ನಿನ್ನೆ, ಇಂದು, ನಾಳೆಗಳ ನಡುವೆ ಮನಸಿನ ತಾಕಲಾಟ….!!!

January 21, 2020
8:17 PM

ಇತಿಹಾಸವನ್ನು ಬಿಟ್ಟು, ಭವಿಷ್ಯ ವನ್ನು ಮರೆತು ವಾಸ್ತವದಲ್ಲಿ ಖುಷಿ ಕಾಣೋಣ.  ಛೇ ಇದೇನು  ಹೀಗೆ ಹೇಳುತ್ತಿದ್ದಾಳಲ್ಲಾ ಅಂದುಕೊಂಡಿರಾ.?!!!!!.  ವಿಷಯ ಇರುವುದೇ ಅಲ್ಲಿ !. ಈಗ ಸಾಮಾನ್ಯವಾಗಿ  ನಾಲ್ಕು ಜನರು ಮಾತನಾಡುತ್ತಾ ಕುಳಿತರೆ ಹಳೆಯ ವಿಷಯಗಳನ್ನು  ಮಾತನಾಡುತ್ತೇವೆ  ಹೊರತು ಇಂದಿನವುಗಳನ್ನಲ್ಲ.  ಅಲ್ಲಿ ಬಾಲ್ಯದ ವಿಷಯಗಳು ಒಂದೊಂದಾಗಿ ಅನಾವರಣ ಗೊಳ್ಳುತ್ತವೆ. ಅಂದಿನ ಊಟ, ತಿಂಡಿಗಳ ವೈಶಿಷ್ಟ್ಯ ಗಳು ಬಂದು ಹೋಗುತ್ತವೆ.   ಕಾಡಿನಲ್ಲಿ ಅಲೆದಾಡಿದ್ದು, ಹಣ್ಣುಗಳನ್ನು ಮರ ಹತ್ತಿ ಕೊಯ್ದು ತಿಂದದ್ದು, ಹೊತ್ತು‌ ಮುಳುಗಿದರೂ ಆಟದ ಬಯಲಿನಿಂದ ಮನೆಗೆ ಬಾರದೆ ಅಜ್ಜಿ ಅಮ್ಮನನ್ನು ಸತಾಯಿಸಿದ್ದು ಹೀಗೆ ಒಂದೇ ಎರಡೇ ಹಲವು ವಿಷಯಗಳು ಮಾತಿನಲ್ಲಿ ಬಂದು ಹೋಗುತ್ತವೆ.

Advertisement
Advertisement
 ಇನ್ನೂ ಒಂದು ನೆನಪಾಗುವ ವಿಷಯವೆಂದರೆ ಊರ ಜಾತ್ರೆ. ಅಲ್ಲಿನ ರಾಟೆ ತೊಟ್ಟಿಲು, ಕಡ್ಲೆ ಮಿಠಾಯಿ, ಖರ್ಜೂರ, ಐಸ್ಕ್ಯಾಂಡಿ, ಬಳೆ, ಸರಮಾಲೆ,   ಸಂತೆಯಲ್ಲಿ ಎರಡು ಮೂರು ದಿನ ತಿರುಗಿದ್ದು, ಬೇಡವೆಂದರೂ ಐಸ್ ಕ್ರೀಂ ತಿಂದು ಮನೆಯಲ್ಲಿ ಬೈಸಿ ಕೊಂಡದ್ದು.  ಓಹ್  ಮತ್ತೆ ಮತ್ತೆ ನೆನಪಾಗುತ್ತಿವೆ.
