ಬೆಂಗಳೂರು: ದೇಶಭಕ್ತಿ ಹಾಗೂ ದೇಶಜ್ಞಾನದ ಸಮಗ್ರ ವಿದ್ಯಾವೀರರನ್ನು ಸೃಷ್ಟಿಸಿ, ಅವರು ದೇಶಕ್ಕೆ ಮಾತ್ರವಲ್ಲ ವಿಶ್ವಕ್ಕೆ ಬೆಳಕಾಗುವಂತೆ ಬೆಳೆಸುವುದೇ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಉದ್ದೇಶ ಎಂದು ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿ ನುಡಿದರು.
ಗಿರಿನಗರ ರಾಮಾಶ್ರಮದಲ್ಲಿ ಭಾನುವಾರ ನಡೆದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಂವಾದ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು. ದೇಶದ ಬಗ್ಗೆ ಜ್ಞಾನ ಇಲ್ಲದ ದೇಶಭಕ್ತಿಯಿಂದ ಯಾವ ಪ್ರಯೋಜನವೂ ಇಲ್ಲ. ದೇಶವನ್ನು ಸಮರ್ಥವಾಗಿ ಮುನ್ನಡೆಬೇಕಾದರೆ ದೇಶದ ಸಂಸ್ಕೃತಿ, ಪರಂಪರೆ, ವಿದ್ಯೆಗಳ ಅರಿವು ಇರಬೇಕಾದ್ದು ಅನಿವಾರ್ಯ. ಅಂಥವರು ಮಾತ್ರವೇ ದೇಶವನ್ನು ಉಳಿಸಿ ಬೆಳೆಸಬಲ್ಲರು. ಚಂದ್ರಗುಪ್ತನಂಥ ವೀರ- ಜ್ಞಾನಿಗಳನ್ನು ನಿರ್ಮಾಣ ಮಾಡುವುದು ಗುರಿ ಎಂದು ವಿವರಿಸಿದರು.ಧರ್ಮನಿಷ್ಠೆ, ದೇಶನಿಷ್ಠೆ ಇರುವ ಧರ್ಮಯೋಧರ ನಿರ್ಮಾಣ ನಮ್ಮ ಉದ್ದೇಶ. ಚಾಣಕ್ಯ- ಚಂದ್ರಗುಪ್ತರ ಪರಂಪರೆ ಮುಂದುವರಿಯಬೇಕು ಮತ್ತು ಅತ್ಯಪೂರ್ವ ಭಾರತೀಯ ವಿದ್ಯೆ- ಕಲೆಗಳನ್ನು ಉಳಿಸಿ ಬೆಳೆಸುವ ಅನಿವಾರ್ಯತೆ ಇದೆ ಎಂದು ಪ್ರತಿಪಾದಿಸಿದರು.
ಕರ್ನಾಟಕ ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ಮಾತನಾಡಿ, ಭಾರತೀಯ ವಿದ್ಯೆಗಳ ಪುನಃಸ್ಥಾಪನೆ ಇದರ ಮುಖ್ಯ ಉದ್ದೇಶ. ಪ್ರತಿಯೊಂದು ವಿವಿಗಳೂ ತಮ್ಮದೇ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಆದರೆ ಸಮಗ್ರ ಭಾರತೀಯ ಜ್ಞಾನ ಪ್ರಜ್ವಲಿಸಲು ವಿಷ್ಣುಗುಪ್ತ ವಿಶ್ವವಿದ್ಯಾಪೀಠವೇ ತಲೆ ಎತ್ತಬೇಕಾಯಿತು ಎಂದು ಬಣ್ಣಿಸಿದರು. ಭಾರತೀಯ ವಿದ್ಯೆಯ ಮೂಲಕ ಭಾರತ ಪ್ರಕಾಶಮಾನವಾಗಬೇಕು. ಇದು ಇಡೀ ವಿಶ್ವಕ್ಕೆ ಬೆಳಕು ನೀಡಬಲ್ಲ, ಇಪ್ಪತ್ತೊಂದನೇ ಶತಮಾನದ ಮಹತ್ವದ ಐತಿಹಾಸಿಕ ಘಟನೆ ಇದು ಎಂದು ಅಭಿಪ್ರಾಯಪಟ್ಟರು. ತಮ್ಮಲ್ಲಿರುವ ಅಪೂರ್ವ 5000 ಕಲ್ಲಚ್ಚಿನ ಪ್ರತಿಗಳು, ತಾಳೆಗರಿ, ಅಮೂಲ್ಯ ಗ್ರಂಥಗಳನ್ನು ವಿವಿಗೆ ಸಮರ್ಪಿಸುವುದಾಗಿ ಪ್ರಕಟಿಸಿದರು.
ವಿದ್ವಾನ್ ಡಾ.ಎಸ್.ರಂಗನಾಥ್, ಪಾಶ್ಚಾತ್ಯರು ಭಾರತದತ್ತ ಮುಖ ಮಾಡಿರುವ ಹಂತದಲ್ಲಿ ನಾವು ನಮ್ಮತನವನ್ನು ಉಳಿಸಿಕೊಳ್ಳಬೇಕಾದ್ದು ಅನಿವಾರ್ಯ ಎಂದು ಅಭಿಪ್ರಾಯಪಟ್ಟರು. ಪರಂಪರೆಯನ್ನು ಬಿಡದೇ, ಆಧುನೀಕತೆಯನ್ನು ಮೈಗೂಡಿಸಿಕೊಳ್ಳುವುದು ಅಗತ್ಯ ಎಂದರು.
ಹಿರಿಯ ವಕೀಲ ಕೆ.ಜಿ.ರಾಘವನ್, ಪತ್ರಕರ್ತ ವಿನಾಯಕ ಭಟ್ ಮೂರೂರು ಮಾತನಾಡಿದರು. ರಾಘವೇಂದ್ರ ಭಟ್ ಕ್ಯಾದಗಿ ಪ್ರಾಸ್ತಾವಿಕ ಭಾಷಣ ಮಾಡಿದರು. ಮೋಹನ ಭಾಸ್ಕರ ಹೆಗಡೆ ನಿರೂಪಿಸಿದರು. ನ್ಯಾಷನಲ್ ಲಾ ಸ್ಕೂಲ್‍ನ ನಿವೃತ್ತ ಕುಲಪತಿ ಡಾ.ಜಯಗೋವಿಂದ್ ಸಭಾಪೂಜೆ ನೆರವೇರಿಸಿದರು.