ಮಳೆಗಾಲದಲ್ಲಿ ಮಳೆ ಬಾರದಿದ್ದರೆ ಆಗುತ್ತದೆಯೇ?ಮನಸಿನಲ್ಲಿ ಮಳೆ ಪ್ರತಿ ಬಾರಿಯೂ ಆತಂಕವನ್ನೇ ಮೂಡಿಸುತ್ತಿದೆಯಲ್ಲಾ? ಎರಡು ಮೂರು ವರುಷಗಳಿಂದಲಂತೂ ಒಂದಿಲ್ಲೊಂದು ಪ್ರಕೃತಿ ವಿಕೋಪಗಳಿಗೆ ತುತ್ತಾಗುತ್ತಿದ್ದೇವೆ. ಇನ್ನೇನು ಮಳೆ ಸುರುವಾಗುತ್ತದೆನ್ನುವಾಗಲೇ ಮನದಲ್ಲಿ ಆತಂಕ ಶುರು.
ಪ್ರತಿ ಬಾರಿ ಮಳೆಗಾಲಕ್ಕೆಂದೇ ನಾವು ಮಾನಸಿಕವಾಗಿ ತಯಾರಾಗುವುದು ಇದ್ದದ್ದೇ. ಬಿಸಿಲಿನ ಝಳ ಜೋರಾದಾಗ ಮಳೆಗಾಲಕ್ಕೆ ಅದು ಬೇಕು, ಇದು ಬೇಕು ಎಂದು ಎಲ್ಲವನ್ನೂ ಬಿಸಿಲಿಗೆ ಹಾಕಿ ತೆಗೆದಿಡಿವುದು ನಮ್ಮ ಹಿರಿಯರಿಂದ ಕಲಿತ ಅಭ್ಯಾಸ. ಒಮ್ಮೆ ಮರೆತಂತಾಗಿತ್ತು. ಬೇಕಾದ ಸಾಮಾನು ಬೇಕೆಂದಾಗ ಸಿಗುವ ವಾತಾವರಣ ಸೃಷ್ಟಿಯಾಗಿ ಕೂಡಿಡುವ ಅಭ್ಯಾಸ ಕಮ್ಮಿಯಾಗಿತ್ತು. ಊರು ಊರುಗಳಲ್ಲಿ ಏನೇ ಬೇಕಿದ್ದರು ಸಿಗುವ ಮಾಲ್ , ಮಾರ್ಕೇಟ್ ಗಳು ಕಾಣಸಿಗುತ್ತವೆ. ಪೇಟೆಗೆ ಹೋಗಲೊಂದು ಕಾರಣ ಬೇಕಲ್ಲವೇ? ಸಾಮಾನು , ತರಕಾರಿ , ಹಣ್ಣುಗಳು ಒಂದು ನೆಪ. ಆಗಾಗ ಪೇಟೆ ತಿರುಗುವುದಕ್ಕೊಂದು ಕಾರಣ. ನೆನಪಾದಾಗ, ಬೇಕಾದಾಗ ತರಬಹುದಲ್ಲಾ ಎಂಬ ಮಾನಸಿಕ ಸ್ಥಿತಿಗೆ ಒಂದು ಬ್ರೇಕ್ ಬಿದ್ದ ಹಾಗಾಯ್ತು. ಅನಾವಶ್ಯಕ ತಿರುಗಾಟಕ್ಕೆ ತಡೆಯೊಡ್ಡಲು ಕೊರೊನಾ ಕಾಲಿಟ್ಟಿದೆ. ಮಳೆಗಾಲಕ್ಕೆ ಮೊದಲೇ ಹರಡಲು ಶುರುವಾದ ಕೊರೊನಾ ಜನರನ್ನು ಮನೆಯಲ್ಲೇ ಬಂಧಿಸಿತು. ಮೊದಲೆರಡು ತಿಂಗಳು ಒತ್ತಾಯದಲ್ಲಿ ಮನೆಯೊಳಗೆ ಕುಳಿತ ಜನ ತಪ್ಪಿಸಿಕೊಂಡು ಓಡಾಡ ತೊಡಗಿದರು. ಸರ್ಕಾರದ ಆದೇಶವನ್ನು ಲಘುವಾಗಿ ತೆಗೆದುಕೊಂಡ ಪರಿಣಾಮ ಈಗ ಕಾಣುತ್ತಿದ್ದೇವೆ. ಎಲ್ಲೋ ದೂರದಲ್ಲಿದ್ದ ಮಾರಿ ಅಕ್ಕ ಪಕ್ಕದಲ್ಲೇ ಸುಳಿಯ ತೊಡಗಿದೆ. ಅಗತ್ಯದ ಕೆಲಸವಿದ್ದರೂ ಹೊರ ಹೋಗಲಾರದ ಪರಿಸ್ಥಿತಿ. ಈಗ ನಮಗಾದಷ್ಟು ಜಾಗರೂಕರಾಗಿರುವುದೇ ಉಳಿದಿರುವುದು. ಈ ಮಧ್ಯೆ ಮಾದ್ಯಮಗಳು ವೈಭವೀಕರಿಸಿ ಜನರಲ್ಲಿ ಭೀತಿಹುಟ್ಟಿಸುವುದಲ್ಲದೇ ಜಾಗೃತಿ ಮೂಡಿಸುತ್ತಿಲ್ಲವೆಂಬ ಭಾವನೆ ಮೂಡುತ್ತಿದೆ. ಮಾರ್ಚ್ ನಿಂದಲೂ ಮುಂದಿನ ತಿಂಗಳು ಕೊರೊನಾ ತೀವ್ರತೆ ಕಮ್ಮಿಯಾಗ ಬಹುದು ಎಂದು ಕಾದದ್ದೇ ಬಂತು. ದಿನದಿಂದ ದಿನಕ್ಕೆ ವೇಗವಾಗಿ ಹರಡುತ್ತಿವೆ. ಪರಿಹಾರವೇನು ? ಸ್ವಯಂ ಜಾಗೃತಿ ಇದ್ದರೂ, ಅನಿರೀಕ್ಷಿತವಾಗಿ ಸೋಂಕು ಹರಡುವದನ್ನು ತಪ್ಪಿಸುವುದು ಹೇಗೆ? ತಜ್ಞರು ಹೇಳುವ ಪ್ರಕಾರ ಜೀವ ನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳುವುದೇ ಉಪಾಯ. ನಮ್ಮ ಹಿರಿಯರು ಬಳಸುತ್ತಿದ್ದ ಆಹಾರ ಪದ್ಧತಿ ಮತ್ತೆ ರೂಡಿಸಿಕೊಳ್ಳ ಬೇಕಾಗಿದೆ.