ಎಷ್ಟೋ ವರುಷಗಳ ನಂತರ  ಗೆಳೆಯರು  ಭೇಟಿಯಾದಾಗ ಮಾತನಾಡುವ ವಿಷಯಗಳು ಇವೇ ತಾನೆ? ಇನ್ನೂ ಅಂದಿನ  ಗುಟ್ಟಿನ ವಿಷಯಗಳು ಇಂದಿನ ತೆರೆದ ಸತ್ಯ ಗಳು ಒಂದೊಂದಾಗಿ ಅನಾವರಣ ಗೊಳ್ಳುತ್ತವೆ. ಟೀಚರ ಕಣ್ಣು ತಪ್ಪಿಸಿ  ಅಂದು  ತಿಂದ ಅಕ್ರೂಟ್, ಹುಣಸೆ ಬೀಜ, ಸಾಂತಾಣಿಯ ವಿಷಯಗಳನ್ನು ಹಂಚಿಕೊಳ್ಳಲು ಇಂದು ಸಂಕೋಚವೆನಿಸುವುದಿಲ್ಲ. ಬೋರ್ಡ್ ನಲ್ಲಿ ಮಾಸ್ಟರ್ ಬರಿಯುತ್ತಿರ ಬೇಕಾದರೆ  ಮೊದಲ ಬೆಂಚಿನಿಂದ ಹಿಂದಿನ ಬೆಂಚಿಗೆ ರವಾನಿಸ್ಪಡುತ್ತಿದ್ದ ಕಾಗದದಲ್ಲಿ ಏನು ಬರೆದಿರುತ್ತಿತ್ತು ಎಂಬುದು ಬರೆದವನಿಗೂ ಓದಿದವನಿಗೂ ಮಾತ್ರ ಗೊತ್ತಿರುವ ಸತ್ಯವೆಂದರೆ ತಪ್ಪೇನಿಲ್ಲ. ಅಷ್ಟು ಗೌಪ್ಯತೆ ಕಾಪಾಡಲಾಗುತ್ತಿತ್ತು. ಇನ್ನೂ ಲೈಬ್ರೆರಿಯಲ್ಲಿ ಕಾದಂಬರಿ ಓದೋ ಗುಂಪೇ ದೊಡ್ಡದಿತ್ತು. ವಾರಕ್ಕೆ ಒಮ್ಮೆ ಮಾತ್ರ ಸಿಗುತ್ತಿದ್ದ ಪುಸ್ತಕ ಗಳನ್ನು ಕಾದು ಕುಳಿತು ಓದಿ ಪಕ್ಕದವಳಿಂದ  ಆಕೆಯ ಪುಸ್ತಕವನ್ನೂ ಎರವಲು ಪಡೆದೂ ಓದಿಯಾಗುತ್ತಿತ್ತು.   ವಾರದಲ್ಲಿ ಒಂದೇ‌ ಪುಸ್ತಕ ಸಿಕ್ಕುವುದಾದರೂ  ಏಳು ಪುಸ್ತಕಗಳನ್ನು ಓದಿದ ದಿನಗಳೂ ಕಮ್ಮಿಯಿಲ್ಲ.  ಈಗದಂತೆ ಬಿಸಿಯೂಟದ ಸೌಲಭ್ಯ ವಿಲ್ಲದಿದ್ದುದರಿಂದ ಬುತ್ತಿ ಕಟ್ಟಿಕೊಂಡೇ ಶಾಲೆಗೆ ಹೋಗುವ ಅನಿವಾರ್ಯತೆ. ಯಾರಿಗೂ ಕಷ್ಟವೆನಿಸುತ್ತಿರಲಿಲ್ಲ. ಹಂಚಿ ತಿನ್ನುತ್ತ ಖುಷಿ ದುಪ್ಪಟ್ಟಾಗುತ್ತಿತ್ತು.  ಎಷ್ಟೋ ವರುಷದ ನಂತರ ಸಿಕ್ಕ ಗೆಳತಿ‌ಯೊಂದಿಗೆ ಮಾತನಾಡುತ್ತಾ ಈ ವಿಷಯಗಳು ಒಂದೊಂದಾಗಿ ಬಂದು ಹೋದವು.  