ಮಂಗಳೂರು : ಕರ್ನಾಟಕ ಸಾಹಿತ್ಯ ಅಕಾಡೆಮಿ, ಜೈ ತುಳುನಾಡ್ (ರಿ.) ಮತ್ತು ಬೆಂಗಳೂರು ತುಳುವಾಸ್ ಕೌನ್ಸಿಲ್ ಇವರ ಸಹಯೋಗದಲ್ಲಿ ಜನವರಿ 27 ರಂದು ಮಂಗಳೂರಿನ ತುಳುಭವನದಲ್ಲಿ ತುಳು ಭಾಷೆ ಮತ್ತು ತುಳು ಲಿಪಿಯಲ್ಲಿ ಭಾರತದ ಸಂವಿಧಾನದ ಪೀಠಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ. ಜಿ. ಕತ್ತಲ್‍ಸಾರ್ ಅವರು ವಹಿಸಿಕೊಂಡು ತುಳು ಲಿಪಿಯ ಸಂವಿಧಾನದ ಪೀಠಿಕೆಯನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ತುಳು ಪರವಾಗಿ ದುಡಿಯುತ್ತಿರುವ ಸಂಘಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ ಸಂಘಟನೆಗಳಿಗೆ ಸರ್ವ ರೀತಿಯ ಸಹಕಾರ ನೀಡುವ ಭರವಸೆಯನ್ನು ನೀಡಿದರು. ತುಳು ಸಂಸ್ಕೃತಿಯ ಉಳಿವಿಗಾಗಿ ಇನ್ನಷ್ಟು ಯೋಜನೆಗಳನ್ನು ಹಾಕಿಕೊಳ್ಳಲಾಗುವುದು ಎಂಬ ಭರವಸೆಯನ್ನು ನೀಡಿದರು.
ತುಳು ಭಾಷೆಯಲ್ಲಿ ಸಂವಿಧಾನದ ಬಿಡುಗಡೆ ಬಹುಕಾಲದ ಹಿಂದೆಯೇ ನಡೆಯಬೇಕಿದ್ದ ಕಾರ್ಯವಾಗಿತ್ತು, ಈ ದಿನ ಸಂವಿಧಾನದ ಪೀಠಿಕೆಯನ್ನು ತುಳು ಭಾಷೆ ಮತ್ತು ತುಳು ಲಿಪಿಯಲ್ಲಿ ರಚಿಸಲಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಡಾ. ಆಕಾಶ್ ರಾಜ್ ಜೈನ್ ಅಭಿಪ್ರಾಯಪಟ್ಟರು.
ಈ ಸಂದರ್ಭ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಲೀಲಾಕ್ಷ ಕರ್ಕೇರ, ನಿಟ್ಟೆ ಶಶಿಧರ ಶೆಟ್ಟಿ, ಸಿದ್ದಕಟ್ಟೆ ಮಲ್ಲಿಕಾ ಅಜಿತ್ ಶೆಟ್ಟಿ, ಅಕಾಡೆಮಿಯ ರಿಜಿಸ್ಟ್ರಾರ್ ರಾಜೇಶ್. ಈ, ಜೈ ತುಳುನಾಡ್ ಸಂಘ ಮತ್ತಿತರರು ಉಪಸ್ಥಿತರಿದ್ದರು.