ಸುಳ್ಯ: ಶೈಕ್ಷಣಿಕ ಹಿನ್ನಲೆಯುಳ್ಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯುವಕ ಯುವತಿಯರಿಗೆ ಯುಪಿಎಸ್‍ಸಿ, ಕೆಎಎಸ್ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಲು ಸೂಕ್ತ ಮಾಹಿತಿ ಮತ್ತು ತರಬೇತಿಯನ್ನು ನೀಡಬೇಕು ಎಂದು ತಹಶೀಲ್ದಾರ್ ಎನ್.ಎ.ಕುಂಞ ಅಹಮ್ಮದ್ ಸಮಾಜ ಕಲ್ಯಾಣ ಮತ್ತು ಇತರ ಸಂಬಂಧಪಟ್ಟ ಇಲಾಖೆಗಳಿಗೆ ಆದೇಶ ನೀಡಿದ್ದಾರೆ.
ಸುಳ್ಯ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಪ.ಜಾತಿ ಪ.ಪಂಗಡದ ಕುಂದು ಕೊರತೆ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ಹುದ್ದೆಗಳಲ್ಲಿ ಪ.ಜಾತಿ, ಪ.ಪಂಗಡ ಯುವಕ, ಯುವತಿಯರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು ಎಂದು ಸಭೆಯಲ್ಲಿ ಆಗ್ರಹ ವ್ಯಕ್ತವಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ್ ಜಿಲ್ಲೆಯಲ್ಲಿ ಪ.ಜಾತಿ ಮತ್ತು ಪ.ಪಂಗಡದವರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವುದು ಮತ್ತು ಉದ್ಯೋಗ ಪಡೆದು ಕೊಳ್ಳುವುದು ತೀರಾ ಕಡಿಮೆ ಕಂಡು ಬರುತ್ತಿದೆ. ಅದು ಬದಲಾಗಬೇಕು, ಹೆಚ್ಚು ಹೆಚ್ಚು ಯುವಕರು ಉದ್ಯೋಗ ಪಡೆಯುವಂತಾಗಬೇಕು. ಅದಕ್ಕಾಗಿ ಸೂಕ್ತ ಮಾರ್ಗದರ್ಶನ ಮತ್ತು ತರಬೇತಿ ನೀಡಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಉನ್ನತ ಪರೀಕ್ಷೆಗಳಿಗೆ ಹಾಜರಾಗಲು, ಅದರ ಅಧ್ಯಯನಕ್ಕಾಗಿ ಸರ್ಕಾರ ಪ್ರೋತ್ಸಾಹ ಧನ ನೀಡುತಿದೆ. ಉದ್ಯೋಗದಲ್ಲಿ ಮೀಸಲಾತಿ ಇದೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು. ಅಲ್ಲದೆ ಮಕ್ಕಳು ಉತ್ತಮ ಶಿಕ್ಷಣ ಪಡೆಯುವಂತೆ ಪ್ರೋತ್ಸಾಹ ನೀಡಬೇಕು. ಅರ್ಧದಲ್ಲಿ ಶಿಕ್ಷಣ ಮೊಟಕುಗೊಳ್ಳದಂತೆ ಎಚ್ಚರವಹಿಸಬೇಕು ಎಂದು ಅವರು ಸೂಚಿಸಿದರು.
ಸುಳ್ಯ ತಾಲೂಕು ಕಚೇರಿ ಮುಂಭಾಗದಲ್ಲಿ ಅಂಬೇಡ್ಕರ್ ಪ್ರತಿಮೆಯನ್ನು ನಿರ್ಮಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ನಗರ ಪಂಚಾಯಿತಿಯ ಕ್ರಿಯಾಯೋಜನೆಯಲ್ಲಿ ಅನುದಾನ ಮೀಸಲಿಡಲಾಗುವುದು ಎಂದು ತಹಶೀಲ್ದಾರ್ ಹೇಳಿದರು. ತಾಲೂಕು ಕಚೇರಿ ಮುಂಭಾಗದಲ್ಲಿ ಅಥವಾ ಸಮಾಜ ಕಲ್ಯಾಣ ಇಲಾಖೆಯ ಮುಂಭಾಗದಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಮಾಡಬೇಕು ಎಂದು ಕಳೆದ ಸಭೆಯಲ್ಲಿ ಬೇಡಿಕೆ ಉಂಟಾಗಿತ್ತು.
