ಸುಳ್ಯ: ನೆಹರು ಯುವ ಕೇಂದ್ರ ಮಡಿಕೇರಿ ಮತ್ತು ಚಿಗುರು ಕ್ರೀಡಾ ಮತ್ತು ಕಲಾಯುವಕ ಮಂಡಲ ಪೆರಾಜೆ ಮಡಿಕೇರಿ ಇದರ ಆಶ್ರಯದಲ್ಲಿ ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ಪೆರಾಜೆ ಸ.ಹಿ.ಪ್ರಾ.ಶಾಲೆ (ಕುಂಬಳಚೇರಿ)ಯ ಮೈದಾನದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿದ್ದ ಮಡಿಕೇರಿ ತಾಲೂಕು ಪಂಚಾಯತ್ ಸದಸ್ಯ ನಾಗೇಶ್ ಕುಂದಲ್ಪಾಡಿ ಮಾತನಾಡಿ, ಸ್ವಚ್ಛ ಭಾರತದೊಳಗೆ ನಮ್ಮ ಮನಸ್ಸು ಸ್ವಚ್ಛತೆಯಿಂದ ಕೂಡಿದ್ದರೆ ಪರಿಸರ ಸ್ಚಚ್ಚವಾಗುತ್ತದೆ, ಈ ನಿಟ್ಟಿನಲ್ಲಿ ಯುವಕಮಂಡಲದ ಸಾಮಾಜಿಕ ಕಾರ್ಯಕ್ರಮ ಸ್ವಾಗತಾರ್ಹ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮವನ್ನು ಪದ್ಮಶ್ರೀ ಪ್ರಶಸ್ತಿ ವಿಜೇತ ಗಿರೀಶ್ ಭಾರದ್ವಾಜ್ ಉದ್ಘಾಟಿಸಿದರು. ಯುವಕ ಮಂಡಲದ ಅಧ್ಯಕ್ಷ ಶೀತಲ್ ಕುಂಬಳಚೇರಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಸ.ಹಿ.ಪ್ರಾ.ಶಾಲೆ ಪೆರಾಜೆಯಲ್ಲಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿ ಕೊಡಗು ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಸೋಮವಾರಪೇಟೆ ತಾಲೂಕು ಯಡೂರು ಎ. ಎಂ.ಆನಂದ ಮಾಸ್ತರ್ ಮತ್ತು ಚೆಸ್ಕಾ ಪೆರಾಜೆ ಇದರ ಲೈನ್ ಮೇನ್ ವಿಜಯ ಕುಮಾರ್ ಅರುಣಗುಂಜ ಇವರನ್ನು ಸನ್ಮಾನಿಸಲಾಯಿತು.
ಪೆರಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಲಕ್ಷ್ಮಿ ಧರಣೀಧರ, ನೆಹರು ಯುವಕೇಂದ್ರ ಕೊಡಗು ಜಿಲ್ಲಾ ಯುವ ಸಂಯೋಜನಾಧಿಕಾರಿ ಅಲಿ ಸಬ್ರಿನ್, ಶ್ರೀ ಶಾಸ್ತಾವು ದೇವಸ್ಥಾನ ಪೆರಾಜೆ ಇದರ ಆಡಳಿತ ಮೊಕ್ತೇಸರ ವಿಶ್ವನಾಥ್ ಕುಂಬಳಚೇರಿ, ಗ್ರಾಮ ಪಂಚಾಯತ್ ಸದಸ್ಯರಾದ ಉದಯಚಂದ್ರ ಕುಂಬಳಚೇರಿ, ಶೀಲಾ ಚಿದಾನಂದ ನಿಡ್ಯಮಲೆ, ಶಾಲಾ ಮುಖ್ಯೋಪಾಧ್ಯಾಯ ಚಂದ್ರಶೇಖರ ಗುಡ್ಡೆಮನೆ, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಧರ್ಮಪಾಲ ಪೀಚೆಮನೆ ಉಪಸ್ಥಿತರಿದ್ದರು.
ದೀಪಕ್ ಮಜಿಕೋಡಿ ಮತ್ತು ಭವಿತ್ ಕುಂಬಳಚೇರಿ ಪ್ರಾರ್ಥಿಸಿದರು. ಯುವಕಮಂಡಲದ ಕಾರ್ಯದರ್ಶಿ ನಿಶಾಂತ್ ಮಜಿಕೋಡಿ ಸ್ವಾಗತಿಸಿ, ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ದಿವಾಕರ ಮಜಿಕೋಡಿ ನಿರೂಪಿಸಿ ಯುವಕ ಮಂಡಲದ ಉಪಾಧ್ಯಕ್ಷ ಭುವನ್ ಕುಂಬಳಚೇರಿ ವಂದಿಸಿದರು. ಬಳಿಕ ಸಾರ್ವಜನಿಕರಿಗೆ ಮತ್ತು ಗ್ರಾಮಸ್ಥರಿಗೆ ವಿವಿಧ ಕ್ರೀಡಾಕೂಟಗಳು ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಿತು.