Advertisement
ಅನುಕ್ರಮ

ಚಪ್ಪಲಿ ಎಲ್ಲಿ ಕಚ್ಚುತ್ತದೆ ಎನ್ನುವುದು ಚಪ್ಪಲಿ ಧರಿಸಿದವನಿಗೆ ಮಾತ್ರ ಗೊತ್ತು!

Share

ಅದೊಂದು ಪೆಟ್ರೋಲ್ ಅಂಗಡಿ (ಪಂಪ್). ವಾಹನಗಳ ಭರಾಟೆ ಕಡಿಮೆಯಿತ್ತು. ತುಂತುರು ಮಳೆಯ ಸಿಂಚನ ಬೇರೆ. ಆ ಅಂಗಡಿಯಲ್ಲಿ ಪುರುಷರಲ್ಲದೆ, ಮಹಿಳೆಯರು ಕೂಡಾ ಉದ್ಯೋಗಿಗಳು.

ಐಷರಾಮಿ ಕಾರೊಂದು ಹೊಟ್ಟೆಗೆ ಪೆಟ್ರೋಲು ಸೇರಿಸಿಕೊಳ್ಳುತ್ತಿತ್ತು. ಅದೇ ಹೊತ್ತಿಗೆ ಸುಮಾರು ಇಪ್ಪತ್ತರಂಚಿನ ತರುಣಿಯು ಕಾರಿನ ಎದುರಿನ ಗ್ಲಾಸನ್ನು ಶುಚಿಗೊಳಿಸಲು ಅಣಿಯಾದಳು. ಬಹುಶಃ ಕಾರಿನ ಯಜಮಾನನ ಕೋರಿಕೆಯಿದ್ದಿರಬಹುದು.

ಅವಳು ಸಾಬೂನಿನ ದ್ರಾವಣವನ್ನು ಸಿಂಪಡಿಸಿ ಗ್ಲಾಸನ್ನು ಶುಚಿಗೊಳಿಸುತ್ತಿದ್ದಳು. ಕಾರಿನೊಳಗೆ ನಾಲ್ಕೈದು ಮಂದಿ ಮಹಿಳೆಯರು ಇವಳನ್ನು ನೋಡುತ್ತಾ ಮುಸಿಮುಸಿ ನಕ್ಕಂತೆ ಕಂಡಿತು. ಅಪಹಾಸ್ಯ ಮಾಡಿದಂತೆ ಗೋಚರವಾಯಿತು. ಕೆಟ್ಟ ಕುತೂಹಲದಿಂದ ಕಾರಿನ ಹತ್ತಿರ ಹಾದಿ ಮಾಡಿಕೊಂಡು ಸಾಗಿದೆ. ನನ್ನ ಊಹೆ ಸರಿಯಾಗಿತ್ತು. ಅವಳು ತನ್ನ ಶುಚಿ ಕೆಲಸವನ್ನು ಮುಗಿಸಿದಳು. ಕಾರೂ ಹೊರಟು ಹೋಯಿತು.

ಆ ಹುಡುಗಿಯ ಶ್ರಮಕ್ಕೆ ಪೆಟ್ರೋಲ್ ಅಂಗಡಿಯಿಂದ ಭಕ್ಷೀಸೋ, ಸಂಬಳವೋ ಸಿಗಬಹುದು. ಆದರೆ ಇವಳನ್ನು ನೋಡಿ ಅಪಹಾಸ್ಯ ಮಾಡುವಷ್ಟು ಹಗುರ ಯಾಕೆ? ಅವಳು ಮಾಡುವ ವೃತ್ತಿ ಕೀಳೆಂದೇ? ಅವಳು ಬಡವಳೆಂದೇ? ಅವಳಿಗೂ ಸ್ವಾಭಿಮಾನವಿಲ್ವೇ? ಅಲ್ಲ, ತಮ್ಮ ಅಂತಸ್ತನ್ನು ಪ್ರಕಟಪಡಿಸಲು ಅವಳು ಮಾಧ್ಯಮವಾದಳೇ? ಇವೆಲ್ಲಾ ನನ್ನೊಳಗೆ ರಿಂಗಣಿಸುತ್ತಿರುವ ವಿಚಾರಗಳು.

