ಸುಳ್ಯ. ತಾಲೂಕು ಪಂಚಾಯಿತಿ ಉಪಾಧ್ಯಕ್ಷೆ ಶುಭದಾ.ಎಸ್ ರೈ ಅವರ ಕುರಿತು ಮಾನಹಾನಿಕರವಾದ ಸಂದೇಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಿದವರ ಮೇಲೆ ಮತ್ತು ಭಿತ್ತಿ ಪತ್ರ ಹಾಗು ಕರಪತ್ರಗಳ ಮೂಲಕ ಅಪಪ್ರಚಾರ ಮಾಡಿದವರ ಮೇಲೆ ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಾಲೂಕು ಪಂಚಾಯಿತಿ ಸಭೆಯಲ್ಲಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆಯಿತು.
ತಾ.ಪಂ.ಅಧ್ಯಕ್ಷ ಚನಿಯ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಜನಪ್ರತಿನಿಧಿಯ ಮೇಲೆ ಈ ರೀತಿ ಸೈಬರ್ ದಾಳಿ ಮತ್ತು ಭಿತ್ತಿ ಪತ್ರ ಹರಡಿ ಅಪಪ್ರಚಾರ ಮಾಡಿದವರ ಮೇಲೆ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು. ಪ್ರಭಾವಿಗಳ ಒತ್ತಡಕ್ಕೆ ಮಣಿದು ಪೊಲೀಸ್ ಕ್ರಮ ತೆಗೆದುಕೊಂಡಿಲ್ಲ ಎಂದು ಅವರು ಆರೋಪಿಸಿದರು. ತನ್ನ ಮೇಲೆ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಮಾಡದವರ ವಿರುದ್ಧ ಸೈಬರ್ ಸೆಲ್‍ಗೆ ಮತ್ತು ಭಿತ್ತಿ ಪತ್ರ ಮತ್ತು ಕರಪತ್ರ ಮೂಲಕ ಅಪಪ್ರಚಾರ ಮಾಡಿದವರ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿ ಎರಡು ತಿಂಗಳು ಕಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಶುಭದಾ ಎಸ್.ರೈ ಹೇಳಿದರು.
ಜಿ.ಪಂ.ಸದಸ್ಯ ಹರೀಶ್ ಕಂಜಿಪಿಲಿ ಮಾತನಾಡಿ ಈ ರೀತಿ ಮಹಿಳೆಯರ ಮೇಲೆ ದಾಳಿ ಆದಲ್ಲಿ ಮಹಿಳೆಯರು ಚುನಾವಣೆಗೆ ನಿಲ್ಲಲು ಮತ್ತು ಸಾರ್ವಜನಿಕ ಕ್ಷೇತ್ರಕ್ಕೆ ಬರಲು ಭಯಪಡುವ ಸ್ಥಿತಿ ನಿರ್ಮಾಣವಾಗಬಹುದು ಎಂದು ಹೇಳಿದರು. ಈ ಕುರಿತು ಚರ್ಚೆ ನಡೆದು ಇದರ ಕುರಿತು ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಆಗ್ರಹಿಸಿದರು.
ಒಂದು ವಾರದಲ್ಲಿ ತನಿಖೆಯ ಪ್ರಗತಿಯ ವರದಿಯನ್ನು ತಾ.ಪಂ.ಅಧ್ಯಕ್ಷರಿಗೆ ಸಲ್ಲಿಸಲು ಮತ್ತು ಅಪಪ್ರಚಾರ ಹರಡಿದವರ ಮೇಲೆ ಸೂಕ್ತ ಕ್ರಮಕ್ಕೆ ಅಧ್ಯಕ್ಷರು ಇಲಾಖೆಗೆ ಸೂಚಿಸಿದರು. ಈ ವಿಷಯವನ್ನು ಪ್ರಕರಣದ ತನಿಖೆ ನಡೆಸುವ ಅಧಿಕಾರಿಯ ಗಮನಕ್ಕೆ ತರುವುದಾಗಿ ಸುಳ್ಯ ಎಸ್.ಐ ಸಭೆಗೆ ತಿಳಿಸಿದರು.