ರಸ್ತೆ ಬದಿಯಲ್ಲಿ ಇರುವ ಎಲ್ಲಾ ಅನಧಿಕೃತ ಕಟ್ಟಡಗಳನ್ನೂ, ಒತ್ತುವರಿಗಳನ್ನೂ ಶೀಘ್ರ ತೆರವು ಮಾಡಬೇಕು ಎಂದು ತಹಶೀಲ್ದಾರ್ ಆದೇಶ ನೀಡಿದರು. ಈ ಕುರಿತು ಚರ್ಚೆ ನಡೆದಾಗ ರಸ್ತೆ ಬದಿಯಲ್ಲಿ ಅಲ್ಲಲ್ಲಿ ತಲೆ ಎತ್ತಿರುವ ಅನಧಿಕೃತ ಗೂಡಂಗಡಿ ಮತ್ತಿತರ ಒತ್ತುವರಿಗಳಿಂದ ಪ್ರಯಾಣಿಕರಿಗೆ, ವಾಹನ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಇರುವ ಅನಧಿಕೃತ ಒತ್ತುವರಿಗಳನ್ನು ತೆರವು ಮಾಡಬೇಕು ಇಲ್ಲದಿದ್ದರೆ ಗೂಡಂಗಡಿ ತೆರೆಯಲು ನಮಗೂ ಅನುಮತಿ ನೀಡಬೇಕು ಎಂದು ಆನಂದ ಬೆಳ್ಳಾರೆ, ಅಚ್ಚುತ ಮಲ್ಕಜೆ ಮತ್ತಿತರರು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ತಹಶೀಲ್ದಾರ್ ರಸ್ತೆ ಬದಿಯಲ್ಲಿ ಅನಧಿಕೃತವಾಗಿ ತಲೆ ಎತ್ತಿರುವ ಎಲ್ಲಾ ಕಟ್ಟಡಗಳನ್ನೂ, ಒತ್ತುವರಿಗಳನ್ನೂ ತೆರವು ಮಾಡಬೇಕು ಎಂದು ಆದೇಶ ನೀಡಿದರು. ಪ.ಜಾತಿ, ಪ.ಪಂಗಡಗಳಿಗೆ ಸರ್ಕಾರದಿಂದ ಬರುವ ನಿಧಿಗಳು ಬಳಕೆಯಾಗುತ್ತಿಲ್ಲ, ಶೇ.25 ರಷ್ಟು ಎಸ್‍ಸಿ ಎಸ್‍ಟಿ ವಿಭಾಗದ ಅಭಿವೃದ್ಧಿಗೆ ಮೀಸಲಿಡಬೇಕು ಎಂಬ ನಿರ್ದೇಶನ ಇದ್ದರೂ ಅದು ಬಳಕೆಯಾಗುತ್ತಿಲ್ಲ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಗುತ್ತಿಗಾರಿನ ಮೊಗ್ರದಲ್ಲಿ ಮಕ್ಕಳು ಹೊಳೆ ದಾಟಿ ಶಾಲೆ ಬರುತ್ತಿದ್ದಾರೆ. ಇಲ್ಲಿ ಸೇತುವೆ ನಿರ್ಮಾಣಕ್ಕೆ ಹಿಂದೆಯೇ ಬೇಡಿಕೆ ಇತ್ತು. ಏನು ಕ್ರಮ ಆಗಿದೆ ಎಂದು ಅಚ್ಚುತ ಮಲ್ಕಜೆ ಪ್ರಶ್ನಿಸಿದರು. ನಬಾರ್ಡ್ ಯೋಜನೆಯಲ್ಲಿ 90 ಲಕ್ಷ ರೂ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಕಳೆದ ಮೂರು ವರ್ಷದಿಂದ ನಬಾರ್ಡ್‍ನಿಂದ ತಾಲೂಕಿಗೆ ಅನುದಾನ ಬಂದಿಲ್ಲ. ಸಮಸ್ಯೆಯ ಬಗ್ಗೆ ಶಾಸಕರ ಗಮನಕ್ಕೂ ತರಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಇಂಜಿನಿಯರ್ ಸಭೆಯಲ್ಲಿ ಮಾಹಿತಿ ನೀಡಿದರು.
ತಾಲೂಕು ಪಂಚಾಯಿತಿ ಅಧ್ಯಕ್ಷ ಚನಿಯ ಕಲ್ತಡ್ಕ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಲಕ್ಷ್ಮಿ, ಸುಳ್ಯ ಪೊಲೀಸ್ ಠಾಣೆಯ ಕ್ರೈಂ ಎಸ್‍ಐ ರತ್ನಕುಮಾರ್, ನಗರ ಪಂಚಾಯಿತಿ ಮುಖ್ಯಾಧಿಕಾರಿ ಎನ್.ಮತ್ತಡಿ, ತಾಲೂಕು ಪಂಚಾಯಿತಿ ವ್ಯವಸ್ಥಾಪಕ ಹರೀಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಂದರಾಜ ಸಂಕೇಶ್, ಆನಂದ ಬೆಳ್ಳಾರೆ, ಅಚ್ಚುತ ಮಲ್ಕಜೆ, ಅಚ್ಚುತ ಗುತ್ತಿಗಾರು, ವಿಶ್ವನಾಥ ಅಲೆಕ್ಕಾಡಿ, ದಾಸಪ್ಪ ಅಜ್ಜಾವರ, ಸರಸ್ವತಿ ಬೊಳಿಯಮಜಲು, ಕೆ.ಕೆ.ನಾಯ್ಕ್, ಸುಂದರ ಪಾಟಾಜೆ, ನಾರಾಯಣ ತೊಡಿಕಾನ, ಪುಟ್ಟಣ್ಣ, ದೇವಪ್ಪ ನಾಯ್ಕ್, ಚಂದ್ರಶೇಖರ ಮತ್ತಿತರರು ಸಭೆಯಲ್ಲಿ ಮಾತನಾಡಿದರು.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…