ಏನಾದರು ಸಿಹಿ ಮಾಡಬಹುದಿತ್ತು ಎಂಬುದು ಮನೆಯವರ ಬೇಡಿಕೆ. ಅದರಲ್ಲೂ ಅವರ ನೆಚ್ಚಿನ ಪ್ರಥಮಕ್ಕೆ ಮೊದಲ ಆದ್ಯತೆ. ಹಾ … ಅರ್ಥವಾಗಲಿಲ್ಲವೇ ? ಪಾಯಸಗಳಲ್ಲಿ ಪ್ರಥಮ ಎನ್ನುವುದು ಬಾಳೆಹಣ್ಣಿನ ಪಾಯಸಕ್ಕೆ. ಅಲ್ಲದೆ ಪಾಯಸಗಳ ರಾಜನೆಂಬ ಖ್ಯಾತಿ ಯಾವಾಗಲೂ ಈ ಬಾಳೇಹಣ್ಣಿನ ಪಾಯಸಕ್ಕೇ ಮೀಸಲು.
ಮೊದ ಮೊದಲು ಬಾಳೆಹಣ್ಣು ಪಾಯಸ ಅತ್ತೆಯವರು ಮಾಡುವುದು ನೋಡಿಯೇ ಕಬ್ಬಿಣದ ಕಡಲೆ ಎನಿಸುತ್ತಿತ್ತು. ಓಹ್…. ಎಷ್ಟು ಹೊತ್ತು ಬಾಳೆಹಣ್ಣು ಹುರಿಯುತ್ತಾರಪ್ಪಾ? ಪಾಯಸವೂ ಸಾಕು, ಅದರ ಕೆಲಸವೂ ಸಾಕು ಎನಿಸುತ್ತಿತ್ತು. ಮಾಡಿ ಅಲ್ಲ ಮಾಡುವುದು ನೋಡಿಯೇ ಸುಸ್ತಾಗುತ್ತಿತ್ತು. ಪಾತ್ರೆ ತುಂಬಾ ಸಿಪ್ಪೆ ತೆಗೆದ ಬಾಳೆಹಣ್ಣು, ಅದರನ್ನ ಮಿಕ್ಸಿಯಲ್ಲಿ ನುಣ್ಣಗೆ ಬೀಸಿ , ಬಾಣಲೆಯಲ್ಲಿ ಹಾಕಿ ಗಂಟೆಗಟ್ಟಲೆ ಹುರಿಯುವುದು. ಎಷ್ಟು ಹುರಿದರೂ ಕಮ್ಮಿಯೇ ಎಂಬ ಉವಾಚಗಳು. ಬಾಳೆಹಣ್ಣು ಚೆನ್ನಾಗಿ ಬೆಂದು ನೀರಾರುವಂತೆ ಬೇಯಿಸಬೇಕು. ಅದೂ ಬಾಣಲೆಯಲ್ಲಿ ಮಗುಚಿ ಮಗುಚಿ ಬೇಯಬೇಕು. ಕೆಳಗಡಯಿಂದ ಧಗಧಗ ಉರಿಯುವ ಬೆಂಕಿ, ಹೊರಗಡೆ ಸೆಕೆಯೂ ಸೇರಿ ಬಾಳೆಹಣ್ಣು ಪಾಯಸವೆಂದರೆ ದೂರ ಓಡುವಂತಾಗುತ್ತಿತ್ತು. ಬಾಣಲೆ ತುಂಬಾ ಕಾಸಿ ಮಾಡಿದ ಪಾಯಸ, ಗಳಿಗೆಯಲ್ಲಿ ಖಾಲಿಯಾಗುತ್ತಿದ್ದ ಪಾತ್ರೆಯೇ ಸಾರಿ ಹೇಳುತ್ತದಲ್ಲವೇ ಪಾಯಸದ ರುಚಿಯನ್ನು.