ತನ್ನ ವಾಹನದ ಕನ್ನಡಿಯನ್ನು ಶುಚಿಗೊಳಿಸಿದ್ದಕ್ಕೆ ಹಣ ಬೇಡ, ಒಂದು ಕೃತಜ್ಞತೆಯನ್ನಾದರೂ ಸೂಚಿಸುವ ಮನಸ್ಸು ಯಾಕೆ ಬರಲಿಲ್ಲ? ಕಾರಿನೊಳಗೆ ಪಟ್ಟೆಸೀರೆ ಉಟ್ಟ, ಆಭರಣಗಳನ್ನು ಧರಿಸಿದ ಮಾತೆಯರಿಗೆ ಇವಳೂ ತನ್ನ ಮಗಳಂತೆ ಎಂದು ಕಾಣಲಿಲ್ಲ? ಯಾಕೆಂದರೆ ಕಾಂಚಣ ತಂದಿತ್ತ ಲಹರಿ. ಆ ಹುಡುಗಿಗೆ ಹೆಚ್ಚು ಬೇಡ, ಐದೋ ಹತ್ತೋ ರೂಪಾಯಿ ಭಕ್ಷೀಸು ಕೈಗಿಡುತ್ತಿದ್ದರೆ ಅವಳ ಹಸನ್ಮುಖತೆಯೇ ವರವಾಗುತ್ತಿತ್ತು.

ಐದಾರು ಲಕ್ಷದ ಕಾರಿನೊಳಗೆ ಕುಳಿತು ನೂರೋ ನೂರಿಪ್ಪತೋ ಕಿಲೋಮೀಟರ್ ವೇಗದಲ್ಲಿ ಸಾಗಿದಾಗ ಆಕಾಶದಲ್ಲಿ ತೇಲಿದ ಅನುಭವವಾಗಬಹುದು. ಮನಸ್ಸು ಪುಳಕಗೊಳ್ಳಬಹುದು. ಆರ್ಥಿಕವಾಗಿ ತಮಗಿಂತ ಕೆಳಗಿರುವವರ ಬಗ್ಗೆ ಔದಾಸೀನ್ಯ ತೋರಬಹುದು. ಅದೆಲ್ಲಾ ಎಷ್ಟು ದಿವಸ ಬಂಧುಗಳೇ, ‘ಪಾಸ್‍ಬುಕ್’ ತುಂಬಿರುವ ತನಕ! ಪಾಸ್‍ಬುಕ್ ತುಂಬಲಿ. ಆದರೆ ‘ತುಂಬಿ’ ತುಳುಕಬಾರದು. ತುಳುಕಿದರೆ ಏನಾಗ್ತದೆ? ಕಾರಿನೊಳಗೆ ಬೆಚ್ಚಗೆ ಕುಳಿತು ಆ ಹುಡುಗಿಯನ್ನು ಅಪಹಾಸ್ಯ ಮಾಡುವಂತಹ ಮನಃಸ್ಥಿತಿ ಗೊತ್ತಿಲ್ಲದೆ ಬದುಕಿನಲ್ಲಿ ಅಂಟಿಬಿಡುತ್ತದೆ. ಯಾವಾಗ ಕೀಳು ಮನಸ್ಥಿತಿ ಅಂಟಿತೋ ಆ ಕ್ಷಣದಿಂದ ಬದುಕಿಗೆ ಹಿಮ್ಮುಖ ಚಲನೆ. ಅದು ಹಿಮ್ಮುಖ ಅಂತ ಗೊತ್ತಾಗುವಾಗ ಹೊತ್ತಾಗಿರುತ್ತದೆ!

ಸಮಾಜದಲ್ಲಿ ಇಂತಹ ಮನಃಸ್ಥಿತಿ ಹೊಂದಿರುವ ಅನೇಕರನ್ನು ನೋಡುತ್ತಿದ್ದೇನೆ. ಹೋಟೇಲಿಗೆ ಹೋದರೆ ಅಗತ್ಯಕ್ಕಿಂತ ಹೆಚ್ಚು ಆರ್ಡರ್ ಮಾಡಿ, ಅರ್ಧಂಬರ್ಧ ತಿಂದು, ಒಂದಷ್ಟು ಬಟ್ಟಲಿನಲ್ಲೇ ಉಳಿಸಿ ಹೋಗದಿದ್ದರೆ ಹೋಟೆಲ್‍ವಾಸದ ಶಾಂತಿ ಸಿಗದು. ಅದೇ ಟೇಬಲಿನ ಆಚೆ ಬದಿಯಲ್ಲಿ ಹತ್ತೋ ಹದಿನೈದೋ ರೂಪಾಯಿ ಕೈಯಲ್ಲಿ ಹಿಡಿದು ಚಹಾ ಮಾತ್ರ ಹೀರುವ ಮುಖಗಳು ಕಾಣುವುದಿಲ್ಲ. ಕಾಣಬೇದಾದ್ದೂ ಇಲ್ಲ. ನೀವು ಆದೇಶಿದಂತೆ ಎಲ್ಲವನ್ನೂ ತಂದು ಕೊಡುವ ಸಪ್ಲೈಯರಿನ ಮುಖ ಎಂದಾದರೂ ನೋಡಿದ್ದೀರಾ? ಆ ಮುಖದ ಒಳಗಿನ ಭಾವವನ್ನು ಎಂದಾದರೂ ಕಂಡಿದ್ದೀರಾ?