ಬಿಎಸ್‍ಎನ್‍ಎಲ್ ಸಮಸ್ಯೆ-ಕಾವೇರಿದ ಚರ್ಚೆ:
ಬಿಎಸ್‍ಎನ್‍ಎಲ್ ಟವರ್‍ಗಳ ಸಮಸ್ಯೆ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಯಿತು. ವಿಷಯ ಪ್ರಸ್ತಾಪಿಸಿದ ಸದಸ್ಯ ಅಶೋಕ್ ನೆಕ್ರಾಜೆ ಬಿಎಸ್‍ಎನ್‍ಎಲ್ ಟವರ್ ಆಪ್ ಆಗಿ ಕರೆ ಮಾಡಲು ಸಾಧ್ಯವಾಗದೆ, ಇಂಟರ್ ನೆಟ್ ಇಲ್ಲದೆ ಗ್ರಾಮೀಣ ಪ್ರದೇಶದಲ್ಲಿ ತೀವ್ರ ಸಮಸ್ಯೆ ಉಂಟಾಗಿದೆ ಎಂದರು. ಬಿಎಸ್‍ಎನ್‍ಎಲ್ ಅಧಿಕಾರಿಗಳನ್ನು ಸದಸ್ಯರು ತೀವ್ರ ತರಾಟೆಗೆ ತೆಗೆದುಕೊಂಡರು. ಬಿಎಸ್‍ಎನ್‍ಎಲ್ ಟವರ್ ನಿರ್ವಹಣೆಗೆ ಅನುದಾನ ಬರುತ್ತಾ ಇಲ್ಲ ಎಂದು ಅಧಿಕಾರಿಗಳು ತಿಳಿಸಿದರು. ಸಾರ್ವಜನಿಕರಿಂದ ವಂತಿಗೆ ಪಡೆದಾದರೂ ಬಿಎಸ್‍ಎನ್‍ಎಲ್ ಟವರ್ ನಿರ್ವಹಣೆ ಮಾಡಿ. ಗ್ರಾಮೀಣ ಪ್ರದೇಶಗಳಲ್ಲಿ ಜನರು ತೀವ್ರ ಸಮಸ್ಯೆಯಲ್ಲಿದ್ದಾರೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಮತ್ತಿತರರು ಹೇಳಿದರು. ಬಿಎಸ್‍ಎನ್‍ಎಲ್ ನಲ್ಲಿ ಏನು ಸಮಸ್ಯೆಗಳಿವೆ ಎಂಬುದರ ಬಗ್ಗೆ ವರದಿ ನೀಡಿ ಮತ್ತು ಒಂದು ತಿಂಗಳಲ್ಲಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಅಧ್ಯಕ್ಷ ಚನಿಯ ಕಲ್ತಡ್ಕ ಸೂಚನೆ ನೀಡಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಸಮಸ್ಯೆ:
ಸರ್ಕಾರಿ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ನೇಮಕಾತಿಯಲ್ಲಿ ಉಂಟಾದ ಕೆಲವೊಂದು ಗೊಂದಲಗಳಿಂದ ಸಮಸ್ಯೆ ಉಂಟಾಗಿರುವ ಬಗ್ಗೆ ರಾಧಾಕೃಷ್ಣ ಬೊಳ್ಳೂರು, ಅಶೋಕ್ ನೆಕ್ರಾಜೆ ಆರೋಗ್ಯಾಧಿಕಾರಿಯನ್ನು ಪ್ರಶ್ನಿಸಿದರು. ಚುನಾವಣಾ ಸಂದರ್ಭ ಅನುದಾನ ಇಲ್ಲ ಎಂದು ಡಿಗ್ರೂಪ್, ಫಾರ್ಮಾಸಿಸ್ಟ್, ಲ್ಯಾಬ್ ಟೆಕ್ನಿಷಿಯನ್‍ಗಳ ಹೊರಗುತ್ತಿಗೆ ರದ್ದಾದ ಹಿನ್ನಲೆಯಲ್ಲಿ ಹುದ್ದೆ ಖಾಲಿ ಆಗಿದೆ. ಬಳಿಕ ಡಿಗ್ರೂಪ್ ನೌಕರರನ್ನು ಜುಲೈವರೆಗೆ ಮುಂದುವರಿಸಲು ಸೂಚಿಸಿದ್ದಾರೆ. ಶೆ.30 ಡಿಗ್ರೂಪ್ ನೌಕರರನ್ನು ಮಾತ್ರ ಮುಂದುವರಿಸಲು ಮತ್ತು ಉಳಿದ ಹುದ್ದೆಗೆ ಅನುದಾನಕ್ಕೆ ಸರ್ಕಾರಕ್ಕೆ ಬರೆಯಲು ಆದೇಶ ಬಂದಿದೆ ಎಂದು ಆರೋಗ್ಯಾಧಿಕಾರಿ ಹೇಳಿದರು. ಈ ಕುರಿತು ಚರ್ಚೆ ನಡೆದಾಗ ನೌಕರರಿಗೆ ನಾಲ್ಕು ತಿಂಗಳಿನಿಂದ ಸಂಬಳ ಬರುವುದಿಲ್ಲ ಎಂಬ ದೂರುಗಳಿವೆ ಎಂದು ಅಶೋಕ್ ನೆಕ್ರಾಜೆ ಹೇಳಿದರು. ಆಸ್ಪತ್ರೆಗಳ ಹೊರಗುತ್ತಿಗೆ ಏಜೆನ್ಸಿಯನ್ನು ರಾಜ್ಯಮಟ್ಟದಲ್ಲಿ ನೀಡುವ ಬದಲು ಆಯಾ ಜಿಲ್ಲಾಮಟ್ಟದಲ್ಲಿ ನೇಮಕ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಲು ನಿರ್ಣಯಿಸಲಾಯಿತು.