ಸದ್ಯ ಹೋಟೆಲ್ ಆಹಾರಗಳು, ರೆಡಿಮೇಡ್ ಜಂಕ್ ಫುಡ್ ಗಳಿಂದ ದೂರವಿರುವುದೇ ಉತ್ತಮ. ಏನಿದ್ದರೂ ಮನೆಯಲ್ಲೇ ಮಾಡುವ ಆಹಾರ ತೆಗೆದು ಕೊಂಡರೆ ಹಿತಕರ. ಒಳ್ಳೆಯ ಬಿಸಿಲು ಇದ್ದಾಗಲೇ ಲಾಕ್ಡೌನ್ ಇದ್ದುದರಿಂದ ಹಪ್ಪಳ ,ಸಂಡಿಗೆ ಮಾಡಲು ಸಾಕಷ್ಟು ಸಮಯವೂ ಇತ್ತು. ಹಲಸಿನಕಾಯಿಯೂ ಬೆಳೆದಿತ್ತು. ಕೆಲವು ದಿನಗಳನ್ನಾದರೂ ಉಪಯುಕ್ತ ವಾಗಿ ಕಳೆದ ಬಗ್ಗೆ ಮನಸಿನಲ್ಲಿ ಸಂತೋಷವಿದೆ.
ನಮ್ಮ ಹಿರಿಯರು ಎಲ್ಲೇ ಹೋಗುತ್ತಿದ್ದರು ಬುತ್ತಿ ತೆಗೆದು ಕೊಂಡು ಹೋಗುವ ಪದ್ಧತಿ ಇತ್ತು. ಹಾಳು ಮೂಳು ತಿಂದು ಹೊಟ್ಟೆ ಹಾಳು ಮಾಡಿಕೊಳ್ಳ ಬಾರದೆಂಬ ಉದ್ದೇಶ. ಕಾಲ ಕಳೆಯುತ್ತಿದ್ದಂತೆ ಪೇಟೆಯಲ್ಲಿ ಅಲ್ಲಲ್ಲಿ ಹೋಟೆಲ್ ಗಳು ಬಂದವು. ಎಲ್ಲೂ ಹುಡುಕಿಕೊಂಡು ಹೋಗುವ ಅವಶ್ಯಕತೆಯೂ ಇಲ್ಲ. ಮಾರ್ಗದ ಬದಿಯಲ್ಲೇ ಕಾಣಸಿಗುವ ತರಹೇವಾರಿ ಹೋಟೆಲ್ಲುಗಳು , ಆಕರ್ಷಕ ಮೆನುಗಳು. ಕೆಲವೊಮ್ಮೆ ಪೇಟೆಗೆ ಹೋಗುವ ಉದ್ದೇಶವೇ ಹೋಟೆಲ್ ಗಳ ಭೇಟಿಯೇ ಆಗಿರುತ್ತದೆಂದರೆ ಉತ್ಪ್ರೇಕ್ಷೆಯಲ್ಲ. ಕೆಲವು ಹೋಟೆಲ್ ಗಳು ನಾರ್ತ್ ಇಂಡಿಯನ್ ಡಿಶ್ ಗಳಿಗೆ ಪ್ರಸಿದ್ಧಿ ಯಾಗಿದ್ದರೆ, ಇನ್ನೂ ಕೆಲವು ಸೌತ್ ಇಂಡಿಯನ್ ಗೆ. ಅದರಲ್ಲೂ ವಿಶೇಷ ತಿಂಡಿಗಳಿಗೆಂದೇ ಹೋಟೆಲ್ ಗಳು ಪ್ರಸಿದ್ಧಿ ಹೊಂದಿವೆ. ಪ್ರತಿ ಭೇಟಿಯಲ್ಲೂ ಒಂದೊಂದು ಹೋಟೆಲ್ ಗಳಿಗೆ ಹೋಗಿ ಒಟ್ಟಾರೆ ಕೊರೊನಾ ದಿಂದಾಗಿ ಮರಳಿ ಅಮ್ಮ, ಅಜ್ಜಿಯಂದಿರ ಕೈ ರುಚಿಗೆ ಮರಳುವಂತಾಗಿದೆ.
# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel