ಪುತ್ತೂರು: ಡಾ| ನರೇಂದ್ರ ರೈ ದೇರ್ಲ ಅವರು ತುಳುವಿಗೆ ಅನುವಾದಿಸಿದ ಪೂರ್ಣಚಂದ್ರ ತೇಜಸ್ವಿಯವರ ಜನಪ್ರಿಯ ಕಾದಂಬರಿ ‘ಕರ್ವಾಲೋ’ ಅನುವಾದಕ್ಕೆ 2018ರ ಅತ್ಯುತ್ತಮ ಅನುವಾದ ಪ್ರಶಸ್ತಿ ಲಭಿಸಿದೆ.
ಕನ್ನಡದಿಂದ ಭಾರತೀಯ ಭಾಷೆಗಳಿಗೆ ಅನುವಾದಗೊಳ್ಳುವ ಕೃತಿಗಳಿಗೆ ‘ಕುವೆಂಪು ಭಾಷಾ ಭಾರತಿ’ ಸಂಸ್ಥೆ ಈ ಪ್ರಶಸ್ತಿಯನ್ನು ನೀಡುತ್ತದೆ. ಪ್ರಶಸ್ತಿಯು ರೂ. 25,000-00 ನಗದು ಮತ್ತು ಪ್ರಶಸ್ತಿ ಫಲಕವನ್ನು ಹೊಂದಿರುತ್ತದೆ. ಮುಂದಿನ ಡಿಸೆಂಬರ್ ತಿಂಗಳಲ್ಲಿ ಬೆಂಗಳೂರಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಈಗಾಗಲೇ ಸುಮಾರು ಹತ್ತು ಭಾಷೆಗಳಿಗೆ ಅನುವಾದಗೊಂಡ ತೇಜಸ್ವಿಯವರ ‘ಕರ್ವಾಲೋ’ ಕಾದಂಬರಿಯನ್ನು ದೇರ್ಲ ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಗಾಗಿ ಅನುವಾದಿಸಿದ್ದರು. ಶ್ರೀ ಎ. ಸಿ. ಭಂಡಾರಿಯವರ ಅಧ್ಯಕ್ಷಾವಧಿಯಲ್ಲಿ ಈ ಕೃತಿ ತುಳುವಿಗೆ ಅನುವಾದಗೊಂಡಿತ್ತು.
ಪುತ್ತೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿರುವ ಡಾ| ನರೇಂದ್ರ ರೈ ದೇರ್ಲ ಅವರು ‘ತರಂಗ’ ಸಾಪ್ತಾಹಿಕದಲ್ಲಿ ಏಳು ವರ್ಷಗಳ ಕಾಲ ಸಹ ಸಂಪಾದಕರಾಗಿ ಅನಂತರ ನಾಡಿನ ಅನೇಕ ಪತ್ರಿಕೆಗಳಲ್ಲಿ ಅಂಕಣಗಾರರಾಗಿ, ಲೇಖಕರಾಗಿ ಪರಿಸರ, ಸಾಹಿತ್ಯ, ಕೃಷಿಯ ಬಗ್ಗೆ ಲೇಖನಗಳನ್ನು ಬರೆದವರು. ಸುಮಾರು ಮೂವತ್ತಕ್ಕಿಂತಲೂ ಹೆಚ್ಚು ಕೃತಿಗಳನ್ನು ಈಗಾಗಲೇ ಬರೆದ, ಸಂಪಾದಿಸಿದ ದೇರ್ಲ ಅವರಿಗೆ ಈಗಾಗಲೇ ಕರ್ನಾಟಕ ರಾಜ್ಯ ಪರಿಸರ ಪತ್ರಿಕೋದ್ಯಮ ಪ್ರಶಸ್ತಿ, ಡಾ| ಹಾ. ಮಾ. ನಾಯಕ ಅಂಕಣ ಪ್ರಶಸ್ತಿ, ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಅತ್ಯುತ್ತಮ ಕೃಷಿ ಪುಸ್ತಕ ಪ್ರಶಸ್ತಿ, ಅಕ್ಷರ ಪ್ರತಿಷ್ಠಾನ ಪ್ರಶಸ್ತಿ, ಫ. ಗೋ. ಪ್ರಶಸ್ತಿಗಳು ಲಭಿಸಿವೆ. ದೇರ್ಲ ಬರೆದ ಅನೇಕ ಲೇಖನಗಳು, ಪರಿಸರ ಸಂಬಂಧೀ ಬರಹಗಳು ಈಗಾಗಲೇ ಕೇರಳ-ಕರ್ನಾಟಕದ ಅನೇಕ ಪಠ್ಯಗಳಿಗೆ ಪಾಠಗಳಾಗಿ ಸೇರಿವೆ. ‘ಕರಾವಳಿಯ ಕೃಷಿ ಪಲ್ಲಟ ಮತ್ತು ಪರಿಣಾಮ’ ಎಂಬ ಅಧ್ಯಯನಕ್ಕೆ ರೈಯವರು ಅಕಾಡೆಮಿ ಫೆಲೋಶಿಪ್ ಪಡೆದಿದ್ದರು. ನಾಡಿನ ಬಹುತೇಕ ಪತ್ರಿಕೆಗಳಲ್ಲಿ ದೇರ್ಲ ಅವರ ಸಾವಿರಕ್ಕಿಂತಲೂ ಹೆಚ್ಚು ನುಡಿಚಿತ್ರಗಳು ಪ್ರಕಟಗೊಂಡಿವೆ. ಸಂಪನ್ಮೂಲ ವ್ಯಕ್ತಿಗಳಾಗಿ ದೇಶ-ವಿದೇಶಗಳಲ್ಲಿ ಉಪನ್ಯಾಸ ನೀಡಿರುವ ದೇರ್ಲ ಅವರು ಡಿಸೆಂಬರ್ 7ಕ್ಕೆ ನಡೆಯಲಿರುವ ಪುತ್ತೂರು ತಾಲೂಕು ಹತ್ತೊಂಬತ್ತನೆಯ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಸರ್ವಾಧ್ಯಕ್ಷರಾಗಿದ್ದಾರೆ.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…