ಎಡಮಂಗಲದ ಅಂಬೇಡ್ಕರ್ ಭವನ ನಿರ್ಮಾಕ್ಕೆ ಸ್ಥಳ ಮಂಜೂರಾತಿಗೆ ಅವಕಾಶವಿಲ್ಲ ಎಂದು ಅರಣ್ಯ ಇಲಾಖೆ ನೀಡಿರುವ ಅಭಿಪ್ರಾಯದ ಬಗ್ಗೆ ಚರ್ಚೆ ನಡೆಯಿತು. ಜಾಗ ಮಂಜೂರಾತಿಗೆ ಅರಣ್ಯ ಮತ್ತು ಕಂದಾಯ ಇಲಾಖೆಯ ಜಂಟಿ ಸರ್ವೆ ನಡೆಸುವಂತೆ ಸಭೆ ಸೂಚನೆ ನೀಡಿದೆ.
ಅಕ್ಷರ ದಾಸೋಹ ಅಕ್ಕಿಯಲ್ಲಿ ಹುಳು- ವರದಿ ನೀಡಲು ಸೂಚನೆ.
ಶಾಲೆಗಳಲ್ಲಿ ನೀಡುವ ಬಿಸಿ ಊಟದ ಅಕ್ಕಿಯಲ್ಲಿ ಹುಳು ಪತ್ತೆಯಾದ ಹಿನ್ನಲೆಯಲ್ಲಿ ಮಕ್ಕಳು ಊಟ ಮಾಡಲು ಹಿಂಜರಿಯುತ್ತಿರುವ ಬಗ್ಗೆ ದೂರುಗಳು ಬಂದಿದೆ. ಶಾಲೆಗಳಿಗೆ ತೆರಳಿ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಶಿಕ್ಷಣ ಮತ್ತು ಅಕ್ಷರ ದಾಸೋಹ ಇಲಾಖೆಯ ಅಧಿಕಾರಿಗಳಿಗೆ ಅಧ್ಯಕ್ಷರು ನಿರ್ದೇಶನ ನೀಡಿದರು. ರಜೆಯಲ್ಲಿ ಉಳಿದ ಅಕ್ಕಿಯನ್ನು ಶೇಖರಿಸಿಟ್ಟುರುವುದರಲ್ಲಿ ಹಾಗೆ ಆಗಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು. ಶಾಲೆಯಲ್ಲಿ ಮಕ್ಕಳು ಕಡಿಮೆ ಊಟ ಮಾಡುವ ಕಾರಣ ಅಕ್ಕಿ ಉಳಿಯುತ್ತದೆ. ಆದರೆ ಉಳಿದ ಅಕ್ಕಿಯನ್ನು ಕಡಿತ ಮಾಡದೆ ಮತ್ತೆ ಶಾಲೆಗಳಿಂದ ಬೇಡಿಕೆ ಸಲ್ಲಿಸುವ ಕಾರಣ ಅಲ್ಲಿ ಅಕ್ಕಿ ಉಳಿಯಲು ಕಾರಣವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದಾಗ ಈ ಕುರಿತು ಚರ್ಚೆ ನಡೆಯಿತು. ಪ್ರತಿ ಶಾಲೆಯಲ್ಲೂ ಉಳಿದ ಅಕ್ಕಿ ಕಳೆದು ಬೇಡಿಕೆ ಸಲ್ಲಿಸುವಂತೆ ಮತ್ತು ಅಕ್ಷರ ದಾಸೋಹ ವ್ಯವಸ್ಥೆಯನ್ನು ಸೂಕ್ಷ್ಮವಾಗಿ ನಿರೀಕ್ಷಿಸುವಂತೆ ಸಭೆ ಸೂಚಿಸಿತು. ಶಾಲೆಗಳಲ್ಲಿ ಶಿಷ್ಟಾಚಾರ ಪಾಲಿಸುವಂತೆ ಮುಖ್ಯೋಪಾಧ್ಯಾಯರ ಸಭೆಯಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದರು.
ನಿರ್ಣಯಗಳು ಅನುಷ್ಠಾನವಾಗುವುದಿಲ್ಲ.
