ರಬ್ಬರ್ ಕೃಷಿಗೆ ಮನಸೋತು ಗೇರುಬೀಜದ ಕಾಡನ್ನೆಲ್ಲ ಕಡಿದವರು ಮತ್ತೆ ಗೇರುಬೀಜ ಸೂಕ್ತ ಅಂತ ತಿಳಿದುಕೊಂಡು ಅದರತ್ತ ಮನಸ್ಸು ಮಾಡುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಗೇರು ಕೃಷಿಗೆ ಹೊಸತನ, ಹೊಸ ಉತ್ಸಾಹ ಮತ್ತು ಹೊಸತಳಿಗಳು ಮುಪ್ಪುರಿಗೊಂಡು ಅದೊಂದು ಭವಿಷ್ಯದ ಬೆಳೆ ಎಂಬುದು ಸಾಬೀತಾಗಿದೆ. ಅಲ್ಲಿ ಇಲ್ಲಿ ಜಾಗ ಇದ್ದ ಕೃಷಿಕರು ಈಗ ಅದನ್ನು ಅಡಿಕೆ ಅಥವ ರಬ್ಬರಿಗೆ ಮೀಸಲಿಡುವ ಬದಲು ಗೇರುಬೀಜದ ತೋಟಕ್ಕೆ ಮೀಸಲಿಡುತ್ತಿದ್ದಾರೆ. ಇನ್ನೂ ನಾವು ಬಹುತೇಕ ಕೃಷಿ ಭೂಮಿ ಯಾವುದೇ ಕೃಷಿ ಮಾಡದೆ ಸುಮ್ಮನೆ ಬಿಟ್ಟಿದ್ದೇವೆ ಎಂದಾದರೆ ಅಲ್ಲಿ ಗೇರುಬೀಜದ ಕೃಷಿ ಅತ್ಯಂತ ಸೂಕ್ತ. ಆಧುನಿಕ ಕೃಷಿ ವಿಧಾನಗಳನ್ನು ಗೇರುಕೃಷಿಯಲ್ಲಿ ಅಳವಡಿಸಿಕೊಂಡರೆ ಇಳುವರಿಯೂ ದುಪ್ಪಟ್ಟು ಸಿಗುತ್ತದೆ. ಕಾಲಕಾಲಕ್ಕೆ ಗಿಡ ಮರಗಳಿಗೆ ಬೇಕಾದ ಆರೈಕೆ, ಗೊಬ್ಬರ ಪೂರೈಕೆ ಮಾಡಿದರೆ, ಗೆಲ್ಲು ಸವರುವಿಕೆ ಕಡೆಗೆ ಗಮನ ಕೊಟ್ಟರೆ ಉದ್ದೇಶಿಸಿದ ಫಸಲು ಕೊಡುವ ಅನೇಕ ತಳಿಗಳು ಈಗ ಇವೆ.
ಮೊದಲೆಲ್ಲ ಗೇರುಬೀಜದ ಮರಗಳೆಂದರೆ ಅದು ಬೇಕಾಬಿಟ್ಟಿ ಬೆಳೆಯುತ್ತಿತ್ತು. ಅನೇಕ ವರ್ಷಗಳಿಂದ ಬೆಳೆದುನಿಂತ ಮರಗಳು ಕೂಡ ಅಲ್ಲಿದ್ದವು. ಗೇರುಬೀಜದ ಒಟ್ಟು ಕೃಷಿಯ ಬಗ್ಗೆ ಆ ಕಾಲದಲ್ಲಿ ಹೇಳಿಕೊಳ್ಳುವ ಉತ್ಸಾಹ ಮತ್ತು ಹುರುಪುಗಳಿರಲಿಲ್ಲ. ಬಿಡುವಿನ ಸಮಯದಲ್ಲಿ ಗೇರುಬೀಜ ಸಂಗ್ರಹಕ್ಕೆ ಹೋಗುತ್ತಿದ್ದರು ಇಲ್ಲವೆ ಕೂಡು ಕುಟುಂಬಗಳಿದ್ದ ಕಾಲವಾದ್ದರಿಂದ ನಾಲ್ಕು ಜನ ಅಣ್ಣ ತಮ್ಮಂದಿರಿದ್ದರೆ ಅವರಲ್ಲಿ ಒಬ್ಬ ಗೇರುಬೀಜ ಕೊಯ್ಲಿಗೆ ಮೀಸಲಿರುತ್ತಿದ್ದ. ಗುಡ್ಡದಲ್ಲಿನ ಗೇರುಮರಗಳಿಂದ ಬಿದ್ದ ಗೇರುಬೀಜಗಳನ್ನು ಮಾತ್ರ ಹೆಕ್ಕಿ ತರುವ ಕ್ರಮ ಅಂದಿರಲಿಲ್ಲ. ಅವರು ಮರದಿಂದ ಕೊಯ್ದು ಸಂಗ್ರಹಿಸುತ್ತಿದ್ದರು. ಅದರಲ್ಲಿ ಎಲ್ಲ ಬಗೆಯ ಗೇರುಬೀಜಗಳೂ ಇರುತ್ತಿದ್ದವು. ಹಸಿ ಇದ್ದರೆ ಅದರ ಮೇಲೆ ಒಲೆಯಿಂದ ತೆಗೆದ ಬೂದಿ ಹಾಕಿ ಬಿಸಿಲಿಗೆ ಒಣಗಲು ಬಿಡುತ್ತಿದ್ದರು. ಒಟ್ಟು ಗೇರುಬೀಜಕ್ಕೆ ದೊಡ್ಡ ಗುಣಮಟ್ತ ಅಂತ ಇರಲಿಲ್ಲ. ಎಲ್ಲವೂ ಮಿಶ್ರವಾಗಿರುತ್ತಿತ್ತು.
ಅಂದಿನ ಗೇರುಕೃಷಿಯಲ್ಲಿ ವೈಜ್ಞಾನಿಕ ಕೃಷಿಯ ಹೊಳಹುಗಳಿರಲಿಲ್ಲ. ಅವು ಅವರಷ್ಟಕ್ಕೆ ಬಳ್ಳಿ ಬಲ್ಲೆಗಳನ್ನು ತುಂಬಿಕೊಂಡು ಬೆಳೆದುನಿಂತವುಗಳು. ಯಾವಾಗಲೋ ಹೂವು ಬಿಟ್ಟು ಮಳೆಗಾಲದ ನಡುವಿನವರೆಗೂ ಗೇರುಬೀಜ ಸಿಗುತ್ತಿತ್ತು. ಮಳೆಗಾಲದ ಮೊಳಕೆಯೊಡೆದ ಗೇರುಬೀಜಗಳನ್ನು ಕೂಡ ಅಂದಿನ ಕೃಷಿಕರು ಪ್ರೀತಿಸುತ್ತಿದ್ದರು. ಗುಡ್ಡಗಳಿಗೆ ಅಲೆದು ಅವನ್ನೆಲ್ಲ ಹೆಕ್ಕಿ ಪದಾರ್ಥ ಮಾಡಿ ಉಂಡು ತೇಗುತ್ತಿದ್ದರು. ಆ ಕಾಲದಲ್ಲಿ ಗೇರುತೋಟದಿಂದ ಕಳವು ಕೂಡ ಜೋರಿತ್ತು. ಕೇವಲ ಗೇರುಬೀಜಕ್ಕಾಗಿ ಅನೇಕ ಮನೆ ಮನಸ್ಸುಗಳು ಮನಸ್ತಾಪಗೊಂಡು ನೆರೆ ಹೊರೆ ಹೊಡೆದಾಟಗಳೂ ಆಗುತ್ತಿದ್ದವು. ಅದಕ್ಕೆ ಬಡತನ ಕಾರಣ. ಇಂದು ಹಾಗಿಲ್ಲ. ಇದ್ದರೂ ಅಷ್ಟಿಲ್ಲ. ಎಲ್ಲರಿಗೂ ಮರ್ಯಾದೆಯ ಬದುಕು ಬೇಕಾದ ಕಾರಣ ಕಳ್ಳತನಗಳು ಕಡಿ ಮೆಯಾಗಹತ್ತಿವೆ.
ಈಗ ಹಾಗಲ್ಲ. ಗೇರು ಕೃಷಿಕರಿಗೆ ಬೇಕು ಬೇಕಾದ ರೀತಿಯ ಹೊಸ ಹೊಸ ತಳಿವೈವಿಧ್ಯಗಳನ್ನು ವಿಜ್ಞಾನಿಗಳು ಸಂಶೋಧನೆ ಮಾಡಿ ಒದಗಿಸುತ್ತಿದ್ದಾರೆ. ಕೃಷಿ ಕ್ಷೇತ್ರದ ಮಣ್ಣಿಗೆ ಸರಿಹೊಂದುವ ತಳಿಗಳನ್ನು ಆಯ್ಕೆ ಮಾಡಿ ವೈಜ್ಞಾನಿಕ ರೀತಿಯಲ್ಲಿ ಕೃಷಿ ಮಾಡುವ ವಿಧಾನಗಳು ಕೂಡ ಗೇರು ಸಂಶೋಧನಾ ಕೇಂದ್ರಗಳಿಂದ ಸಿಗುತ್ತಿದೆ. ಪುತ್ತೂರಿನಲ್ಲಿರುವ ಗೇರು ಸಂಶೋಧನಾ ನಿರ್ದೇಶನಾಲಯವಂತು ಹೊಸ ಗೇರು ತಳಿಗಳನ್ನು ಸಂಶೋಧನೆ ಮಾಡುವುದು, ಕೃಷಿಯಲ್ಲಿನ ಸಮಸ್ಯೆಗಳಿಗೆ ಸ್ಪಂದಿಸುವುದು, ಕೃಷಿಕರೊಂದಿಗೆ ಸಂವಾದ, ಕೃಷಿ ಕ್ಷೇತ್ರಗಳಿಗೆ ಭೇಟಿ, ಮಾಹಿತಿ ವಿನಿಮಯ, ಕೃಷಿ ತಾಂತ್ರಿಕತೆಯ ವಿನಿಮಯ ಹೀಗೆ ಹತ್ತು ಹಲವು ರೀತಿಯಲ್ಲಿ ಅದು ಗೇರು ಕೃಷಿಯ ವಿಸ್ತರಣೆಗೆ ಹೆಚ್ಚಿನ ಗಮನ ಕೊಡುತ್ತಿದೆ. ಕೃಷಿ ಇಲಾಖೆಗಳು ಕೂಡ ಗೇರು ಕೃಷಿಯತ್ತ ಜನರನ್ನು ಸೆಳೆಯಲು ಹೆಚ್ಚಿನ ಗಮನ ಕೊಡುತ್ತಿವೆ.
