ಪೊಲಿಟಿಕಲ್ ರೌಂಡ್ ಅಪ್
* ಸ್ಪೆಷಲ್ ಕರೆಸ್ಪಂಡೆಂಟ್ , ಸುಳ್ಯನ್ಯೂಸ್.ಕಾಂ
ಸುಳ್ಯ: ಕಳೆದ ಕೆಲವು ವಾರಗಳಿಂದ ಪ್ರತ್ಯಕ್ಷವಾಗಿ ರಾಜಕೀಯ ಚಟುವಟಿಕೆಗಳಿಗೆ ಬ್ರೇಕ್ ಬಿದ್ದಿದ್ದರೂ ಸದ್ದಿಲ್ಲದೆ ಕೆಲವೊಂದು ರಾಜಕೀಯ ಚಟುವಟಿಕೆಗಳು, ವಿದ್ಯಮಾನಗಳು, ಯೋಜನೆಗಳು ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಮುಖ್ಯವಾಗಿ ನಗರ ಕೇಂದ್ರೀತವಾಗಿ ನಡೆಯುವ ರಾಜಕೀಯ ಚಟುವಟಿಕೆಗಳು ಇನ್ನು ಕೆಲವೇ ತಿಂಗಳಲ್ಲಿ ಗ್ರಾಮಗಳತ್ತ ಹೊರಳಲಿದೆ. ಮುಂದಿನ ವರ್ಷ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆಗಳು ನಡೆಯಲಿದೆ. ಈ ಹಿನ್ನಲೆಯಲ್ಲಿ ಪಕ್ಷಗಳು ಈಗಿನಿಂದಲೇ ಕೆಲವೊಂದು ತಂತ್ರಗಾರಿಕೆ, ಯೋಜನೆಗಳನ್ನು ರೂಪಿಸಿದೆ. ಸಂಸದರು, ಶಾಸಕರು ಸೇರಿದಂತೆ ಜನಪ್ರತಿನಿಧಿಗಳು ಗ್ರಾಮ ಭೇಟಿ ಮಾಡುವ ಯೋಜನೆಯನ್ನು ಬಿಜೆಪಿ ರೂಪಿಸಿದೆ. ಗ್ರಾಮಗಳ ಪ್ರಮುಖ ಸಮಸ್ಯೆಗಳನ್ನು ಅರಿತು ಅದರ ಪರಿಹಾರ ಮಾಡುವುದಕ್ಕೆ ಒತ್ತು ನೀಡುವುದು ಉದ್ದೇಶ ಎಂದು ಹೇಳಲಾಗುತಿದೆ.
ಬಿಜೆಪಿಯದ್ದು ಗ್ರಾಮಗಳತ್ತ ಹೀಗೊಂದು ಯೋಜನೆಯಾದರೆ, ಅಧಿಕಾರಿಗಳು ಗ್ರಾಮ ವಾಸ್ತವ್ಯ ಮಾಡಿ ಗ್ರಾಮೀಣ ಜನರ ಸಮಸ್ಯೆ ಪರಿಹರಿಸಬೇಕೆಂಬುದು ಕಾಂಗ್ರೆಸ್ ಆಶಯ. ಅಧಿಕಾರಿಗಳು ಗ್ರಾಮ ವಾಸ್ತವ್ಯ ನಡೆಸಬೇಕೆಂದು ಕಾಂಗ್ರೆಸ್ ತಹಶೀಲ್ದಾರ್ ರಿಗೆ ಮನವಿಯನ್ನೂ ಸಲ್ಲಿಸಿದ್ದಾರೆ.
ಸಿಎಂ ಗ್ರಾಮವಾಸ್ತವ್ಯಕ್ಕೆ ಬರುತ್ತಾರಾ..?
ಈ ಮಧ್ಯೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡುವ ಗ್ರಾಮಗಳ ಪಟ್ಟಿಯಲ್ಲಿ ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮವೂ ಸೇರಿದೆ ಎಂಬುದು ಹೋದ ವಾರ ಹರಿದಾಡಿದ ಪ್ರಮುಖ ಇನ್ನೊಂದು ಸುದ್ದಿ. ಸಿಎಂ ಗ್ರಾಮ ವಾಸ್ತವ್ಯಕ್ಕೆ ಗ್ರಾಮಗಳ ಆಯ್ಕೆಗೆ ಸರಕಾರ ಕೆಲವೊಂದು ಮಾನದಂಡವನ್ನು ರೂಪಿಸಿದೆ. ಈ ಮಾನದಂಡ ಪ್ರಕಾರ ಸುಳ್ಯ ತಾಲೂಕಿನ ಮಡಪ್ಪಾಡಿ ಸೇರಿ ದ.ಕ.ಜಿಲ್ಲೆಯ ಎರಡು ಗ್ರಾಮಗಳು ಸೇರ್ಪಡೆಯಾಗಲಿದೆ ಎಂದು ಹೇಳಲಾಗುತ್ತಿದ್ದು ಮಡಪ್ಪಾಡಿ ಮತ್ತು ಸುಳ್ಯದ ಜನತೆಯಲ್ಲಿ ನಿರೀಕ್ಷೆ ಗರಿಗೆದರಿದೆ.
ಅಡ್ಡಮತದಾನಕ್ಕೆ ಕ್ರಮ..
ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಚುನಾವಣೆ ಕಳೆದು ಬರೋಬರಿ ಮೂರೂವರೆ ತಿಂಗಳ ಬಳಿಕ ಅಡ್ಡಮತದಾನ ಪ್ರಕರಣಕ್ಕೆ ಕ್ರಮ ಕೈಗೊಳ್ಳಲು ಬಿಜೆಪಿ ಮುಂದಾಗಿರುವುದು ಈ ವಾರದ ಪ್ರಮುಖ ರಾಜಕೀಯ ಬೆಳವಣಿಗೆ. ಒಟ್ಟು 17 ಮಂದಿ ಮತದಾರರಲ್ಲಿ 7 ಮಂದಿ ಅಡ್ಡಮತದಾನ ಮಾಡಿದ ಕಾರಣ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಅಭ್ಯರ್ಥಿಯ ಸೋಲಿಗೆ ಕಾರಣವಾಗಿತ್ತು. ಶಿಸ್ತಿನ ಪಕ್ಷದಲ್ಲಿ ಉಂಟಾದ ಈ ಬೆಳವಣಿಗೆ ತೀವ್ರ ಕೋಲಾಹಲ ಸೃಷ್ಠಿಸಿತ್ತು. ಕಾರ್ಯಕರ್ತರ ನಿರಂತರ ಒತ್ತಡದ ಮೇರೆಗೆ ಇದೀಗ ಇಬ್ಬರ ಮೇಲೆ ಕ್ರಮ ಕೈಗೊಂಡಿದೆ. ‘ಕಾರಣ ನಿಮಿತ್ತ ಪಕ್ಷದ ಎಲ್ಲಾ ಜವಾಬ್ದಾರಿಯಿಂದ ಮುಕ್ತಗೊಳಿಸಲಾಗಿದೆ’ ಎಂದು ಒಂದು ವಾಕ್ಯದಲ್ಲಿ ಇದನ್ನು ಪಕ್ಷವು ಪ್ರಕಟಿಸಿದೆ. ಅಡ್ಡ ಮತದಾನ ವಿಷಯವಾಗಲೀ ಬೇರೆ ಕಾರಣವನ್ನೂ ಸ್ಪಷ್ಟವಾಗಿ ನಮೂದಿಸಿಲ್ಲ. ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಕೇಳಲಾಗಿದ್ದರೂ ರಾಜಿನಾಮೆ ನೀಡದ ಉಳಿದವರ ಬಗ್ಗೆ ಏನು ಕ್ರಮ ಎಂಬುದನ್ನು ಕೂಡ ಪಕ್ಷದ ಪ್ರಮುಖರು ಸ್ಪಷ್ಟಪಡಿಸಿಲ್ಲ.
ಕೆಪಿಸಿಸಿಯಲ್ಲಿ ಸಿಗುವುದೇ ಸುಳ್ಯಕ್ಕೆ ಸ್ಥಾನ…?
ಕೆಪಿಸಿಸಿ ಹೊಸ ತಂಡ ರಚಿಸುವ ಪ್ರಕ್ರಿಯೆ ಆರಂಭವಾಗಿದ್ದು ಸುಳ್ಯಕ್ಕೆ ಸ್ಥಾನ ಸಿಗಬಹುದೇ ಎಂಬ ಕುತೂಹಲ ಮೂಡಿದೆ. ಕಳೆದ ಕೆಪಿಸಿಸಿಯಲ್ಲಿ ಸುಳ್ಯದ ಮೂರು ಮಂದಿಗೆ ಕೆಪಿಸಿಸಿ ಕಾರ್ಯದರ್ಶಿ ಹುದ್ದೆ ದೊರೆತಿತ್ತು. ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿನ ಹಿನ್ನಡೆಯ ಕಾರಣ ಕೆಪಿಸಿಸಿಯನ್ನು ಕಳೆದ ವಾರ ವಿಸರ್ಜಿಸಲಾಗಿತ್ತು. ಮುಂದೆಯೂ ಕೆಪಿಸಿಸಿಯಲ್ಲಿ ಸ್ಥಾನ ಪಡೆಯಲು ಸುಳ್ಯದಿಂದಲೂ ಆಕಾಂಕ್ಷಿಗಳು ಇದ್ದಾರೆ. ಹೊಸ ಕೆಪಿಸಿಸಿಯ ರಚನೆಗೆ ಮಾನದಂಡ ರಚಿಸಿದ್ದು ಸಮಿತಿಯನ್ನು 70ಕ್ಕೆ ಮಿತಿಗೊಳಿಸಬೇಕೆಂಬುದು ಪಕ್ಷದ ಪ್ಲಾನ್. ಈಗಾಗಲೇ ರಾಜ್ಯದ ಸಾಕಷ್ಟು ಮಂದಿ ಪದಾಧಿಕಾರಿಯಾಗಲು ಆಕಾಂಕ್ಷಿಗಳಾಗಿದ್ದು ಅರ್ಜಿ ಸಲ್ಲಿಸಿದ್ದಾರೆ. ಈ ಪೈಪೋಟಿಯ ಮಧ್ಯೆ ಸುಳ್ಯದ ಎಷ್ಟು ಮಂದಿಗೆ ಸ್ಥಾನ ಒಲಿದು ಬರಲಿದೆ ಎಂಬುದು ಸದ್ಯದ ಕುತೂಹಲ.
ಸುಳ್ಯಕ್ಕೊಂದು ಎಂಎಲ್ಸಿ ಕೊಡಿ..
ರಾಜ್ಯದಲ್ಲಿ ಅಧಿಕಾರದಲ್ಲಿ ಇರುವ ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಸ್ಥಳೀಯ ನಾಯಕರಿಗೆ ಅಕ್ರಮ ಸಕ್ರಮ ಸಮಿತಿ ಸದಸ್ಯತ್ವ, ಕೆಡಿಪಿ ಸದಸ್ಯತ್ವ ಸೇರಿದಂತೆ ಒಂದೊಂದೇ ಸ್ಥಾನಗಳು ಒಲಿದು ಬರುತಿದೆ. ಈ ಮಧ್ಯೆ ಸುಳ್ಯಕ್ಕೊಂದು ಎಂಎಲ್ಸಿ ಸ್ಥಾನ ಕೊಡಿ ಎಂಬ ಬೇಡಿಕೆಯೂ ಕೇಳಿ ಬಂದಿದೆ. ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಬಿ.ಸದಾಶಿವ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಬೇಕು ಎಂದು ಸುಳ್ಯದ ಯುವಜನ ಸಂಯುಕ್ತ ಮಂಡಳಿ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ. ಈ ಕುರಿತು ಜೆಡಿಎಸ್ ವರಿಷ್ಠರನ್ನು ಮತ್ತು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಒತ್ತಾಯಿಸುವುದಾಗಿ ಅವರು ಹೇಳಿದ್ದಾರೆ. ಸುಳ್ಯಕ್ಕೆ ಒಂದು ಎಂಎಲ್ಸಿ ಸ್ಥಾನ ನೀಡಬೇಕು ಎಂಬುದು ಬೇರೆ ಬೇರೆ ಪಕ್ಷಗಳಿಂದ ಹಲವು ಸಮಯದಿಂದ ಕೇಳಿ ಬರುವ ಬೇಡಿಕೆ. ಆದರೆ ದೊರೆಯುವುದು ಮಾತ್ರ ತೀರಾ ಅಪರೂಪ. ಅದಕ್ಕಾಗಿ ಪ್ರಯತ್ನ ಒತ್ತಡಗಳು ಸಾಕಾಗದ ಕಾರಣ ಸುಳ್ಯಕ್ಕೊಂದು ಎಂಎಲ್ಸಿ ಸ್ಥಾನ ಪದೇ ಪದೇ ತಪ್ಪಿ ಹೋಗುತಿದೆ. ರಾಜಕೀಯ ಒತ್ತಡ, ನಿರಂತರ ಬೇಡಿಕೆ ಉಂಟಾದಲ್ಲಿ ಸುಳ್ಯಕ್ಕೊಂದು ಎಂಎಲ್ಸಿ ಸ್ಥಾನ ಪಡೆಯುವುದು ಅಸಾಧ್ಯವೇನೂ ಅಲ್ಲ ಎಂದು ವಿಶ್ಲೇಷಿಸಲಾಗುತ್ತದೆ. ಅದಕ್ಕಾಗಿನ ಪ್ರಯತ್ನ ಮಾತ್ರ ನಿರಂತರ ಮುಂದುವರಿಯಬೇಕಾಗಿದೆ.
ಕೃಷಿಗಾಗಿ, ಕೃಷಿ ಉಳಿಸುವುದಕ್ಕಾಗಿ ಸುರಂಗ ಕೊರೆದು ನೀರು ಹರಿಸಿದ ವಿಶೇಷ ಸಾಧನೆಯನ್ನು ಮಾಡಿದ್ದಾರೆ…
ದೇಶಾದ್ಯಂತ ಅಳಿವಿನಂಚಿಗೆ ತಲುಪಿರುವ ಗುಬ್ಬಚ್ಚಿ ಸಂಕುಲದ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು…
ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳುತ್ತಿರುವ ಅನೇಕ ಮಹಿಳಾ ಉದ್ಯಮಿದಾರರಿಗೆ ಎನ್ಆರ್ ಎಲ್ಎಮ್ ಯೋಜನೆಯು ಸ್ಪೂರ್ತಿಯ…
ಕೊಡಗು ಜಿಲ್ಲೆಯಲ್ಲಿ ಅಕ್ರಮ ಲಾಟರಿ, ಇತರೆ ರಾಜ್ಯದ ಲಾಟರಿಗಳು, ಮಟ್ಕಾಗೆ ಪೂರ್ಣ ಪ್ರಮಾಣದಲ್ಲಿ…
ಹಾನಿಯಾದ ಮನೆ ಮತ್ತು ಬೆಳೆಗಳಿಗೆ ತ್ವರಿತವಾಗಿ ಪರಿಹಾರ ನೀಡಿ, ಯಾವುದೇ ಪ್ರಕರಣಗಳು ಬಾಕಿ…
ಭಾರತದ ಸ್ವಚ್ಛತಾ ಅಭಿಯಾನಕ್ಕೆ ವೇಗ ದೊರೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.…