ಕಾಂಚಾಣದ ಸದ್ದು ಇರುವಲ್ಲಿಯ ತನಕ ಆ ಭಾವಗಳು ಕಾಣಲಾರವು. ಯಾಕೆಂದರೆ ನಮ್ಮ ಭಾವವು ಶುಷ್ಕದತ್ತ ಜಾರಿ ಅದೆಷ್ಟೋ ಸಮಯವಾಗಿರುತ್ತದೆ! ಬದುಕಿನಲ್ಲಿ ಹಣ ಬೇಕು. ಎಷ್ಟೇ ಹಣ ಇರಲಿ, ಅದು ತಂತಮ್ಮ ಪಾಸ್‍ಬುಕ್ಕಿನೊಳಗಿದ್ದರೆ ಸಾಕು. ಹಣದ ಪ್ರತಿಷ್ಠೆಯಿಂದ ಇನ್ನೊಬ್ಬರ ಮೇಲೆ ಸವಾರಿ ಮಾಡುವುದು ಸುಶಿಕ್ಷಿತ ಅಲ್ಲ.

ಹಣವು ಇರುವಾಗ ಆದರ್ಶಗಳು ಮಾತನಾಡುತ್ತವೆ. ಮಾದರಿಗಳು ಸೃಷ್ಟಿಯಾಗುತ್ತವೆ. ಹೊಸ ಹೊಸ ಭಾವಗಳು ಇಣುಕುತ್ತವೆ. ಹೊಸ ನೋಟಗಳು ರೂಪುಗೊಳ್ಳುತ್ತವೆ. ಇಂತಹ ಆಟೋಪಗಳನ್ನು, ‘ಪ್ರಾತ್ಯಕ್ಷಿಕೆ’ಯನ್ನು ದೂರದಿಂದ ನೋಡುತ್ತ ನಗುವ ಮನಸ್ಸುಗಳು ನೂರಾರಿವೆ ಎನ್ನುವುದನ್ನು ಮರೆಯಕೂಡದು.

ಇದನ್ನು ಓದುವ ಹೊತ್ತಿಗೆ ಒಂದು ಅಭಿಪ್ರಾಯಕ್ಕೆ ನೀವು ಬಂದಿರುತ್ತೀರಿ – “ಈತನ ಪಾಸ್‍ಬುಕ್ ಗಟ್ಟಿಯಿಲ್ಲ. ಹಾಗಾಗಿ ಉಳ್ಳವರ ಮೇಲಿನ ಸಂಕಟವನ್ನು ಈ ರೂಪದಲ್ಲಿ ವಮನ ಮಾಡಿದ್ದಾನೆ.” ಖಂಡಿತಾ ಅಲ್ಲ. ನಿತ್ಯದ ಬದುಕಿನಲ್ಲಿ ಇಂತಹವರನ್ನು ಕಾಣುತ್ತಾ, ಅವರನ್ನು ಒಪ್ಪಿಕೊಳ್ಳುತ್ತಾ, ನೋವು ಅನುಭವಿಸುತ್ತಿರುವ ಮಂದಿ ನೂರಾರು. ಚಪ್ಪಲಿ ಎಲ್ಲಿ ಕಚ್ಚುತ್ತದೆ ಎನ್ನುವುದು ಚಪ್ಪಲಿ ಧರಿಸಿದವನಿಗೆ ಮಾತ್ರ ಗೊತ್ತಾಗುತ್ತದೆ! ಮಿಕ್ಕವರಿಗೆ ಚಪ್ಪಲಿ ಹೊಸತಾಗಿ ಕಾಣುತ್ತದೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ನಾ.ಕಾರಂತ ಪೆರಾಜೆ

ಪತ್ರಕರ್ತ , ಕಲಾವಿದ , ಅಂಕಣಕಾರ ನಾ.ಕಾರಂತ ಪೆರಾಜೆ ಅವರು ಪ್ರಸ್ತುತ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಕರ್ತರಾಗಿ, ಕಲಾವಿದರಾಗಿ, ಅಂಕಣಕಾರರಾಗಿ ಗುರುತಿಸಿಕೊಂಡಿರುವ ನಾ.ಕಾರಂತ ಅವರು ತಾಳಮದ್ದಳೆಯಲ್ಲಿ ಅರ್ಥದಾರಿಯಾಗಿ ಹಾಗೂ ವಿವಿಧ ಮೇಳಗಳಲ್ಲಿ ವೇಷಧಾರಿಯೂ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪುತ್ತೂರು ತಾಲೂಕಿನ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

Published by
ನಾ.ಕಾರಂತ ಪೆರಾಜೆ

Recent Posts

ಮಳೆಯ ನಡುವೆಯೂ ಉರಿಯುವ ಬಿಸಿಲು..! ಏಪ್ರಿಲ್–ಜೂನ್‌ನಲ್ಲಿ ಹವಾಮಾನ ಸವಾಲು..!

ಏಪ್ರಿಲ್‌ನಲ್ಲಿ ಮಳೆ ಹೆಚ್ಚಾದರೂ ಬಿಸಿಲು ಕಡಿಮೆಯಾಗುವುದಿಲ್ಲ ಎಂದು IMD ಎಚ್ಚರಿಸಿದೆ. ಏಪ್ರಿಲ್–ಜೂನ್ ಅವಧಿಯಲ್ಲಿ…

19 hours ago

ಗ್ಯಾಸ್ ಸಿಲಿಂಡರ್ ಕೊರತೆ ಪರಿಣಾಮ : ರಾಜ್ಯದಲ್ಲಿ ವಿದ್ಯುತ್ ಬಳಕೆ 10% ಏರಿಕೆ

ಗ್ಯಾಸ್ ಸಿಲಿಂಡರ್ ಕೊರತೆಯಿಂದ ರಾಜ್ಯದಲ್ಲಿ ವಿದ್ಯುತ್ ಬಳಕೆ 10% ಏರಿಕೆಯಾಗಿದೆ. ಕೇಂದ್ರದ ನೀತಿಗಳ…

20 hours ago

ಹಸಿರು ಅಮೋನಿಯಾ ಒಪ್ಪಂದಗಳು | ಭಾರತದ ಇಂಧನ ಭದ್ರತೆಗೆ ಹೊಸ ಬಲ..! 2030 ಗುರಿಗೆ ವೇಗ

ಹಸಿರು ಅಮೋನಿಯಾ ಒಪ್ಪಂದಗಳು ಭಾರತದ ಇಂಧನ ಭದ್ರತೆಗೆ ದೊಡ್ಡ ಬಲ ನೀಡಲಿವೆ. 2030ರೊಳಗೆ…

20 hours ago

ಕರಾವಳಿಯಲ್ಲಿ ಮಳೆಯ ರಭಸ | ಸುಬ್ರಹ್ಮಣ್ಯ ಆಸುಪಾಸಿನಲ್ಲಿ 50 ಮಿಮೀಗೂ ಹೆಚ್ಚು! ರಾಜ್ಯದ ಹಲವೆಡೆ ಇನ್ನೂ 2 ದಿನ ಮಳೆ ಅಲರ್ಟ್

ಮಾರ್ಚ್ ತಿಂಗಳಲ್ಲಿ ಅಪರೂಪದ ಭಾರೀ ಮಳೆ ಸುಬ್ರಹ್ಮಣ್ಯದಲ್ಲಿ ದಾಖಲಾಗಿದೆ. ರಾಜ್ಯದ ಹಲವೆಡೆ ಇನ್ನೂ…

20 hours ago

“ಕೃಷಿ ಕೂಳೆ ಸುಡುವುದು ಮುಗಿದುಹೋಯ್ತು…!” | ರೈತರಿಗೆ ಹೊಸ ಆದಾಯದ ದಾರಿ, ಕೂಳೆಯಿಂದ ಬಿಟುಮೆನ್ ತಯಾರಿ

ಕೃಷಿ ಕೂಳೆ ಈಗ ಮಾಲಿನ್ಯದ ಮೂಲವಲ್ಲ, ರೈತರಿಗೆ ಆದಾಯದ ಮೂಲವಾಗುತ್ತಿದೆ. ಬಯೋ-ಬಿಟುಮೆನ್ ತಂತ್ರಜ್ಞಾನ…

2 days ago

“ಮಹಿಳೆಯರಿಗೆ ಶಕ್ತಿ ನೀಡಿದರೆ ಕೃಷಿ ಬಲವಾಗುತ್ತದೆ..!” | ವಿಶ್ವದ ಗಮನ ಸೆಳೆಯುತ್ತಿದೆ ಇನ್‌ಕ್ಲೂಸಿವ್‌ ಅಗ್ರಿಕಲ್ಚರ್‌ ಮಾದರಿ

ಮಹಿಳೆಯರನ್ನು ಕೃಷಿ ಮೌಲ್ಯ ಸರಪಳಿಯಲ್ಲಿ ಸೇರಿಸಿದರೆ ಆದಾಯ ಮತ್ತು ಉತ್ಪಾದನೆ ಹೆಚ್ಚುತ್ತದೆ. Inclusive…

2 days ago