ಎಲ್ಲಾ ಜಾತಿಯ ಬಾಳೆಹಣ್ಣುಗಳು ಪಾಯಸಕ್ಕೆ ಸೂಕ್ತವಾಗಿರುವುದಿಲ್ಲ. ನೇಂದ್ರ, ಕದಳಿ , ಕೆಂಪು ಚಂದ್ರ ಹಣ್ಣುಗಳಿಗೆ ಆದ್ಯತೆ ಹೆಚ್ಚು. ಅದರಲ್ಲೂ ನೇಂದ್ರ ಹಣ್ಣುಗಳಿದ್ದರೆ ಅದಕ್ಕೇ ಓಟು ಜಾಸ್ತಿ. ಒಮ್ಮೆ ಗೆ ಕೆಲಸವಾದರೂ ಹಣ್ಣುಗಳಿದ್ದಾಗ ಚೆನ್ನಾಗಿ ಹುರಿದಿಟ್ಟರೆ ಹಾಳಾಗದಂತೆ ಬಹುಸಮಯ ಫ್ರೀಜರ್ ನಲ್ಲಿ ಇಡಬಹುದು. ದಿಢೀರ್ ಆಗಿ ಬಾಳೆಹಣ್ಣಿನ ಪಾಯಸ ಮಾಡಿ ಮನೆಯವರಿಗೆ ಅಚ್ಚರಿ ಮೂಡಿಸ ಬಹುದು. ಒಮ್ಮೆ ದೊಡ್ಡ ಕೆಲಸವಾದರೂ ಹಣ್ಣು ಹಾಳಾಗುವುದನ್ನು ತಪ್ಪಿಸ ಬಹುದು. ಸಣ್ಣ ಸಣ್ಣ ಗೊನೆಯಾದರೆ ತಿಂದು ಮುಗಿಸ ಬಹುದು ದೊಡ್ಡ ಗೊನೆಗಳು ಬಹಳ ಆದರೆ ಮಾರಾಟ ಮಾಡಬಹುದು, ಒಂದೋ, ಎರಡೋ ಗೊನೆ ಆದರೇನು ಮಾಡಬಹುದು ಎಂಬ ಪ್ರಶ್ನೆ ಕಾಡುವುದು ಸಹಜವಲ್ಲವೇ. ಸ್ವಲ್ಪ ಹಲ್ವಾ, ಮತ್ತೆ ಬೆರಟಿ ಅಂದರೆ ಪಾಯಸ ಮಾಡುವ ಮೊದಲ ಹಂತ ಹಣ್ಣನ್ನು ಹುರಿದು ಇಡುವುದು. ಹುರಿದ ಕೂಡಲೇ ಬೇಕಾದರೂ ಪಾಯಸ ಮಾಡಬಹುದು ಅಥವಾ ಸ್ವಲ್ಪ ದಿನ ಕಳೆದರೂ ಸರಿಯೇ.
ಬೆಲ್ಲ ಬಳಸಿ ಈ ಪಾಯಸ ಮಾಡುವುದರಿಂದ ಹಿರಿಯರಿಗೆ ಯಾವಾಗಲೂ ಮೆಚ್ಚುಗೆಯೇ. ಅದರಲ್ಲೂ ಈ ಪಾಯಸ ಮಾಡುವಾಗ ಅದಾಗ ತಾನೇ ತೆಗೆದ ಹಸಿ ತೆಂಗಿನಕಾಯಿ ಹಾಲು ಬಳಸಿ ಮಾಡಿದರೇ ರುಚಿ, ಪರಿಮಳ ಸ್ವಲ್ಪ ಜಾಸ್ತಿಯೇ. ಪಾಯಸಕ್ಕೆ ಒಗ್ಗರಣೆ ಹಾಕುವ ವಿಷಯ ಗೊತ್ತಾ ನಿಮಗೆ? ಅದೂ ಈ ಬಾಳೆಹಣ್ಣು ಪಾಯಸದ ವಿಶೇಷತೆ. ಒಗ್ಗರಣೆ ಯೆಂದರೆ ಇಲ್ಲಿ ಸಾಸಿವೆ, ಒಣಮೆಣಸೆಂದು ಅರ್ಥವಲ್ಲ. ಪಾಯಸ ದ ಒಗ್ಗರಣೆಯೆಂದರೆ ಚಮಚ ಎಳ್ಳು ತೆಗೆದುಕೊಂಡು ಒಗ್ಗರಣೆ ಸಟ್ಟುಗದಲ್ಲಿ ಸಿಡಿಸಿ ಪಾಯಸಕ್ಕೆ ಹಾಕಿದರಾಯಿತು. ಈ ಪರಿಮಳ ಮೀರಿದ ಪರಿಮಳ ನಾ ಕಾಣೆ. ಗೇರುಬೀಜವನ್ನು ಹಾಕಿದ ಪಾಯಸಕ್ಕೆ ಒಂದು ತೂಕ ಜಾಸ್ತಿಯೇ.
