ಒಂದನೇ ತರಗತಿಗೆ ದಾಖಲಾತಿ ಪಡೆದು ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಇಲ್ಲಿ ಹೆತ್ತವರೇ ಮುತ್ತುವರ್ಜಿ ವಹಿಸಿ ಮಕ್ಕಳ ಸಂಖ್ಯೆ ಹೆಚ್ಚಾಗಲು ಶ್ರಮಿಸುತ್ತಾರೆ.
ಈ ಬಗ್ಗೆ ಮಾತನಾಡುವ ಪೂ.ಪ್ರಾ ಶಾಲಾ ಸಮಿತಿ ಪಂಜ ಇದರ ಅಧ್ಯಕ್ಷ ಕಾರ್ಯಪ್ಪ ಚಿದ್ಗಲ್ಲು, “ಶಿಕ್ಷಣ ಇಲಾಖೆ ಹಾಗು ಊರವರ ನೆರವಿನಿಂದ ಪಂಜದ ಸರಕಾರಿ ಶಾಲೆಯನ್ನು ಮಾದರಿಯಾಗಿ ಪರಿವರ್ತಿಸಲು ನಿರ್ಧರಿಸಿದ್ದೇವೆ. ಪೂ.ಪ್ರಾ ಶಿಕ್ಷಣಕ್ಕೆ ಸ್ವತಃ ಹೆತ್ತವರಿಂದಲೇ ಉತ್ತಮ ಸ್ಪಂದನೆ ದೊರೆತಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಒಂದನೇ ತರಗತಿಯಿಂದಲೂ ಆಂಗ್ಲ ಮಾಧ್ಯಮ ಶಿಕ್ಷಣ ಪ್ರಾರಂಭಿಸಲು ಪ್ರಯತ್ನಿಸಲಾಗುವುದು” ಎಂದು ಹೇಳುತ್ತಾರೆ.
ಅಲೆಕ್ಕಾಡಿ ಸಮಿತಿ ಅಧ್ಯಕ್ಷ ಅವಿನಾಶ್ ದೇವರಮಜಲು ಮಾತನಾಡುತ್ತಾ, ” ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ ಶಿಕ್ಷಣ ಆರಂಭಿಸಲು ಶಿಕ್ಷಣಾಧಿಕಾರಿಗಳು ಮೌಖಿಕ ಅನುಮತಿ ನೀಡಿದ್ದಾರೆ. ಮಕ್ಕಳಿಗೆ ಯಾವುದೇ ಕೊರತೆಯಾಗದೆ ಸಮಾನ ಶಿಕ್ಷಣ ನೀಡಲಾಗುವುದು.ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಸೇರಿದಂತೆ ಸ್ಮಾರ್ಟ್ ಕ್ಲಾಸ್, ಆಟಪಾಠದೊಂದಿಗೆ ಮೌಲ್ಯಯುತವಾದ ಶಿಕ್ಷಣ ನೀಡಿ ಸರಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚುವಂತೆ ಪ್ರಯತ್ನಿಸುತ್ತೇವೆ.” ಎಂದು ಹೇಳುತ್ತಾರೆ.
ಬಂಗಾಳಕೊಲ್ಲಿಯ ಕಡೆಯಿಂದ ಹಿಂಗಾರು ರೀತಿಯ ಮಾರುತಗಳು ಬರುತ್ತಿರುವುದರಿಂದ ಈಗಿನ ಈ ಮೋಡ ಹಾಗೂ…
ಸುಮಾರು 32 ವರ್ಷಗಳ ಹಿಂದೆ ಕಾಣೆಯಾಗಿದ್ದ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣದ ನೆರವಿನಿಂದಾಗಿ ಕುಟುಂಬಕ್ಕೆ…
ನಂದಿನಿ ಹಾಲಿನ ದರ 2 ರೂಪಾಯಿ ಇಳಿಕೆಗೆ ನಿರ್ಧಾರ.
ನೇಪಾಳವು ಅಡಿಕೆ ಬೆಳೆ ಹಾಗೂ ಅಡಿಕೆ ರಫ್ತಿನ ಕಡೆಗೆ ರೈತರಿಗೆ ಪ್ರೋತ್ಸಾಹ ನೀಡಲು…
ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಘಾಟ್‌ನಲ್ಲಿ ಸುರಂಗ ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿ ಸಮಗ್ರ ಯೋಜನಾ ವರದಿ…
ಕಸ್ಟಮ್ಸ್ ಗೋದಾಮಿನಿಂದ ಸುಮಾರು 40 ಟನ್ ಕಾಳುಮೆಣಸು ಹಾಗೂ ಸುಮಾರು 5 ಕೋಟಿ…