ಆಕೆ ಮಾತು ಮುಗಿಸಿ ಹೋದ ಮೇಲೂ ಅದೇ ಗುಂಗು ಕಾಡುತ್ತಿತ್ತು. ನನಗೆ ತುಂಬಾ ಆಶ್ಚರ್ಯ ವಾದ ವಿಷಯ‌ ಮತ್ತು ಕಾಡಿದ ವಿಷಯವೆಂದರೆ ಪ್ರಚಲಿತ ವಿಷಯಗಳ  ಬಗ್ಗೆ ಮಾತೇ ಆಗಿರಲಿಲ್ಲ. ನಮ್ಮ ಉದ್ಯೋಗಗಳ ಬಗ್ಗೆ , ಮಕ್ಕಳ ವಿಧ್ಯಾಭ್ಯಾಸ,     ಮನೆ ಮಂದಿ, ‌  ಸದ್ಯದ ಸ್ಥಿತಿ ಗತಿ, ರಾಜಕೀಯ ಯಾವುದೂ ಚರ್ಚೆಗೆ ಬರಲೇ ಇಲ್ಲವಲ್ಲ  , !!!!!ಈ ವಿಷಯ ಹುಳದಂತೆ ತಲೆ ಕೊರೆಯಲಾರಂಭಿಸಿತು.  ಕೂಡಲೆ ಗೆಳತಿಯ ವ್ಯಾಟ್ಸ ಆಪ್ ಗೆ ಸುದ್ದಿ ರವಾನಿಸಿದೆ. ತಕ್ಷಣ ಆಕೆಯ ಉತ್ತರ ಬರಬೇಕೆ! ಹೆಯ್  ಅಂತ ಯೋಚನೆಗಳೆಲ್ಲಾ ನಿನ್ನ ತಲೆಗೇ ಬರಲಿಕ್ಕೆ ಸಾಧ್ಯ. ನೀನು ಹೇಳಿದ ಎಲ್ಲಾ ವಿಷಯಗಳನ್ನು Facebook ಮತ್ತು what’s up ನಲ್ಲಿ ಮಾತಾಡಿಯಾಗಿದೆಯಲ್ಲಾ . ಬಾಕಿ ಯಾವುದೂ ಇರಲಿಲ್ಲ. ಅದರಲ್ಲಿ ಬಾಲ್ಯದ ವಿಷಯಗಳನ್ನು ಚರ್ಚಿಸಿದರೆ ಗಮ್ಮತ್ತಿಲ್ಲ. ಆ ಗುಟ್ಟಿನ ವಿಷಯಗಳನ್ನು ಮಾತನಾಡಲಿಕ್ಕೆ ಎದುರು ಸಿಕ್ಕಿದಾಗಲೇ ಆಗ ಬೇಕಷ್ಟೇ!!! ಅದೆಲ್ಲಾ ಸರಿ‌ ಮತ್ತೆ  ಯಾವಾಗ ಸಿಗೋಣ ಎಂದು ದುಬೈ ತಲುಪಿದ ಗೆಳತಿ ಮೆಸೇಜು ಹಾಕುವುದೇ.!?
ಆಕೆ ಹೇಳಿದ್ದೂ ತಪ್ಪಲ್ಲ.  ಸದ್ಯದ ಆಗು ಹೋಗುಗಳು ಆಯಾ ದಿನವೇ ಚರ್ಚೆ ಗೆ ಬಂದಿರುತ್ತವೆ. ಬೆಳಗಿನ ನಮಸ್ಕಾರದಿಂದ ರಾತ್ರಿಯ ಶುಭರಾತ್ರಿ ಯವರೆಗೂ  ವಿಷಯಗಳು  ವಿನಿಮಯವಾಗುತ್ತಲೇ ಇರುತ್ತವೆ. ತಿಂಡಿ, ಊಟಗಳ ವಿವರಣೆ ಛಾಯಾಚಿತ್ರ ಸಹಿತ ಅನಾವರಣ ಗೊಂಡಿರುತ್ತವೆ. ಎಲ್ಲವೂ ‘ಓಪನ್  ಸೀಕ್ರೆಟ್’ ಸುದ್ದಿಗಳು. ಎಲ್ಲಿಂದ ಎಲ್ಲಿಗೋ ಲಿಂಕ್ ಗಳು.  ಬೇಕೋ ಬೇಡವೋ ಎಲ್ಲರೂ  ಎಲ್ಲವನ್ನೂ ರವಾನಿಸುವ ಹುಮ್ಮಸ್ಸು.
ಅದೇ ಸಮಯದಲ್ಲಿ ಆಕಾಶದಲ್ಲಿ ‌ಮೂಡಿದ ಕಾಮನಬಿಲ್ಲಿನ ಸೌಂದರ್ಯ ನಮಗೆ ಗೋಚರಿಸದು. ನಮ್ಮ ಪರಿಸರಕ್ಕೆ ಅದಾಗ ತಾನೇ  ಎಲ್ಲಿಂದಲೋ  ಬಂದ ಹೊಸಹಕ್ಕಿಯನ್ನು ಗುರುತಿಸಲಾರೆವು. ಆಕಾಶದಲ್ಲಿನ ಮಿಂಚಿನಾಟಗಳು ನಮ್ಮ ಕಣ್ಣಿಗೆ ಸುಂದರವೆರನಿಸದು. ನಮ್ಮ ಹೂತೋಟದಲ್ಲೇ ಬೆಳೆದ ಹೂಗಳು  ಚೆನ್ನವೆನಿಸದೆ  ಕ್ಯಾಮರಾ ದಲ್ಲಿ ಸೆರೆ ಹಿಡಿದಾಗ ವಾವ್ ಎನಿಸುವುದು. ಮನೆಯಲ್ಲೇ ಮಾಡಿದ ಅದೇ ತಿಂಡಿಗಳ  ಫೋಟೋ ಜಾಹೀರಾತುಗಳಲ್ಲಿ  ಸುಂದರವಾಗಿ ಕಾಣುತ್ತವೆ, ( ಯಾರ ಬಾಯಲ್ಲೂ ನೀರೂರುವಂತೆ ಸಿಂಗರಿಸಿರುತ್ತಾರೆ).
ಹೀಗೆ ವಾಸ್ತವವನ್ನೂ ಜೀರ್ಣಿಸಲಾಗದೆ ಕಲ್ಪನೆಯನ್ನೂ ಅನುಭವಿಸದೆ ನಿನ್ನೆಯ ದಿನಗಳೇ ಉ‌ತ್ತಮವೆಂದು  ಪೂರ್ವ ನಿರ್ಧರಿತ ಸೂತ್ರಕ್ಕೆ ಬದ್ಧರಾಗಿರುವ ಸ್ಥಿತಿಗೆ ಏನೆನ್ನೋಣ???
* ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಭಾರತದಲ್ಲಿ ಅಡಿಕೆಯ ಬಳಕೆ ಹೇಗೆ..? ಯಾವುದೆಲ್ಲಾ ವಿಭಾಗಗಳು ಇವೆ..? ಮಾರುಕಟ್ಟೆ ಹೇಗೆ..?
May 27, 2025
12:28 PM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ
ಬದುಕು ಪುರಾಣ | ಎಲ್ಲರೊಳಗೂ ಏಕಲವ್ಯನಿದ್ದಾನೆ!
May 25, 2025
6:00 AM
by: ನಾ.ಕಾರಂತ ಪೆರಾಜೆ
ಅಡಿಕೆ ಎನ್ನುವ ಚಿನ್ನದ ಮೊಟ್ಟೆ ಇಡುವ ಕೋಳಿ | ವರವೋ ಶಾಪವೋ?
May 24, 2025
9:13 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ
ಹೊಸರುಚಿ | ಉಪ್ಪಿನಲ್ಲಿ ಹಾಕಿದ ಹಲಸಿನ ಕಾಯಿ ರೊಟ್ಟಿ
May 24, 2025
8:00 AM
by: ದಿವ್ಯ ಮಹೇಶ್

You cannot copy content of this page - Copyright -The Rural Mirror

Join Our Group