ತಾ.ಪಂ.ಸಭೆಯಲ್ಲಿ ಆಗುವ ನಿರ್ಣಯಗಳು ಅನುಷ್ಠಾನವಾಗುವುದಿಲ್ಲ, ಸಭೆಯಲ್ಲಿ ಅಧಿಕಾರಿಗಳು ಸಮರ್ಪಕವಾದ ಉತ್ತರ ನೀಡುವುದಿಲ್ಲ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಸಭೆಗೆ ಯಾರು ಹಾಜರಾಜಬೇಕೋ ಅವರೇ ಹಾಜರಾಗಬೇಕು. ಬದಲಿ ಅಧಿಕಾರಿಗಳು ಬಂದರೆ ಸಮರ್ಪಕವಾದ ಮಾಹಿತಿಯೊಂದಿಗೆ ಸಭೆಗೆ ಬನ್ನಿ ಎಂದು ಅಧ್ಯಕ್ಷರು ತಾಕೀತು ಮಾಡಿದರು. ಕೆಲಸದ ಒತ್ತಡದಿಂದಾಗಿ ಸರ್ವೆ ಇಲಾಖೆಯನ್ನು ತಾ.ಪಂ.ಸಭೆಯಿಂದ ಹೊರಗಿಡಬೇಕು ಎಂದು ಭೂದಾಖಲೆಗಳ ಸಹಾಯಕ ನಿರ್ದೇಶಕರು ಹೇಳಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸದಸ್ಯ ಅಬ್ದುಲ್ ಗಫೂರ್ ಜನರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸರ್ವೆ ಇಲಾಖೆಯವರು ಸಭೆಗೆ ಬರಲೇ ಬೇಕು ಎಂದರು. ವಿವಿಧ ಸಮಸ್ಯೆಗಳ ಬಗ್ಗೆ ಸದಸ್ಯರ ಮತ್ತು ಸರ್ವೆ ಇಲಾಖೆಯ ಅಧಿಕಾರಿಯ ಮಧ್ಯೆ ಬಹಳ ಹೊತ್ತು ಚರ್ಚೆ ನಡೆಯಿತು.
ಹೊಸ ಆಧಾರ್ ಕಾರ್ಡ್ ಮಾಡಿಸಲು ಮತ್ತು ಆಧಾರ್ ಕಾರ್ಡ್ ತಿದ್ದುಪಡಿಗೆ ವ್ಯವಸ್ಥೆ ಇಲ್ಲದ ಕಾರಣ ಜನರಿಗೆ ತೊಂದರೆ ಆಗಿದೆ. ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಆಧಾರ್ ಕಾರ್ಡ್ ಮಾಡಲು ಮತ್ತು ತಿದ್ದುಪಡಿಗೆ ವ್ಯವಸ್ಥೆ ಆಗಬೇಕು ಎಂದು ಸದಸ್ಯ ತೀರ್ಥರಾಮ ಜಾಲ್ಸೂರು ಹೇಳಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತ ಧನಂಜಯ ವಾಗ್ಲೆ ಅವರು ಈಚೆಗೆ ನಿಧನರಾದರು.…
ಬಾಂಗ್ಲಾ ದೇಶದ ಕರಾವಳಿಯಲ್ಲಿ ಉಂಟಾಗಿರುವ ತಿರುವಿಕೆಯ ಪರಿಣಾಮದಿಂದ ನಮ್ಮ ಕರಾವಳಿಯಲ್ಲಿ ಮಳೆಯ ಪ್ರಮಾಣ…
ಮೊಬೈಲ್ ಎಷ್ಟು ಅಪಾಯಕಾರಿ ಸ್ಥಿತಿಗೆ ಮಕ್ಕಳನ್ನು ದೂಡುತ್ತದೆ ಎಂದರೆ, ಕಣ್ಣು ಮಾತ್ರವಲ್ಲ ಮನಸ್ಸುಗಳನ್ನೂ…
ಶರಧಿ.ಡಿ.ಎಸ್, 3 ನೇ ತರಗತಿ, ಶ್ರೀ ಭಾರತೀ ವಿದ್ಯಾ ಪೀಠ, ಮುಜುಂಗಾವು ಎಡನಾಡು,…
ಕೃತಿಕಾ, 9 ನೇ ತರಗತಿ, ಸೈಂಟ್ ಆನ್ಸ್ ಇಂಗ್ಲಿಷ್ ಮೀಡಿಯಂ ಶಾಲೆ, ಕಡಬ…
ಧರ್ಮಸ್ಥಳ ಮತ್ತು ಕುಂದಾಪುರ ಪ್ರಾದೇಶಿಕ ಅರಣ್ಯ ವಿಭಾಗ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ…