ಇವತ್ತು ಇನ್ನೊಂದು ಕುಟುಂಬದ ನೋವಿನ ಸಂಗತಿ ಹೇಳಬಯಸುತ್ತೇವೆ. ಅದರ ಜೊತೆಗೇ ಅದೇ ಕುಟುಂಬಕ್ಕೆ ಬೆಳಕು ಹರಿಸಿದ ಸಂತಸದ ಸುದ್ದಿಯನ್ನೂ ಹಂಚುತ್ತೇವೆ. ಸುಳ್ಯ ತಾಲೂಕು ಮಾತ್ರವಲ್ಲ ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ಇಂತಹ ಸಮಸ್ಯೆ ಇರಬಹುದು. ಬೆಳಕು ಚೆಲ್ಲುವ ಮಂದಿ ಕಡಿಮೆ ಇದ್ದಾರೆ. ಈ ಬಾರಿ ನಾವು ಮತ್ತೆ ಯುವಬ್ರಿಗೆಡ್ ಮಾಡಿರುವ ಕೆಲಸವನ್ನು ಮೆಚ್ಚಬೇಕು. ಅವರ ಕೆಲಸವನ್ನು ಶ್ಲಾಘಿಸಬೇಕು. ಈ ಕುಟುಂಬದ ಕತೆ ಇಲ್ಲಿದೆ. ಇದು ಇಂದಿನ ನಮ್ಮ ಫೋಕಸ್
Advertisement
ಸುಳ್ಯ: ಇದು ಸುಳ್ಯ ತಾಲೂಕಿನ ಮರ್ಕಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಚೀಮಾಡ್ ಎಂಬಲ್ಲಿನ ಪದ್ಮನಾಭ ಕುಟುಂಬದ ಕತೆ.
ಪದ್ಮನಾಭ ಹಾಗೂ ಸುಹಾಸಿನಿ ದಂಪತಿಗಳಿಗೆ ಒಬ್ಬಳು ಪುತ್ರಿ ಮೇಘಶ್ರೀ. ಬೆನ್ನುನೋವಿನ ಸಮಸ್ಯೆಯಿಂದ ನಡೆದಾಡಲು ಸಾದ್ಯವಾಗದೆ 15 ವರ್ಷಗಳಿಂದ ಮಲಗಿದಲ್ಲೇ ಇದ್ದಾಳೆ. ಪದ್ಮನಾಭ ಕೂಲಿ ಕಾರ್ಮಿಕನಾಗಿ ದುಡಿಯುತ್ತಾರೆ. ಸುಹಾಸಿನಿ ಮಗಳ ಆರೈಕೆಗಾಗಿ ಮನೆಯಲ್ಲೇ ಇದ್ದಾರೆ. ಮನೆ ಸ್ಥಳ ಬಿಟ್ಟರೆ ಬೇರೇನೂ ಸ್ಥಳವೂ ಇಲ್ಲ. ಸರಕಾರದಿಂದ ಇದುವರೆಗೆ ಯಾವುದೇ ಸೌಲಭ್ಯವೂ ದೊರೆತಿಲ್ಲ. ಕಾರಣ ಈ ಕುಟುಂಬಕ್ಕೆ ಮನೆ ನಂಬರ್ ಇಲ್ಲ, ಈ ಕಾರಣದಿಂದ ರೇಶನ್ ಕಾರ್ಡೂ ಇಲ್ಲ. ಗ್ಯಾಸ್ ಸಂಪರ್ಕವಿಲ್ಲ. ಆಧಾರ್ ಕಾರ್ಡ್ ಇಲ್ಲ… ಆದರೆ ಚುನಾವಣಾ ಗುರುತುಚೀಟಿ ಇದೆ. ಇದು ನಮ್ಮ ವ್ಯವಸ್ಥೆ..!
ಯಾವುದೋ ಊರಿನಿಂದ ಬಂದು ಎಲ್ಲೋ ವಾಸ್ತವ್ಯ ಇದ್ದು ಗುರುತುಚೀಟಿ ಪಡೆಯುತ್ತಾರೆ, ರೇಶನ್ ಕಾರ್ಡ್ ಪಡೆಯುತ್ತಾರೆ, ಮನೆ ನಂಬರ್ ಪಡೆಯುತ್ತಾರೆ. ಆದರೆ ನಮ್ಮೂರಲ್ಲೇ ಅನೇಕ ವರ್ಷಗಳಿಂದ ಇರುವ ಮಂದಿಗೆ ಯಾವುದೇ ಸೌಲಭ್ಯ ಪಡೆಯಲು ಆಗುತ್ತಿಲ್ಲ..!.
ಇಲ್ಲೂ ಹಾಗೇ ಆಗಿದೆ. ಪದ್ಮನಾಭ ಅವರು ಕಾರ್ಮಿಕ. ದಿನವೂ ದುಡಿಯಲು ಹೋಗಬೇಕು, ಮನೆಯಲ್ಲಿ ಅನಾರೋಗ್ಯಕ್ಕೆ ಒಳಗಾದ ಮಗಳು ಇದ್ದಾಳೆ. ಸರಕಾರದಿಂದ ಸಿಗುವ ಸೌಲಭ್ಯ ಯಾವುದೂ ಸಿಗುತ್ತಿಲ್ಲ ಕಾರಣ ರೇಶನ್ ಕಾರ್ಡ್ ಇಲ್ಲ. ಅದಕ್ಕೆ ಕಾರಣ ಮನೆ ನಂಬರ್ ಇಲ್ಲ..!. ಇದೆಲ್ಲಾ ಕಾರಣದಿಂದ ಮನೆಗೆ ವಿದ್ಯುತ್ ಸಂಪರ್ಕವೂ ಇಲ್ಲ. ಹೀಗಾಗಿ ಇಡೀ ಕುಟುಂಬ ಕತ್ತಲಲ್ಲಿ ಇತ್ತು. ಅಂಗವಿಕಲರಿಗೆ ಸಿಗುವ ಅಥಾವ ಎಂಡೋಸಲ್ಫನ್ ಪೀಡಿತ ಮಕ್ಕಳಿಗೆ ಕೊಡಲ್ಪಡುವ ಯಾವುದೆ ಸೌಲಭ್ಯಗಳು ದೊರಕುತ್ತಿಲ್ಲ.
ಈ ಸುದ್ದಿ ಯುವಬ್ರಿಗೆಡ್ ಗಮನಕ್ಕೆ ಬಂದಿತ್ತು. ಆ ಮನೆಗೆ ಭೇಟಿ ನೀಡಿ ವಿಷಯ ಸಂಗ್ರಹಿಸಿದರು. ತಾವೇನು ಮಾಡಬಹುದು ಎಂದು ಯೋಜನೆ ಹಾಕಿದರು. ತಕ್ಷಣವೇದಾನಿಗಳನ್ನು ಸಂಪರ್ಕಿಸಿ ಮನೆಗೆ ಸೋಲಾರ್ ದೀಪ ಅಳವಡಿಸಿ ಬೆಳಕು ನೀಡಿದರು. ಆ ಮನೆಗೆ ತೆರಳಿ ಸಂಗ್ರಹಿಸಿದ ವಿಷಯ ಹೀಗಿದೆ,
ಪದ್ಮನಾಭ ಹಾಗೂ ಸುಹಾಸಿನಿ ದಂಪತಿಯ ಪುತ್ರಿ ಮೇಘಶ್ರೀ. ವಯಸ್ಸು 15 . ಈಕೆಗೆ 15 ವರ್ಷಗಳಿಂದಲೂ ಮಂಚವೇ ಅವಳ ಪ್ರಪಂಚ. ಬೆನ್ನಿಗೆ ಯಾವುದೇ ಬಲವಿಲ್ಲದೆ ಈ ಪರಿಸ್ಥಿತಿಯಲ್ಲಿ ಇರುವುದಾಗಿ ಪೋಷಕರು