ಅಡಿಕೆ ಕೃಷಿಕರು ಒಂದಷ್ಟು ಜಾಗವಿದ್ದಲ್ಲಿ ಗೇರುಕೃಷಿಗೆ ತೊಡಗುವುದು ಒಳ್ಳೆಯದು. ಯಾವತ್ತು ಸಮಗ್ರ ಕೃಷಿಯನ್ನು ಕೃಷಿಕ ತನ್ನ ಜಾಗದಲ್ಲಿ ಅಳವಡಿಸಿಕೊಳ್ಳುತ್ತಾನೋ ಆತ ಒಂದು ಬೆಳೆ ಕೈಕೊಟ್ಟರೆ ಮತ್ತೊಂದರಲ್ಲಿ ಆದಾಯ ಗಳಿಸಿ ಪೂರ್ತಿ ಸೋಲದೆ ಇರುತ್ತಾನೆ. ಹತ್ತು ಇಪ್ಪತ್ತು ಗಿಡ ನಡುವಷ್ಟು ಜಾಗವಾದರೂ ಸರಿ ಕೃಷಿಗೆ ಈಗಲೇ ಮನ ಮಾಡುವುದು ಸೂಕ್ತ. ಅಡಿಕೆ ತೋಟದ ಬದಿಗಳಲ್ಲಿ ಬಿಸಿಲು ಬೀಳುವ ಜಾಗವಿದ್ದರೆ ಅಲ್ಲೂ ಗಿಡ ನಡಬಹುದು. ಈಗ ಗೆಲ್ಲು ಸವರುವ ಕ್ರಮ ಬಂದಿರುವುದರಿಂದ ಗೇರು ಮರಗಳು ದೊಡ್ಡದಾಗಿ ಬೆಳೆಯಲು ಅನುಕೂಲವಿಲ್ಲ. ಇನ್ನೊಂದು ಬೆಳೆಗೆ ತೊಡಕಾಗುವ ಪ್ರಮೇಯವೂ ಇಲ್ಲ.
ಗೇರು ಕೃಷಿಯನ್ನು ತಾತ್ಸಾರ ಮಾಡುವ ಮನೋಭಾವವನ್ನು ಇನ್ನೂ ಯಾರಾದರೂ ಉಳಿಸಿಕೊಂಡಿದ್ದರೆ ಅದನ್ನು ಬಿಟ್ಟುಬಿಡಬಹುದು. ಈಗಂತು ಗೇರು ಬೆಳೆಗಾರರ ಅಖಿಲ ಭಾರತ ಮಟ್ಟದ ಸಂಘಟನೆ ಅಸ್ತಿತ್ವಕ್ಕೆ ಬಂದಾಗಿದೆ. ಮುಂದೆ ಉತ್ತಮ ಧಾರಣೆ ಬಂದು ತೋಟ ವಿಸ್ತರಣೆಗೆ ಇದು ಪ್ರೇರಣೆಯಾಗಬಹುದು. ಇನ್ನಷ್ಟು ಹೊಸ ರೋಗನಿರೋಧಕ ತಳಿಗಳು ಬರಬಹುದು. ಧಾರಣೆಯ ಬಗೆಗೆ ನಿಗಾ ವಹಿಸಲು ಬೆಳೆಗಾರರ ಸಂಘಟನೆ ಅನುಕೂಲ. ಈಗ ವಿದೇಶದಿಂದ ಆಮದಾಗುವ ಪ್ರಮಾಣದ ಗೋಡಂಬಿಯನ್ನು ವಿದೇಶಗಳಿಗೆ ರಫ್ತು ಮಾಡುವ ದಿನಗಳು ದೂರವಿಲ್ಲ. ಆದ ಕಾರಣ ಗೇರು ಕೃಷಿ ಎಂಬುದು ಭವಿಷ್ಯದ ಬೆಳೆ.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
View Comments
Very good article on cashew.