ಸುಳ್ಯ: ನಗರ ಪಂಚಾಯತ್ ಚುನಾವಣೆಗೆ ಸಂಬಂಧಿಸಿ ಚುನಾವಣಾ ನೀತಿ ಸಂಹಿತೆ ಮೆ.31 ರವರೆಗೆ ಜಾರಿಯಲ್ಲಿದ್ದು ನೀತಿ ಸಂಹಿತೆ ಉಲ್ಲಂಘನೆಯಾದಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಸುಳ್ಯ ನಗರ ಪಂಚಾಯತ್ ಚುನಾವಣಾಧಿಕಾರಿಗಳಾದ ದೇವರಾಜ್ ಮುತ್ಲಾಜೆ ಮತ್ತು ಎನ್.ಮಂಜುನಾಥ್ ತಿಳಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೇ.29ರಂದು ಚುನಾವಣೆ ಮತ್ತು 31ರಂದು ಮತ ಎಣಿಕೆ ನಡೆಯಲಿದೆ. ಪ್ರತಿ ಅಭ್ಯರ್ಥಿಗೆ ಖರ್ಚಿನ ಮಿತಿ ಒಂದು ಲಕ್ಷ ರೂ ಮಿತಿಗೊಳಿಸಲಾಗಿದೆ. ಪ್ರತಿ ದಿನ ಖರ್ಚಿನ ವಿವರಗಳನ್ನು ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕು. ಸಾರ್ವಜನಿಕ ಕಾರ್ಯಕ್ರಮಗಳಿಗೆ, ಅಭ್ಯರ್ಥಿಯ ಭಾವಚಿತ್ತ, ಬ್ಯಾನರ್ ಅಳವಡಿಕೆಗೆ ಖಡ್ಡಾಯವಾಗಿ ಅನುಮತಿ ಪಡೆದುಕೊಳ್ಳಬೇಕು ಎಂದು ವಿವರಿಸಿದರು. ಇತರ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ರಾಜಕೀಯ ಚಟುವಟಿಕೆಗೆ, ಚುನಾವಣಾ ಪ್ರಚಾರಕ್ಕೆ ಅವಕಾಶ ಇಲ್ಲ ಎಂದರು.
ಮತದಾನ ಬೆಳಗ್ಗೆ 7 ರಿಂದ ಸಂಜೆ 5 :
ನಗರ ಪಂಚಾಯತ್ ಚುನಾವಣೆಗೆ ಇವಿಎಂ ಬಳಕೆ ಮಾಡಲಾಗುವುದು. ಆದರೆ ವಿವಿ ಪ್ಯಾಟ್ ಬಳಕೆ ಮಾಡುವುದಿಲ್ಲ. ಬೆಳಿಗ್ಗೆ ಏಳರಿಂದ ಸಂಜೆ ಐದರ ವರೆಗೆ ಚುನಾವಣೆ ನಡೆಯಲಿದೆ. 20 ವಾರ್ಡ್ ಗಳಲ್ಲಿ 20 ಮತಗಟ್ಟೆ ಗಳನ್ನು ಸಿದ್ಧಪಡಿಸಲಾಗಿದೆ. 27 ಇವಿಎಂಗಳನ್ನು ಸಿದ್ಧಪಡಿಸಲಾಗಿದೆ. ಮತಯಂತ್ರದಲ್ಲಿ ಅಭ್ಯರ್ಥಿಯ ಹೆಸರು, ಭಾವಚಿತ್ರ ಮತ್ತು ಚಿಹ್ನೆ ಇರಲಿದೆ. ನೋಟಾ ಕೂಡ ಇರಲಿದೆ ಎಂದರು.
ನಾಮಪತ್ರ-16 ಕೊನೆ ದಿನ :
ಚುನಾವಣೆಗೆ ನಾಮಪತ್ರ ಸಲ್ಲಿಸಲು ಮೆ.16 ಕೊನೆಯ ದಿನವಾಗಿದೆ. ಮೊದಲ ಎರಡು ದಿನ ಯಾವುದೇ ನಾಮಪತ್ತ ಸಲ್ಲಿಕೆಯಾಗಿಲ್ಲ. 87 ಮಂದಿ ಅರ್ಜಿಗಳನ್ನು ಪಡೆದಿದ್ದಾರೆ. ಮೆ.17ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಮೆ.20 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಎಂದು ಅವರು ವಿವರಿಸಿದರು. ನೀತಿ ಸಂಹಿತೆ ಸಂಬಂಧಿಸಿ ಯಾವುದೇ ದೂರು ಬಂದಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಸಹಾಯಕ ಚುನಾವಣಾಧಿಕಾರಿ ರವಿಚಂದ್ರ, ಸೆಕ್ಟರ್ ಅಧಿಕಾರಿ ಸತೀಶ್ ಕೊಯಿಂಗಾಜೆ ಉಪಸ್ಥಿತರಿದ್ದರು