ಇನ್ನೊಂದು ವಿಷಯವೆಂದರೆ ಬಾಳೆಹಣ್ಣು ಪಾಯಸವೆಂದರೆ ತಾಳ್ಮೆಗೆ ಇನ್ನೊಂದು ಹೆಸರು. ಲಗುಬಗೆಯಿಂದ ಮಾಡ ಹೊರಟರೆ ರುಚಿಕೆಡುವ ಸಂದರ್ಭವೇ ಹೆಚ್ಚು.( ಮೊದಲೇ ಹುರಿದಿಟ್ಟರೆ ಬೇರೆ ವಿಷಯ) . ಚೆನ್ನಾಗಿ ಹಣ್ಣಾದ ಬಾಳೆಹಣ್ಣು ಗಳನ್ನು ಸಿಪ್ಪೆ ಸುಲಿದು ಸಣ್ಣಕೆ ಹೋಳು ಮಾಡಿ ಕೊಳ್ಳ ಬೇಕು. ( ಮಿಕ್ಸಿ ಯಲ್ಲಿ ಬೀಸಿದರೆ ಮಗುಚಲು ಕಷ್ಟ )ಒಲೆ ಸುತ್ತಮುತ್ತ ರಟ್ಟುವುದನ್ನು ತಡೆಯಲು ಸಾದ್ಯವೇ ಇಲ್ಲ. ಅದುದರಿಂದ ಹಣ್ಣುಗಳನ್ನು ಕೊಚ್ಚಿದರೆ ರಟ್ಟುವ ಪ್ರಮಾಣ ಕಮ್ಮಿಯಾಗು ತ್ತದೆ. ಹುರಿಯುವಾಗಲೂ ಅಷ್ಟೆ ಹದಾ ಬೆಂಕಿಯಲ್ಲಿ ದಪ್ಪ ತಳದ ಬಾಣಲೆಯಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಬೇಕು. ಬೆಂದ ಮೇಲೆ ಅದಕ್ಕೆ ಬೆಲ್ಲ ಹಾಕಿ ಮತ್ತೆ ಮಗುಚ ಬೇಕು. ಮಗುಚಿ ಮಗುಚಿ ಅದು ಒಂದೇ ಮುದ್ದೆಯಾಗುವಷ್ಟು ತಿರುವಬೇಕು. ಈಗ ಪಾಯಸ ಮಾಡಲು ಹುರಿದ ಬಾಳೆಹಣ್ಣು ತಯಾರು. ಹಸಿ ತೆಂಗಿನ ಕಾಯಿ ಹಾಲು ಹಾಕಿ ಕುದಿಸಿದರೆ ತಯಾರು.
ಈ ಬಾರಿ ನಮ್ಮಲ್ಲಿ ದೊಡ್ಡ ನೇಂದ್ರ ಗೊನೆ ಹಣ್ಣಾಯಿತು. ಆ ದಿನಕ್ಕೆ ಹಣ್ಣಿನ ವಿಲೇವಾರಿ ಅಸಾಧ್ಯ ವೆಂದು ಅನಿಸಿತು. ಅಷ್ಟರಲ್ಲಿ ನಮ್ಮ ಐಡಿಯಾಗಳ ಗಣಿ ಅತ್ತೆಯವರು ತಗೊಂಡು ಹೋಗಿ ಬಿಸಿಲಲ್ಲಿ ಇಡು ಹಾಳಾಗುವುದು ತಪ್ಪುತ್ತದೆ. ನಾಳೆ ಮಾಡಿದರಾಯಿತು ಅಂದರು. ಬಚಾವ್ ಅನ್ನಿಸಿ ಹಾಗೇ ಮಾಡಿದೆ. ಮರುದಿನ ಮತ್ತೆ ಏನೋ ಸಮಸ್ಯೆ ಎದುರಾಯಿತು. ಸಿಪ್ಪೆ ತೆಗೆಯಲೇ ಬೇಕಾದ ಅನಿವಾರ್ಯತೆ ಕಂಡಿತು. ಅಮೇಲೇನು ಮಾಡಲಿ ಎಂದು ಅತ್ತಿತ್ತ ನೋಡಿದಾಗ ಕುಕ್ಕರ್ ಕಣ್ಣಿಗೆ ಬಿತ್ತು. ಸರಿ ಇವತ್ತಿಗೆ ಪಾರಾಗೋಣವೆಂದು ಸಿಪ್ಪೆ ತೆದೆದ ಹಣ್ಣನ್ನು ಪಾತ್ರಕ್ಕೆ ಕೊಚ್ಚಿ ಹಾಕಿದೆ. ಪಾತ್ರೆಯನ್ನು ಕುಕ್ಕರಲ್ಲಿ ಇಟ್ಟು ನಾಲ್ಕು ವಿಷಲ್ ಹಾಕಿಸಿ ಆ ದಿನಕ್ಕೆ ಸುಮ್ಮನಾದೆ. ಮರು ದಿನವೂ ಇನೇನೋ ಅಡ್ಡಿ . ಹಾಗೇ ವಿಷಲ್ ಹಾಕಿಸಿ ನನ್ನ ಕೆಲಸ ಮುಂದುವರಿಸಿದೆ. ಹೀಗೆ ನಾಲ್ಕು ದಿನ ಮುಂದುವರಿದು ಐದನೇಯ ದಿನಕ್ಕೆ ಬಾಳೇಹಣ್ಣಿಗೆ ಒಂದು ಗತಿ ಮಾಡಬೇಕೆಂದು ಹೊರಟೆ.ಬೆಂದ ಬಾಳೆಹಣ್ಣುನ್ನು ಮಿಕ್ಸಿಯಲ್ಲಿ ಹಾಕಿ ಬೀಸಿ ಬಾಣಲೆಗೆ ಹಾಕಿ ಮಗುಚಿದೆ. ಚೆನ್ನಾಗಿ ಬಿಸಿಯಾದ ಕೂಡಲೆ ಬೆಲ್ಲ ಹಾಕಿ ಮಗುಚಿದೆ . ಸ್ವಲ್ಪ ಹೊತ್ತು ಮಗುಚುವಾಗಲೇ ಪಾಯಸಕ್ಕೆ ತಕ್ಕಂತೆ ತಯಾರಾಯಿತು. ಅರ್ಧ ಭಾಗವನ್ನು ತೆಗೆದು ಪಾಯಸಕ್ಕೆ ಸಿದ್ಧತೆ ಮಾಡಿದೆ. ಸ್ವಲ್ಪ ಹೆದರಿಕೆಯೂ. ಹೇಗಾಗುತ್ತದೋ ಎಂಬ ಅಂಜಿಕೆಯೂ. ದಪ್ಪನೆಯ ಕಾಯಿಹಾಲು, ಏಲಕ್ಕಿ ಹುಡಿ, ಗೇರುಬೀಜ ಹಾಕಿ ಮಾಡಿದ ಪಾಯಸ ಎಂದಿನಂತೆ ಇತ್ತು. ರುಚಿಗಾಗಲಿ, ಬಣ್ಣಕ್ಕಾಗಲಿ ಏನೂ ಸಮಸ್ಯೆ ಆಗಲಿಲ್ಲ. ಇನ್ನೂ ಉಳಿದ ಅರ್ಧ ಭಾಗವನ್ನು ಸ್ವಲ್ಪ ಸಕ್ಕರೆ, ತುಪ್ಪ ಹಾಕಿ ಮತ್ತೆ ಮಗುಚಿದೆ. ತಳ ಬಿಡುವವರೆಗೆ ಮಗುಚಿದೆ. ಆ ಮಿಶ್ರಣ ವನ್ನು ತುಪ್ಪ ಸವರಿದ ಬಟ್ಟಲಿಗೆ ಹಾಕಿ ತಣಿದ ಮೇಲೆ ಸಣ್ಣ ಸಣ್ಣ ತುಂಡುಗಳನ್ನು ಮಾಡಿದಾಗ ಬಾಳೆಹಣ್ಣು ಹಲ್ವಾವು ತಯಾರಾಯಿತು. ಒಂದೇ ಪ್ರಯತ್ನದಲ್ಲಿ ಪಾಯಸ , ಹಲ್ವಾ ಎರಡೂ ಮಾಡಿದ ಖುಷಿ ನನಗಾಯಿತು.
# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