ತಿಳಿಸಿದರು. ಸರಕಾರದಿಂದ ಯಾವುದಾದರೂ ಸವಲತ್ತು ಸಿಗುತ್ತದೆಯೇ ಎಂದು ಕೇಳಿದಾಗ, ಯಾವುದೇ ಸವಲತ್ತು ಬಿಡಿ , ಕನಿಷ್ಠ ರೇಷನ್ ಕಾರ್ಡ್ ಕೂಡ ಅವರ ಜೊತೆ ಇಲ್ಲ ಎಂಬ ವಿಷಯ ತಿಳಿಯಿತು. ಇದರಿಂದ ಮನೆಗೆ ಯಾವುದೇ ವಿದ್ಯುತ್ ಸೌಲಭ್ಯವೂ ಇಲ್ಲ. ಯಾಕೆ ಮಾಡಿಸಿಲ್ಲ ಎಂದು ಕೇಳಿದಾಗ, ನಮ್ಮ ಮನೆಗೆ ಯಾವುದೇ ನಂಬರ್ ಇಲ್ಲ ಎಂದು ಹೇಳಿದರು ಪದ್ಮನಾಭ. ನಂಬರ್ ಇಲ್ಲದಿದ್ದರೆ ರೇಷನ್ ಕಾರ್ಡ್ ಕೂಡ ಒದಗಿಸುವುದಿಲ್ಲ ಎಂದು ತಮ್ಮ ಅಸಹಾಯಕತೆಯನ್ನು ತೋಡಿಕೊಂಡರು. ಮೇಘಾಳ ಔಷಧೀಯ ಖರ್ಚು ತಿಂಗಳೊಂದಕ್ಕೆ 4 ಸಾವಿರದ ಮೇಲೆ ಬರಬಹುದು. ಅದೆಲ್ಲವನ್ನು ತನ್ನ ಕೂಲಿಯಿಂದ ಬಂದ ಹಣದಿಂದಲೇ ನಿರ್ವಹಿಸಬೇಕು ಪದ್ಮನಾಭ.
ನಮ್ಮಲ್ಲಿನ ಆಡಳಿತ ವ್ಯವಸ್ಥೆ, ಜನಪ್ರತಿನಿಧಿಗಳು ಇಂತಹ ಕುಟುಂಬದ ಕಡೆಗೆ ನೋಡಿದರೆ, ಸೂಕ್ತ ವ್ಯವಸ್ಥೆ ಮಾಡಿಸಿದರೆ ವ್ಯವಸ್ಥೆಗೆ ಒಳ್ಳೆಯ ಅರ್ಥ ಬರುತ್ತಿತ್ತು.
ಸುಳ್ಯ ತಾಲೂಕಿನ ಯಾವುದೇ ಜನಪ್ರತಿನಿಧಿಗಳು ಯಾಕೆ ಇಂತಹ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ, ಪರಿಹರಿಸಲು ಮುಂದಾಗುತ್ತಿಲ್ಲ ಎಂಬುದು ಅರ್ಥವಾಗುತ್ತಿಲ್ಲ. ನರೇಂದ್ರ ಮೋದಿಯವರ ಜನ ಮೆಚ್ಚಿದ ವಾಕ್ಯವಾಗಿರುವ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂಬ ಮಾತಿಗೆ ನಿಜವಾದ ಫಲ ಸಿಗುವುದೆ ಇಂತಹ ಸಮಸ್ಯೆಗಳನ್ನು ಹೋಗಲಾಡಿಸಿದಾಗ ಮಾತ್ರ ಎಂಬುದನ್ನು ಅರ್ಥಮಾಡಿಕೊಂಡಾಗ ಹೆಚ್ಚು ಮೌಲ್ಯ ಬರುತ್ತದೆ.