ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ಒಬ್ಬರು ಮಹಿಳೆಗೆ ಕೊರೊನಾ ಪಾಸಿಟಿವ್ ಬಂದ ಬೆನ್ನಲ್ಲೇ ಅವರು ಸಂಜೆಯ ವೇಳೆಗೆ ಮೃತಪಟ್ಟ ಹಿನ್ನೆಲೆಯಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾದ ಪ್ರದೇಶವನ್ನು ಸೀಲ್ಡೌನ್ ಮಾಡಲಾಗಿದೆ. ಬಂಟ್ವಾಳ ಪಟ್ಟಣ ಹಾಗೂ ಮಂಗಳೂರಿನ ಪಡೀಲ್ ನ ಫಸ್ಟ್ ನ್ಯೂರೋ ಆಸ್ಪತ್ರೆ ಸೇರಿದಂತೆ ಸುತ್ತಲಿನ 1 ಕಿ.ಮೀ ವ್ಯಾಪ್ತಿಯಲ್ಲಿ ಸೀಲ್ಡೌನ್ ಮಾಡಲಾಗಿದೆ. ಅಲ್ಲದೆ ಆಸ್ಪತ್ರೆಯ 5 ಕಿ.ಮೀ. ವ್ಯಾಪ್ತಿಯನ್ನು ಬಫರ್ ಝೋನ್ ಘೋಷಣೆ ಮಾಡಲಾಗಿದೆ.
ಗುರುವಾರ ಉಸಿರಾಟದ ಸಮಸ್ಯೆಯಿಂದ 14 ಮಂದಿಯ ಪ್ರಕರಣ ದಾಖಲಾಗಿದ್ದು ಇವುಗಳಲ್ಲಿ 8 ಪ್ರಕರಣಗಳನ್ನು ವೆನ್ಲಾಕ್ ಆಸ್ಪತ್ರೆಗೆ ಶಿಫಾರಸು ಮಾಡಲಾಗಿದೆ. ಒಟ್ಟು 39 ಮಂದಿಯನ್ನು ನಿಗಾದಲ್ಲಿ ಇರಿಸಲಾಗಿದೆ. 376 ಮಂದಿಯ ರಕ್ತ ಪರೀಕ್ಷೆಯ ವರದಿ ಬರಲು ಬಾಕಿ ಇದೆ. 214 ಮಂದಿಯ ತಪಾಸಣಾ ವರದಿ ಬಂದಿತ್ತು, ಅದರಲ್ಲಿ 1 ಪಾಸಿಟಿವ್ ಕಂಡುಬಂದಿತ್ತು. ಉಳಿದ 213 ಮಂದಿಯದ್ದು ನೆಗೆಟಿವ್ ವರದಿ ಕಂಡುಬಂದಿತ್ತು. ಇಂದು ಕೂಡಾ 95 ಮಂದಿ ಗಂಟಲ ದ್ರವ ತಪಾಸಣೆಗೆ ಕಳುಹಿಸಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.
ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 6 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಹೊಂದಿದ್ದು ಯಾವುದೇ ಹೊಸ ಪ್ರಕರಣ ಕಂಡುಬಂದಿಲ್ಲ. ಇನ್ನು 20 ಮಂದಿ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.